ಹಾವೇರಿ: ಕರ್ನಾಟಕದಲ್ಲಿ ರಾಷ್ಟ್ರೀಯತೆಯ ಬೀಜವನ್ನು ಬಿತ್ತಿದ್ದೇ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಅವರು ತಿಳಿಸಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಪಾಪು-ಚಂಪಾ’ ವೇದಿಕೆಯಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕನ್ನಡದ ಕೊಡುಗೆ’ ವಿಷಯದ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಿಲಕರ ಕೇಸರಿ ಪತ್ರಿಕೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಒತ್ತು ಸಿಕ್ಕಿತು. ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಎ.ಒ. ಹ್ಯೂಮ್ ಅವರು ಕಾಂಗ್ರೆಸ್ ಸ್ಥಾಪಿಸಿದರು. ಧಾರವಾಡ ಹಾಗೂ ಬೆಳಗಾವಿಗೆ ಆಗಮಿಸಿದ್ದ ಹ್ಯೂಮ್ ಅವರು ಭಾಷಣ ಮಾಡಿದ್ದರು. ತಿಲಕರೂ ಕರ್ನಾಟಕದ ಪ್ರವಾಸ ಮಾಡಿ ಜನಜಾಗೃತಿ ಮೂಡಿಸಿದರು. ನಂತರದಲ್ಲಿ ಮಹಾತ್ಮ ಗಾಂಧಿ, ಪಂಡಿತ್ ತಾರಾನಾಥ್ ರಾಜ್ಯದಲ್ಲಿ ಸಂಚರಿಸಿದರು.
ಜವಾಬ್ದಾರಿ ಸರ್ಕಾರಕ್ಕೆ ಹೋರಾಟ ನಡೆದಿತ್ತು, ನಾಗಪುರ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ 800 ಜನರು ಭಾಗವಹಿಸಿದ್ದರು. ಅಸಹಕಾರ ಆಂದೋಲನದಲ್ಲಿ ಭಾಗವಹಿಸಿದ ನಾಗರಿಕರು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರು. ನಾಗಪುರ ಧ್ವಜ ಸತ್ಯಾಗ್ರಹದಲ್ಲಿ ನಾ.ಸು.ಹರ್ಡೀಕರ್ ಅವರು ಭಾಗವಹಿಸಿದ್ದರು. ಗಾಂಧೀಜಿ ನೇತೃತ್ವದ ದಂಡಿ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಭಾಗವಹಿಸಿದ ಏಕೈಕ ವ್ಯಕ್ತಿ ಮೈಲಾರ ಮಹಾದೇವಪ್ಪನವರು. ಈ ರೀತಿ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದಿಂದ ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಕಟ್ಟಕಡೆಯ ಮನುಷ್ಯನಿಗೂ ಸ್ವಾತಂತ್ರ್ಯ ಹೋರಾಟದ ಫಲ ಸಿಗುವಂತೆ ಮಾಡಬೇಕು ಎಂದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೊ.ಟಿ.ಜಿ.ಹರೀಶ್ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರದಲ್ಲಿ ಹುಟ್ಟಿದ ನಮಗೆ ಸ್ವಾತಂತ್ರ್ಯ ಹೋರಾಟದ ಅನುಭವ ಇಲ್ಲ. ಆದರೆ ನಮ್ಮನ್ನು ಎಲ್ಲ ರೀತಿಯಲ್ಲಿ ಕೊರೊನಾ ನಮ್ಮನ್ನು ಕಟ್ಟಿ ಹಾಕಿತ್ತು. ಒಂದೆರಡು ವರ್ಷದ ಕೊರೊನಾದಿಂದಲೇ ಹೈರಾಣಾದ ನಾವು, ಇನ್ನೂರೈವತ್ತು ವರ್ಷದ ಪರಾಧೀನತೆಯನ್ನು ನಮ್ಮ ಪೂರ್ವಜರು ಯಾವ ರೀತಿ ಅನುಭವಿಸಿದರು ಎನ್ನುವುದನ್ನು ನಾವು ಸ್ಮರಿಸಬೇಕು.
ಪಂಜೆ ಮಂಗೇಶರಾಯರು ಬ್ರಿಟಿಷರನ್ನು ಕುರಿತು ‘ನಾಗರ ಹಾವೇ ಹಾವೊಳು ಹೂವೆ’ ಎಂದು ಕವಿತೆ ಬರೆದರು. ಕುವೆಂಪು ಅವರು ಹೇಳುತ್ತಾರೆ, ಬ್ರಿಟಿಷರನ್ನು ಓಲೈಸಿಕೊಂಡು ಹೋಗಬಾರದು ಎಂದರು. ನಮ್ಮ ಮಾನಸಿಕ ದಾಸ್ಯವನ್ನು ಕಳಚಿಕೊಳ್ಳಬೇಕು. ಮೊದಲು ನಮ್ಮ ನೆಲ, ಜಲವನ್ನು ಹೌರವಿಸಬೇಕು ಎಂದರು.
