ಹಾಸನ: ಡಿ.ಕೆ. ಶಿವಕುಮಾರ್ ಅವರು ತಮಗೆ ಒಂದು ಬಾರಿ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಏಕೆ ಅಧಿಕಾರ ನೀಡಬೇಕು? ಇನ್ನೊಂದು ಹತ್ತು ಲುಲು ಮಾಲ್ ಕಟ್ಟೋದಕ್ಕ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹಾಸನದ ಸಾಣೇಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ಹಾಸನದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡುತ್ತ, ಕನಕಪುರದಲ್ಲಿ ದೇವೇಗೌಡರನ್ನು ಗೆಲ್ಲಿಸಿದೆವು ಎಂದಿದ್ದರ ಕುರಿತು ಪ್ರತಿಕ್ರಿಯಿಸಿದರು. ಹಾಸನದಲ್ಲಿ ದೇವೇಗೌಡರು ಸೋತು ಉಪಚುನಾವಣೆಯಲ್ಲಿ ನಿಂತಾಗ ಇದೇ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ. ದೇವೇಗೌಡರು ಮತ್ತೆ ತಲೆಯೆತ್ತಬಾರದು ಎಂದು ಎಲ್ಲೆಲ್ಲಿಂದ ಜನರನ್ನು ಕರೆದುಕೊಂಡು ಬಂದು ಓಟು ಹಾಕಿಸಿದಿರಿ ಎಂದರು.
ಡಿ.ಕೆ. ಶಿವಕುಮಾರ್‌ಗೆ ಏಕೆ ಅವಕಾಶ ನೀಡಬೇಕು? ಜನರಿಗೆ ಕೆಲಸ ಮಾಡಲೋ ಅಥವಾ ಇನ್ನೊಂದು ಹತ್ತು ಲುಲು ಮಾಲ್ ಕಟ್ಟಲೊ? ಎಂದು ಪ್ರಶ್ನಿಸಿದರು.
ಜೆಡಿಎಸ್ ಸರ್ಕಾರ ಕೆಲವೇ ದಿನವೂ ಉಳಿಯುವುದಿಲ್ಲ ಎಂಬ ಆರ್. ಅಶೋಕ್ ಮಾತಿಗೆ ಪ್ರತಿಕ್ರಿಯಿಸಿ, ಈ ಬಾರಿ ಚುನಾವಣೆಯ ನಂತರ ಯಾವ ಸರ್ಕಾರ ಎಷ್ಟು ದಿನ ಇರುತ್ತದೆ ಎನ್ನುವುದನ್ನು ಆರ್. ಅಶೋಕ್ ಬರೆಯುವುದಿಲ್ಲ. ಆ ದೇವರು ಬರೆಯುತ್ತಾನೆ ಎಂದರು.
ಈ ಬಾರಿ ಸರ್ಕಾರ ರಚನೆ ಆಗಬೇಕು ಎನ್ನುವುದು ಸಾಧು ಸಂತರ ಸಂಕಲ್ಪ, ಆಶೀರ್ವಾದ. ದೇವೇಗೌಡರ ಕುಟುಂಬ ಎಂದರೆ ರಾಜ್ಯದ ಆರೂವರೆ ಕೋಟಿ ಜನರು. ಅಧಿಕಾರ ಇರಲಿ, ಇಲ್ಲದಿರಲಿ ಕಷ್ಟಕ್ಕೆ ಪರಿಹಾರ ನೀಡುತ್ತಿದ್ದೇವೆ. ಈ ಕನ್ನಡಿಗರ ಕುಟುಂಬದ ಸರ್ಕಾರ ರಚನೆ ಆಗುವುದು ದೇವರ ಪ್ರೇರೇಪಣೆ ಇದೆ ಎಂದು ತಿಳಿಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಕುರಿತು ಪ್ರತಿಕ್ರಿಯಿಸಿ, ಕಾರ್ಯಕರ್ತರು ಹಾಗೂ ಮಾಧ್ಯಮ ಸ್ನೇಹಿತರು, ಯಾರು ಅಭ್ಯರ್ಥಿ ಆಗಬೇಕು ಎನ್ನುವ ರೀತಿಯಲ್ಲೇ ಆಗುತ್ತದೆ. ಸದ್ಯದಲ್ಲೆ ಎರಡನೇ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು.
ದೇವದುರ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಗಂಡಸ್ತನ ಸಾಬೀತುಪಡಿಸುವ ಎಂದು ಏಕವಚನದಲ್ಲೆ ಮಾತನಾಡಿದ್ದ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮಾತಿಗೆ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು. ಅವ್ಯಾವೊ ಪೋಲಿ ಮುಂಡೇವು, ಅವುಕ್ಕೆಲ್ಲ ಉತ್ತರ ಕೊಡ್ಲ? ಅವನು ಎಲ್ಲಿದ್ದ? ಶಾಸಕನಾಗಿ ಎಲ್ಲಿಂದ ಬಂದ? ಅವನು ಲೂಟಿ ಮಾಡಿರುವುದೇನು? ಅವನು ನನ್ನ ಲೆವೆಲ್ಲಿಗೆ ಬರೋದೇ ಇಲ್ಲ, ಉತ್ತರ ಕೊಡಲ್ಲ ಎಂದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಹರಾಜಿಗಿದೆ ಎಂದವರನ್ನು ಆಲಂಗಿಸಿಕೊಳ್ಳುತ್ತೀರಿ, ಹೇಗೆ ಹೊಸ ರಾಜ್ಯ ಕಟ್ಟುತ್ತೀರಿ? ಎಂದು ಪ್ರಲ್ಹಾದ ಜೋಶಿ ಅವರನ್ನು ಪ್ರಶ್ನಿಸಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತಿಗೆ ಪ್ರತಿಕ್ರಿಯಿಸಿ, ಯಾರು ನಡ್ಡಾ ಅಂದರೆ? ಅವರ ನಡ್ಡಾ ಅವರಿಗೆ ಕರ್ನಾಟಕದ ಮ್ಯಾಪ್ ಗೊತ್ತ? ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದು ಎರಡೂ ರಾಷ್ಟ್ರೀಯ ಪಕ್ಷಗಳ ಕುರಿತು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನಾಯಕರ ಸಂಬಂಧಗಳನ್ನು ಮೊದಲು ನೋಡಿಕೊಳ್ಳಿ ಎಂದರು.