Site icon Vistara News

ಹಿರೇಕೆರೂರು ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

BS yediyurappa contributed more to hirekerur development says cm basavaraj bommai

ಹಾವೇರಿ: ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಈ ಕ್ಷೇತ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ ಎಂದು ಶ್ಲಾಘಿಸಿದರು.

ಹಿರೇಕೆರೂರು ಮತ್ತು ಬ್ಯಾಡಗಿ ತಾಲ್ಲೂಕಿನ 56 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆಯ ಲೋಕಾರ್ಪಣೆ, ರಟ್ಟಿಹಳ್ಲಿ ತಾಲ್ಲೂಕಿನ 7 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ, ಹಾಗೂ ಹಿರೇಕೆರೂರು ಮತ್ತು ರಟ್ಟೀಹಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದವರು. ಅವರ ಕಾಲದಲ್ಲಿ ಪ್ರಾರಂಭವಾದ ಸರ್ವಜ್ಞ ಏತನೀರಾವರಿ, ಕೆರೆ ತುಂಬಿಸುವ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳು, ಇವೆಲ್ಲಕ್ಕೂ ಇಂದು ಚಾಲನೆ ಹಾಗೂ ಉದ್ಘಾಟನೆಯನ್ನು ಮಾಡುತ್ತಿದ್ದೇವೆ.

ಇದನ್ನೂ ಓದಿ : Election 2023 | ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆ, ಸಚಿವ ಬಿ.ಸಿ ಪಾಟೀಲ್‌ ವಿರುದ್ಧ ಸ್ಪರ್ಧೆಗೆ ಟಿಕೆಟ್‌ ಪಕ್ಕಾ

ಈ ಕಾರ್ಯಕ್ರಮದ ರೂವಾರಿ ಸಚಿವ ಬಿ.ಸಿ. ಪಾಟೀಲರು. ಅವರ ನೇತೃತ್ವದಲ್ಲಿ ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಸುಮಾರು 25-30 ವರ್ಷಗಳ ಬೇಡಿಕೆಗಳನ್ನು ಈ ಅವಧಿಯಲ್ಲಿ ಪೂರ್ಣ ಮಾಡಿದ್ದಾರೆ. ರಾಜಿನಾಮೆ ನೀಡಿದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಪ್ರತಿಜ್ಞೆಯನ್ನು ಅವರು ನಡೆಸಿಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಂಡ ಧೀಮಂತ ನಾಯಕರು ಬಿ.ಸಿ.ಪಾಟೀಲರು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಬಿ.ಸಿ. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

Exit mobile version