ಹಿಂದೂಸ್ಥಾನ್ ಹಮಾರಾ ಎಂಬ ಅನುವಸದ ಕವುತೆಯಲ್ಲಿ ಗೋವಿಂದ ಪೈ ಅವರು, ಮಾತೃಭೂಮಿಗೆ ಜೀವ ಅರ್ಪಿಸಲು ಹರದರಬಾರದು ಎಂದರು. ಸ್ವಾತಂತ್ರ್ಯ ಎನ್ನುವುದು ಕಷ್ಟದ ಮಾರ್ಗ ಎಂದು ದ.ರಾ.ಬೇಂದ್ರೆ ಹೇಳಿದರು. ಇವರೆಲ್ಲರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ದೊರಕಿತು ಎಂದರು.
ವಿಜಯವಾಣಿ ಪತ್ರಕರ್ತ ವಿಲಾಸ ಮೇಲಗಿರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಈಗಿನ ಪೀಳಿಗೆಗೆ ಮಾಹಿತಿಯೇ ಇಲ್ಲ. ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಇಂದು ಸಾಮ್ರಾಜ್ಯ ವಿಸ್ತರಣೆಯ ದಾಹ ಹೆಚ್ಚುತ್ತಿದೆ, ಭಾರತದ ನೆರೆಹೊರೆ ದೇಶಗಳು ಜಗಳಕ್ಕೆ ನಿಂತಿರುವಾಗ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿಕೊಡಬೇಕಿದೆ.
ಶ್ರೇಣೀಕೃತ ವ್ಯವಸ್ಥೆಯಲ್ಲಿದ್ದಾಗಲೂ ಜನರಲ್ಲಿ ಎಚ್ಚರಿಕೆ ಮೂಡಿಸಿದವು. ಜನರಲ್ಲಿ ರಾಷ್ಟ್ರೀಯ ಹಾಗೂ ರಾಜಕೀಯ ಜಾಗೃತಿಯನ್ನು ಮೂಡಿಸಿ ಬಡಿದೆಬ್ಬಿಸಿದವು. ಇದರಿಂದ ಬೆದರಿದಬ್ರಿಟಿಷರು ವೃತ್ತ ಪತ್ರಿಕೆಗಳ ಶಾಸನವನ್ನೇ ತಂದರು. ಅನೇಕ ಪತ್ರಕರ್ತರನ್ನು ಜೈಲಿಗೆ ಅಟ್ಟಿದರು.
ಸುಮಾರು ನೂರಕ್ಕೂ ಹೆಚ್ಚು ಪತ್ರಿಕೆಗಳು ಕನ್ನಡಿಗರನ್ನು ಬಡಿದೆಬ್ಬಿಸಲು ಪ್ರಯತ್ನಿಸಿದವು. ತಿ.ತಾ.ಶರ್ಮ, ಡಿ.ವಿ.ಜಿ., ಬಾಲ ಗಂಗಾಧರ ತಿಲಕರು, ಹರ್ಡೇಕರ್ ಮಂಜಪ್ಪ ಸೇರಿ ಅನೇಕ ಪತ್ರಕರ್ತರು ಮುಂಚೂಣಿಯಲ್ಲಿದ್ದವು. ತಿಲಕರ ಪತ್ರಿಕೆಗಳಿಂದ ಅನೇಕರು ಪ್ರೇರಿತರಾಗಿದ್ದರು. 1920ರ ನಂತರ ನಡೆದ ಗಾಂಧೀಜಿ ನೇತೃತ್ವದ ಹೋರಾಟಕ್ಕೂ ಪತ್ರಿಕೆಗಳು ಬೆನ್ನೆಲುಬಾಗಿದ್ದವು. ರಾಷ್ಟ್ರೀಯತೆ ಹಾಗೂ ಪತ್ರಿಕಾ ಧರ್ಮಎನ್ನುವುದು ಪತ್ರಿಕಾಕರ್ತರಿಗೆ ಪ್ರತ್ಯೇಕವಾಗಿರಲಿಲ್ಲ.
ಧರ್ಮ, ದೇಶವನ್ನು ತಪ್ಪಾಗಿ ಅರ್ಥೈಸುತ್ತ ಸಮಾಜವನ್ನು ಒಡೆಯಲಾಗುತ್ತಿದೆ.ಒಂದು ಸತ್ಯವನ್ನು ಮರೆಮಾಚಲಾಗುತ್ತಿದೆ. ಸೈದ್ಧಾಂತಿಕ ಕಾರಣಕ್ಕೆ ಅನೇಕರು ಬಲಿಯಾಗಿದ್ದಾರೆ. ಹತ್ಯೆಯಾದವರ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ನಾವು ಒಟ್ಟಿಗೆ ಬಾಳಬೇಕೆಂದರೆ ಸಹೋದರತ್ವವನ್ನು ರೂಢಿಸಿಕೊಳ್ಳಬೇಕು. ಹಿಜಾಬ್, ಬುಲ್ಡೋಜರ್‌ನಂತಹ ಸಣ್ಣ ವಿಚಾರಗಳನ್ನು ವೈಭವೀಕರಿಸದೆ ಮಾಧ್ಯಮಗಳು ವರದಿ ಮಾಡಬೇಕು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ʼಕನ್ನಡ ಈಗ ವಿಶ್ವಮುಖಿʼ: ಕನ್ನಡಕ್ಕೆ ಹೊಸ ಘೋಷಣೆ ನೀಡಿದ ಡಾ. ದೊಡ್ಡರಂಗೇಗೌಡ