Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಸಾಂವಿಧಾನಿಕ ಚೌಕಟ್ಟಿನಲ್ಲೇ ಕನ್ನಡ ನಾಡು, ನೆಲದ ರಕ್ಷಣೆ: ಬಿ.ಎಸ್‌. ಯಡಿಯೂರಪ್ಪ

BS Yeddyurappa speech in kannada sahitya sammelana

ಹಾವೇರಿ: ಕನ್ನಡ ನಾಡು, ನುಡಿಗೆ ಧಕ್ಕೆ ಬಂದಾಗಲೆಲ್ಲ ಸಂವಿಧಾನದತ್ತ ಅಧಿಕಾರವನ್ನು ಬಳಸಿ ರಕ್ಷಣೆ ಮಾಡಿಕೊಳ್ಳುವ ಕಾರ್ಯವನ್ನು ಕರ್ನಾಟಕ ಮಾಡುತ್ತಾ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು.

ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಡಾ. ಮಹೇಶ್‌ ಜೋಶಿಯವರು ಹಗಲು ರಾತ್ರಿ ಕೆಲಸ ಮಾಡಿದ ಪರಿಣಾಮ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಮಹೇಶ್‌ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನಮ್ಮ ಸಂಸ್ಕೃತಿ, ಪರಂಪರೆಗೆ ಎಲ್ಲರೂ ಮಾರುಹೋಗಿದ್ದಾರೆ. ನಾವು ವಿಶಾಲ ಹೃದಯದವರಾದರೂ, ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡಲು ಹಿಂಜರಿಕೆಪಡುತ್ತಿರುವುದು ನೋಡುತ್ತಿದ್ದೇವೆ. ಇಂಗ್ಲಿಷ್‌ ಅನಿವಾರ್ಯವಾಗಿದ್ದರೂ ಕನ್ನಡತನವನ್ನು ನಾವೆಲ್ಲರೂ ನಮ್ಮದಾಗಿಸಿಕೊಳ್ಳಬೇಕಿದೆ. ಕನ್ನಡ ನಾಡು, ನುಡಿ, ಜಲ ವಿಷಯಗಳ ಬಗ್ಗೆ ಸರ್ಕಾರ ಎಂದಿಗೂ ಉದಾಸೀನ ಮಾಡಿಲ್ಲ. ಕರ್ನಾಟಕ ರಾಜ್ಯ ಯಾವತ್ತೂ ಭಾರತದ ಸಂವಿಧಾನದ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ನಾಡು ನುಡಿ, ಗಡಿಯ ವಿಚಾರದಲ್ಲಿ ಜಯಗಳಿಸುತ್ತಿದ್ದೇವೆ.

ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾದಾಗ ನ್ಯಾಯಾಂಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಕನ್ನಡ ಸಮಗ್ರ ಭಾಷೆಯ ವಿಧೇಯಕಕ್ಕೆ ಒಪ್ಪಿಗೆ ಪಡೆದಿದೆ, ಬ್ಯಾಂಕಿಂಗ್‌ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೋತ್ಸಾಹ ನೀಡುತ್ತಿದೆ. ಹಿಂದೆ ಸಂಸ್ಕಾರ ಇತ್ತು, ಶಿಕ್ಷಣ ಇರಲಿಲ್ಲ. ಇಂದು ಶಿಕ್ಷಣ ಇದೆ, ಸಂಸ್ಕಾರ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶೀಘ್ರದಲ್ಲೇ ಕನ್ನಡ ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

Exit mobile version