ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕುಂದೂರಿನಲ್ಲಿ ತಮ್ಮ ಮೇಲೆ ಹಲ್ಲೆಯಾಗಲು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಅವರೇ ಕಾರಣ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ಮಾಡಿದ್ದ ಆರೋಪವನ್ನು ನಿರಾಕರಿಸಿರುವ ದೀಪಕ್, ಈ ಸಂಬಂಧ ಈಶ್ವರನ ಮೇಲೆ ಪ್ರಮಾಣ ಮಾಡಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರಿನಲ್ಲಿ ಆನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಆದರೆ, ಶಾಸಕರು ಸಂಜೆ ವೇಳೆಗೆ ಭೇಟಿ ನೀಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗಲಾಟೆ ಮಾಡಿದ್ದರು. ಈ ವೇಳೆ ತಮ್ಮ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದು, ಇದರ ಹಿಂದೆ ತಮ್ಮದೇ ಪಕ್ಷದ ಮೂಡಿಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಅವರ ಕೈವಾಡ ಇದೆ ಎಂದು ಎಂ.ಪಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಈಗ ಈ ಆರೋಪವನ್ನು ನಿರಾಕರಿಸಿರುವ ದೀಪಕ್ ದೊಡ್ಡಯ್ಯ, ಆ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ದೇವಸ್ಥಾನದಲ್ಲಿ ಪ್ರಮಾಣ
ಮೂಡಿಗೆರೆಯ ಓಂಕಾರೇಶ್ವರ ದೇವಸ್ಥಾನಕ್ಕೆ ಅಮಾವಾಸ್ಯೆ ದಿನವಾದ ಬುಧವಾರ ಭೇಟಿ ನೀಡಿದ ದೀಪಕ್ ದೊಡ್ಡಯ್ಯ, ಓಂಕಾರೇಶ್ವರನ ಎದುರು ಪ್ರಮಾಣ ಮಾಡಿದ್ದಾರೆ. “ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಮೇಲೆ ಕುಂದೂರಿನಲ್ಲಿ ನಡೆದ ದಾಳಿಗೂ ತಮಗೂ ಯಾವುದೇ ಸಂಬಂಧ ಇಲ್ಲ” ಎಂದು ಪ್ರಮಾಣ ಮಾಡಿ ಹೇಳಿದ್ದಾರೆ.
ಇದನ್ನೂ ಓದಿ | Elephant Attack | ಕಾಡಾನೆ ದಾಳಿಗೆ ಮಹಿಳೆ ಬಲಿ; ಗ್ರಾಮಸ್ಥರಿಂದ ಶಾಸಕ ಎಂಪಿ ಕುಮಾರಸ್ವಾಮಿ ಮೇಲೆ ಹಲ್ಲೆ
ಏನಿದು ಪ್ರಕರಣ?
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ಆನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಧ್ಯಾಹ್ನದ ನಂತರ ಸ್ಥಳಕ್ಕೆ ಬಂದ ಶಾಸಕ ಕುಮಾರಸ್ವಾಮಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಕಾಡಾನೆ ದಾಳಿಗೆ ಮೂರು ತಿಂಗಳಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ನೀವು ಏನು ಮಾಡುತ್ತಿದ್ದೀರಾ ಎಂದು ಜನ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳೀಯರು ಶಾಸಕ ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಎಂ.ಪಿ. ಕುಮಾರಸ್ವಾಮಿ ಆರೋಪ ಏನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ನನಗೆ ಚಪ್ಪಲಿಯಲ್ಲಿ ಹೊಡೆದು ಹುಚ್ಚು ನಾಯಿಯಂತೆ ಅಟ್ಟಿಸಿಕೊಂಡು ಬಂದರು. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನನಗೆ ಟಿಕೆಟ್ ಸಿಗಬಾರದು. ನಾನು ಗೆಲ್ಲಬಾರದು. ಕೈ ಕಾಲು ಮುರಿದು ಮನೆಯಲ್ಲಿ ಕೂರಬೇಕು ಎಂದು ನಮ್ಮ ಪಕ್ಷದವರೇ ದಾಳಿ ಮಾಡಿಸಿದ್ದಾರೆ. ಇದರಲ್ಲಿ ಊರಿನವರ ತಪ್ಪಿಲ್ಲ. ನಾನು ಸೋಮವಾರ (ನ.೨೧) ಮತ್ತೆ ಕುಂದೂರಿಗೆ ಹೋಗಿ ಎಲ್ಲರಿಗೂ ಸಾಂತ್ವನ ಹೇಳಿದ್ದೇನೆ. ನನ್ನ ಮೇಲೆ ಬೇಕೆಂದೇ ದಾಳಿ ನಡೆದಿದೆ ಎಂದು ದೀಪಕ್ ದೊಡ್ಡಯ್ಯ ಅವರ ಮೇಲೆ ಆರೋಪ ಮಾಡಿದ್ದರು.
MP Kumaraswamy | ನನ್ನನ್ನು ಕಳ್ಳ, ಹುಚ್ಚು ನಾಯಿಯಂತೆ ಅಟ್ಟಾಡಿಸಿದರು: ಎಂ.ಪಿ. ಕುಮಾರಸ್ವಾಮಿ