ಹಾವೇರಿ: ನಗರ ಜೀವನಕ್ಕೆ ಆಗಮಿಸಿ ಇಷ್ಟು ವರ್ಷವಾದರೂ ತಮ್ಮ ಮನಸ್ಸು, ಆಲೋಚನೆಗಳು ತಾವು ಹುಟ್ಟಿಬೆಳೆದ ತುಮಕೂರು ಜಿಲ್ಲೆಯ ಕುರುಬರ ಹಳ್ಳಿಯಲ್ಲೇ ಇರುತ್ತದೆ ಎಂದು ಹೇಳಿದವರು 86ನೇ ಅಖಿಲ ಭಾರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ದೊಡ್ಡರಂಗೇಗೌಡರು.
ಅಧ್ಯಕ್ಷರ ಜತೆ ಮಾತು ಮಂಥನ ಕಾರ್ಯಕ್ರಮದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಮಾತನಾಡುತ್ತ, ತಮ್ಮ ಕಾವ್ಯದ ಮೂಲ ನೆಲೆಯ ಕುರಿತು ದೊಡ್ಡರಂಗೇಗೌಡು ಮಾಹಿತಿಗಳನ್ನು ಹಂಚಿಕೊಂಡರು.
ಸಿನಿಮಾ ಸಾಹಿತ್ಯ ಹಾಗೂ ಸಾಮಾನ್ಯ ಸಾಹಿತ್ಯದ ಕುರಿತು ಮಾತನಾಡಿದ ದೊಡ್ಡರಂಗೇಗೌಡ, ಸಿನಿಮಾಕ್ಕೆ ಬರೆಯುವಾಗ ಯಾವುದೋ ಸನ್ನಿವೇಶವನ್ನು ತೆಗೆದುಕೊಂಡು, ನಿರ್ದೇಶಕ ಅಥವಾ ನಿರ್ಮಾಪಕ ಹೇಳಿದ ಸನ್ನಿವೇಶ ಅಥವಾ ಪಾತ್ರಕ್ಕೆ ಬರೆಯುತ್ತೇವೆ. ಮೊದಲು ಅವರೊಂದಿಗೆ ಚರ್ಚೆ ನಡೆಸಿ ಹಾಡು ಬರವಣಿಗೆ ಆರಂಭಿಸುತ್ತೇವೆ. ಕವಿತೆಗಳಲ್ಲಿ ಮುಕ್ತ ಸ್ವಾತಂತ್ರ್ಯವಿರುತ್ತದೆ. ಕಲ್ಪನಾ ಲೋಕದಲ್ಲಿ ನಾನು ತೇಲಿ ಕವಿತೆ ಕಟ್ಟಬಹುದು. ಇದೆಲ್ಲ ಸಂದರ್ಭದಲ್ಲಿಯೂ ಸ್ವಂತಿಕೆಯನ್ನು ಪ್ರದರ್ಶಿಸಬಹುದು. ತುಮಕೂರು ಜಿಲ್ಲೆಯ ದೇಸಿ ಭಾಷೆಯನ್ನು ಹೆಚ್ಚು ಬಳಸುತ್ತೇನೆ.ಇಷ್ಟೆಲ್ಲ ವರ್ಷ ನಗರದಲ್ಲಿದ್ದು, ಎಷ್ಟೇ ವಾಸ ಮಾಡಿದರೂ ನನ್ನ ಮನಸ್ಸು ಇನ್ನೂ ಕುರುಬರ ಹಳ್ಳಿಯಲ್ಲೇ ಇದೆ. ಬರೆಯುವಾಗ ನನ್ನ ಮನಸ್ಸು ನನ್ನ ಹಳ್ಳಿಗೇ ಹೋಗುತ್ತದೆ. ಅಲ್ಲಿನ ಕೂಲಿಕಾರರು, ಶಾಲೆಯ ಮೇಷ್ಟ್ರು, ಹೆಣ್ಣು ಮಕ್ಕಳು, ಮಾರಮ್ಮನ ಗುಡಿ, ಅರಳಿ ಮರಗಳನ್ನೇ ನೆನೆದು ಕವಿತೆ ರಚಿಸುತ್ತೇನೆ.
