ಹಾಸನ: ಎತ್ತಿನಹೊಳೆ ಯೋಜನೆಯ (Yettinahole project) ಅಧಿಕಾರಿಗಳು ಕಾನೂನು ಉಲ್ಲಂಘಿಸಿ (Violation of law) ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಜಮೀನನ್ನು ಬಲವಂತವಾಗಿ ಭೂಸ್ವಾಧೀನ (Forceful Land acquisition) ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ (MYSORE MERCANTILE CO LTD-MMCL) ಕಂಪನಿಗೆ ಸೇರಿದ 10 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದೇ ವಿವಾದದ ಮೂಲ.
ಈ ಹಿಂದೆ ಯೋಜನೆಯ ಅಧಿಕಾರಿಗಳು ಕಾನೂನುಬಾಹಿರವಾಗಿ ಭೂಸ್ವಾಧೀನ ಮಾಡಲು ಮುಂದಾದಾಗ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದ್ದು, ಉಚ್ಚ ನ್ಯಾಯಾಲಯ ತಡೆಯಾಜ್ಞೆಯನ್ನು (High court stay) ನೀಡಿ ಯಥಾಸ್ಥಿತಿ ಪಾಲನೆಗೆ ಆದೇಶಿಸಿತ್ತು. ಇದೀಗ ಅದನ್ನು ಉಲ್ಲಂಘಿಸಿ, ಜಾಗದ ಮಾಲೀಕರಿಗೆ ಯಾವುದೇ ಸೂಚನೆಯನ್ನೂ ನೀಡದೆ ಭೂ ಸರ್ವೇ ಕಾರ್ಯಕ್ಕೆ ಮುಂದಾಗುವ ಮೂಲಕ ಅಧಿಕಾರಿಗಳು ಉದ್ಧಟತನ ಮೆರೆದಿದ್ದಾರೆ, ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಇದರ ವಿರುದ್ಧ ಒಂದು ಕಡೆ ಕಾನೂನು ಹೋರಾಟಕ್ಕೆ ಮಂದಾಗಿರುವ ಎಂಎಂಸಿಎಲ್, ಸಕಲೇಶಪುರ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದೆ.
ಹಿಂದೆ ಏನಾಗಿತ್ತು? ಹೈಕೋರ್ಟ್ ಹೇಳಿದ್ದೇನು?
ಸಿದ್ದರಾಮಯ್ಯ ಅವರು 2014ರಲ್ಲಿ ಸಿಎಂ ಆಗಿದ್ದಾಗ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದು 12 ಸಾವಿರ ಕೋಟಿಯಿಂದ ಶುರುವಾದ ಯೋಜನೆ ಈಗ 23 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಈ ಯೋಜನೆಯನ್ನು ಸರ್ಕಾರ ದಡ ತಲುಪಿಸುವ, ಈಗಾಗಲೇ ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪಿಸುವ ಬಗ್ಗೆ ಸಾವಿರ ಅನುಮಾನಗಳಿವೆ. ಆದರೆ, ಅದರಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳು ಮಾತ್ರ ನಿರಂತರವಾಗಿದೆ.
ಯೋಜನೆಗಾಗಿ ನೂರಾರು ಮಂದಿ ಜಮೀನನ್ನು ಕಳೆದುಕೊಂಡಿದ್ದಾರೆ. ಕೆಲವರಿಂದ ಬಲವಂತವಾಗಿ ಕಿತ್ತುಕೊಂಡಿರುವ ಆರೋಪಗಳು ವ್ಯಾಪಕವಾಗಿವೆ. ಈ ಯೋಜನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಮೈಸೂರು ಮರ್ಕಂಟೈಲ್ ಕಂಪನಿಗೆ ಸೇರಿದ 10 ಗುಂಟೆ ಜಮೀನಿನ ಮೇಲೆ ಹಾದು ಹೋಗುತ್ತದೆ ಎಂದು ಸೂಚಿಸಲಾಗಿತ್ತು.
ಆದರೆ ಈ ಜಮೀನಿನಲ್ಲಿ ಕೆಲಸ ಶುರು ಮಾಡುವುದಕ್ಕೆ ಮೊದಲೇ ಪಕ್ಕದ ಜಮೀನಿನಲ್ಲಿ ಮಾಡಿರುವ ಕಾಮಗಾರಿಯಿಂದ ಗುಡ್ಡ ಕುಸಿದು, ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಸಾಕಷ್ಟು ಹಾನಿ ಉಂಟಾಗಿತ್ತು. ಇದರ ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ ನಿರ್ಮಾಣ, ಗ್ಯಾಬ್ರಿಯಲ್ ವಾಲ್ ನಿರ್ಮಾಣ ಹಾಗೂ ಇವರ ಜಮೀನಿನಲ್ಲಿ ಹಾದುಹೋಗುವ ಯೋಜನೆಯನ್ನು ಭೂಗರ್ಭದಲ್ಲಿ ಮಾಡಲಾಗುವುದು ಎಂದು ಅಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಒಪ್ಪಿಕೊಂಡಿದ್ದರು. 2019ರಲ್ಲಿ ಸಂಸ್ಥೆಯ ಪ್ರತಿನಿಧಿ ಮತ್ತು ನಿಗಮದ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಒಪ್ಪಿಗೆ ಪಡೆಯಲಾಗಿತ್ತು.
