Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಮೀಸಲಾತಿ ವರ್ಗೀಕರಣ ವರದಿ ಪುನರ್‌ಪರಿಶೀಲನೆಗೆ ಸರ್ಕಾರಕ್ಕೆ ಮನವಿ: ಕೆ. ಜಯಪ್ರಕಾಶ ಹೆಗ್ಡೆ

backward-classes-commission-requested-govt-to-revisit-reservation-report

ಹಾವೇರಿ: ವಿವಿಧ ಸಮುದಾಯಗಳಿಗೆ ಮೀಸಲಾತಿ ನಿಗದಿಪಡಿಸುವ ವರದಿಯನ್ನು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಪುನರ್‌ಪರಿಶೀಲನೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಪಾಪು-ಚಂಪಾ ವೇದಿಕೆʼಯಲ್ಲಿ ಆಯೋಜಿಸಿದ್ದ ʼಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನʼ ಗೋಷ್ಠಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಯಾವುದೇ ಆಯೋಗ ನೀಡಿದ ವರದಿಯನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪುನರ್‌ಪರಿಶೀಲನೆ ನಡೆಸಬೇಕು ಎಂಬ ನಿಯಮವಿದೆ. ವಿವಿಧ ಸಮುದಾಯಗಳ ಪ್ರಸಕ್ತ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ, ಹಿಂದುಳಿದ ಸಮುದಾಯಗಳನ್ನು ಸೇರಿಸುವ ಹಾಗೂ ಕೆಲವು ಸಮುದಾಯಗಳನ್ನು ಪಟ್ಟಿಯಿಂದ ತೆಗೆಯುವ ಕೆಲಸವೂ ಆಗಬೇಕಿದೆ.

ಸದ್ಯ ಎಸ್‌ಸಿಎಸ್‌ಟಿ, ಒಬಿಸಿ ಸೇರಿ ವಿವಿಧ ಮೀಸಲಾತಿ ನೀಡಿ ವರ್ಗೀಕರಣ ಮಾಡಿರುವ ವರದಿಯನ್ನು 2002ರಲ್ಲಿ ಸಿದ್ಧಪಡಿಸಲಾಗಿತ್ತು. ಈಗಾಗಲೆ 20 ವರ್ಷವಾಗಿದೆ. ಇದೀಗ ಮತ್ತೊಮ್ಮೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಇದಕ್ಕೂ ಮೊದಲು ಗೋಷ್ಠಿಯ ಅಧ್ಯಕ್ಷತೆ ವಹಿಸುವ ಜತೆಗೆ ʼಹಾವನೂರು ವರದಿಗೆ ಐವತ್ತು ವರ್ಷʼ ಕುರಿತು ಮಾತನಾಡಿದ ಜಯಪ್ರಕಾಶ್‌ ಹೆಗ್ಡೆ, ಎಲ್‌.ಜಿ.‌ಹಾವನೂರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ವರದಿ ಸಿದ್ಧಪಡಿಸಿದರು. ವಿವಿಧ ಸಮುದಾಯಗಳಿಗೆ ಶೇಕಡಾವಾರು ಮೀಸಲಾತಿ ನೀಡಿದರು.‌ ಅಷ್ಟೇ ಅಲ್ಲದೆ ಅನೇಕ ಸಲಹೆಗಳನ್ನೂ ನೀಡಿದರು.

ಹಿಂದುಳಿದ ವರ್ಗಗಳಿಗೆ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಬೇಕು, ಸಂಶೋಧನಾ ಕೇಂದ್ರಗಳಲ್ಲೂ ಮೀಸಲಾತಿ ಇರಬೇಕು, ವಿಶೇಷ ಅಧ್ಯಯನಕ್ಕೆ ವಿದೇಶಕ್ಕೆ ತೆರಳು ಅನುದಾನ ನೀಡಬೇಕು ಎಂಬುದೂ ಸೇರಿ ಅನೇಕ‌ ಶಿಫಾರಸುಗಳನ್ನು ನೀಡಿದರು. ಹಾವನೂರು‌ ಅವರ ವರದಿಯನ್ನು ನೋಡಿದ ದೇವರಾಜ ಅರಸು ಅವರು, ಹಾವನೂರು ಅವರನ್ನೇ ಸಚಿವರಾಗಿ ನೇಮಕ ಮಾಡಿದರು.‌ ಇದರಿಂದಾಗಿ ವರದಿಯ ಸೂಕ್ತ ಅನುಷ್ಟಾನ ಆಯಿತು. ಭಾರತದಲ್ಲಷ್ಟೇ ಅಲ್ಲ, ನೆಲ್ಸನ್ ಮಂಡೇಲಾ ಅವರು ಹಾವನೂರು‌ ಅವರನ್ನು ಸಲಹೆಗಾರರಾಗಿ ನೇಮಿಸಿದ್ದರು. ಇದು ಭಾರತೀಯರೆಲ್ಲ ಹೆಮ್ಮೆ ಪಡುವ ವಿಚಾರ ಎಂದರು.

