Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಶೀಘ್ರದಲ್ಲೇ ಕನ್ನಡ ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ: ಕನ್ನಡಕ್ಕೆ ಎದುರಾಗಿರುವ ಆಪತ್ತುಗಳನ್ನು ಮೆಟ್ಟಿನಿಲ್ಲಲು ರೂಪಿಸಲಾಗುತ್ತಿರುವ ಕನ್ನಡ ಭಾಷಾ ಸಮಗ್ರ ಕಾಯ್ದೆಯನ್ನು ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಆಯೋಜನೆಯಾಗಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಅಂದರೆ ಕನ್ನಡಿಗರ ಬದುಕು ಅತ್ಯಂತ ಪುರಾತನ, ಪ್ರಾಚೀನ ಹಾಗೂ ಶ್ರೇಷ್ಠವಾದದ್ದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಕನ್ನಡ ಸಂಸ್ಕೃತಿಗೆ ದೊಡ್ಡ ಶಕ್ತಿಯನ್ನು ತುಂಬಿರುವಂತಹ, ಬದುಕನ್ನು ಕೊಟ್ಟಿರುವಂತಹದ್ದು ಕನ್ನಡದ ಸಾಹಿತ್ಯ ಲೋಕ.

ಕನ್ನಡ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದೆ. ಅದನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂಬ ಕಾರಣಕ್ಕೆ ಸಮ್ಮೇಳನ ನಡೆಸಲಾಗುತ್ತದೆ. ಕನ್ನಡ ಕಂಪನ್ನು ಎಲ್ಲ ಕಡೆ ಪಸರಿಸಬೇಕು, ಕನ್ನಡವನ್ನು ಆಳವಾಗಿ ಈ ಭಾರತ ದೇಶದಲ್ಲಿ ಬಿತ್ತಬೇಕು, ಕನ್ನಡವು ಹೆಮ್ಮರವಾಗಿ ಬೆಳೆಯಬೇಕು.

ದೊಡ್ಡರಂಗೇಗೌಡರು ಪರಿಪೂರ್ಣ ಸಾಹಿತಿಗಳು. ಬದುಕನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಅವರ ಹಾಡು, ಕವಿತೆ ಮೂಲಕ ಮಾಡಿದ್ದಾರೆ. ಅವರು ಹೆಸರೇ ಹೇಳುವಂತೆ ದೊಡ್ಡವರು ಹಾಗೂ ಅನೇಕ ರಂಗಗಳಲ್ಲಿ ಸಾಧನೆಯನ್ನು ಮಾಡಿದವರು, ಇಂದು ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದಾರೆ.

ನಾನು ಹೆಚ್ಚಿಗೆ ಮಾತನಾಡುವುದಿಲ್ಲ, ಇದು ಕನ್ನಡಕ್ಕೆ ಹೆಚ್ಚು ಕೆಲಸ ಮಾಡುವ ಸಮಯ. ಆದರೆ ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಿಕೊಳ್ಳುವ ಹಾಗೂ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುವ ಕೆಲಸ ಆಗಬೇಕಿದೆ. ಕನ್ನಡ ಯಾವುದೇ ಹಂತದಲ್ಲಿ ಬಡವಾಗಿಲ್ಲ. ಇನ್ನೂ ಶತಶತಮಾನಗಳ ಕಾಲ, ಸೂರ್ಯ ಚಂದ್ರರಿರುವವರೆಗೂ ಬೆಳೆಯುತ್ತಲೇ ಇರುತ್ತದೆ. ಕನ್ನಡಕ್ಕೆ ಆಪತ್ತು ಎಂಬ ಭಾವನೆ ನಮ್ಮಲ್ಲಿದೆ. ಆದರೆ ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಜಗತ್ತಿನಲ್ಲಿ ಇನ್ನೂ ಹುಟ್ಟಿಲ್ಲ. ಆತ್ಮವಿಶ್ವಾಸದಿಂದ, ಸಂಕಲ್ಪದಿಂದ ನಾವೆಲ್ಲರೂ ಕನ್ನಡವನ್ನು ಕಟ್ಟೋಣ. ಈ ಬೆಳವಣಿಗೆಯಲ್ಲಿ ನಮ್ಮ ಕೊಡುಗೆ ಇರಲಿ ಎಂಬ ಭಾವದಿಂದ ಸಮ್ಮೇಳನ ಆರಂಭಿಸಬೇಕಿದೆ.

ಭಾರತ ದೇಶದ ಯಾವುದೇ ರಾಜ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದವರಿಲ್ಲ. ಇಬ್ಬರು ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪಡೆದವರಿದ್ದಾರೆ. ಇದು ಕನ್ನಡದ ಶಕ್ತಿ. ಕನ್ನಡವು ವಿವಿಧ ಸೊಗಡುಗಳ ಮೂಲಕ ವಿವಿಧ ಆಯಾಮಗಳಲ್ಲೂ ಬೆಳೆಯುತ್ತಿದೆ.

