ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಪಕ್ಷಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ ಎಂದು ಹೊರಟ್ಟಿ ತಿಳಿಸಿದರು.
ನಂತರ ಕೆಪಿಸಿಸಿ ಕಚೇರಿಗೆ ತೆರಳಿದ ಲಕ್ಷ್ಮಣ ಸವದಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ಲಕ್ಷ್ಮಣ ಸವದಿ, ನಾನು ಇವತ್ತು ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದೇನೆ. ನಾನು ಈಗ ಹೋಗಿ ಕಾಂಗ್ರೆಸ್ ಸೇರುತ್ತೇನೆ. ನನ್ನ ಹೆಣ ಕೂಡ ಅವರ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ನಾನು ರಾಹುಲ್ ಗಾಂಧಿ ಭೇಟಿಯಾಗುವ ಅವಶ್ಯಕತೆ ಇಲ್ಲ, ನಾನು ರಾಜ್ಯದ ನಾಯಕರ ಜೊತೆ ಇರ್ತೀನಿ. ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದರು.
ಬಿ.ಎಲ್. ಸಂತೋಷ್ ಅವರನ್ನು ಈ ವಿಚಾರದಲ್ಲಿ ತರುವ ಅವಶ್ಯಕತೆ ಇಕಲ್ಲ. ಅವರ ಬಗ್ಗೆ ನನಗೆ ಗೌರವ ಇದೆ. ಸತ್ಯ ಹೇಳಬೇಕು ಅಂದ್ರೆ, ಹಲವು ಬಾರಿ ಕರೆ ಮಾಡಿದ್ರು. ಅವರಿಗೆ ಮುಜುಗರ ಆಗ್ಬಾರ್ದು ಅಂತ ಕರೆ ಸ್ವೀಕರಸಿಲ್ಲ ಎಂದರು.
ನನ್ನನ್ನು ಡಿಸಿಎಂ ಆಗಿದ್ದಾಗ ಯಾಕೆ ತೆಗೆದರು? ನಾನ್ ಏನಾದ್ರು ಹಲ್ಕಟ್ ಕೆಲಸ ಮಾಡಿದ್ನಾ? ಭ್ರಷ್ಟಾಚಾರ ಮಾಡಿದ್ನಾ? ಏನ್ ಮಾಡಿದ್ದೆ ಅಂತ ನನ್ನ ತೆಗೆದ್ರು? ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ನಾನು ಸತೀಶ್ ಜಾರಕಿಹೊಳಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಜೊತೆ ನೇರವಾಗಿಯು ಹೋಗಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷವನ್ನ ಅಧಿಕಾರ ತರಲು ಕೆಲಸ ಮಾಡುತ್ತೇನೆ. ಬಿಜೆಪಿ ಸೋಲಿಸುವುದು ಜನರ ತೀರ್ಮಾನವಾಗಿರುತ್ತೆ ಎಂದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಲಕ್ಷ್ಮಣ ಸವದಿ ಅವರು ಹಿರಿಯ ನಾಯಕರು. ಅವರನ್ನು ಕರೆದುಕೊಂಡು ಬರುವುದರಲ್ಲಿ ಅಳಿಲು ಸೇವೆ ಮಾಡಿದ್ದೇನೆ. ಬೆಳಿಗ್ಗೆ ಮಾತುಕತೆ ನಡೆಯುವಾಗ ನಾನು ಇದ್ದೆ. ಅಥಣಿ ಕ್ಷೇತ್ರ ನೀರಾವರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಷರತ್ತು ಹಾಕಿದ್ದಾರೆ. ಅವರು ಬರುವುದರಿಂದ ಪಕ್ಷಕ್ಕೆ ಲಾಭ ಆಗಲಿದೆ.
ಬೆಳಗ್ಗೆ ಸತೀಶ್ ಜಾರಕಿಹೊಳಿ ಏಳು ಗಂಟೆಗೆ ನನಗೆ ಕಾಲ್ ಮಾಡಿದ್ರು. ನೀನು ಬೆಂಗಳೂರಿಗೆ ಹೋಗಿ ಬಾ, ನನ್ನ ಕ್ಷೇತ್ರದಲ್ಲಿ ಬಸ್ ಯಾತ್ರೆ ಇದೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಎಂದು ಹೇಳಿದ್ರು. ಸವದಿ ಅವರು ದೊಡ್ಡ ನಾಯಕರು. ಅವರ ನಾಯಕತ್ವದಲ್ಲಿ ಅನೇಕ ಜನ ಬರ್ತಾರೆ. ಮಾಜಿ ಶಾಸಕ ಶಶಿಕಾಂತ ಕಾಂಗ್ರೆಸ್ ಸೇರುತ್ತಿದ್ದಾರೆ. ತುಂಬ ಜನ ಸೇರುತ್ತಾರೆ, ಅವರು ರಾಜ್ಯ ನಾಯಕರು ಎಂದರು.