Site icon Vistara News

Medical Negligence : ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬಂದ ಮಹಿಳೆಯ ಪ್ರಾಣವೇ ಹರಣ

Nandini death Hasana

ಹಾಸನ: ಸಂತಾನ‌ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ (Laproscopic treatment) ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಯ ಬಳಿಕ ಮೃತಪಟ್ಟ ಘಟನೆ (Woman dead) ಹಾಸನದಲ್ಲಿ (Hasana News) ನಡೆದಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದ (Medical Negligence) ನಡೆದಿರುವ ಸಾವು ಎಂದು ಆಪಾದಿಸಿ ಮಹಿಳೆಯರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ವಳಗರಹಳ್ಳಿ ಗ್ರಾಮದ ನಂದಿನಿ (34) ಎಂಬವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗೆ ಎರಡನೇ ಮಗುವಿನ ಹೆರಿಗೆಯಾಗಿತ್ತು. ಅವರಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆಂದು ಕಳೆದ ಭಾನುವಾರ ಪತಿ ಮಂಜುನಾಥ್‌ ಅವರು ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಸೋಮವಾರ ನಂದಿನಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಗುರುವಾರ ಅವರು ಮೃತಪಟ್ಟಿದ್ದಾರೆ, ಆರೋಗ್ಯವಾಗಿಯೇ ಇದ್ದ ನಂದಿನಿ ಅವರು ಮೃತಪಡಲು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ನಂದಿನಿ ಮನೆಯವರು ಆಸ್ಪತ್ರೆಯ ಎದುರು ಧರಣಿ ನಡೆಸುತ್ತಿದ್ದಾರೆ.

Nandini death Hasana

ನಂದಿನಿ ಅವರಿಗೆ ಸೋಮವಾರವೇ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಬುಧವಾರ ರಾತ್ರಿ ಮತ್ತೊಮ್ಮೆ ಅವರನ್ನು ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಆಪರೇಷನ್‌ ಯಾಕೆ ನಡೆಸಲಾಯಿತು ಎಂದು ತಿಳಿಸಿಲ್ಲ. ಎರಡನೇ ಆಪರೇಷನ್‌ ವೇಳೆ ಎಡವಟ್ಟಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮನೆಯವರು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ.

ಈ ನಡುವೆ, ಬೆಳಿಗ್ಗೆಯಿಂದಲೂ ನಂದಿನಿಯವರನ್ನು ನೋಡಲು ಪತಿ ಹಾಗೂ ಸಂಬಂಧಿಕರಿಗೆ ವೈದ್ಯರು ಅವಕಾಶ ಮಾಡಿಕೊಟ್ಟಿಲ್ಲ. ನಂದಿನಿ ಅವರ ಸಾವಿನ ಮಾಹಿತಿ ಮುಚ್ಚಿಟ್ಟು ಚಿಕಿತ್ಸೆಯ ನಾಟಕವಾಡಿದ್ದಾರೆಂದು ಪೋಷಕರು ಆರೋಪ ಮಾಡಿದ್ದಾರೆ.

ಮೃತರ ಪೋಷಕರು ಆಸ್ಪತ್ರೆಯ ಆವರಣದಲ್ಲೇ ಕಣ್ಣೀರಿಡುತ್ತ ಪ್ರತಿಭಟನೆ ನಡೆಸುತ್ತಿದ್ದು, ಪ್ರಾಣ ತೆಗೆದ ಆಸ್ಪತ್ರೆಯವರಿಗೆ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಬೆಂಗಳೂರಿನ ನಿಮ್ಹಾನ್ಸ್‌ನಲ್ಲೂ ಪ್ರತಿಭಟನೆ

ಹಾಸನ ಜಿಲ್ಲೆಯ ಬೇಲೂರಿನ ದಂಪತಿಯ ಪುಟ್ಟ ಮಗು ಅಜಯ್‌ ಮನೆಯಲ್ಲಿ ಸುಮಾರು 10 ಅಡಿ ಎತ್ತರದಿಂದ ಬಿದ್ದಿದ್ದ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ ಮೂಲಕ ಕಳುಹಿಸಲಾಗಿತ್ತು. ಆದರೆ, ಅಲ್ಲಿ ತಕ್ಷಣ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ಜಸ್ಟಿಸ್‌ ಫಾರ್‌ ಅಜಯ್‌ ಎಂಬ ಹೆಸರಿನಲ್ಲಿ ಗುರುವಾರ ನಿಮ್ಹಾನ್ಸ್‌ ಆಸ್ಪತ್ರೆಯ ಎದುರು ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ.

Exit mobile version