ಹಾಸನ: ಎಸ್ಟೇಟ್ ಮಾಲೀಕರ ಮನೆಯಲ್ಲಿ ಕಳ್ಳರು (Theft Case) ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರು ಎಸ್ಕೇಪ್ ಕಾಲ್ಕಿತ್ತಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದೆ.
ಸುಲೋಚನಾ ಪ್ರಕಾಶ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ಇತ್ತೀಚೆಗಷ್ಟೇ ಸುಲೋಚನಾ ಅವರ ಪತಿ ಹಾಗೂ ಮಗ ಸಾವನ್ನಪ್ಪಿದ್ದರು. ಬೆಂಗಳೂರಿನಲ್ಲಿರುವ ಸೊಸೆ ಹಾಗೂ ಮೊಮ್ಮಕ್ಕಳನ್ನು ನೋಡಲು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಮನೆ ಬೀಗ ಮುರಿದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದಾರೆ.
ಬೀರುವಿನ ಲಾಕರ್ ಒಡೆದು ಹತ್ತು ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Gurmeet Ram Rahim: ಮತ್ತೆ ಜೈಲಿನಿಂದ ಹೊರಬಂದ ಗುರ್ಮೀತ್ ರಾಮ್ ರಹೀಮ್; ನಾಲ್ಕು ವರ್ಷಗಳಲ್ಲಿ 10ನೇ ಬಾರಿ ಪೆರೋಲ್!
ಬಾಗಲಕೋಟೆಯಲ್ಲಿ ಖತರ್ನಾಕ್ ದರೋಡೆಕೋರರ ಬಂಧನ
ಬಾಗಲಕೋಟೆ: ದಾರಿಹೋಕರಿಗೆ ಬೆದರಿಸಿ ದರೋಡೆ ನಡೆಸುತ್ತಿದ್ದ ಐವರು ಖದೀಮರ ಬಂಧನವಾಗಿದೆ. ಬಾಗಲಕೋಟೆಯ ಸಂಗಮ ಕ್ರಾಸ್‌ನಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಈ ಗ್ಯಾಂಗ್ ಸಂಜೆ ವೇಳೆ ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿ ತಮ್ಮದೇ ಎಕ್ಸ್‌ಯುವಿ 500 ವಾಹನ ನಿಲ್ಲಿಸಿಕೊಂಡು ಕಳ್ಳತನ ನಡೆಸುತ್ತಿದ್ದರು. ಒಬ್ಬಂಟಿಯಾಗಿ ಬರುವ ವಾಹನ ಚಾಲಕರನ್ನೇ ಟಾರ್ಗೆಟ್ ಮಾಡುತ್ತಿದ್ದರು. ವಾಹನಕ್ಕೆ ಅಡ್ಡಗಟ್ಟಿ ಏಕಾಏಕಿ ಕಾರದಪುಡಿ ಎರಚಿ ದಾಳಿ ಮಾಡುತ್ತಿದ್ದರು. ಬಳಿಕ ಚಾಲಕರ ಬಳಿ ಇರುವ ಹಣ, ಚಿನ್ನಾಭರಣವನ್ನು ಎಗರಿಸುತ್ತಿದ್ದರು.
ವಿಜಯಪುರ, ಬಾಗಲಕೋಟೆ, ನವಲಗುಂದಲ್ಲಿ ಕಳ್ಳತನ ನಡೆಸಿದ್ದ ಗ್ಯಾಂಗ್ ಅನ್ನು ಬಾಗಲಕೋಟೆ ಗ್ರಾಮಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎಕ್ಸ್‌ಯುವಿ ವಾಹನ,1,51,000 ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಖದೀಮರ ವಾಹನದಲ್ಲಿ ಕೊಡ್ಲಿ, ಖಡ್ಗ, ಕಾರದಪುಡಿ ಪತ್ತೆಯಾಗಿದೆ.
ಸಂಗಮ್ ಕ್ರಾಸ್ ಬಳಿ ಕಳ್ಳತನ ಯತ್ನದ ವೇಳೆ 6 ಜನರ ತಂಡ ಸಿಕ್ಕಿಬಿದ್ದಿದೆ. ಶ್ಯಾಮ ಯಮನಪ್ಪ ರತ್ನಾಕರ್, ಶ್ರೀಧರ್ ಹುಚ್ಚಪ್ಪ ಮಾದರ, ಸುರೇಶ್ ಸುಭಾಷ್ ಮಾದರ, ಸುನಿಲ್ ಸಿದ್ದಪ್ಪ ಮಾದರ ಹಾಗೂ ರಾಹುಲ್ ಸಿದ್ದಪ್ಪ ಮಾದರ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಪರಾರಿಯಾಗಿರುವ ಆದಿತ್ಯ ಎಂಬಾತನಿಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಬಂಧಿತರೆಲ್ಲರೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಟ್ನಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