Site icon Vistara News

ಕನ್ನಡ ಸಾಹಿತ್ಯ ಪರಿಷತ್ತು | 80% ಪ್ರಕಾಶಕರು ಲೈಬ್ರರಿಗೆಂದೇ ಪುಸ್ತಕ ಮುದ್ರಿಸುತ್ತಾರೆ: ಎಂ.ಎ. ಸುಬ್ರಹ್ಮಣ್ಯ ಬೇಸರ

ಹಾವೇರಿ: ಪುಸ್ತಕೋದ್ಯಮಿ, ಪ್ರಕಾಶಕರಾದವರು ವ್ಯಾಪಾರಿ ಮನೋಭಾವಕ್ಕಿಂತಲೂ ಪುಸ್ತಕಗಳ ಮೇಲಿನ ಗೀಳನ್ನು ಬೆಳೆಸಿಕೊಂಡು ಕಾರ್ಯನಿರ್ವಹಿಸಬೇಕು ಎಂದ ಸಾಹಿತ್ಯ ಭಂಡಾರದ ಮುಖ್ಯಸ್ಥ ಎಂ. ಎ. ಸುಬ್ರಹ್ಮಣ್ಯ ಅವರು, ಲೈಬ್ರರಿಗಾಗಿಯೇ ಪುಸ್ತಕ ಮುದ್ರಿಸುವವರ ಕುರಿತು ಬೇಸರ ವ್ಯಕ್ತಪಡಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಶ್ರೀ ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆʼಯಲ್ಲಿ ʼಪುಸ್ತಕೋದ್ಯಮದ ಸವಾಲುಗಳುʼ ಕುರಿತ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು.

ಗಳಗನಾಥರು ಪುಸ್ತಕ ಮಾರಲು ಇದ್ದಷ್ಟು ಸವಾಲುಗಳು ಈಗಿನ ಪ್ರಕಾಶಕರಿಗಿಲ್ಲ. ಆ ಕಾಲದ ಎಲ್ಲ ಪ್ರಕಾಶಕರಿಗೂ ಗಳಗನಾಥರು ಆದರ್ಶವಾಗಿದ್ದರು. ಹಳೇ ಮೈಸೂರಿನ ಹೆಚ್ಚಿನ ಸಾಹಿತಿಗಳಿಗೆ ಏಕೀಕರಣ ಬೇಕಾಗಿರಲಿಲ್ಲವಾದರೂ ಕುವೆಂಪು, ಅನಕೃ ಅವರು ಕರ್ನಾಟಕವನ್ನು ಒಂದುಗೂಡಿಸಲು ಮುಂದಾದರು. ಇದೆಲ್ಲ ಕಾರ್ಯಕ್ಕೆ ಪುಸ್ತಕ ಪ್ರಕಾಶನ ಸಹಾಯ ನೀಡಿತು. ಅದೇ ರೀತಿ, ಅನೇಕ‌ ಸಾಹಿತಿಗಳ ಕಾರಣಕ್ಕಾಗಿಯೇ ಪುಸ್ತಕ ಕ್ಷೇತ್ರ‌ ಬೆಳೆಯುತ್ತಿದೆ.

ಹೆಚ್ಚಿನ ಹಣ ಮಾಡಬೇಕೆಂಬ ಆಸೆ ಇಲ್ಲದಿರುವುದೇ ಪುಸ್ತಕ ಪ್ರಕಾಶನದಲ್ಲಿ ಹತ್ತಾರು ವರ್ಷಗಳ ಇತಿಹಾಸವಿರುವ ಸಂಸ್ಥೆಗಳಿರಲು ಕಾರಣ. ಇಲ್ಲಿ ಅನೇಕ ಸವಾಲುಗಳಿವೆ. ಆದರೆ ಪುಸ್ತಕಗಳ ಮೇಲೆ ಪ್ರೀತಿಯನ್ನು ಪ್ರಕಾಶಕರು ಹಚ್ವಿಕೊಳ್ಳಬೇಕು. ಇಂದು ಪುಸ್ತಕ ಉದ್ಯಮವಾಗಿದ್ದು, ಪುಸ್ತಕ ಸರಕಾಗಿದೆ. ಸರಕಾದರೆ ತನ್ನಿಂದ ಇನ್ನೊಬ್ಬರಿಗೆ ಸಾಗಹಾಕಲು ಬಯಸುತ್ತದೆ.

