Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಮುದ್ರಣ, ಟಿವಿ ಜಾಹೀರಾತುಗಳು ಡಿಜಿಟಲ್‌ ಮಾಧ್ಯಮದೆಡೆಗೆ ಹೋಗಲಿವೆ: ಡಾ. ಸಿಬಂತಿ ಪದ್ಮನಾಭ

digital media may take most of tv and print media soon says sibanthi padmanabha

ಹಾವೇರಿ: ಡಿಜಿಟಲ್‌ ಮಾಧ್ಯಮ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಇದೀಗ ಮುದ್ರಣ ಮಾಧ್ಯಮ ಪಡೆಯುತ್ತಿರುವ ಬಹಳಷ್ಟು ಜಾಹೀರಾತುಗಳನ್ನು ಭವಿಷ್ಯದಲ್ಲಿ ಡಿಜಿಟಲ್‌ ಮಾಧ್ಯಮ ಪಡೆಯುವ ಸಾಧ್ಯತೆಯಿದೆ ಎಂದು ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ತಿಳಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆʼಯಲ್ಲಿ ಆಯೋಜಿಸಿದ್ದ ʼಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳುʼ ಕುರಿತ ಗೋಷ್ಠಿಯಲ್ಲಿ ʼಡಿಜಿಟಲ್‌ ಮಾಧ್ಯಮದ ಮುಂದಿನ ಸವಾಲುಗಳುʼ ಕುರಿತು ಮಾತನಾಡಿದರು.

ಕಳೆದ ಹತ್ತು ಹದಿನೈದು ವರ್ಷದಿಂದ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ.‌ ಇದರಿಂದ ಮಾಧ್ಯಮದ‌ ಪರಿಕಲ್ಪನೆಯೇ ಬದಲಾಗಿದೆ. ನಾವೆಲ್ಲರೂ ಡಿಜಿಟಲ್ ಮಾಧ್ಯಮದ ಒಳಗೆ ಸೇರಿಕೊಂಡು ಅದರ ಕೈಗೊಂಬೆ ಆಗಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿ, ಅಗ್ಗದ ಡೇಟಾ ದರ ಹಾಗೂ ಯುವ ಸಮೂಹವು ಡಿಜಿಟಲ್ ಮಾಧ್ಯಮ ಬೆಳವಣಿಗೆಗೆ ಕಾರಣ.

ಡಿಜಿಟಲ್ ಮಾಧ್ಯಮ ಬೆಳವಣಿಗೆ ಕಾಣಲು ಆರಂಭವಾದಾಗಿನಿಂದ ಸುದ್ದಿ ಯಾವುದು, ಸತ್ಯ ಯಾವುದು ಎಂದು ವ್ಯತ್ಯಾಸ ನೋಡುವುದು ಕಷ್ಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಯ ಫ್ಯಾಕ್ಟರಿಗಳಾಗಿವೆ ಎಂಬ ಅಭಿಪ್ರಾಯವಿದೆ. ಈ ಸವಾಲನ್ನು ಹೇಗೆ ನಿಭಾಯಿಸುವುದು ಎಂದು ನೋಡಬೇಕು. ಸಾಂಪ್ರದಾಯಿಕ ಮಾಧ್ಯಮದಲ್ಲಿ ಇರುವ ಗೇಟ್ ಕೀಪಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದಾಗಿ, ಸುದ್ದಿಯೇ ಆಗದ ತೀರಾ ಸಾಮಾನ್ಯ ವಿಚಾರಗಳು ಡಿಜಿಟಲ್‌ ಮಾಧ್ಯಮದಲ್ಲಿ ಹೆಚ್ಚು ಪ್ರಸಾರ ಆಗುತ್ತಿವೆ.‌

