Site icon Vistara News

Snake Bite : ಹಾವಿನ ದ್ವೇಷ 12 ವರುಷ! ಕಾಟ ಕೊಟ್ಟಿದ್ದ ಯುವಕನನ್ನು ಕಚ್ಚಿ ಸಾಯಿಸಿತೇ ನಾಗರಹಾವು?

Snake bite news

ಹಾಸನ: ಹಾವಿನ ದ್ವೇಷ (Snake hatred) 12 ವರುಷ ಎಂದು ಹೇಳುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಇದೊಂದು ನಂಬಿಕೆಯಾಗಿ ಇಲ್ಲಿಯವರೆಗೂ ಚಾಲ್ತಿಯಲ್ಲದಿದೆ. ಆದರೆ, ಈಗ ಇದು ನಿಜಕ್ಕೂ ಹೌದೇ ಎಂದು ಅನುಮಾನ ಹುಟ್ಟಿಸುವಂತಹ ಒಂದು ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ. ಹೌದು. ಹಾವಿಗೆ ಪದೇ ಪದೆ ತೊಂದರೆ ಕೊಟ್ಟು ಅದನ್ನು ವಿಡಿಯೊ (Snake Video) ಮಾಡಿಕೊಂಡಿದ್ದ ಯುವಕ, ಅದಾಗಿ ಕೆಲವೇ ದಿನಗಳಲ್ಲಿ ಹಾವು ಕಚ್ಚಿ (Snake Bite) ಮೃತಪಟ್ಟಿದ್ದಾನೆ.

ಅಭಿಲಾಷ್

ಈಗ ಈ ಯುವಕ ಹಾವಿನ ದ್ವೇಷಕ್ಕೆ ಬಲಿಯಾದನೇ ಎಂಬ ಅನುಮಾನ ಹಾಗೂ ಚರ್ಚೆಯನ್ನು ತಾಲೂಕಿನಲ್ಲಿ ಹುಟ್ಟುಹಾಕಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೇವರಗುಡ್ಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವಿಗೆ ತೊಂದರೆ ಕೊಟ್ಟಿದ್ದಕ್ಕೆ ಜ್ಞಾಪಕವಿಟ್ಟುಕೊಂಡು ಬಂದ ಹಾವು ಕಚ್ಚಿರಬಹುದು ಎಂದು ಈಗ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಏನಿದು ಘಟನೆ?

ಅಕ್ಟೋಬರ್ 29ರ ಸಂಜೆ ಹಾವು ಕಡಿತದಿಂದ ಯುವಕ ಅಭಿಲಾಷ್‌ ಮೃತಪಟ್ಟಿದ್ದ. ಮೊದಲಿಗೆ ಈತ ಹಾವು ಕಚ್ಚಿ ತೀರಿ ಹೋದ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈತನ ಮೊಬೈಲ್‌ ಅನ್ನು ಎರಡು ದಿನಗಳ ಬಳಿಕ ಪರಿಶೀಲನೆ ನಡೆಸಿದಾಗ ಅಲ್ಲೊಂದು ವಿಡಿಯೊ ಸಿಕ್ಕಿದೆ. ಇದು ಎಲ್ಲರನ್ನೂ ಭಯಗೊಳಿಸುವಂತೆ ಮಾಡಿದೆ.

ಕಾರಣ ಆ ವಿಡಿಯೊದಲ್ಲಿ ಅಭಿಲಾಷ್‌ ನಾಗರಹಾವೊಂದಕ್ಕೆ ಭಾರಿ ಕಾಟ ಕೊಟ್ಟಿರುವುದು ಸೆರೆಯಾಗಿದೆ. ಅದೂ ಅವರದ್ದೇ ತೋಟದಲ್ಲಿ ಕೀಟಲೆ ಕೊಟ್ಟಿರುವ ವಿಡಿಯೊ ಆಗಿತ್ತು. ಪದೇ ಪದೆ ಆ ಹಾವಿಗೆ ಕೀಟಲೆ ಕೊಟ್ಟಿದ್ದು ಅದೂ ಸಹ ಹೆಡೆ ಎತ್ತಿ ನೆಲಕ್ಕೆ ಕುಕ್ಕಿತ್ತು.

ಪೈಪ್‌ ಮೂಲಕ ಕಾಟ ಕೊಟ್ಟಿದ್ದ ಅಭಿಲಾಷ್‌

ಅಭಿಲಾಷ್‌ ಎಂದಿನಂತೆ ತೋಟಕ್ಕೆ ಹೋಗಿದ್ದಾನೆ. ಅಲ್ಲಿ ಚಿಕ್ಕ ಕಾಲುವೆಯೊಂದರಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದೆ. ಅಲ್ಲಿ ನೀರಿನ ನಡುವೆ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಇದನ್ನು ನೋಡಿದ ಅಭಿಲಾಷ್‌ ತನ್ನ ಮೊಬೈಲ್‌ ಕ್ಯಾಮೆರಾವನ್ನು ಆನ್‌ ಮಾಡಿದ್ದು, ಬಳಿಕ ಒಂದು ಪೈಪ್‌ ಅನ್ನು ತೆಗೆದುಕೊಂಡು ಹಾವಿನತ್ತ ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಹಾವಿನ ಮುಖದ ಹತ್ತಿರಕ್ಕೆ ಪೈಪ್‌ ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ ಸಿಟ್ಟಾಗುತ್ತಿದ್ದ ಹಾವು ಆ ಪೈಪ್‌ಗೆ ಹಾಗೂ ನೆಲಕ್ಕೆ ಕುಕ್ಕುತ್ತಿತ್ತು. ಹೀಗೆ ಕೆಲ ಕಾಲ ಮಾಡಿದ್ದಾನೆ. ಮುಂದೆ ಆ ಹಾವು ಅಲ್ಲಿಂದ ಹೇಗೆ ಹೋಯಿತು ಎಂಬುದು ಗೊತ್ತಿಲ್ಲ. ಇದಾಗಿ ಕೆಲವೇ ದಿನಗಳ ನಂತರ ಅಭಿಲಾಷ್‌ ಹಾವು ಕಡಿತದಿಂದ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Self Harming : ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ; ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಹಾವಿನ ದ್ವೇಷವೇ?

ಈಗ ಅಭಿಲಾಷ್‌ಗೆ ಅದೇ ಹಾವು ಬಂದು ಕಡಿದಿದೆಯೇ ಎಂಬ ಬಗ್ಗೆ ಯಾವುದೇ ನಿಖರತೆ ಇಲ್ಲ. ಜತೆಗೆ ಯಾರಿಗೂ ಈ ಬಗ್ಗೆ ಗೊತ್ತಿಲ್ಲ. ಆದರೆ, ಜನರು ಮಾತ್ರ ಈಗ ಹಾವಿಗೆ ಕಾಟ ಕೊಟ್ಟಿದ್ದಕ್ಕೇ ಅದು ಬಂದು ಕಚ್ಚಿರಬಹುದು. ಹಾವಿನ ದ್ವೇಷ ಎಂದರೆ ಸುಮ್ಮನೆಯೇ? ಎಂದು ಸಹ ಚರ್ಚೆ ಮಾಡುತ್ತಿದ್ದಾರೆ. ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version