ಈ ಕ್ಷೇತ್ರದಿಂದ ನಾವು‌‌ ಬದುಕನ್ನು ಕಂಡುಕೊಂಡಿದ್ದೇವೆ. ಅದರ ಜತೆಗೇ ಓದುಗರೂ ಆಗಿದ್ದೇವೆಯೇ ಎನ್ನುವುದು ಮುಖ್ಯ. ಪ್ರಕಾಶಕರಾದವರಿಗೆ ಕರಡು ಪ್ರತಿಗಳ ತಿದ್ದುವಿಕೆಯೂ ಗೊತ್ತಿರಬೇಕು. ನಾವು ಗ್ರಂಥಾಲಯದ ಮೇಲೆ ಅವಲಂಬಿತವಾಗಿದ್ದೇವೆಯೇ ಅಥವಾ ನಮ್ಮದೇ ಮಳಿಗೆ ಮೂಲಕ ಜನರೊಂದಿಗೆ ಸಂಪರದಕದಲ್ಲಿದ್ದೇವೆಯೇ? ಎಂಬುದನ್ನು ನೋಡಬೇಕು. ಸರ್ಕಾರದ ಲೆಕ್ಕದ ಪ್ರಕಾರ ನಾಲ್ಕು ಸಾವಿರದಷ್ಟು ಪ್ರಕಾಶಕರಿದ್ದಾರೆ. ಸರ್ಕಾರ ಏನಾದರೂ ಸಗಟು ಪುಸ್ತಕ ಖರೀದಿ ಸ್ಥಗಿತಗೊಳಿಸಿದರೆ 80% ಪ್ರಕಾಶಕರು ಬಾಗಿಲು ಮುಚ್ಚಬೇಕಾಗುತ್ತದೆ.

ಸರ್ಕಾರದ ಖರೀದಿಗೆ ಈ ಹಿಂದೆ ಒಬ್ಬರು 40 ಕಾದಂಬರಿಗಳನ್ನು ತಂದಿದ್ದರು. ಇವರು ಇದೇ 40 ಕೃತಿಗಳನ್ನು ಪ್ರತಿ ವರ್ಷವೂ ಬೇರೆ ಬೇರೆ ಹೆಸರಿನಲ್ಲಿ ಮುದ್ರಿಸಿ ಗ್ರಂಥಾಲಯಗಳಿಗೆ ಅರ್ಪಿಸುತ್ತಿದ್ದರು ಎನ್ನುವುದು, ಕೂಲಂಕಶವಾಗಿ ಪರಿಶೀಲಿಸಿದಾಗ ತಿಳಿಯಿತು. ಪ್ರತಿಷ್ಠಿತ ವಿವಿಯೊಂದರ ಪ್ರಾಧ್ಯಾಪಕರೊಬ್ಬರು ತಮ್ಮ ಸಂಶೋಧನೆ ಉದ್ದೇಶಕ್ಕೆ, ಸಾಹಿತ್ಯ ಭಂಡಾರದ ಎರಡು ಕೃತಿಗಳನ್ನು ಯಥಾವತ್ತಾಗಿ ಮುದ್ರಿಸಿ ಹೆಸರು ಮಾತ್ರ ಬದಲಿಸಿ, ಡಿಜಿಟಲ್ ಮುದ್ರಣ ಮಾಡಿಸಿದರು. ಆಧುನಿಕತೆಯ ಇಂತಹ ಅಪಸವ್ಯಗಳು ಎಂದಿಗೂ ಯಾರಿಗೂ ಮಾದರಿ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಮಧ್ಯಮ ವರ್ಗದ ಕೈಯಲ್ಲಿ ಇಂದು ಖರೀದಿಸಲು ಹಣವಿದೆ. ಅಂತಹ ವರ್ಗವನ್ನು ತಲುಪಲು ಪ್ರಕಾಶಕರು ಮುಂದಾಗಬೇಕು. ಅಂತಹ ಸವಾಲುಗಳನ್ನು ಪುಸ್ತಕ ಪ್ರಕಾಶಕರು ಸಮರ್ಥವಾಗಿ ಎದುರಿಸುವಂತಾಗಲಿ ಎಂದು ಆಶಿಸಿದರು.