ಈ ಹಿಂದೆ ದೊಡ್ಡ ನಾಯಕರು ಪ್ರಭಾವಿ ಆಗಿದ್ದರು. ಆದರೆ ಇಂದು ಉತ್ತಮ ವಿಷಯ ಇರುವ ಒಬ್ಬ ಸಾಮಾನ್ಯ ವ್ಯಕ್ತಿ ಹೆಚ್ಚು ಪ್ರಭಾವಿ ಆಗುತ್ತಿದ್ದಾನೆ. ಮುದ್ರಣ ಮಾಧ್ಯಮ ಪಡೆಯುವ ಲಕ್ಷಾಂತರ ರೂ. ಮೊತ್ತದ ಜಾಹೀರಾತನ್ನು ಒಬ್ಬ ಸಾಮಾನ್ಯ ಕಂಟೆಂಟ್‌ ಕ್ರಿಯೇಟರ್‌ ಪಡೆಯುತ್ತಾನೆ. ನಿಧಾನವಾಗಿ ಮುಂದಿನ ದಿನಗಳಲ್ಲಿ ಪತ್ರಿಕೆ, ಟಿವಿಗಳಿಗೆ ನೀಡಲಾಗುತ್ತಿರುವ ಜಾಹೀರಾತು ಡಿಜಿಟಲ್ ಮಾಧ್ಯಮಗಳ ಕಡೆಗೆ ಹೋಗುವ ಸಾಧ್ಯತೆ ಇದೆ.

ಈ ತಂತ್ರಜ್ಞಾನವನ್ನು ಎಷ್ಟು ಬಳಸಬೇಕು, ನಮ್ಮನ್ನೇ ನಿಯಂತ್ರಿಸಲು ಬಿಡಬೇಕೆ ಎಂಬ ಕುರಿತು ಯೋಚಿಸಬೇಕು. ಮುಂದಿನ ದಿನಗಳಲ್ಲಿ ಡಿಜಿಟಲ್‌ ಮಾಧ್ಯಮ ಉಳಿಯಬೇಕೆಂದರೆ ಅದರ ವಸ್ತು ಹಾಗೂ ವಿಶ್ವಾಸಾರ್ಹತೆ ಮಾತ್ರವೇ ಮಾನದಂಡ ಆಗಲಿದೆ ಎಂದರು.

ʼಮುದ್ರಣ ಮಾಧ್ಯಮದಲ್ಲಿ ಕನ್ನಡ ಬಳಕೆ ಕುರಿತು ಮಾತನಾಡಿದ ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಪತ್ರಿಕೆಗಳ ಮೂಲಕ ಹೊಸ ಪದಗಳನ್ನು ಪರಿಚಯಿಸುವ ಕೆಲಸವನ್ನು ಕನ್ನಡ ಪತ್ರಿಕೆಗಳು ಮಾಡುತ್ತಿದೆ. ಭವಿಷ್ಯಕ್ಕೆ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು. ಇದಕ್ಕಾಗಿ ಜಾಗವನ್ನು ಮೀಸಲಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪತ್ರಿಕೆಗಳಲ್ಲಿ ಕನ್ನಡ ಭಾಷೆ ಪದಗಳನ್ನು ಹೆಚ್ಚು ಬಳಸಬೇಕು.
ಅಂಚೆ, ಪೊಲೀಸ್ ಸೇರಿ ಯಾವುದೇ ಸೇವೆಗಳು ಕನ್ನಡವನ್ನೇ ಕಡ್ಡಾಯವಾಗಿ‌ ಬಳಸುವ ಅನಿವಾರ್ಯತೆ ಇಲ್ಲ. ಆದರೆ ಕನ್ನಡ ಪತ್ರಿಕೆಗಳಿಗೆ ಇದು ಅನ್ವಯ ಆಗುವುದಿಲ್ಲ. ಇಂದಿಗೂ ಕನ್ನಡ ಪತ್ರಿಕೆಗಳು ಕನ್ನಡಕ್ಕೆ ಹೆಚ್ಚು ಅವಕಾಶ ನೀಡುತ್ತಿವೆ.

