ಸಮ್ಮೇಳನಾಧ್ಯಕ್ಷರ ಭಾಷಣ, ಡಾ. ದೊಡ್ಡರಂಗೇಗೌಡ
ಶರಣೆಂಬೆ ಅರಿವಿಗೆ
ಶರಣೆಂಬೆ ಗುರುವಿಗೆ
ಶರಣೆಂಬೆ ಸಾಹಿತ್ಯ ಸರಸ್ವತಿಗೆ
ಶರಣೆಂಬೆ ಸಾಹಿತ್ಯ ಸಂಗೀತ ಸರಸ್ವತಿಗೆ
ಶರಣು ಶರಣೆಂಬೆ ನಿಮ್ಮೆಲ್ಲರಿಗೆ.
ಅಕ್ಕರೆಯ ಸುಮಾರು ಏಳು ಕೋಟಿ ಕನ್ನಡಿಗರಿಗೆ ವಂದನೆ… ಶುಭ… ವಂದನೆ ನಿಮ್ಮೆಲ್ಲರಿಗೆ. ಕನ್ನಡ ತಾಯಿ ಭುವನೇಶ್ವರಿ ಹೃದಯ ತುಂಬಿ ನನಗೆ ಆಶೀರ್ವದಿಸಿದ್ದಾಳೆ. ಇದು ನನ್ನ ಬಾಳಿನ ಭಾಗ್ಯ. ನನ್ನ ನಲ್ಮೆಯ ಅಪ್ಪ ಅಮ್ಮ ಮೇಲಿಂದಲೇ ಹರಸಿದ್ದಾರೆ. ಇದು ನನ್ನ ಬದುಕಿನ ಸುಕೃತ.
ವೇದಿಕೆಯ ಮೇಲೆ ಆಸೀನರಾಗಿರುವ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೇ, ನಿಮಗಿದೋ ನನ್ನ ನಮಸ್ಕಾರಗಳು. ನಿಮ್ಮಿಂದ ಈ ಸಮ್ಮೇಳನ ಮತ್ತು ನಮ್ಮ ಅಕ್ಕರೆಯ ರಾಜ್ಯ ಬಹಳಷ್ಟು ಪ್ರಗತಿಯನ್ನೂ ಸಾಹಿತ್ಯದ ಸಂವರ್ಧನೆಯನ್ನೂ ನಿರೀಕ್ಷಿಸುತ್ತದೆ. ಈ ದಿಸೆಯಲ್ಲಿ ಏಳು ಕೋಟಿ ಕನ್ನಡಿಗರ ಪರವಾಗಿ ನಾನಿಲ್ಲಿ ಮಾತನಾಡುತ್ತಿದ್ದೇನೆ. ತಾವು ಪರಾಂಬರಿಸಬೇಕಾಗಿ ವಿನಂತಿ.
ಇನ್ನು ಈ ಸಮ್ಮೇಳನ ಇಷ್ಟು ವಿಜೃಂಭಣೆಯಿಂದ ಜರುಗಲು ಮುಖ್ಯ ರೂವಾರಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಜನತೆಯ ಅಭಿಮತಗಳ ದಾಖಲೆ ಬರೆದ ಕನ್ನಡಿಗರೆಲ್ಲರ ಸ್ನೇಹ ಪ್ರೀತಿ ವಿಶ್ವಾಸಗಳಿಗೆ ಕಾರಣರಾದ, ನಮ್ಮ ನಿಮ್ಮೆಲ್ಲರ ನಂಬಿಕೆಯ “ನಾಡೋಜ” ಡಾ. ಮಹೇಶ ಜೋಶಿ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೂ ನನ್ನ ನಮನಗಳು.
ಜಿಲ್ಲಾ ಉಸ್ತುವಾರಿ ಸಚಿವರಾದ ನಲ್ಮೆಯ ಅರಬೈಲ್ ಶಿವರಾಮ ಹೆಬ್ಬಾರರೇ, ರಾಜ್ಯ ವಿಧಾನಪರಿಷತ್ತಿನ ಸಭಾಪತಿಗಳಾದ ಮಾನ್ಯ ಬಸವರಾಜ ಹೊರಟ್ಟಿ ಅವರೇ, ನನ್ನ ಆತ್ಮೀಯ ಕವಿಮಿತ್ರರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರೇ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರೇ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೇ, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಶ್ರೀ ವಿ ಸುನಿಲ್‌ಕುಮಾರ್ ಅವರೇ, ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರೇ, ಮಾನ್ಯ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ಅವರೇ, ರಾಜ್ಯದ ರಾಜಕೀಯ ಕ್ಷೇತ್ರದ ಧುರೀಣರೇ ಸರ್ವರಿಗೂ ನನ್ನ ಅನಂತ ನಮಸ್ಕಾರಗಳು.
ಶುಭ ಸಿರಿ ಹಾವೇರಿ
ಯಾವ ತಾಣದಿ ಕನಕ ದಾಸರು
ಕೀರ್ತನೆ ಝುರಿ ಮೊರೆದರೋ
ಅದೇ ತಾಣವಿದು ಶುಭ ಸಿರಿ… ಹಾವೇರಿ!
ಯಾವ ನೆಲದಲಿ ಶಿಶುನಾಳ ಶರೀಫರು
ತತ್ವಜ್ಞಾನ ಅರುಹಿದರೋ
ಅದೇ ನೆಲವಿದು ಶುಭಸಿರಿ ಹಾವೇರಿ
ಯಾವ ನೆಲೆಗಳಲಿ ಸರ್ವಜ್ಞ ತ್ರಿಪದಿಗಳ ನುಡಿದರೋ
ಅದೇ ನೆಲೆ ