ಹಾಸನ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ವ್ಯಕ್ತಿಯನ್ನು ಮಳೆಯ ನಡುವೆಯೇ ರಸ್ತೆಯಲ್ಲಿ ಸ್ಟ್ರೆಚರ್ ಮೂಲಕ ಕರೆದುಕೊಂಡ ಹೋದ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿತನದ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹಾಸನ ನಗರದ ಸಂಪಿಗೆ ರಸ್ತೆಯಲ್ಲಿ ನಡುರಾತ್ರಿ ಈ ಘಟನೆ ನಡೆದಿದೆ. ಆಂಬುಲೆನ್ಸ್ ಸಿಗದೆ ರಸ್ತೆಯಲ್ಲಿ ಒಂದು ಖಾಸಗಿ ಆಸ್ಪತ್ರೆಯಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ರೋಗಿಯನ್ನು ನಡು ರಾತ್ರಿಯಲ್ಲಿ ಸ್ಟ್ರೆಚರ್ ಮೂಲಕ ಕರೆದೊಯ್ಯುತ್ತಿರುವುದನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಆಂಬುಲೆನ್ಸ್ ಒದಗಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ರೋಗಿಯನ್ನು ಸ್ಥಳಾಂತರ ಮಾಡುತ್ತಿದ್ದರು. ಹೃದಯ ಸಂಬಂಧಿ ಖಾಯಿಲೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ತುರ್ತು ನೆರವು ಬೇಕಾಗಿತ್ತು. ಆದರೆ ತುಂತುರು ಮಳೆಯ ನಡುವೆಯೇ ರೋಗಿಯನ್ನು ಶಿಫ್ಟ್ ಮಾಡಿದ್ದಾರೆ. ಚಿಕಿತ್ಸೆಯ ಅವಶ್ಯಕತೆ ಇರುವ ವ್ಯಕ್ತಿಯನ್ನು ಹೀಗೆ ನಡೆಸಿಕೊಂಡ ಆಸ್ಪತ್ರೆ ವಿರುದ್ದ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಅನುಮಾನಾಸ್ಪದ ಸಾವು