ಹಾಸನ: ಹಾಸನ ನಗರದ ದೊಡ್ಡ ಮಂಡಿಗನಹಳ್ಳಿ ಗ್ರಾಮದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ತೇಜಸ್ವಿನಿ (28) ಮೃತ ಮಹಿಳೆಯಾಗಿದ್ದು, ಈಕೆಯ ಪತಿ ಮಧು ವಿರುದ್ಧ ಕೊಲೆ ಆರೋಪ ದಾಖಲಾಗಿದೆ.
ಮಧು ಎಂಬಾತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್‌ಗೆ ದಾಸನಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದ. ಈ ವಿಷಯವಾಗಿ ಪತಿ-ಪತ್ನಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು. ಈತನ ಬೆಟ್ಟಿಂಗ್ ಚಟವನ್ನು ಪತ್ನಿ ಬಹಳಷ್ಟು ಬಾರಿ ವಿರೋಧಿಸಿದ್ದರು. ಈ ವಿಷಯದಿಂದ ಸಿಟ್ಟಿಗೆದ್ದ ಮಧು ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತೇಜಸ್ವಿನಿ ಕುಟುಂಬದವರು ಆರೋಪಿಸಿದ್ದಾರೆ.
ಈ ಘಟನೆ ಬಗ್ಗೆ ತೀವ್ರ ಆಕ್ರೋಶವನ್ನು ಹೊರಹಾಕಿರುವ ಮೃತ ಮಹಿಳೆ ತೇಜಸ್ವಿನಿ ಕುಟುಂಬದವರು ಮಧು ಮನೆಯ ಮುಂದೆಯೇ ತೆಜಸ್ವಿನಿ ಶವವನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ. ಮಧು ನಿವಾಸದ ಎದುರೇ ಶವ ಸಂಸ್ಕಾರ ಮಾಡುವುದಾಗಿ ತೆಜಸ್ವಿನೀ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ನಗರ ಪೊಲೀಸರು ಬೇರೆಡೆ ಅಂತಿಮ ವಿಧಿವಿಧಾನ ಕೈಗೊಳ್ಳುವಂತೆ ಮನವೊಲಿಸಿದ್ದಾರೆ.
ಹಾಸನದ ಹೊರವಲಯದ ದೊಡ್ಡಮಂಡಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು-ಹಾಸನ ಹೈವೇಯಲ್ಲಿ ಟಿಟಿಗೆ ಡಿಕ್ಕಿ ಹೊಡೆದ ಇನೋವಾ, ವಾಹನಗಳು ನಜ್ಜುಗುಜ್ಜು, ಇಬ್ಬರ ಸಾವು