Site icon Vistara News

Wild Animals Attack : ಕರೆಯದೆ ಬಂದ ಅತಿಥಿ; ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!ಮುಂದೇನಾಯ್ತು?

wild animals Attack

ಹಾಸನ: ಮದುವೆ ಮನೆಗೆ ನುಗ್ಗಿದ ಕೋತಿಯೊಂದು ರಂಪಾಟ (Wild Animals Attack) ನಡೆಸಿದೆ. ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಊಟ ಮಾಡಲು ಹೋದವರಿಗೂ ತೊಂದರೆ ಕೊಟ್ಟಿದೆ. ಇಷ್ಟು ಮಾತ್ರವಲ್ಲದೇ ಮದುವೆಗೆ ಬಂದವರಿಗೆ ಮಂಗ (Monkey Attack) ಕಚ್ಚಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಘಟನೆ ನಡೆದಿದೆ.

ಹಿರಿಸಾವೆಯ ನುಗ್ಗೆಹಳ್ಳಿ ರಸ್ತೆಯಲ್ಲಿ ನಡೆಯುತ್ತಿದ್ದ ಮದುವೆಗೆ ಕರೆಯದೇ ಬಂದ ಕೋತಿ ಕಾಟಕ್ಕೆ ಜನರು ಹೈರಣಾದರು. ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಿದ್ದವರಿಗೂ ಕಿರಿಕಿರಿ ಮಾಡಿ, ಊಟ ಕಸಿದುಕೊಂಡಿದೆ. 8-10 ಮಂದಿ ಮೇಲೆ ದಾಳಿ ಮಾಡಿ ಕಚ್ಚಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ , ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುತ್ತಮುತ್ತಲಿನ ಹಳ್ಳಿಯಲ್ಲಿ ಓಡಾಡುತ್ತಿರುವ ಕೋತಿ ಹಿಡಿದು ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

ವಿಜಯನಗರದ ಎಪಿಎಂಸಿ ಆವರಣಕ್ಕೆ ಎಂಟ್ರಿ ಕೊಟ್ಟ ಕರಡಿ

ಇತ್ತೀಚೆಗೆ ಕರಡಿಗಳ ಹಾವಳಿ ಹೆಚ್ಚಾಗಿದೆ. ವಿಜಯನಗರದ ಹಗರಿಬೊಮ್ಮನ ಹಳ್ಳಿಯಲ್ಲಿರುವ ಎಪಿಎಂಸಿ (APMC) ಆವರಣದಲ್ಲಿ ಕರಡಿಯೊಂದು ಪತ್ತೆಯಾಗಿದೆ. ಮಂಗಳವಾರ ಬೆಳಗಿನ ಜಾವ ಕರಡಿ ಓಡಾಟ ಕಂಡು ರೈತರು ಹೌಹಾರಿದ್ದಾರೆ. ಕರಡಿ ಓಡಾಟವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆಯೂ ನಾನಾ ಕಡೆ ಕರಡಿ ಪ್ರತ್ಯಕ್ಷವಾಗಿತ್ತು.

ಕೊಡಗಿನಲ್ಲಿ ಆಟೋ ಜಖಂ ಮಾಡಿದ ಕಾಡಾನೆ

ಕೊಡಗಿನಲ್ಲಿ ಆನೆ -ಮಾನವ ಸಂಘರ್ಷ ಮುಂದುವರಿದಿದೆ. ಮನೆ ಸಮೀಪ ನಿಲ್ಲಿಸಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದೆ. ನಾಪೋಕ್ಲು ಸಮೀಪದ ಕಕ್ಕಬ್ಬೆಯ ಗ್ರಾಮದ ನಾಲಡಿ ವಾಟೆಕಾಡು ಎಂಬಲ್ಲಿ ಘಟನೆ ನಡೆದಿದೆ. ವಾಟೆಕಾಡು ನಿವಾಸಿ ದೇವಯ್ಯ ಎಂಬುವರ ಆಟೋವನ್ನು ಜಖಂಗೊಳಿಸಿ, ಸಮೀಪದ ತೋಟದಲ್ಲೂ ದಾಂಧಲೆ ನಡೆಸಿ ಕಾಲ್ಕಿತ್ತಿದೆ. ಆನೆ ಹಾವಳಿಯಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊಪ್ಪಳದಲ್ಲಿ ನಿಲ್ಲದ ಕರಡಿ ಆತಂಕ

ಕಳೆದ ಒಂದು ವಾರದಿಂದ ಕೊಪ್ಪಳ ಸುತ್ತಮುತ್ತ ಕರಡಿ ಪ್ರತ್ಯಕ್ಷಗೊಳ್ಳುತ್ತಿದೆ. ಇದೀಗ ಬಸ್‌ನಲ್ಲಿ ಹೋಗುತ್ತಿರುವವರಿಗೆ ಕರಡಿಯೊಂದು ದರ್ಶನ ಕೊಟ್ಟಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಿ – ಮಾಟಲದಿನ್ನಿ ಮಧ್ಯೆ ಕರಡಿ ಕಾಣಿಸಿಕೊಂಡಿದೆ. ಮಂಗಳವಾರ ಮುಂಜಾನೆ ಬಸ್‌ವೊಂದಕ್ಕೆ ಕರಡಿಯು ಅಡ್ಡಬಂದಿದೆ. ಇದನ್ನೂ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version