ಹಾವೇರಿ: ರಕ್ಷಕರೇ ಭಕ್ಷಕರಾದ ಸುದ್ದಿ ಇದು.. ಮಾಮೂಲಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ಗುತ್ತಲ ಠಾಣೆ ಪಿಎಸ್‌ಐ, ಮರಳು ಲಾರಿ ಚಾಲಕ ಮತ್ತು ಮಾಲೀಕನನ್ನು ಥಳಿಸಿರುವ ಆರೋಪವೊಂದು (Assault Case) ಕೇಳಿ ಬಂದಿದೆ.
ಹಾವೇರಿ ಜಿಲ್ಲೆಯ ಗುತ್ತಲ ಠಾಣೆ ಪಿಎಸ್‌ಐ ಶಂಕರಗೌಡ ಪಾಟೀಲ ಎಂಬುವವರು ಲಾರಿ ಚಾಲಕ ದ್ಯಾಮಪ್ಪ ಕುರಿ, ಲಾರಿ ಮಾಲೀಕ ಗುಡ್ಡಪ್ಪನನ್ನು ಥಳಿಸಿದ್ದಾರೆ ಎನ್ನಲಾಗಿದೆ. ರಾಣೇಬೆನ್ನೂರು ತಾಲೂಕಿನ ಬೆಲೂರಿನಿಂದ ಚಿಕ್ಕೋಡಿಗೆ ಮರಳು ತುಂಬಿದ ಲಾರಿ ಹೊರಟಿತ್ತು. ಲಾರಿಯಲ್ಲಿ ಮರಳು ಸಾಗಿಸಲು ಪಾಸ್ ಪಡೆಯಲಾಗಿದೆ. ಆದರೂ ಲಾರಿ ತಡೆದು ಹಲ್ಲೆ ಮಾಡಿದ್ದಾರೆ. ಪಾಸ್ ಇದ್ದರೂ, ಪಾಸ್ ಪಡೆದಿರಲಿಲ್ಲ ಎಂದು ಪೊಲೀಸರು ಲಾರಿ ಮಾಲೀಕ, ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Plastic recycling : ಬೆಂಗಳೂರು ಶಾಲೆಗಳಲ್ಲಿ “ಮರುಬಳಕೆ” ಅಧ್ಯಾಯ; ಮಕ್ಕಳಿಗೆ ರಿಸೈಕಲ್ ಪಾಠ
ಗುತ್ತಲ ಪೊಲೀಸರು ಲಾರಿ ಮಾಲೀಕನ ಕೊರಳಲ್ಲಿದ್ದ ಮೂರು ತೊಲೆ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ಗುಡ್ಡಪ್ಪ ಆರೋಪಿಸಿದ್ದಾರೆ. ಜತೆಗೆ ಪಿಎಸ್‌ಐ ಶಂಕರಗೌಡ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಿಎಸ್‌ಐ ಶಂಕರಗೌಡರ ದೌಜರ್ನ್ಯಕ್ಕೆ ಲಾರಿ ಚಾಲಕ ಹಾವೇರಿ ಎಸ್‌ಪಿ ಅಂಶುಕುಮಾರ್‌ಗೆ ದೂರು ನೀಡಿದ್ದಾರೆ.
ಹಿಂದೊಮ್ಮೆ ಪಿಎಸ್ಐ ಶಂಕರಗೌಡ ಪಾಟೀಲ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿ ಬಂದಿತ್ತು. ಹೊಸರಿತ್ತಿ ಠಾಣೆಯಲ್ಲಿ ಕಳ್ಳತನದ ಆರೋಪಿಯನ್ನು ಲಾಕಪ್ ಡೆತ್ ಮಾಡಿದ್ದರು ಎನ್ನುವ ಆರೋಪವಿದೆ. ಈಗ ಮರಳು ಲಾರಿ ಮಾಲೀಕ, ಚಾಲಕನನ್ನು ಥಳಿಸಿ, ಮತ್ತೇ ಸುದ್ದಿಯಾಗಿದ್ದಾರೆ. ಸದ್ಯ ತೀವ್ರ ಹಲ್ಲೆಗೊಳಾಗದ ಲಾರಿ ಮಾಲೀಕ ಗುಡ್ಡಪ್ಪ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