ತಮ್ಮ ಪತ್ನಿ ರಾಜೇಶ್ವರಿ ಗೌಡ ಕುರಿತು ಮಾತನಾಡಿದ ದೊಡ್ಡರಂಗೇಗೌಡರು, ಅವರೇ ನನ್ನ ಸ್ನೇಹಿತೆ ಹಾಗೂ ಮಾರ್ಗದರ್ಶಿಯಾಗಿದ್ದರು. ನನ್ನ ಮಡದಿಗೆ ನಾನು ಸಂಪೂರ್ಣ ಚಿರಋಣಿಯಾಗಿದ್ದೇನೆ ಎಂದರು.
ಶಿಕ್ಷಣದಲ್ಲಿ ಸಾಹಿತ್ಯದ ಕುರಿತು ಮಾತನಾಡಿದ ದೊಡ್ಡರಂಗೇಗೌಡ, ನನ್ನ ಎಲ್ಲ ಸಾಹಿತ್ಯವನ್ನೂ ಡಿಜಿಟಲ್ ಆಗಿ ಪರಿವರ್ತನೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೆ ಎಲ್ಲ ಹಕ್ಕನ್ನೂ ಪಡೆದುಕೊಂಡಿದೆ. ಇದಕ್ಕೂ ಮೊದಲೇ ಮುಂಬೈಯ ಪ್ರಕಾಶಕರಿಗೆ ಎರಡು ಪುಸ್ತಕಗಳ ಹಕ್ಕುಸ್ವಾಮ್ಯವನ್ನು ನೀಡಿದ್ದೇನೆ ಎಂದರು.
ಕನಸು ಮನಸಿನಲ್ಲಿಯೂ ಕಂಡಿಲ್ಲದ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ. ಎಸ್‌ಎಲ್‌ಎನ್ ಕಾಲೇಜಿನಲ್ಲಿದ್ದಾಗ ನನ್ನ ಕವಿತೆಗಳು ಹಿಂದಿಗೆ ಅನುವಾದಗೊಂಡವು, ಅದನ್ನು ಕವಿತಾ ಕೃಷ್ಣಮೂರ್ತಿ ಹಾಡಿದರು. ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಪದ್ಯವನ್ನು ಪ್ರಸ್ತುತಪಡಿಸಲಾಯಿತು. 18 ಭಾಷೆಗಳಿಗೆ ಇದು ಅನುವಾದವಾದಾಗ ಸಂತಸವಾಯಿತು. ಲೇಖಕ ಕನ್ನಡದಾಚೆಗೂ ಬೆಳೆಯಬೇಕು, ಪಸರಿಸಬೇಕು ಎಂದು ಹೇಳಿದರು.
ಸಮಯ ಹೊಂದಾಣಿಕೆ ಕುರಿತು ಪ್ರತಿಕ್ರಿಯಿಸಿದ ದೊಡ್ಡರಂಗೇಗೌಡ, ಯಾರು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತಾನೆಯೋ ಅವನಿಗೆ ಪ್ರತಿ ಕ್ಷಣವೂ ರಸಘಳಿಗೆ. ಬಾಲ್ಯದಲ್ಲಿ ಕವಿತೆ ಬರೆದಾಗ ಇದ್ದಷ್ಟು ಮುಗ್ಧತೆ ಇಲ್ಲವೇನೋ ಎನ್ನಿಸುತ್ತದೆ. ಸಮಾಜದಲ್ಲಿ ನಡೆಯುವ ಅಸತ್ಯ, ಅಧರ್ಮಗಳು ತಲೆತಾಕಿ ಮನಸ್ಸು ಸಂಕೀರ್ಣವಾಗಿದೆ.
