ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕೊಬ್ಬರಿಗೆ ಬೆಂಬಲ ಬೆಲೆ (Support price for copra) ನೀಡಬೇಕು. ರೈತರ ನೆರವಿಗೆ (Assistance to Farmers) ಸರ್ಕಾರಗಳು ಧಾವಿಸಿದಂತೆ ಆಗುತ್ತದೆ. ನನ್ನ ಆರೋಗ್ಯ ಸರಿ ಇಲ್ಲವಾದರೂ ಪರವಾಗಿಲ್ಲ, ರೈತರಿಗೆ ಅನುಕೂಲ ಆಗುವುದಾದರೆ, ಸರ್ಕಾರದ ಕಣ್ಣು ತೆರೆಸಬೇಕಾದರೆ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಮಾಡುತ್ತೇನೆ. ಎನ್‌ಡಿಎ ಸೇರಿದ್ದೇವೆ ಎಂದು ನಾವು ಮೃದು ಧೋರಣೆ ತೋರುವುದಿಲ್ಲ. ಕೊಬ್ಬರಿಗೆ ಸೂಕ್ತ ಬೆಂಬಲ ಕೊಡಿಸುವ ನಿಟ್ಟಿನಲ್ಲಿ ನಾನು ಹೋರಾಡುವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಬರಗಾಲದ ಸಂದರ್ಭದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದೆ. ವಿಪಕ್ಷ ನಾಯಕರೂ ಸೇರಿದಂತೆ ಹಲವಾರು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಬರ ಪರಿಹಾರ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದನ್ನೂ ಪ್ರಸ್ತಾಪ ಮಾಡಿದ್ದಾರೆ. ತುಮಕೂರು, ಹಾಸನದಲ್ಲಿ ಬೆಳೆಯುವ ಕೊಬ್ಬರಿ ಬೆಲೆ 50% ಗಿಂತ ಕಡಿಮೆಯಾಗಿದೆ. ಕಳೆದ ಒಂದು ವರ್ಷದಿಂದ ಬೆಲೆ ಕುಸಿತ ಕಂಡಿದೆ. ತೆಂಗು ಬೆಳೆಗಾರರ ಕಷ್ಟ ಹಾಗೂ ನಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಆದರೆ, ಈ ಸರ್ಕಾರ ಕೇಳುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Yuva Nidhi Scheme: ಜನವರಿಯಲ್ಲೇ ಯುವನಿಧಿ ಜಾರಿ; ಅರ್ಹತೆ ಯಾರಿಗಿದೆ? ಈ ದಾಖಲೆ ನಿಮ್ಮಲ್ಲಿರಲಿ!
ಬರಗಾಲದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷದವರು ಒತ್ತಡ ತರಬೇಕು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಎನ್‌ಡಿಎ ಭಾಗವಾದ ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೇಂದ್ರದ ಗಮನಕ್ಕೆ ತರಬೇಕು ಎಂದಿದ್ದಾರೆ. ನಮ್ಮ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಮಾತನಾಡುತ್ತಿದ್ದರಲ್ಲ. ಸದನದಲ್ಲಿ ಅವರ ಹೋರಾಟವನ್ನು ನಾನು ಕಂಡಿದ್ದೇನೆ ಎಂದು ಶಾಸಕ ಶಿವಲಿಂಗೇಗೌಡ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
ಕೇಂದ್ರ ಅಧಿಕಾರಿಗಳ ಜತೆ ಮಾತನಾಡಿದ್ದೇನೆ
ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರ್ಕಾರದ ನಫೆಡ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಪ್ರತಿ ಜನವರಿಯಿಂದ ಆರು ತಿಂಗಳು ಖರೀದಿ ಮಾಡುವುದು ಪ್ರಕ್ರಿಯೆಯಾಗಿದೆ. ಕಳೆದ ವರ್ಷವೂ ನಫೆಡ್ ಮೂಲಕ ಆರು ತಿಂಗಳು ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಿದೆ. ಖರೀದಿ ಮಾಡುವಾಗ ಕೊಬ್ಬರಿ ಕ್ವಾಲಿಟಿ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದಾರೆ. ಸುಮಾರು 50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸದನದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಚರ್ಚೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್‌ಗೆ 15 ಸಾವಿರ ರೂಪಾಯಿ ಹಣ ಕೊಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು. ಸದನದಲ್ಲಿ ರೇವಣ್ಣ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಹಿಂದೆ ಖರೀದಿ ಆಗಿದ್ದ ಕೊಬ್ಬರಿಗೆ ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಮುಂದೆ ಖರೀದಿ ಮಾಡುವುದಕ್ಕೆ 1250 ರೂ. ನೀಡಲು ತೀರ್ಮಾನಿಸಿದ್ದಾರೆ. ಇದು ಒಟ್ಟು ಕೇವಲ 60 ಕೋಟಿ ರೂ. ಆಗುವುದಿಲ್ಲ. ಕೇಂದ್ರಕ್ಕೆ ಕೊಬ್ಬರಿ ಮಾರಾಟದಿಂದ 595 ಕೋಟಿ ರೂ. ಹಣ ಬೇಕು. ಕೊಬ್ಬರಿ ವಹಿವಾಟಿನಲ್ಲಿ ಕೇಂದ್ರಕ್ಕೆ 300 ಕೋಟಿ ರೂ. ನಷ್ಟ ಆಗುತ್ತದೆ. ಇದು ಕೇಂದ್ರ, ರಾಜ್ಯಕ್ಕೆ ದೊಡ್ಡ ಮೊತ್ತವೇನಲ್ಲ. ನಾಳಿನ ಸದನದಲ್ಲಿ ಈ ಬಗ್ಗೆ ನಮ್ಮ ಶಾಸಕರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.
