Site icon Vistara News

ಕೆರೆ-ನೀರಾವರಿ ಉರಿ; ಹಾಸನದಲ್ಲಿ ಶಾಸಕ ಪ್ರೀತಂಗೌಡ-ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಾಗ್ಝರಿ!

ಕೆಡಿಪಿ

ಹಾಸನ: ನೀರಾವರಿ ಯೋಜನೆ ಹಾಗೂ ಕೆರೆ ಅಭಿವೃದ್ಧಿ ವಿಚಾರವಾಗಿ ಕೆಡಿಪಿ ಸಭೆಯಲ್ಲಿ ಶಾಸಕ ಪ್ರೀತಂಗೌಡ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ನಡುವೆ ವಾಗ್ವಾದ ನಡೆದಿದೆ. ಇಬ್ಬರು ನಾಯಕರ ನಡುವೆ ಮಾತಿನ ಸಮರ ನಡೆದಿದ್ದರಿಂದ ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಕೆ.ಗೋಪಾಲಯ್ಯ ಮಾತನಾಡಲೂ ಆಗದೆ, ಸುಮ್ಮನಿರಿಸಲೂ ಆಗದೆ ಕೈಚೆಲ್ಲಿ ಕುಳಿತಿದ್ದರು.

ನಗರದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಜಿಲ್ಲೆಯ ಚನ್ನಪಟ್ಟಣ ಕೆರೆ ಅಭಿವೃದ್ಧಿ ವಿಚಾರದಿಂದ ಶುರುವಾದ ವಾಕ್ಸಮರ ತಾರಕಕ್ಕೇರಿದೆ. ಈ ಹಿಂದಿನ ಸರ್ಕಾರದಲ್ಲಿ 144 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಯೋಜನೆ ಆಗಿತ್ತು. ಆದರೆ, ಈ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ಎಚ್‌.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರೀತಂಗೌಡ ಹೇಳಿದರು. ಇದಕ್ಕೆ ಬಿಜೆಪಿ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ, ನಿಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ರೇವಣ್ಣ ಕಿಡಿಕಾರಿದರು.

ಇದನ್ನೂ ಓದಿ | Siddaramaiah | ಈ ಟಗರು 10 ಕುರಿ‌ಗಳ ಹಿಂದೆ ಹೋಗುತ್ತೆ, ಮುರುಘಾಶ್ರೀಯಂತೆ ಇವನೂ ಕಳ್ಳ: ಸಿದ್ದರಾಮಯ್ಯ ಬಗ್ಗೆ ಮುಕುಡಪ್ಪ ಪಿಸುಮಾತು!

ಈ ವೇಳೆ ಹಳೇಬೀಡು ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲವೇ? ನೀವು ಬರೀ ಘೋಷಣೆ ಮಾಡಿ ಹೋಗುತ್ತೀರಾ, ಕೆಲಸ ಮಾಡೋದು ನಾವೇ ಎಂದು ಪ್ರೀತಂಗೌಡ ತಿರುಗೇಟು ನೀಡಿದರು. ಇದರಿಂದ ಕೆರಳಿದ ಸಚಿವ ರೇವಣ್ಣ ನಿಮ್ಮ ಸರ್ಕಾರ ಏನೂ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ರಾಜಕಾರಣ ಹೊರಗೆ ಮಾಡೋಣ, ಇಲ್ಲಿ ಕೆಡಿಪಿ ಬಗ್ಗೆ ಮಾತಾಡಿ ಎಂದ ಪ್ರೀತಂಗೌಡ ಹೇಳಿದರು.

ನಂತರ ಯಡಿಯೂರಪ್ಪ ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ರೇವಣ್ಣ ಗುಡುಗಿದರು. ಆಗ ಪ್ರೀತಂಗೌಡ ಆಕ್ರೋಶಗೊಂಡು, ಈ ಸಭೆಯಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಯಾಕೆ ತರುತ್ತೀರಾ? ಯಡಿಯೂರಪ್ಪ ಅವರಿಂದ ಏನು ಕೆಲಸ ಆಗಿದೆ ಎಂದು ಈ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.

ನನ್ನ ಕ್ಷೇತ್ರದಲ್ಲಿ ಏನು ಕೆಲಸ ಆಗಬೇಕು ಎಂದು ಶಾಸಕನಾದ ನಾನು ಮಾತನಾಡುತ್ತೇನೆ ಎಂದು ಪ್ರೀತಂಗೌಡ ಹೇಳಿದಾಗ, ಇದು ಜಿಲ್ಲಾ ಕೇಂದ್ರ ಹಾಸನ ಕೇವಲ ಒಬ್ಬ ಕ್ಷೇತ್ರದ ಶಾಸಕನಿಗೆ ಸೇರಲ್ಲ ಎಂದು ರೇವಣ್ಣ ತಿರುಗೇಟು ನೀಡಿದರು. ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಏನೂ ಮಾತನಾಡದೆ ಕುಳಿತಿದ್ದುದು ಕಂಡುಬಂತು.

ಇದನ್ನೂ ಓದಿ | BJP Janasankalpa yatre | ಕೇಂದ್ರದ ಅಕ್ಕಿ ಚೀಲಕ್ಕೆ ಸಿದ್ದು ಫೋಟೊ, ಮಣ್ಣಿನಲ್ಲೂ ಕಾಂಗ್ರೆಸ್‌ ಲೂಟಿ ಎಂದ ಬೊಮ್ಮಾಯಿ

Exit mobile version