ಇಂದಿನ ಚಿತ್ರಸಾಹಿತಿಗಳು ಜಾಣ ಕಿವುಡು ಹಾಗೂ ಜಾಣ ಕುರುಡನ್ನು ಪ್ರದರ್ಶಿಸುತ್ತಾರೆ. ಹಳೆಯ ಕವಿಗಳನ್ನು ಓದಬೇಕು. ಅದರಿಂದ ಯುವಕರ ಭಾಷಾ ಕೋಶ ದೊಡ್ಡದಾಗುತ್ತದೆ, ನಿಮ್ಮ ನೋಡುವ ನೋಟವೇ ಬದಲಾಗುತ್ತದೆ. ಅಧ್ಯಯನ, ಅಂತರಂಗದ ಹಸಿವಾಗಬೇಕು ಎಂದರು.
ಸಂಸದೀಯ ವ್ಯವಸ್ಥೆ ಕುಸಿಯುತ್ತಿರುವ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಮೌಲ್ಯಗಳು ದಿನೇದಿನೆ ಕಳೆದುಕೊಳ್ಳುತ್ತಿರುವ ವಿಷಮ ಸನ್ನಿವೇಶದಲ್ಲಿ ಹೀಗೆ ಆಗುತ್ತದೆ. ದುಡ್ಡಿದ್ದವರು ಗೆದ್ದು ಬರುತ್ತಿದ್ದಾರೆ. ನಾನು ವಿಧಾನ ಪರಿಷತ್ ಸದಸ್ಯನಾಗಿ ಗಮನಿಸಿದ ದೌರ್ಬಲ್ಯಗಳೇನು ಎಂದರೆ, ಹಣದಿಂದ ಅಧಿಕಾರವನ್ನು ಕೊಂಡ ವ್ಯಕ್ತಿಗಳು ಪರಿಷತ್ ಸದಸ್ಯರಾಗುತ್ತಿರುವುದು ಬೇಸರದ ಸಂಗತಿ. ಶಾಸಕರು ಉಪಯೋಗಿಸುವ ಭಾಷೆ, ಅವರ ವರ್ತನೆಗಳನ್ನು ಯೋಚನೆ ಮಾಡಿದರೆ ಮೈ ಉರಿಯುತ್ತದೆ. ತೊಡೆಯನ್ನು ತಟ್ಟಿ ಒಬ್ಬ ಶಾಸಕ ಸವಾಲು ಹಾಕಬೇಕಾದರೆ ನಮ್ಮ ಪ್ರಜಾಪ್ರಭುತ್ವ ಇಲ್ಲಿಗೆ ಕುಸಿಯಿತೇ ಎಂದು ದುಃಖವಾಗುತ್ತದೆ. ಇದಕ್ಕೆ ಸಾಮಾನ್ಯ ಜನರಾದ ನಾವೂ ಕಾರಣ. ಭ್ರಷ್ಟತೆಯೇ ಎಲ್ಲೆಲ್ಲೂ ಇರುವಾಗ ಅದರ ನಡುವೆ ಪ್ರಾಮಾಣಿಕತೆಯನ್ನು ಹುಡುಕಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಾದದಲ್ಲಿ ಸಂಕಮ್ಮ ಜಿ ಸಂಕಣ್ಣನವರ, ಶೀಲಾದೇವಿ ಎಸ್. ಮಳಿಮಠ, ಬಾಪು ಪದ್ಮನಾಭ, ರುದ್ರಣ್ಣ ಹರ್ತಿಕೋಟಿ, ಅಂಜನ್ ಶೆಟ್ಟಿ, ಟಿ. ತಿಮ್ಮೇಶ್ ಮುಂತಾದವರು ಭಾಗವಹಿಸಿದರು. ಇತಿಹಾಸಕಾರ ಡಾ. ತಲಕಾಡು ಚಿಕ್ಕರಂಗೇಗೌಡ ಪ್ರಧಾನ ನಿರ್ವಹಣೆ ಮಾಡಿದರು.