ಹಾವೇರಿ: ಗಡಿನಾಡು ಕನ್ನಡಿಗರ ಬವಣೆಗಳನ್ನು ನೀಗುವ ಸಲುವಾಗಿ ಈಗಾಗಲೆ ನೀಡಿರುವ ₹25 ಕೋಟಿ ರೂ. ಜತೆಗೆ ಮತ್ತೆ ₹25 ಕೋಟಿ ರೂ. ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಇದೇ ವೇಳೆ, ಪ್ರಾಥಮಿಕ ಹಂತದಿಂದಲೇ ಮಾತೃಭಾಷೆಯನ್ನು ಕಡ್ಡಾಯ ಮಾಡುವ ಕುರಿತು ಸಂವಿಧಾನ ತಿದ್ದುಪಡಿಯ ಅಗತ್ಯವಿರುವ ಕುರಿತು ಒತ್ತಾಸೆ ವ್ಯಕ್ತಪಡಿಸಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮೂರು ದಿನದ ಕನ್ನಡದ ಹಬ್ಬ ಸಂಪೂರ್ಣ ಯಶಸ್ವಿಯಾಗಿದೆ. ಅದಕ್ಕಾಗಿ ಎಲ್ಲರಿಗೂ ಕೋಟಿ ಕೋಟಿ ನಮನಗಳು. ಕನ್ನಡದ ಬಳಗ, ದೊಡ್ಡ ಬಳಗ, ಒಬ್ಬ ಮುಖ್ಯಮಂತ್ರಿ, ಶಾಸಕನಿಂದ ಆಗುವುದಿಲ್ಲ. ಇಡೀ ಜನಸಮುದಾಯ ಕೈಜೋಡಿಸಿದಾಗ ಕನ್ನಡ ಬೆಳಗುತ್ತದೆ.
ಕನ್ನಡದ ಸಾಹಿತ್ಯ ಲೋಕ, ಅತಿ ಹೆಚ್ಚು ಜ್ಞಾನಪೀಠ ಪಡೆದ ಖ್ಯಾತಿ ಕನ್ನಡಕ್ಕಿದೆ. ಇಷ್ಟು ಉತ್ಕೃಷ್ಟವಾದ ಸಾಹಿತ್ಯ ಇದ್ದರೂ ಕನ್ನಡ, ಕನ್ನಡ ಜನಪದ, ಜನಸಾಮಾನ್ಯರೊಂದಿಗೆ ಭಾಷೆಗೆ ನಿಕಟ ಸಂಪರ್ಕ ಇದೆ. ಕೆಲವು ಭಾಷೆಗಳಲ್ಲಿ ಉತ್ಕೃಷ್ಟ ಭಾಷೆಗೂ ಜನಸಾಮಾನ್ಯರ ಭಾಷೆಗೂ ಸಂಬಂಧವೇ ಇಲ್ಲದಂತಹ ಪ್ರತ್ಯೇಕ ಲೋಕಗಳಿವೆ. ಕನ್ನಡದಲ್ಲಿ ಮಾತ್ರ ಎರಡೂ ಒಂದಾಗಿವೆ ಎಂದರು.
ಜನಸಾಮಾನ್ಯರ ಚಿಂತನೆ ಶ್ರೇಷ್ಠ ಸಾಹಿತ್ಯವಾಗುತ್ತದೆ, ಶ್ರೇಷ್ಠ ಸಾಹಿತ್ಯ ಜನಸಾಮಾನ್ಯರನ್ನು ಮುಟ್ಟುತ್ತಿರುವುದು ಕರ್ನಾಟಕದಲ್ಲಿ. ಇದು ಕನ್ನಡ ಭಾಷೆಯ ಶ್ರೇಷ್ಠತೆ ಇದು. ಕನ್ನಡ ಎಲ್ಲವನ್ನೂ ಅತ್ಯಂತ ಪಾರದರ್ಶಕವಾಗಿ ಹೇಳುವ, ಕೇಳುವ, ತಿಳಿದುಕೊಳ್ಳುವ ಭಾಷೆ. ನಮ್ಮ ವಿಚಾರಗಳಲ್ಲಿ ಭಿನ್ನತೆ ಇದ್ದರೂ ಮನಸ್ಸು ಒಂದಾಗಿದೆ. ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ. ಮುಂದಾಲೋಚನೆಯನ್ನು ನಡೆಸುವುದರಲ್ಲಿ ರಾಜ್ಯ ಮುನ್ನಡೆ ಕಾಯ್ದುಕೊಂಡಿದೆ.
