Site icon Vistara News

Byadagi Chilli : ಮೆಣಸಿನ ಕಾಯಿ ಬೆಂಕಿಗೆ ಹಲವು ವಾಹನ ಭಸ್ಮ, ನಾಳೆ ಮತ್ತೆ ಟೆಂಡರ್‌

Byadagi Chilli fire

ಹಾವೇರಿ: ಬ್ಯಾಡಗಿಯ ಮೆಣಸಿನ ಕಾಯಿ (Byadagi Chilli) ಮಾರುಕಟ್ಟೆಯಲ್ಲಿ ದರ ಕುಸಿತ (Chilli Rate) ರೈತರಲ್ಲಿ ಹುಟ್ಟಿಸಿದ ರೋಷಾಗ್ನಿಗೆ ಬಲಿಯಾದ ವಾಹನಗಳ ಸಂಖ್ಯೆ ಏಳಕ್ಕೆ ತಲುಪಿದೆ. ಎಪಿಎಂಸಿ ಅಧ್ಯಕ್ಷ (APMC Office Building) ಕಾರು ಸೇರಿದಂತೆ ಸಂಸ್ಥೆಯ ನಾಲ್ಕು ವಾಹನಗಳು, ಎರಡು ಖಾಸಗಿ ವಾಹನಗಳು ಮತ್ತು ಅಗ್ನಿಶಾಮಕ ದಳದ ವಾಹನಗಳು ಸುಟ್ಟು ಕರಕಲಾಗಿವೆ. ಹಲವಾರು ವಾಹನಗಳನ್ನು ಪುಡಿಗಟ್ಟಲಾಗಿದೆ (Farmers ruckus). ಪೊಲೀಸರು, ಪತ್ರಕರ್ತರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ ಹತ್ತಾರು ರೈತರನ್ನು ಬಂಧಿಸಲಾಗಿದೆ. ಇದರ ನಡುವೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಂಗಳವಾರ ಮತ್ತೆ ಬ್ಯಾಡಗಿ ಮೆಣಸಿನ ಕಾಯಿ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.

ಬ್ಯಾಡಗಿಯ ಮೆಣಸಿನ ಮಾರುಕಟ್ಟೆಗೆ ಸೋಮವಾರ ರೈತರು ಮೆಣಸಿನ ಕಾಯಿ ಹಿಡಿದುಕೊಂಡು ಬಂದಿದ್ದಾರೆ. ಆದರೆ, ಖರೀದಿ ದರ ಕಡಿಮೆಯಾಗಿದೆ ಎಂದು ಸಿಟ್ಟುಗೊಂಡು ದಾಂಧಲೆಗೆ ಇಳಿದಿದ್ದಾರೆ. ದರ ಕುಸಿತದಿಂದ ಆಕ್ರೋಶಿತರಾದ ರೈತರು ಎಪಿಎಂಸಿ ವಿರುದ್ಧ ಸಿಡಿದು ಕಟ್ಟಡಕ್ಕೆ ನೇರವಾಗಿ ದಾಳಿ ಮಾಡಿದರು.

ಇತ್ತ ಆಕ್ರೋಶಿತರಾದ ರೈತರ ಮತ್ತೊಂದು ಗುಂಪು ಎಪಿಎಂಸಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಅಧ್ಯಕ್ಷರ ಕಾರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ರೈತರ ಆಕ್ರೋಶಕ್ಕೆ ಕಾರು ಸುಟ್ಟು ಕರಕಲಾಗಿದೆ. ಒಮ್ಮಿಂದೊಮ್ಮೆಗೆ ಕಾರು ಧಗಧಗಿಸುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಆದರೆ, ಅಲ್ಲಿದ್ದ ರೈತರು ಆ ಸಿಬ್ಬಂದಿಯನ್ನೇ ತಡೆದು ಅವರ ಮೇಲೆ ಹಲ್ಲೆ ಮಾಡಿದರು. ಅವರನ್ನೇ ಬೆನ್ನಟ್ಟಿದರು.‌ ದೊಣ್ಣೆ ಮತ್ತಿತರ ವಸ್ತುಗಳನ್ನು ಹಿಡಿದುಕೊಂಡು ರೈತರು ಅವರನ್ನು ಬೆನ್ನಟ್ಟುವ ದೃಶ್ಯವೇ ಭಯಾನಕವಾಗಿತ್ತು. ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ರೈತಾಕ್ರೋಶವನ್ನು ತಣ್ಣಗೆ ಮಾಡಲು ಪ್ರಯತ್ನಿಸಿದರು. ಆದರೆ, ರೈತರೇ ಕೋಲು ಹಿಡಿದು ಪೊಲೀಸರನ್ನು ಹಿಮ್ಮೆಟ್ಟಿಸಿದರು. ಆಗ ಪೊಲೀಸರು ಕೂಡಾ ದಿಕ್ಕಾಪಾಲಾಗಿ ಓಡಬೇಕಾಯಿತು.