ಪತ್ರಿಕೋದ್ಯಮದ ಭಾಷೆ, ಪಂಡಿತರಿಗಲ್ಲ. ಸಾಮಾನ್ಯ ಜನರಿಗೆ ಅಗತ್ಯವಾದ ಸರಳ‌ ಭಾಷೆ ಬಳಸುತ್ತೇವೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನು ಬಳಕೆ ಮಾಡಬೇಕಾಗುತ್ತದೆ. ಮಾತೃಭಾಷೆ ಉಳಿವಿಗಾಗಿ ಮುದ್ರಣ ಮಾಧ್ಯಮ ಎಂದಿಗೂ ಬದ್ಧವಾಗಿದೆ ಎಂದರು.

ಕೂ ಸಾಮಾಜಿಕ ಜಾಲತಾಣಧ ಎಚ್.ಎಸ್. ಸುದರ್ಶನ್ ಮಾತನಾಡಿ, ಆತ್ಮೀಯರೊಂದಿಗೆ ಒಡನಾಟಕ್ಕೆ ಆರಂಭವಾದ ಸಾಮಾಜಿಕ‌ ಜಾಲತಾಣಗಳು ಈಗ ಹೆಮ್ಮರವಾಗಿ ಬೆಳೆದಿವೆ. ಅದರಿಂದ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಕ್ಕಿದೆ. ಆದರೆ ಭದ್ರತೆ ಕುರಿತು ಎಲ್ಲರೂ ಎಚ್ಚರಿಕೆ ವಹಿಸಬೇಕು. ಮೋಸಕ್ಕೊಳಗಾಗುವ ಅಪಾಯವೂ ಇದರಲ್ಲಿ ಇರುತ್ತದೆ. ಮಕ್ಕಳು ಅಪಾಯಕ್ಕೆ ಒಳಗಾಗದಂತೆ ಶಿಕ್ಷಣ ನೀಡಬೇಕು ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಬಿ.ಕೆ. ರವಿ, ಹೊಸ ತಂತ್ರಜ್ಞಾನದಿಂದಾಗಿ ಹಾಗೂ ಅದರ ಬಳಕೆಯಿಂದಾಗಿ ಆಗುತ್ತಿರುವ ಬದಲಾವಣೆಯನ್ನು ಸಂವಹನ ಶಾಸ್ತ್ರಜ್ಞರು ಗಮನಿಸುತ್ತಿದ್ದಾರೆ. ಸಂವಹನದ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಿದ್ದರೆ ಹೊಸತನ ಏನು? ಎಂದರೆ ಮಾಧ್ಯಮ ಅಥವಾ ಸಂದೇಶವನ್ನು ನೀಡುವ ವೇಗ ಹೆಚ್ಚಾಗಿದೆ ಅಷ್ಟೆ. ಕೋವಿಡ್‌ ಹಾವಳಿ ನಂತರ ಸಾಮಾಜಿಕ ಜಾಲತಾಣ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ನುಸುಳಿತು ಎಂದರು.

ಆಶಯ ನುಡಿಗಳನ್ನಾಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಿಇಒ ಮೋಹನ ಹೆಗಡೆ, ಹಾವೇರಿ ಜಿಲ್ಲೆಯು ಪತ್ರಿಕೋದ್ಯಮದ ತವರು ನೆಲವಾಗಿದೆ. ಕೊರೊನಾ ಸಮಯವನ್ನು ಅವಲೋಕಿಸಿದಾಗ, ಮಾಧ್ಯಮಗಳ ಕುರಿತು ಅನೇಕ ಅಡ್ಡಪರಿಣಾಮಗಳಾಗಿವೆ. ಆಶಯ ಭಾಷಣದಲ್ಲಿ ಅನಿವಾರ್ಯವಾಗಿ ನೋವು ತೋಡಿಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ : ತೀರ್ಪುಗಳು ಕನ್ನಡದಲ್ಲಿದ್ದರೆ ಜನರಿಗೆ ನ್ಯಾಯ: ನ್ಯಾ. ಅರಳಿ ನಾಗರಾಜ

Exit mobile version