ಇಂದು ಎಲ್ಲರೂ ಅಭಿವೃದ್ಧಿ ನಿಗಮ ಕೇಳುತ್ತಿದ್ದಾರೆ. ಎಷ್ಟು ಅನುದಾನ ನೀಡುತ್ತಾರೆ ಎನ್ನುವುದು ಮುಖ್ಯ. ಹೊಸ‌ ಅನುದಾನ ನೀಡುತ್ತಾರೆಯೇ ಅಥವಾ ಇದ್ದದ್ದೇ ಹಂಚುತ್ತಾರೆಯೇ ಎಂದು ನೋಡಬೇಕು. ಕಡಿಮೆ ಅನುದಾನ ನೀಡಿದರೆ ಅದು ಆಡಳಿತ ವೆಚ್ಚಕ್ಕೇ ಸಾಕಾಗುತ್ತದೆ, ನಿಗಮ ಸ್ಥಾಪನೆಯ ಉದ್ದೇಶ ಈಡೇರುವುದೇ ಇಲ್ಲ ಎಂದು ಹೇಳಿದರು.
ಬಿಬಿಎಂಪಿ ಉಪ ಆಯುಕ್ತ ಡಾ. ಕೆ. ಮುರಳೀಧರ ಮಾತನಾಡಿ, ವರದಿ ನೀಡಿದಾಕ್ಷಣ ಅನುಷ್ಠಾನ ಆಗುವುದಿಲ್ಲ. ವರದಿಯನ್ನು ಸಿದ್ಧಪಡಿಸುವಾಗ ಆ ಸಮಿತಿಯಲ್ಲಿ ಶಿಕ್ಷಣ, ಆಡಳಿತ, ಕಾನೂನು ತಜ್ಞರು ಇರಬೇಕು.
ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಕುರಿತು ಅನೇಕ ವರ್ಷದಿಂದ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿವರೆಗೆ ಪೂರ್ಣ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಗೋಕಾಕ್ ವರದಿ ಅನುಷ್ಠಾನ ಆಗಬೇಕಾದರೂ ಬಹುದೊಡ್ಡ ಹೋರಾಟಗಳು ನಡೆದವು.

ಕನ್ನಡಿಗರಿಗೆ ಶೇಕಡಾ ನೂರು ಮೀಸಲಾತಿ ನೀಡಲು, ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶ ಇದೆಯೇ ನೋಡಬೇಕು. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಬಹುದು ಎಂದು ಇರುವಾಗ ಹೇಗೆ ರಾಜ್ಯ ಕೇಂದ್ರಿತ ಕಾನೂನು ಜಾರಿ ಮಾಡುವುದು ಎನ್ನುವುದೇ ಕಷ್ಟ. ಕನ್ನಡ ಭಾಷೆಯನ್ನು ಅನುಷ್ಠಾನ ಮಾಡದ ಕೇಂದ್ರ ಸೇವೆಯ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವುದೂ ಸೇರಿ ಅನೇಕ‌ ಬದಲಾವಣೆ ಮಾಡಬೇಕಾಗುತ್ತದೆ ಎಂದರು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಪರೀಕ್ಷೆ ಮಾಡಲಾಗುತ್ತದೆ. ಆದರೆ ಅನೇಕ ನಿಯಮಗಳಲ್ಲಿ ಕನ್ನಡ ಕಡ್ಡಾಯ ಮಾಡಿಲ್ಲದೇ ಇರುವುದು ಅನ್ಯ ರಾಜ್ಯದವರ ನೇಮಕವೂ ಆಗುತ್ತಿದೆ. ನಮ್ಮ ಎಲ್ಲ ನೀತಿಗಳೂ ಕನ್ನಡದ ಪರದೆಯನ್ನು ಹಾದು ಹೋಗುವಂತೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಲೋಚಿಸಬೇಕು ಎಂಬುದು ಸರಿಯಾದರೂ ಎಲ್ಲರಿಗೂ ಮಾತೃಭಾಷೆಯನ್ನು ಅಭ್ಯಾಸ ಮಾಡುವುದು ಅತ್ಯಗತ್ಯ. ಸಂವಿಧಾನವೂ ಮಾತೃಭಾಷೆಗೆ ಪ್ರಾಶಸ್ತ್ಯ ನೀಡಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದಿ ಅ‌ನೇಕ ಸಂಶೋದಕರು ಹೇಳಿದ್ದಾರೆ.

ಸಮಗ್ರ ಕನ್ನಡ ಕಾನೂನು ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲೇ ಇಲ್ಲ,‌ ಅದಿನ್ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಕನ್ನಡದ‌ ಕಾನೂನು ಜಾರಿ ಮಾಡಲು ನಮ್ಮಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಕ‌ನ್ನಡವನ್ನು ಹೆಚ್ಚು ಗಟ್ಟಿಗೊಳಿಸಲು ಸರ್ಕಾರದ ಶಾಲೆಗಳನ್ನು ಶಕ್ತಿಯುತಗೊಳಿಸಬೇಕು.‌ ಇದಕ್ಕೆ ಕಾನೂನಿಗಿಂತಲೂ ಮೇಲುಸ್ತರದ ಬದ್ಧತೆ ಬೇಕಾಗುತ್ತದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ವಿವಿ ಪಠ್ಯಕ್ರಮ ಸಿದ್ಧವಾಗಲಿ: ಕೆ. ಸತ್ಯನಾರಾಯಣ ಅಭಿಪ್ರಾಯ

Exit mobile version