ಹಾಸನ: ಕುಡಿತವನ್ನು ವಿರೋಧಿಸಿದಕ್ಕೆ ಗಂಡನನ್ನೇ ಪತ್ನಿ ಕೊಲೆ ಮಾಡಿದ್ದಾಳೆ. ಕೃಷ್ಣೇಗೌಡ ಸಾವನಪ್ಪಿರುವ ಮೃತ ದುರ್ದೈವಿಯಾಗಿದ್ದಾನೆ.
ಜೂನ್ 5ರ ರಾತ್ರಿ ಬೈಕ್‌ನಿಂದ ಬಿದ್ದ ಸ್ಥಿತಿಯಲ್ಲಿ ಕೃಷ್ಣೇಗೌಡ (52) ಮೃತಪಟ್ಟಿದ್ದರು. ಮೂಲತಃ ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ, ಮೊಸಳೆಹೊಸಳ್ಳಿ ಸಮೀಪದ ಹೆಂಡತಿ ಮನೆಯಲ್ಲೇ ವಾಸವಿದ್ದರು. ಮನೆಯ ಸಮೀಪ ರಸ್ತೆಯಲ್ಲಿ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಇದನ್ನೂ ಓದಿ | ಎಸ್ಕೇಪ್‌ಗೆ ಯತ್ನ, ರಾಜಾ ಕೊಲೆ ಆರೋಪಿಗಳ ಮೇಲೆ ಮಂಗಳೂರು ಪೊಲೀಸರ ಫೈರಿಂಗ್
ಮುಖದ ಭಾಗಕ್ಕೆ ಯಾವುದೋ ಆಯುಧದಿಂದ ಕೊಯ್ದು ಕೊಂದಿರುವ ಹಾಗೆ ಕಂಡಿತ್ತು. ಈ ಬಗ್ಗೆ ಅನುಮಾನಗೊಂಡು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಆಕ್ಸಿಡೆಂಟ್ ಅಲ್ಲ ಮರ್ಡರ್ ಎಂದು ತಿಳಿದು ಬಂದಿದೆ. ಪ್ರಕರಣವನ್ನು ತನಿಖೆ ನಡೆಸಿದಾಗ ವ್ಯಕ್ತಿಯನ್ನು ಕೊಂದದ್ದು ಆತನ ಪತ್ನಿ, ಸ್ವಂತ ಮಗ ಹಾಗೂ ಅತ್ತೆ ಎಂದು ತಿಳಿದು ಬಂದಿದೆ.
ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ ಮತ್ತು ಗುಡುಗನಹಳ್ಳಿ ಗ್ರಾಮದ ಜ್ಯೋತಿಗೆ ಕಳೆದ 32 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮನೆಯಲ್ಲಿದ್ದರೆ, ಮತ್ತೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಕೃಷ್ಣೇಗೌಡ ಹಲವು ವರ್ಷಗಳಿಂದ ಹೆಂಡತಿ ಮನೆಯಲ್ಲಿಯೇ ಇದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ಡಾ. ನಂದಿನಿ ಮಾತನಾಡಿ ʼʼಹೆಂಡತಿ, ಮಗ ಹಾಗೂ ಅತ್ತೆ ಮೂವರೂ ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು. ಇದೇ ಜಗಳ ವಿಕೋಪಕ್ಕೆ ತಿರುಗಿ ಹರಿತವಾದ ಆಯುಧದಿಂದ ಮುಖದ ಭಾಗಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಕೊಲೆಯನ್ನು ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ಮನೆಯ 500 ಮೀಟರ್ ದೂರದ ರೈಸ್ ಮಿಲ್ ಹತ್ತಿರದ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಪಕ್ಕದಲ್ಲಿ ಒಂದು ಬೈಕ್ ಕೂಡ ಬೀಳಿಸಿ, ಬೈಕ್‌ನಿಂದ ಸತ್ತಿದ್ದಾನೆಂದು ಬಿಂಬಿಸಿದ್ದಾರೆ. ಪ್ರಕರಣದಲ್ಲಿ ಪತ್ನಿ, ಮಗ ಹಾಗೂ ಅತ್ತೆ ಮೂವರೂ ಭಾಗಿಯಾಗಿದ್ದು, ಮೂವರನ್ನೂ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಹೆಣ್ಣಿನಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್ ಡ್ರೆಸ್ಸರ್ ಕೊಲೆ, ರಿಕ್ಷಾ ಚಾಲಕನ ಕೃತ್ಯ