ನಿಸರ್ಗವೂ ಕರ್ನಾಟಕಕ್ಕೆ ವರದಾನವಾಗಿದೆ. ಅದೆಲ್ಲವನ್ನೂ ಉಳಿಸಿಕೊಂಡರೆ ಕರ್ನಾಟಕ ಭೂತಾಯಿ ಹಸಿರು ಸೀರೆ ಉಡಬಹುದಾಗಿದೆ. ಅದಕ್ಕಾಗಿ ಅನೇಕ ಕಾನೂನು ತೊಡಕನ್ನು ಎದುರಿಸುತ್ತದೆ, ಅದೆಲ್ಲವನ್ನೂ ಬಗೆಹರಿಸಿಕೊಂಡು ಬರುತ್ತಿದ್ದೇವೆ. ಮಹದಾಯಿ ಯೋಜನೆಗೆ ಅನುಮತಿ ಸಿಕ್ಕಿದೆ, ಬರುವಂತಹ ದಿನದಲ್ಲಿ ಮಹದಾಯಿ ನೀರನ್ನು ಮಲಪ್ರಭೆಗೆ ಸೇರಿಸುವ ಕನ್ನಡಿಗರ ಕನಸು ನನಸಾಗುತ್ತಿದೆ. ಅದೇ ರೀತಿ ಕೃಷ್ಣೆ, 11 ವರ್ಷದ ಹಿಂದೆ ನ್ಯಾಯಮಂಡಳಿ ಆದೇಶವಾದರೂ ಸುಪ್ರೀಂಕೋರ್ಟ್‌ನಲ್ಲಿ ವಾದ ನಡೆದಿದೆ. ಆಲಮಟ್ಟಿ ಎತ್ತರಿಸಲು ಶೀಘ್ರವೇ ಅನುಮತಿ ಸಿಗಲಿದೆ ಎಂಬ ವಿಶವಾಸವಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಡಬಲ್ ಇಂಜಿನ್ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಇದಕ್ಕೆ ಸುಮಾರು ಹದಿಮೂರು ಸಾವಿರ ಕೋಟಿ ರೂ. ಲಭಿಸುತ್ತದೆ, ಸುಮಾರು 2 ಲಕ್ಷ ಎಕರೆ ನೀರಾವರಿಯಾಗುತ್ತದೆ. ಈ ಎಲ್ಲ ನಿರ್ಣಯಗಳನ್ನೂ ಶೀಘ್ರದಲ್ಲೇ ಕನ್ನಡಿಗರಿಗೆ ಉಡುಗೊರೆಯಾಗಿ ಲಭಿಸುತ್ತದೆ. ಸುಪ್ರೀಂಕೋರ್ಟ್‌ನಲ್ಲಿದ್ದರೂ, ಮೇಕೆ ದಾಟು ನಮ್ಮ ಪರವಾಗಲಿದೆ ಎಂಬ ವಿಶ್ವಾಸವಿದೆ. ನೆಲ, ಜಲ, ನಾಡು ನುಡಿ ವಿಚಾರದಲ್ಲಿ ನಮ್ಮ ಸರ್ಕಾರ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ.
ಎಲ್ಲ ಮಾತೃಭಾಷೆಗಳಿಗೂ ಸಂವಿಧಾನದ ರಕ್ಷಣೆ ಬೇಕಾಗಿದೆ. ಪ್ರಾಥಮಿಕ ಹಂತದಲ್ಲೇ ಮಾತೃಭಾಷೆ ಕಲಿಸಲು ರಾಜ್ಯಗಳು ಆದೇಶ ಮಾಡಿದರೂ ನ್ಯಾಯಾಲಯದಲ್ಲಿ ವಿಫಲವಾಗಿವೆ. ಸುಮಾರು ಮೂವತ್ತು ವರ್ಷದಿಂದ ಇದನ್ನು ನೋಡುತ್ತಿದ್ದೇವೆ. ಇದಕ್ಕೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ. ಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮುಟ್ಟಿಸಬೇಕಾಗಿದೆ.
ಕರ್ನಾಟಕ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೊರರಾಜ್ಯದ ಜನರು ವಲಸೆ ಬರುತ್ತಾರೆ. ಇಲ್ಲಿಂದ ಎಲ್ಲ ಲಾಭ ಪಡೆಯುತ್ತಾರೆ, ಕನ್ನಡ ಕಲಿಯುವುದಿಲ್ಲ. ಹೊರನಾಡಿನಿಂದ ಬರುವವರಿಗೆ ಕನ್ನಡ ಕಲಿಸುವ ಒಂದು ಅಭಿಯಾನವನ್ನು ಆರಂಭಿಸಲಿದ್ದೇವೆ. ಅಧಿಕಾರಿಗಳಿಗೆ ಇರುವಂತೆಯೇ, ವಲಸೆ ಬಂದವರಿಗೂ ಕನ್ನಡ ಕಲಿಕೆ ಕುರಿತು ನಿಬಂಧನೆ ವಿಧೀಸುವ ಚಿಂತನೆಗೆ ಆದಷ್ಟೂ ಬೇಗ ಕಾಯಕಲ್ಪ ನೀಡಲಾಗುತ್ತದೆ.
