ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ (Karnataka Election 2023) ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ರೋಷಾವೇಶದ ಭಾಷಣಗಳೂ ಹೆಚ್ಚುತ್ತಿವೆ. ಇದೇ ವೇಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಅವರು ವಿಡಿಯೊ ಬಿಡಬೇಕೇ? ಲಂಚ ಪಡೆದುಕೊಂಡಿದ್ದನ್ನು ಸಾಬೀತು ಮಾಡಬೇಕೇ ಎಂಬಿತ್ಯಾದಿ ಹೇಳಿಕೆಗಳ ಮೂಲಕ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಏಪ್ರಿಲ್ 19ರಂದು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ಆಗ ಅಂಬೇಡ್ಕರ್ ವೃತ್ತದಲ್ಲಿ ಸುಧಾಕರ್ ವಿರುದ್ಧ ಅಬ್ಬರದ ಭಾಷಣ ಮಾಡಿದ್ದ ಪ್ರದೀಪ್ ಈಶ್ವರ್, ಮಾನಹಾನಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದರಿಂದ ಈಗ ಎಫ್‌ಐಆರ್ ದಾಖಲು ಮಾಡಲಾಗಿದೆ.
ಏನಿದು ಪ್ರಕರಣ?
ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ನಡೆದ ರೋಡ್ ಶೋದಲ್ಲಿ ಮಾತನಾಡಿದ್ದ ಪ್ರದೀಪ್ ಈಶ್ವರ್, “ಸುಧಾಕರ್ ಅವರೇ, ನಮ್ಮ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ನಮ್ಮ ಸಾಹೇಬರ ಬಗ್ಗೆ ಮಾತನಾಡುವಾಗ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ರಾಜಕೀಯ ಜೀವನವು ನಮ್ಮ ಸಿದ್ದರಾಮಯ್ಯ ಸಾಹೇಬರು ಹಾಕಿದ ಬಿಕ್ಷೆಯಾಗಿದೆ. ಎರಡು ಬಾರಿ ಗೆದ್ದು ಅನ್ನ ತಿಂದ ಮನೆಗೆ ದ್ರೋಹ ಬಗೆಯುತ್ತೀರಾ? ದ್ರೋಹ ಬಗೆಯಬಹುದಾ ಸ್ವಾಮಿ? ಈ ಮೆಡಿಕಲ್ ಮಿನಿಸ್ಟರ್ ಬರೀ ನಾಲ್ಕು ಮುಕ್ಕಾಲು ವರ್ಷ ಯಾರನ್ನೂ ಹತ್ತಿರಕ್ಕೆ ಸೇರಿಸದೇ, ಚುನಾವಣೆಗೆ ಎರಡು ತಿಂಗಳು ಇದ್ದಂತೆ ಸಿಕ್ಕ ಸಿಕ್ಕ ಪೋಸ್ಟ್ ಅನ್ನು ಸಿಕ್ಕ ಸಿಕ್ಕಿದವರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರ ಕಣ್ಣೀರು, ಅವರ ಹೆಂಡತಿ, ಮಕ್ಕಳ ಶಾಪ ತಟ್ಟದೇ ಇರುತ್ತಾ ಸಾರ್? ಇನ್ನೊಂದು 40% ಕಮಿಷನ್ ಪಿತಾಮಹಾ ನಮ್ಮ ಶಾಸಕರು. ಅಲ್ಲದೆ, ಸುಧಾಕರ್ ಅವರು, ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿರೋದು ಸಾಬೀತಾದರೆ ರಾಜಕೀಯ ತೊರೆಯುತ್ತೇನೆ ಎಂದು ಹೇಳುತ್ತಾರೆ. ಅವರು ಒಂದು ರೂಪಾಯಿಯನ್ನು ಎಲ್ಲಿ ತಗೋತಾರೆ? ಕೊಟಿಗಳಲ್ಲಿ ತಗೋತಾರೆ. ಕೋಟಿಗಳಲ್ಲಿ ಡೀಲ್ ಮಾಡುತ್ತಾರೆ ಎಂದು ಆರೋಪಿಸಿದ ಪ್ರದೀಪ್ ಈಶ್ವರ್, ಲಂಚ ತೆಗೆದುಕೊಂಡಿದ್ದೀರಾ ಇಲ್ಲವಾ ಎಂದು ಇದೇ ಸರ್ಕಲ್‌ನಲ್ಲಿ ನಾನು ಸಾಬೀತು ಮಾಡುತ್ತೇನೆ. ಅವರಿಗೆ ಇಲ್ಲಿಗೆ ಬರಲು ಹೇಳಿ, ತಾಕತ್ತಿದೆಯಾ ಕೇಳಿ ಎಂದು ಪ್ರಶ್ನೆ ಮಾಡಿದರು.
“ನಿಮ್ಮ ಎಲೆಕ್ಷನ್ ಅನ್ನು ನೀವು ಮಾಡಿಕೊಳ್ಳಿ, ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ. ನಾನು ಮಾತನಾಡಿದರೆ ಹೇಗೆ ಇರುತ್ತದೆ ಎಂದು 5 ವರ್ಷದ ಹಿಂದೆ ನೀವು ನೋಡಿಲ್ಲವೇನು? ಮತ್ತೆ ವಿಡಿಯೊಗಳನ್ನು ಬಿಡಬೇಕೇ, ಹುಷಾರ್” ಪ್ರದೀಪ್ ಎಂದು ಹೇಳಿದ್ದರು.
ಹೀಗಾಗಿ ಪ್ರದೀಪ್ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಎಫ್ಎಸ್‌ಟಿ ತಂಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ನಿರೂಪಣಾಧಿಕಾರಿ ಎಂ. ರಮೇಶ್ ಎನ್ನುವವರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: Karnataka Elections : ಹತ್ತು ಡಿಕೆಶಿಗಳು ಬಂದರೂ ಲಿಂಗಾಯತರ ಡ್ಯಾಂ ಒಡೆಯಲು ಅಸಾಧ್ಯ ಎಂದ ಸಿ.ಸಿ ಪಾಟೀಲ್
ಕಾಂಗ್ರೆಸ್ ಆಕ್ರೋಶ
ದೂರನ್ನು ಆಧರಿಸಿ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಎನ್ ಕೇಶವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವ ಸುಧಾಕರ್ ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲು ಮಾಡಿಸಿದ್ದಾರೆ ಎಂದು ದೂರಿದ್ದಾರೆ.