ಬಸವರಾಜ ಕೋ‌ನೆಕಾರ್ ಮಾತನಾಡಿ, ಪುಸ್ತಕೋದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಯುವ ಪೀಳಿಗೆ ಮೊಬೈಲ್‌ನಲ್ಲೇ ನೋಡುತ್ತಿದ್ದು, ಪುಸ್ತಕ ಖರೀದಿಸುತ್ತಿಲ್ಲ. ಈ ಕುರಿತು ಸರ್ಕಾರವೂ ಗಮನಹರಿಸಬೇಕು ಎಂದರು.

ಕೃತಿ ಹಕ್ಕುಸ್ವಾಮ್ಯದ ಕಾನೂನಿನ ಅರಿವು ಕುರಿತು ಮಾತನಾಡಿದ ಕಾನೂನು ತಜ್ಞ ಶ್ರೀಧರ ಪ್ರಭು, ಕೃತಿ ಹಕ್ಕುಸ್ವಾಮ್ಯದ ಕುರಿತು ನಾವು ಸರ್ಕಾರಕ್ಕೆ ತಿಳಿಸಿಕೊಡಬೇಕಿದೆ. ಆದರೆ ಅನೇಕ ಬಾರಿ ಸರ್ಕಾರಗಳು ಹಾಗೂ ನ್ಯಾಯಾಲಯಲು ಇದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿಲ್ಲ. ಇದು ಆಸ್ತಿಯ ಹಕ್ಕೂ ಹೌದು. ಕೃತಿಸ್ವಾಮ್ಯ ಎನ್ನುವುದು ಜ್ಞಾನ ಪ್ರಸಾರಕ್ಕೆ ಧಕ್ಕೆ ತರುವುದು ಎಂದು ಕೆಲವರು ಹೇಳುತ್ತಿದ್ದಾರೆ. ಯಾರ ಆಸ್ತಿಯನ್ನೂ ಕಿತ್ತುಕೊಂಡು ಜ್ಞಾನ ಪ್ರಸರಣ ಮಾಡುವ ಯಾವ ಅಗತ್ಯವೂ ಇಲ್ಲ. ಇಂಥವರ ವಿರುದ್ಧ ಪೊಲೀಸರಷ್ಟೆ ಅಲ್ಲದೇ ನಾಗರಿಕ ಸಮಾಜವೂ ಜಾಗೃತರಾಗಬೇಕು ಎಂದರು.

ಆನ್‌ಲೈನ್‌ ಓದುಗರು ಮತ್ತು ಇ ಪುಸ್ತಕದ ಕುರಿತು ಮಾತನಾಡಿದ ದೇವು ಪತ್ತಾರ್, ಲಕ್ಷಾಂತರ ಸದಸ್ಯರನ್ನು ಹೊಂದಿರುವ ಸಾಹಿತ್ಯ ಪರಿಷತ್ತು ಕೇವಲ 500 ಪುಸ್ತಕಗಳನ್ನು ಮುದ್ರಿಸುವ ದಾರಿದ್ರ್ಯಕ್ಕೆ ಒಳಗಾಗಿದೆ. ಮೂರು ದಶಕದ‌ ಹಿಂದೆ ಸಮ್ಮೇಳನದಲ್ಲಿ ಪುಸ್ತಕೋದ್ಯಮದ ಕುರಿತು ಪ್ರಧಾನ ವೇದಿಕೆಯಲ್ಲಿ ಗೋಷ್ಠಿ ನಡೆಯುತ್ತಿತ್ತು. ಆದರೆ ಈಗ ಮೂರನೇ ವೇದಿಕೆಯಲ್ಲಿ ಎಂಟನೇ ಗೋಷ್ಠಿಯಲ್ಲಿಡಲಾಗಿದೆ.

ಪುಸ್ತಕ ಇಲ್ಲದ ಸಾಹಿತ್ಯ, ಸಾಹಿತ್ಯವಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ 68 ಪುಸ್ತಕಗಳಲ್ಲಿ ಒಂದೂ ಇ ಪುಸ್ತಕ ಇರಲಿಲ್ಲ. ಅಂದರೆ ಮುಂದಿನ ಪೀಳಿಗೆಯ ಕುರಿತು ಪರಿಷತ್ತಿಗೆ ಇರುವ ಆದ್ಯತೆಯನ್ನು ತಿಳಿಸುತ್ತದೆ. ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲ ಎನ್ನುವುದಾದರೆ ಪರಿಷತ್ತಿನ ಹೆಸರನ್ನು ಕನ್ನಡ ಪರಿಷತ್ತು ಎಂದು ಬದಲಾಯಿಸಿಕೊಳ್ಳಲಿ ಎಂದರು.