ಗಡಿಯಾಚೆಗಿನ ಕಳವಳ ಅರ್ಥವಾಗುತ್ತದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಜತೆಗೆ ಚರ್ಚಿಸಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರ ರೀತಿಯಲ್ಲೆ, ಕರ್ನಾಟಕದ ಹೊರಗಿರುವವರಿಗೂ ಪಿಂಚಣಿ ನೀಡಲಾಗುತ್ತದೆ. ಗಡಿನಾಡಿನಲ್ಲಿ ಸಂಸ್ಕೃತಿ ಬೆಳೆಸುವ ಕೇಂದ್ರಗಳು, ಮೂಲಸೌಕರ್ಯಕ್ಕಾಗಿ ಈಗಾಗಲೆ 25 ಕೋಟಿ ರೂ. ನೀಡಲಾಗಿದೆ. ಇನ್ನೂ 100 ಕೋಟಿ ರೂ. ಇದೇ ವರ್ಷದಲ್ಲಿ ಕೊಡುತ್ತೇನೆ ಎಂದು ಘೋಷಿಸಿದರು.
ಸಮ್ಮೇಳನದ ಅಧ್ಯಕ್ಷರಾದ ಡಾ. ದೊಡ್ಡರಂಗೇಗೌಡರು, ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ತೆಗೆಯುವ ಮನವಿ ಮಾಡಿದ್ದಾರೆ. ನಾನು ಗೃಹಸಚಿವ, ಸಿಎಂ ಆದ ನಂತರ ಯಾವುದೇ ಪ್ರಕರಣ ದಾಖಲಿಸಿಲ್ಲ. ನಾನು ಗೃಹಸಚಿವನಾಗಿದ್ದಾಗ ಅನೇಕ ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ತೆಗೆದೆವು. ಆದರೆ ಇದಕ್ಕೆ ಹೈಕೋರ್ಟ್ ತಡೆ ಎದುರಾಯಿತು. ಅಪರಾಧ ಪ್ರಕರಣಗಳನ್ನು ಬಿಟ್ಟು ಉಳಿದ ಎಲ್ಲ ಪ್ರಕರಣಗಳನ್ನೂ ತೆಗೆದು ಹಾಕಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ.
ಶಾಸ್ತ್ರೀಯ ಭಾಷೆಯ ಕುರಿತು ಇನ್ನೊಂದು ಮಾತು ಹೇಳಿದ್ದಾರೆ. ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುತ್ತೇನೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದರೂ 2008ರಿಂದ ಇಲ್ಲಿವರೆಗೆ ಸಾಕಷ್ಟು ಪ್ರಗತಿ ಆಗಿಲ್ಲ. ಕನ್ನಡದ ಸಂಶೋಧನೆ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಪ್ರಾಚೀನ ಭಾಷೆಗಳ ಅಧ್ಯಯನಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ಇಲ್ಲಿವರೆಗೆ 13.3 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಾಗಲೆ ಅನೇಕ ಸಂಶೋಧನೆಗಳು ನಡೆದಿವೆ. ಮೈಸೂರು ವಿವಿಯ ದೊಡ್ಡ ಕಟ್ಟಡವನ್ನು ನಮಗೆ ಕೊಟ್ಟಿದ್ದಾರೆ. ಅದರ ನವೀಕರಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲಿ ದೊಡ್ಡ ಪ್ರಮಾಣದ ಸಂಶೋಧನೆಗಳು, ಗ್ರಂಥಾಲಯಗಳು, ಚರ್ಚೆಗಳು ಎಲ್ಲೆಡೆ ನಡೆಯಲಿವೆ. ಇದೆಲ್ಲವನ್ನೂ ಮಾಡಲು ಸರ್ಕಾರ ಬದ್ಧವಾಗಿದೆ. ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ, ಸಾಹಿತಿಗಳನ್ನೊಳಗೊಂಡ ಸಮಿತಿ ಮಾಡಲಾಗುತ್ತದೆ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಯಲಿ. ಇದಕ್ಕೆ ಎಷ್ಟು ಖರ್ಚಾಗುತ್ತದೆ, ಅಷ್ಟನ್ನೂ ನೀಡಲು ಸರ್ಕಾರ ಸಿದ್ಧವಾಗಿದೆ ಎಂದರು.
ಸಮ್ಮೇಳನ ಆಯೋಜನೆ ಮಾಡಿದ ಹಾವೇರಿಗೂ ಇದರಿಂದ ಲಾಭ ಆಗಬೇಕು. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ಮೂರು ಕೋಟಿ ರೂ. ನೀಡುತ್ತೇನೆ. ಒಂದು ಬೇಡಿಕೆ ಏನೆಂದರೆ, ಇದನ್ನು ಒಂದು ಸಂಶೋಧನಾ ಕೇಂದ್ರವಾಗಿ ಕಸಾಪ ದತ್ತು ಪಡೆಯಬೇಕು. ಉತ್ತರ ಕರ್ನಾಟಕದ, ಜಾನಪದ ಭಾಷೆಯ ಸಂಶೋಧನೆಗೆ ಕೇಂದ್ರವಾಗಲಿ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಇದು ಧರ್ಮ ಸಮ್ಮೇಳನವಲ್ಲ, ಇಲ್ಲಿ ಕನ್ನಡವೇ ಸಾರ್ವಭೌಮ: ಟೀಕಿಸಿದವರಿಗೆ ಮಹೇಶ ಜೋಶಿ ಉತ್ತರ