ಗ್ಯಾರಂಟಿ ಬಿಟ್ಟರೆ ಬೇರೆ ಪ್ರಚಾರವೇ ಆಗುತ್ತಿಲ್ಲ
ಈ ಸರ್ಕಾರ ಪ್ರತಿನಿತ್ಯ 5 ಗ್ಯಾರಂಟಿ ಅಂತ ತಮಟೆ ಹೊಡೆದುಕೊಂಡು ಹೋಗುತ್ತಿದ್ದಾರೆ. ಆ ಪ್ರಚಾರ ಬಿಟ್ಟರೆ ಬೇರೆ ಯಾವುದೇ ಕೆಲಸ ಆಗುತ್ತಿಲ್ಲ. ಮಾಧ್ಯಮಗಳಿಗೆ ನೀಡಬೇಕಾದ 140 ಕೋಟಿ ರೂ. ಜಾಹೀರಾತು ಹಣ ನೀಡಿಲ್ಲ. ಐಷಾರಾಮಿ ಕಾರು, ಮನೆ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಕಳೆಯುತ್ತಿದ್ದಾರೆ. ಅದನ್ನು ಬಿಟ್ಟರೆ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ನನ್ನ ಪಂಚರತ್ನ ಕಾರ್ಯಕ್ರಮ ಉದ್ದೇಶ ಪ್ರತಿ ಕುಟುಂಬಕ್ಕೆ ಶಕ್ತಿ ನೀಡುತ್ತಿತ್ತು. ಅಕ್ಕಿ ದರ ನೂರರ ಗಡಿ ದಾಟುವ ಹಂತದಲ್ಲಿದೆ. ಅನ್ನ ಭಾಗ್ಯದ ಅಕ್ಕಿ ಬದಲು ಹಣ ನೀಡುತ್ತಿದ್ದಾರೆ. ಅದನ್ನೂ ಯಾರು ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮುಂದೆ 80 ರೂ. ಅಕ್ಕಿ ಖರೀದಿಸಬೇಕಾದರೆ ಎಲ್ಲಿಂದ ಅಕ್ಕಿಯನ್ನು ತರುತ್ತಾರೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Aadhaar update: ಆಧಾರ್ ಕಾರ್ಡ್ ಉಚಿತ ಅಪ್ಡೇಟ್‌ಗೆ 4 ದಿನ ಮಾತ್ರವೇ ಅವಕಾಶ! ಹೀಗೆ ಮಾಡಿ ನವೀಕರಿಸಿ
ಸಾರಿಗೆ ಇಲಾಖೆಯಿಂದ ಶಕ್ತಿ ಯೋಜನೆ ಹಣ ಸಂದಾಯ ಆಗಿಲ್ಲ
ಶಕ್ತಿ ಯೋಜನೆಯಲ್ಲಿ ಹೆಣ್ಣುಮಕ್ಕಳು ಸ್ವಾತಂತ್ರ್ಯದಿಂದ ಓಡಾಡುತ್ತಿದ್ದಾರೆ. ಆದರೆ, ಸಾರಿಗೆ ಇಲಾಖೆಗೆ ಇನ್ನೂ ಹಣವೇ ಸಂದಾಯ ಆಗಿಲ್ಲ. ಸಾರಿಗೆ ಸಿಬ್ಬಂದಿಯನ್ನು ದಿನಗೂಲಿಯಲ್ಲಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇವೆಲ್ಲವೂ ಅಭಿವೃದ್ಧಿಗೆ ಮಾರಕ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.