ಹಾವೇರಿ: ಒಂದಲ್ಲ ಒಂದು ದಿನ ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ (ಮುಖ್ಯಮಂತ್ರಿ) ಆಗ ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಜೆಸಿಬಿ (UP Model JCB Operation) ಓಡಲಿದೆ ಎಂದು ಬಿಜೆಪಿ ಶಾಸಕ, ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patee Yatnal) ಗುಡುಗಿದ್ದಾರೆ. ಮುಖ್ಯಮಂತ್ರಿಯಾಗುತ್ತೇನೆ (Will become Chief minister) ಎಂದು ಪರೋಕ್ಷವಾಗಿ ಹೇಳಿದ ಅವರು ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕೀಯದ (Adjustment Politics) ಬಗ್ಗೆಯೂ ಮಾತನಾಡಿದ್ದಾರೆ.
ಹಾವೇರಿ ಕಾ ರಾಜ್ ಗಣಪತಿ ಉತ್ಸವ ಸಮಿತಿ ಸಂಘಟಿಸಿದ ಹಿಂದೂ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಎರಡೇ ತಿಂಗಳು ಗೃಹ ಖಾತೆ ಕೊಟ್ಟು ನೋಡಿ ಉತ್ತರ ಪ್ರದೇಶದ ರೀತಿಯಲ್ಲೇ ಕರ್ನಾಟಕವನ್ನು ಮಾಡುತ್ತೇನೆ ಎಂದರು. ಪೊಲೀಸರ ಕೈಯಲ್ಲಿ ಗನ್ ಕೊಡುತ್ತಾರೆ. ಆದರೆ ಅದನ್ನು ಬಳಸುವಂತಿಲ್ಲ ಅಂತಾರೆ. ನಾನು ಗೃಹ ಸಚಿವನಾದರೆ ಗನ್ ಬಳಸಬಹುದು ಎಂಬರ್ಥದಲ್ಲಿ ಹೇಳಿಕೆ ನೀಡಿದರು.
ಹಸಿರು ಬಾವುಟವೇ ಇಲ್ಲದ ಹಾಗೆ ಮಾಡುತ್ತೇವೆ!
ದೇಶದಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ನೀವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಈ ಬಾರಿ ಮೋದಿ ಗೆದ್ದರೆ ನಾವು ಕಾಶ್ಮೀರದಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ಇವತ್ತು ಕೆಲವರು ಹಸಿರು ಬಾವುಟ ಹಾರಿಸಲು ಓಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿರು ಬಾವುಟವೇ ಇಲ್ಲದ ಹಾಗೆ ಮಾಡುತ್ತೇವೆ ಎಂದು ಹೇಳಿದರು. ಅದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ನೋಡಿ ಮತ ಹಾಕಬೇಕಿಲ್ಲ. ನಾವು ಮೋದಿ ನೋಡಿ ಮತ ಹಾಕಬೇಕು ಎಂದರು.
ಪೊಲೀಸರು ಶಾಲು ಹಾಕೋದಲ್ಲ, ಡ್ಯಾನ್ಸೇ ಮಾಡ್ತಾರೆ, ಏನ್ಮಾಡ್ತೀರಾ?
ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಹಾಕಿಕೊಂಡು ತಿರುಗಾಡಬಾರದು ಎಂಬ ಸೂಚನೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ಪೊಲೀಸರು ಶಾಲು ಹಾಕುವುದಲ್ಲ, ನಮ್ಮ ಕಾರ್ಯಕ್ರಮಕ್ಕೆ ಬಂದು ಡ್ಯಾನ್ಸ್ ಮಾಡ್ತಾರೆ, ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರು. ಅವರಿಗೆ ಹಿಂದೂ ಧರ್ಮದ ಬಗ್ಗೆ ಅಭಿಮಾನ ಇರುವುದೇ ತಪ್ಪಾ? ಎಂದು ಕೇಳಿದರು.
ನರಸತ್ತ ಮುಖ್ಯಮಂತ್ರಿ ಇದ್ದರೆ ಹೀಗೇ ಆಗುವುದು
ನಮ್ಮ ಗೃಹ ಸಚಿವ ತೀವ್ರ ಕ್ರಮ, ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಉಪ ಮುಖ್ಯಮಂತ್ರಿಗೆ ಸಾಂವಿಧಾನಿಕವಾಗಿ ಯಾವುದೇ ಅಧಿಕಾರವಿಲ್ಲ. ಆದರೆ, ಆತ ಗೃಹ ಖಾತೆ ಮೀಟಿಂಗ್‌ಗೂ ಬಂದು ಕೂರುತ್ತಾನೆ. ಅವನಿಗೆ ಇರುವುದು ಜಲಸಂಪನ್ಮೂಲ ಖಾತೆ, ಅದು ಬಿಟ್ಟು ಉಳಿದುದೆಲ್ಲ ಮಾಡ್ತಾನೆ. ಇಂತ ನರ ಸತ್ತ ಸರ್ಕಾರ ನರ ಸತ್ತ ಮುಖ್ಯಮಂತ್ರಿ ಬಂದರೆ ಹೀಗೇ ಆಗುವುದು ಎಂದರು ಯತ್ನಾಳ್.
