Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಸಾಹಿತಿಗಳು ರಾಜಕೀಯ ಮಾಡಬೇಡಿ: ಮುಸ್ಲಿಂ ಪ್ರಾತಿನಿಧ್ಯದ ಕುರಿತು ಕಸಾಪಕ್ಕೆ ಬಿ.ಕೆ. ಹರಿಪ್ರಸಾದ್‌ ಬುದ್ಧಿಮಾತು

prajadhwani-congress leader bk hariprasad attacks bjp minister anand singh

ಹಾವೇರಿ: ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದವರನ್ನು ದೂರ ಇಡಲಾಗಿದೆ ಎನ್ನುವುದನ್ನು ನಿರಾಕರಿಸಲು ಆಗದು ಎಂದಿರುವ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಸಾಹಿತಿಗಳು ರಾಜಕಾರಣ ಮಾಡಬಾರದು ಎಂದು ಪರಿಷತ್‌ಗೆ ಬುದ್ಧಿಮಾತು ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಎನ್ನುವುದು ಕೇವಲ ಭಾಷೆ ಅಥವಾ ಸಾಹಿತ್ಯ ಅಲ್ಲ. ಕನ್ನಡಿಗರೆಲ್ಲರೂ ಸೇರಿ ಕನ್ನಡ. ಸಮಾಜದ ಸಮಸ್ಯೆಗಳಿಗೆ ಸಾಹಿತ್ಯ ಸ್ಪಂದಿಸಬೇಕು. ನಿರ್ಲಕ್ಷಿತರಿಗೆ ದನಿಯಾಗಬೇಕು. ಸಾಹಿತ್ಯ, ಸಂಸ್ಕೃತಿ, ವಿಜ್ಞಾನಗಳು ಸಮಾಜವನ್ನು ಬಿಟ್ಟು ಇಲ್ಲ. ರಾಜಕೀಯ ದಾರಿ ಬಿಟ್ಟಿರುವುದು ನಿಜ. ಸ್ವಜನ ಪಕ್ಷಪಾತ, ಜಾತಿ ಆಧಾರದಲ್ಲಿ ಚುನಾವಣೆಗಳು ನಡೆಯುತ್ತವೆ. ಇಂತಹ ಸಮಯದಲ್ಲಿ ಸಾಹಿತ್ಯ ಲೋಕವು ತಪ್ಪನ್ನು ತಿದ್ದುವ ಕೆಲಸ ಮಾಡಬೇಕು.

ಕುವೆಂಪು, ಕಾರಂತ, ದೇವನೂರು ಮಹದೇವ ಅವರವರೆಗೆ ಎಲ್ಲರೂ ಆ ಕಾರ್ಯ ಮಾಡಿದ್ದಾರೆ. ಆದರೆ ಇತ್ತೀಚೆಗೆ ವಿಧಾನಸೌಧದ ರಾಜಕೀಯ ಮೀರಿದ ರಾಜಕೀಯ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಆರೋಪವನ್ನು ನಿರಾಕರಿಸಲು ಆಗುತ್ತದೆಯೇ ಗೊತ್ತಿಲ್ಲ. ರಾಜಕೀಯದಲ್ಲಿ ಇದರಲ್ಲಿ ಇದು ಅನಿವಾರ್ಯವಾಗಿರಬಹುದು, ಆದರೆ ಸಾಹಿತಿಗಳು ಚಿಂತಕರೇ ಆ ಕೆಲಸ ಮಾಡಬಾರದು.

ಒಂದು ರಾಜಕೀಯ ಪಕ್ಷ ನೇರವಾಗಿ ಜಾತಿ, ಧರ್ಮದ ಮತ ಬೇಡ ಎಂದು ಹೇಳಬಹುದು. ಸಾಹಿತ್ಯ ಲೋಕ ಹಾಗೆ ಮಾಡಲು ಸಾಧ್ಯವೇ? ನೀವೂ ಹಾಗೆಯೇ ನಡೆದುಕೊಂಡರೆ ದಾರಿ ತೋರಿಸುವವರು ಯಾರು ಎನ್ನುವುದನ್ನು ನೋಡಬೇಕಿದೆ. ಮುರಿದದ್ದನ್ನು ಜೋಡಿಸುವ ಕೆಲಸವನ್ನು ಸಾಹಿತಿಗಳು ಮಾಡಬೇಕೆ ವಿನಃ ಅವರೂ ರಾಜಕಾರಣಿಗಳಂತೆ ನಡೆದುಕೊಳ್ಳಬಾರದು.

ಹಿಂದೊಮ್ಮೆ ಸಮ್ಮೇಳನದಲ್ಲಿ ದಲಿತ ಗೋಷ್ಠಿ ನಡೆಸಲು ನಿರಾಕರಿಸಲಾಯಿತು. ಆಗ ಇಡೀ ಸಾಹಿತ್ಯ ಕ್ಷೇತ್ರ ಇದನ್ನು ವಿರೋಧಿಸಿತು. ಈ ಬಾರಿಯ ಸಮ್ಮೇಳನದಲ್ಲಿ ಕೆಲವು ಸಮುದಾಯದವರನ್ನು ದೂರ ಇಡಲಾಗಿದೆ ಎಂಬ ಮಾತಿದೆ. ಇದನ್ನು ವಿರೋಧಿಸಿ ಬೆಂಳೂರಿನಲ್ಲಿ ಪ್ರತ್ಯೇಕ ಸಮ್ಮೇಳನ ನಡೆಯುತ್ತಿದೆ. ಆಹ್ವಾನ ಪತ್ರಿಕೆಯನ್ನು ನೋಡಿದರೆ ಈ ಆರೋಪವನ್ನು ನಿರಾಕರಿಸಲು ಸಾಧ್ಯವಿಲ್ಲ. ರಾಜಕಾರಣವನ್ನು ರಾಜಕಾರಣಿಗಳಿಗೆ ಬಿಡಿ. ಸಾಹಿತಿಗಳು ಸರಿದಾರಿಯಲ್ಲಿ ನಡೆಯಬೇಕು.

ನಾಡು ನುಡಿಯ ಕುರಿತು ಹೆಚ್ಚೆಚ್ಚು ಹೋರಾಟವನ್ನು ಕಸಾಪ ಕೈಗೆತ್ತಿಕೊಳ್ಳಲಿ. ಸಮ್ಮೇಳನಗಳಲ್ಲಿ ಇಂತಹ ವಿಚಾರಗಳು ಹೆಚ್ಚೆಚ್ಚು ಚರ್ಚೆಗಳು ನಡೆಯಲಿ ಎಂದರು.

Exit mobile version