ಇಂದು ಯುವ ಪೀಳಿಗೆಯು ಸಾಹಿತ್ಯದ ಕಡೆಗೆ ಒಲವು ಕಡಿಮೆ ಆಗುತ್ತಿದ್ದು, ಅವರಲ್ಲಿ ಆಸಕ್ತಿ ಮೂಡಿಸುವ ಕುರಿತು ಚಿಂತನೆ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚಾಗಲಿದ್ದು, ಅದರ ಕಡೆಗೆ ಪ್ರಕಾಶಕರು ಹಾಗೂ ಲೇಖಕರು ಒಲವು ತೋರಬೇಕು ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಪ್ರಕಟವಾಗುವ ಅನೇಕ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳ ಮೂಲಕವೇ ಓದುಗರನ್ನು ತಲುಪಬೇಕಾಗಿದೆ. 90% ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳನ್ನೇ ಅವಲಂಬಿಸಿದ್ದಾರೆ.

ಅದಕ್ಕೆ ಕಾರಣವು ಇಲ್ಲದಿಲ್ಲ, ಸಾರ್ವಜನಿಕ ಗ್ರಂಥಾಲಯಗಳು ಅಧಿನಿಯಮದಂತೆ ಸಾರ್ವಜನಿಕವಾಗಿ ಸಂಗ್ರಹವಾಗುವ ತೆರಿಗೆಯಲ್ಲಿ ಶೇಕಡ 6 ರಷ್ಟು ಗ್ರಂಥಾಲಯ ಕರವನ್ನು ಸಂಗ್ರಹಿಸುತ್ತವೆ. ಈ ಕಾರ್ಯವನ್ನು ಬೃಹತ್ ಬೆಂಗಳೂರು ನಗರ ಪಾಲಿಕೆ ಹಾಗೂ ರಾಜ್ಯದ ಇತರೆಡೆ ನಗರ ಸಭೆಗಳು, ನಗರ ಪಾಲಿಕೆಗಳು ನಿರ್ವಹಿಸುತ್ತಿವೆ. ಬೆಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ವಾರ್ಷಿಕ ಸಂಗ್ರಹವಾಗುತ್ತಿರುವ ತೆರಿಗೆ ಅಂದಾಜು
100 ಕೋಟಿ ರೂ.. ಈ ಹಣವನ್ನು ಸರಿಯಾಗಿ ಗ್ರಂಥಾಲಯಗಳಿಗೆ ನೀಡುವುದೇ ಇಲ್ಲ.

ಅದನ್ನು ಗ್ರಂಥಾಲಯ ಅಭಿವೃದ್ಧಿ ಮಾಡಲು ಹಾಗೂ ಪುಸ್ತಕ ಖರೀದಿಗೆ ಬಳಸಬೇಕೆ ಹೊರತು ಸರ್ಕಾರ ಇಟ್ಟುಕೊಳ್ಳಬಾರದು. ಗ್ರಂಥಾಲಯಕ್ಕಾಗಿ ಪುಸ್ತಕ ಮಾಡುವವರನ್ನು ಸರ್ಕಾರ ಪತ್ತೆ ಹಚ್ಚಿ ಕಪ್ಪು ಪಟ್ಟಿಗೆ ಸೇರಿಸಬೇಕು. ಸಾಹಿತ್ಯ ಪರಿಷತ್ತು ಒಂದು ಸಾವಿರ ಪ್ರತಿಗಳನ್ನು ಮುದ್ರಿಸಬೇಕು ಎಂದರು.

ಸರ್ಕಾರ ಪುಸ್ತಕ ಖರೀದಿಗೆ 50 ಕೋಟಿ ರೂ. ಮೀಸಲಿಟ್ಟು, 500 ಕೃತಿಗಳನ್ನು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಜ್ಞಾನ ಜನಸಾಮಾನ್ಯರ ಬದುಕಿನಲ್ಲಿ ಬೆಳಕು ತರಲಿ: ಡಾ.ಸಿ.ಎನ್.ಮಂಜುನಾಥ್

Exit mobile version