ಆದರೆ, ಈ ಮಾತುಕತೆ ಒಪ್ಪಂದವನ್ನು ಮುರಿದ ಅಧಿಕಾರಿಗಳು ಇಲ್ಲಿ ಭೂಗರ್ಭ ಯೋಜನೆ ಕಾಮಗಾರಿ ಮಾಡುವ ಬದಲು ಕೇವಲ ಒಂದು ಲಕ್ಷ ರೂ. ಖರ್ಚು ಮಾಡಿ ಒಂದು ನಾಲೆಯನ್ನು ನಿರ್ಮಾಣ ಮಾಡಿದ್ದಾರೆ. ಮತ್ತು ಇದಕ್ಕೆ ದೊಡ್ಡ ಮೊತ್ತದ ಖರ್ಚನ್ನು ತೋರಿಸಲಾಗಿದೆ.
ಈ ಹಂತದಲ್ಲಿ ಎಂಎಂಸಿಎಲ್ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ನ ದ್ವಿದಸ್ಯ ಪೀಠ ಜಮೀನು ಸ್ವಾಧೀನಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಈಗ ಅಧಿಕಾರಿಗಳು ಏಕಾಏಕಿ ಆದೇಶವನ್ನು ಉಲ್ಲಂಘಿಸಿ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ.
ಕಳೆದ ಆಗಸ್ಟ್ 24ರಂದು ಸಕಲೇಶಪುರದ ತಹಸೀಲ್ದಾರ್ ನೇತೃತ್ವದಲ್ಲಿ ಜಮೀನು ವಶಕ್ಕೆ ಬಲವಂತದ ಪ್ರಯತ್ನ ನಡೆದಿದೆ. ಹೈಕೋರ್ಟ್ನಿಂದ ತಡೆಯಾಜ್ಞೆ ಇದ್ದೂ ಭೂಮಿಯ ಮಾಲೀಕ ಸಂಸ್ಥೆಗೂ ಯಾವುದೇ ಮಾಹಿತಿಯನ್ನು ನೀಡದೆ ಸರ್ವೇ ಮಾಡಿ ಭೂ ಸ್ವಾಧೀನ ಮಾಡಲು ಅಧಿಕಾರಿಗಳು ಯತ್ನಿಸಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಪ್ಪು ಮಾಹಿತಿ
ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಎತ್ತಿನಹೊಳೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಕಳೆದ 9 ವರ್ಷಗಳಿಂದ ಈ ಯೋಜನೆ ಯಾಕೆ ಕುಂಟುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, 100 ದಿನಗಳ ಒಳಗೆ ಮೊದಲ ಹಂತದಲ್ಲಿ ನೀರು ಹರಿಯಬೇಕು ಎಂದು ಗಡುವು ನೀಡಿದ್ದರು.
ಈ ನಡುವೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರಿಗೆ ತಪ್ಪು ಮಾಹಿತಿ ನೀಡಿ ಹೈಕೋರ್ಟ್ನಿಂದ ತಡೆಯಾಜ್ಞೆ ಇದ್ದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಆಕ್ಷೇಪಿಸಿರುವ ಎಂಎಂಸಿಎಲ್ ಸಂಸ್ಥೆಯು ವಿಶ್ವೇಶ್ವರಯ್ಯ ಜಲ ನಿಗಮದ ಪ್ರಧಾನ ನಿರ್ದೇಶಕರು ಹಾಗೂ ಹಾಸನ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ನ ಯಥಾಸ್ಥಿತಿ ಆದೇಶಕ್ಕೆ ಬದ್ಧವಾಗಿರಬೇಕು, ಹಿಂದಿನ ಒಪ್ಪಂದದಂತೆ ಕಾಮಗಾರಿ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ.
ನ್ಯಾಯಾಂಗ ನಿಂದನೆ ದಾವೆ ಎಚ್ಚರಿಕೆ
ಎತ್ತಿನಹೊಳೆ ಯೋಜನೆಗೆ ಜಮೀನು ಬಿಟ್ಟುಕೊಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ಈ ಭಾಗದಲ್ಲಿ ಭೂಗರ್ಭ ಪೈಪ್ ಲೈನ್ ಮಾಡಿ ನೀರು ಒಯ್ಯಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಮೊದಲು ಮಾಡಿಕೊಂಡಿರುವ ಒಪ್ಪಂದವನ್ನೇ ಪಾಲಿಸಬೇಕು. ಹಾಗೆ ಮಾಡದೆ ಒಪ್ಪಂದವನ್ನು ಮುರಿದರೆ, ಯಥಾಸ್ಥಿತಿ ಕಾಪಾಡಬೇಕು ಎಂಬ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ದಾವೆ ದಾಖಲಿಸಿ ಹೋರಾಟ ನಡೆಸಲಾಗುವುದು ಎಂದು ಎಂಎಂಸಿಎಲ್ ಎಚ್ಚರಿಕೆ ನೀಡಿದೆ.
ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು
ಇದೇ ವೇಳೆ ಜಮೀನಿನ ಅಕ್ರಮ ಪ್ರವೇಶ, ಭೂಕಬಳಿಕೆ ಹುನ್ನಾರ ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆ ವಿರುದ್ಧ ವಿಶ್ವೇಶ್ವರಯ್ಯ ಜಲ ನಿಗಮದ ಎಂಜಿನಿಯರ್ ವಿರುದ್ಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 28ರಂದು ಕುಂಬರಡಿ ಗ್ರಾಮದ ಸರ್ವೇ ನಂ. 1/7 ಜಮೀನಿಗೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಮತ್ತು ಎಂಜಿನಿಯರ್ ಅವರು ಪೂರ್ವಗ್ರಹಪೀಡಿತ ಸರ್ವೇ ಮಾಡಿಸಿ ಅರ್ಜಿದಾರರ ಜಮೀನನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ. ಹೈಕೋರ್ಟ್ ದಾವೆ 35276/2019ರ ಆದೇಶವನ್ನು ಉಲ್ಲಂಘಿಸಿದ್ದಾರೆ. ಮತ್ತು ಜಮೀನಿನ ಬೇಲಿಯನ್ನು ಕಿತ್ತು ಹಾಳು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.