ಕನ್ನಡ ಏಕೀರಣ ಹೋರಾಟ ನಿರಂತರವಾಗಿ ನಡೆಯಿತು. ಹಾವೇರಿಯಲ್ಲಿ ಮೈಲಾರ ಮಹದೇವಪ್ಪನ ಹೋರಾಟವನ್ನು ನಾವು ಮರೆಯಲು ಸಾಧ್ಯವಿಲ್ಲ. ಇವೆಲ್ಲ ಭಾವನೆಯನ್ನೂ ನಾವು ಹೃದಯದಲ್ಲಿ ಇರಿಸಿಕೊಳ್ಳಬೇಕು. ಸನ್ಮಾನ್ಯ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಕನ್ನಡ ನಾಡು ದೇವರ ಆಶೀರ್ವಾದದಿಂದ ಸಂಪದ್ಭರಿತವಾಗಿದೆ. ಕೃಷಿಯಲ್ಲೂ ಸಂಪದ್ಭರಿತವಾಗಿದೆ. ನಿಸರ್ಗವೂ ನಮ್ಮ ಜತೆಗಿದೆ. ರೈತನ ಬೆವರು ಭೂಮಿ ತಾಯಿಯನ್ನು ಸೇರಿದಾಗ ಬಂಗಾರದ ಬೆಳೆಯನ್ನು ನೀಡುತ್ತದೆ. ಅಲ್ಲಿ ದುಡಿಯುವ ರೈತ ಕಾರ್ಮಿಕನಿಗೆ ನಮ್ಮ ನಮನಗಳಿರಲಿ.

ಕನ್ನಡಕ್ಕೆ ಹತ್ತು ಹಲು ಸವಾಲುಗಳಿವೆ. ಕನ್ನಡದ ಸುತ್ತ ನಡೆಯುತ್ತಿರುವ ವಿಚಾರಗಳು ಗೊತ್ತಿವೆ. ಕನ್ನಡ ಭಾಷೆಗೆ ಕಾನೂನು ಬೆಂಬಲ ನೀಡಲು ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಕಾನೂನು ಸಲಹೆಗೆ ನೀಡಲಾಗಿದೆ. ವ್ಯಾಪಕ ಚರ್ಚೆ ಆಗಲಿ ಎಂಬುದು ನಮ್ಮ ಉದ್ದೇಶವಾಗಿದೆ. ಅದಾದ ಕೂಡಲೆ ಕಾನೂನು ಜಾರಿ ಮಾಡಲಿದ್ದೇವೆ. ಕೈಗಾರಿಕೆಗಳಲ್ಲಿ ಕನ್ನಡಿಗರಿಒಗೆ ಭದ್ರತೆ ನೀಡಲಾಗುತ್ತದೆ, ಗಡಿನಾಡ ಕನ್ನಡಿಗರಿಗೆ ಶಾಲೆಗಳಿಗೆ ಬೆಂಬಲ ನೀಡಲಾಗುತ್ತದೆ, ಗಡಿಯಾಚೆಗೂ ಕನ್ನಡ ಸಂಸ್ಕೃತಿ ಬೆಳೆಸಲು ಕಟಿಬದ್ಧವಾಗಿದ್ದೇವೆ.

ಸಮ್ಮೇಳನದ ನಿರ್ಣಯಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತದೆ. ಕನ್ನಡ, ಕನ್ನಡ ಸಾಹಿತ್ಯವನ್ನು ಭವಿಷ್ಯವನ್ನು ಬರೆಯುವ ಹಾಗೂ ಕನ್ನಡಿಗರ ಬದುಕನ್ನು ಕಟ್ಟಿಕೊಡುವ ವೇದಿಕೆ ಆಗಲಿ. ಕನ್ನಡಿಗರ ಬದುಕು ಸುಸ್ಥಿರ ಬದುಕು ಆಗಲಿ. ನವ ಕರ್ನಾಟಕಕ್ಕೆ ಕೊಡುಗೆ ನೀಡಲಿ. ನವ ಕರ್ನಾಟಕದಿಂದ ನವಭಾರತ ನಿರ್ಮಾಣವಾಗಲಿ ಎಂದು ಆಶಿಸಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಅರಬೈಲ್‌ ಶಿವರಾಮ ಹೆಬ್ಬಾರ್‌, ಶಾಸಕ ನೆಹರೂ ಓಲೆಕಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌, ಲೋಕಸಭಾ ಸದಸ್ಯ ಶಿವಕುಮಾರ್‌‌ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಸಲೀಂ ಅಹಮದ್‌, ಪ್ರದೀಪ್‌ ಶೆಟ್ಟರ್‌ ಮತ್ತಿತರರಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯನ್ನು ರಂಗೇರಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

Exit mobile version