ಹಾವೇರಿ ಕಾ ರಾಜಾ ಭಾರತ್ ಕಾ ಚೋರ್!
ರಾಜ್ಯ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಬಸನಗೌಡ ಪಾಟೀಲ್ ಮತ್ತೊಮ್ಮೆ ಗುಡುಗಿದರು.
ʻʻಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಾರೆ. ಮುಂಜಾನೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳುತ್ತಾರೆ. ರಾತ್ರಿಯಾದ ಮೇಲೆ ಒಟ್ಟಿಗೇ ಕುಳಿತು ಕುಡಿಯುತ್ತಾರೆ. ಈ ದೇಶದಲ್ಲಿ ಇನ್ನೊಬ್ಬ ಅರೆಹುಚ್ಚ ಇದ್ದಾನೆ. ಹಾವೇರಿ ಕಾ ರಾಜಾ ಇದ್ದಂಗೆ, ಅದು ಭಾರತ್ ಕಾ ಜೋಕರ್ʼʼ ಎಂದು ರಾಹುಲ್ ಗಾಂಧಿ ಹೆಸರು ಹೇಳದೆಯೇ ಯತ್ನಾಳ್ ವಾಗ್ದಾಳಿ ನಡೆಸಿದರು. ಅವನು ಪಕ್ಕಾ ಹಿಂದುಗೂ ಹುಟ್ಟಿಲ್ಲ, ಸಾಬರಿಗು ಹುಟ್ಟಿಲ್ಲ, ಕ್ರಿಶ್ಚಿಯನ್‌ಗೂ ಹುಟ್ಟಿಲ್ಲ ಎಂದರು.
ಮಂತ್ರಿಗಳ ಹಿಂದೆ ಓಡುವ ಸ್ವಾಮೀಜಿಗಳು
ಹಿಂದು ಧರ್ಮವನ್ನು ಉಳಿಸಬೇಕಾದ ಸ್ವಾಮೀಜಿಗಳು ಮಂತ್ರಿಗಳ ಮನೆ ಸುತ್ತುತ್ತಿದ್ದಾರೆ. ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್ ಕಟ್ಟಿಸಿಕೊಡಲು ಸ್ವಾಮೀಜಿಗಳು ಮಂತ್ರಿಗಳ ಹಿಂದೆ ಓಡಾಡುತ್ತಿದ್ದಾರೆ. ಆದರೆ ಸನಾತನ ಧರ್ಮ ಉಳಿಸುವ ಕೆಲಸ ಮಾಡುತ್ತಿಲ್ಲ. ಧರ್ಮ ಉಳಿಸುವ ಕೆಲಸ ಮಾಡಬೇಕಾದವರು ಮಂತ್ರಿ ಮಾಡಿ ಮುಖ್ಯಮಂತ್ರಿ ಮಾಡಿ ಅಂತಾ ಲಾಬಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಯತ್ನಾಳ್ ಬ್ಯಾನರ್ ಹರಿದ ಕಿಡಿಗೇಡಿಗಳು
ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಭಾವಚಿತ್ರವಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದಿದ್ದಾರೆ. ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಗಣೇಶೋತ್ಸವದ ಹಬ್ಬಕ್ಕೆ ಶುಭಕೋರಿ ಹಾಕಿದ್ದ ಶಾಸಕ ಯತ್ನಾಳ ಭಾವಚಿತ್ರವಿರುವ ಬ್ಯಾನರ್ ಇದಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಎಸ್ಪಿ ಋಷಿಕೇಷ್ ಸೋನಾವಣೆ ಹಾಗೂ ಇತರೆ ಆಧಿಕಾರಿಗಳ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿದ ಬ್ಯಾನರನ್ನು ತೆಗೆಸಲಾಗಿದೆ. ಈದ್ ಮೆರವಣಿಗೆ ವೇಳೆ ಈ ಕೃತ್ಯ ನಡೆಸಲಾಗಿದೆ. ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ತಿಳಿಸಿದ್ದಾರೆ.