ಸೋಮವಾರ ಮತ್ತೊಮ್ಮೆ ಟೆಂಡರ್‌: ಜಿಲ್ಲಾಡಳಿತ ಭರವಸೆ

ಭಾರಿ ಪ್ರಮಾಣದ ಹಿಂಸಾಚಾರದ ಬಳಿಕ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರು ರೈತರ ಜತೆ ಮಾತುಕತೆ ನಡೆಸಿದರು. ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ವಾರ ಮೆಣಸಿನಕಾಯಿ ಹರಾಜಾಗುತ್ತದೆ. ಬಳಿಕ ದರ ಫಿಕ್ಸ್‌ ಆಗುತ್ತದೆ, ಕಳೆದ ವಾರಕ್ಕೂ ಈ ವಾರಕ್ಕೆ 2-3 ಸಾವಿರ ದರ ಕುಸಿತವಾಗಿತ್ತು. ದರ ಕುಸಿತವಾಗಿದ್ದರಿಂದ ಆಕ್ರೋಶಿತರಾದ ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಎಪಿಎಂಸಿಯ ನಾಲ್ಕು ವಾಹನ, ಖಾಸಗಿ ಎರಡು ಕಾರು, ಅಗ್ನಿಶಾಮಕ ಇಲಾಖೆ ವಾಹನ ಒಂದು ಬೆಂಕಿ ಹಚ್ಚಿದ್ದಾರೆ ಎಂದು ವಿವರಿಸಿದ್ದಾರೆ. ಮಂಗಳವಾರ ಮತ್ತೊಮ್ಮೆ ಟೆಂಡರ್ ಕರೆಯುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ʻʻದರ ಕುಸಿತದ ಬಗ್ಗೆ ಗಲಾಟೆ ಸುರುವಾಗಿತ್ತು. ಕಲ್ಲು ತೂರಾಟ ಮಾಡಿದ್ದಾರೆ, ಬೆಂಕಿ ಹಚ್ಚಿದ್ದಾರೆ. ಪೊಲೀಸರು, ಮಾಧ್ಯಮದವರಿಗೆ ಗಾಯವಾಗಿದೆ. ಸುಮಾರು ಜನರು ಪೊಲೀಸ್ ಕಸ್ಟಡಿಯಲ್ಲಿದ್ದಾರೆʼʼ ಎಂದು ಎಸ್ ಪಿ ಅಂಶುಕುಮಾರ ಹೇಳಿದ್ದಾರೆ.

ಇದನ್ನೂ ಓದಿ : Byadagi chilli : ಬ್ಯಾಡಗಿ ಮೆಣಸಿನಕಾಯಿ ಮಾರ್ಕೆಟ್‌ನಲ್ಲಿ ರೈತರ ದಾಂಧಲೆ; ಎಪಿಎಂಸಿ ಕಚೇರಿ ಪೀಸ್‌ ಪೀಸ್‌, ಕಾರಿಗೆ ಬೆಂಕಿ

ಬಳ್ಳಾರಿಯಿಂದ 500ಕ್ಕೂ ಹೆಚ್ಚು ರೈತರು ಬಂದಿದ್ದರು

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಗಲಾಟೆಯಲ್ಲಿ ಬಳ್ಳಾರಿಯಿಂದ ಬಂದಿದ್ದ 500ಕ್ಕೂ ಹೆಚ್ಚು ರೈತರು ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಇದು ಹೊರಗಿನಿಂದ ಬಂದವರು ಸೃಷ್ಟಿಸಿದ ಗಲಾಟೆಯಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Exit mobile version