Site icon Vistara News

Street Dog Attack : 2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ಡೆಡ್ಲಿಅಟ್ಯಾಕ್‌; ಕುತ್ತಿಗೆಗೇ ಬಾಯಿ ಹಾಕಿದ ಶ್ವಾನ

Street dog attack in Belur child injured

ಹಾಸನ: ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ (Belur Town in Hassan) ಬೀದಿ ನಾಯಿಗಳ ಹಾವಳಿ (Street Dog Attack) ಮಿತಿ ಮೀರಿದ್ದು, ಗುರುವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್ (Street dog attacks on child) ಮಾಡಿದೆ. ಮನೆಯ ಹೊರಗಡೆ ಆಡುತ್ತಿದ್ದ ಮಗುವಿನ ಕುತ್ತಿಗೆಗೆ ಬಾಯಿ ಹಾಕಿ ಮಗವನ್ನು ಎಳೆದೊಯ್ಯಲು ಯತ್ನ ನಡೆಸಿದ ಈ ನಾಯಿ ಬಿಡಿಸಿಕೊಳ್ಳಲು ಬಂದ ತಾತನ ಮೇಲೂ ದಾಳಿ ಮಾಡಿದೆ.

ಬೇಲೂರು ಪಟ್ಟಣದ ದಾವೂದ್ ಸಾಬ್ ಬೀದಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಗೆಂಡೆಹಳ್ಳಿ ಗ್ರಾಮದ ಮಹಮದ್ ಎಂಬುವವರ ಪುತ್ರ, ಎರಡು ವರ್ಷದ ಮಗು ಮಹಮದ್ ಹಮಾಜ್ ಮೇಲೆ ಬೀದಿ ನಾಯಿ ದಾಳಿ ನಡೆದಿದೆ. ರಕ್ಷಿಸಲು ಬಂದ ಅಕ್ರಂ ಪಾಷಾ ಅವರಿಗೂ ಗಾಯಗಳಾಗಿವೆ.

ಗೆಂಡೆಹಳ್ಳಿ ಗ್ರಾಮದ ಮಹಮದ್‌ ಅವರ ಪುತ್ರ ಮಹಮದ್ ಹಮಾಜ್ ತನ್ನ ಕುಟುಂಬದ ಇತರರ ಜತೆಗೆ ಬೇಲೂರಿನ ದಾವೂದ್ ಸಾಬ್ ಬೀದಿಯಲ್ಲಿರುವ ತಾತ ಅಕ್ರಂಪಾಷಾ ಮನೆಗೆ ಬಂದಿದ್ದ. ಮನೆಯವರೆಲ್ಲರೂ ಒಳಗೆ ಕುಳಿತು ಮಾತನಾಡುತ್ತಿದ್ದರೆ ಅಕ್ರಮ್‌ ಪಾಷಾ ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದಿದ್ದರು.

ಮಕ್ಕಳು ಆಟವಾಡುತ್ತಿದ್ದಾಗ ಧಾವಿಸಿ ಬಂದ ನಾಯಿಯೊಂದು ಮೊದಲು ಮಹಮ್ಮದ್‌ ಹಮಾಜ್‌ನನ್ನು ಬೀಳಿಸಿ ಕುತ್ತಿಗೆಯ ಭಾಗಕ್ಕೇ ಬಾಯಿ ಹಾಕಿದೆ. ಅದರ ಜತೆಗೆ ತಲೆಯ ಭಾಗವನ್ನೂ ಕಚ್ಚಿದೆ. ಅದನ್ನು ನೋಡಿದ ತಾತ ಅಕ್ರಮ್‌ ಪಾಷಾ ಅವರು ಓಡಿ ಬಂದು ನಾಯಿಯನ್ನು ಓಡಿಸಲು ಯತ್ನಿಸಿದರೆ ನಾಯಿ ಮಗುವನ್ನು ಬಿಟ್ಟು ತಾತನ ಮೇಲೆ ಎರಗಿದೆ. ಅವರ ಕೈ ಮತ್ತು ಎದೆಯ ಭಾಗಕ್ಕೆ ಗಾಯ ಮಾಡಿದೆ. ಬಳಿ ಓಡಿ ಹೋಗಿದೆ. ಇದೀಗ ಮಗು ಮತ್ತು ತಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೀದಿ ನಾಯಿ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದು ಭಯಾನಕವಾಗಿದೆ.

ದಾವೂದ್ ಸಾಬ್ ಬೀದಿಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಜನರು ಆರೋಪಿಸಿದ್ದಾರೆ. ಮನೆಯ ಮುಂದೆ ಆಟವಾಡುತ್ತಿರುವ ಮಕ್ಕಳು ಹಾಗೂ ರಾತ್ರಿ ವೇಳೆ ದಾರಿಹೋಕರ ಮೇಲೆ ಶ್ವಾನಗಳು ದಾಳಿ ಮಾಡುತ್ತಿವೆ.

ಈ ಬಗ್ಗೆ ಪೊಲೀಸರು ಹಾಗೂ ಪುರಸಭೆ ಗಮನಕ್ಕೆ ತಂದರು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೀದಿ ನಾಯಿಗಳ ಹಾವಳಿ ಹಾಗೂ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಬೇಲೂರು ಪೊಲೀಸರಿಗೆ ಕೂಡಾ ದೂರು ನೀಡಲಾಗಿದೆ.

Exit mobile version