ಹಾಸನ: ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ (Rajiv Institute of Technology College) ನಡೆದಿದೆ.
ಮಾನ್ಯ (19) ವರ್ಷ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಓದುತ್ತಿದ್ದ ಮಾನ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದವಳಾಗಿರುವ ಮಾನ್ಯ ಗುರುವಾರ (ನ. 2) ಮೊದಲ ವರ್ಷದ ಆಂತರಿಕ ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ಸಮಯದಲ್ಲಿ ಆಕೆ ನಕಲು ಮಾಡಿದ ಆರೋಪ ಕೇಳಿಬಂದಿದೆ. ಈ ವೇಳೆ ಆಕೆಯನ್ನು ಪರೀಕ್ಷಾ ಮೇಲ್ವಿಚಾರಕರು ಹಿಡಿದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪ್ರಾಂಶುಪಾಲರ ಬಳಿಯೂ ಕರೆದುಕೊಂಡು ಹೋಗಿದ್ದಾರೆ.
ಕಾಲೇಜು ಪ್ರಾಂಶುಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಡುವಂತೆ ಸಹ ಉಪನ್ಯಾಸಕರು ಹೇಳಿದ್ದಾರೆನ್ನಲಾಗಿದೆ. ಕೊನೆಗೆ ಮಾನ್ಯ ಪ್ರಾಂಶುಪಾಲರ ಕೊಠಡಿಗೆ ಬಂದಿದ್ದಾಳೆ. ಅಲ್ಲಿಂದ ಹೊರ ಬಂದವಳೇ ಸೀದಾ ಕಾಲೇಜಿನ ಕಟ್ಟಡದ ಐದನೇ ಮಹಡಿಗೆ ಹೋಗಿದ್ದಾಳೆ. ಅಲ್ಲಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿಕೊಂಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಕಾಲೇಜು ಪ್ರಾಂಶುಪಾಲರನ್ನು ವಿಚಾರಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿ ಜಿಗಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆ ವೇಳೆ ನಡೆದ ಘಟನೆ ಬಗ್ಗೆಯೂ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ.
ಗುರುವಾರ ಮೊದಲ ವರ್ಷದ ಬಿಇ ಈ ಆ್ಯಂಡ್ ಸಿ ವಿಭಾಗದ ಗಣಿತದ ಆಂತರಿಕ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆ ವೇಳೆ ವಿದ್ಯಾರ್ಥಿನಿ ಮಾನ್ಯ ಬಳಿ ಕಾಪಿ ಚೀಟಿ ಪತ್ತೆಯಾಗಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಪ್ರಾಂಶುಪಾಲರಿಗೆ ಉಪನ್ಯಾಸಕರು ತಿಳಿಸಿದ್ದರಿಂದ ಆಕೆಯನ್ನು ಕೊಠಡಿಗೆ ಕರೆಸಿಕೊಂಡಿದ್ದ ಪ್ರಾಂಶುಪಾಲರು ವಾರ್ನ್ ಮಾಡಿ ಕಳಿಸಿದ್ದಾರೆನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮಾನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರಿನಲ್ಲಿಯೂ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ
ಬೆಂಗಳೂರಿನ ಗಿರಿನಗರ ಬಳಿಯ ಪಿಇಎಸ್ ಕಾಲೇಜಿನ (PES College) ಬಿ.ಟೆಕ್ ವಿದ್ಯಾರ್ಥಿ ಆದಿತ್ಯ ಪ್ರಭು (19) ಈಚೆಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎಂಬ ಆರೋಪವನ್ನು ಹೊತ್ತಿದ್ದ. ಈ ಕಾರಣಕ್ಕಾಗಿ ಈತನನ್ನು ಕೊಠಡಿಯೊಂದರಲ್ಲಿ ಕೂರಿಸಿಡಲಾಗಿತ್ತು ಎಂದು ಕಾಲೇಜು ಸಿಬ್ಬಂದಿ ಹೇಳಿದ್ದರು. ಆದರೆ, ನಕಲು ಆರೋಪದಿಂದ ಅವಮಾನಗೊಂಡ ವಿದ್ಯಾರ್ಥಿಯು ಕಾಲೇಜು ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ಸಹ ವ್ಯಕ್ತವಾಗಿತ್ತು.
ಇದನ್ನೂ ಓದಿ: Karnataka Politics : ಮುಂದಿನ 5 ವರ್ಷವೂ ನಾನೇ ಸಿಎಂ ಎಂದ ಸಿದ್ದರಾಮಯ್ಯ!
ಮಗನ ತಪ್ಪಿಲ್ಲ ಎಂದಿದ್ದ ತಾಯಿ
ಜುಲೈ 17ರಂದು ಬೆಳಗ್ಗೆ 11.45ಕ್ಕೆ ನನ್ನ ಮಗ ಆದಿತ್ಯ ನನಗೆ ಕಾಲ್ ಮಾಡಿ, ಪಿಇಎಸ್ ಕಾಲೇಜಿನವರು ನನಗೆ ಹಿಂಸೆ ನೀಡಿದ್ದು, ನಕಲು ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ನಾನು ಕಾಪಿ ಮಾಡಿಲ್ಲ. ಕೊಠಡಿ ಒಳಗೆ ಹೋದಾಗ ಫೋನ್ ನನ್ನ ಜೇಬಿನಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಅದನ್ನು ಏರೋಪ್ಲೇನ್ ಮೋಡ್‌ಗೆ ಹಾಕಿ ಬೆಂಚ್ ಪಕ್ಕದಲ್ಲಿಟ್ಟಿದೆ. ಆದರೆ, ಪರೀಕ್ಷೆ ಮುಗಿಯುವ ಹೊತ್ತಿಗೆ ಮೇಲ್ವಿಚಾರಕರು ಅದನ್ನು ನೋಡಿ ನಾನು ಕಾಪಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಅಮ್ಮ ಎಂದು ಹೇಳಿದ್ದನೆಂದು ಆದಿತ್ಯಪ್ರಭು ತಾಯಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.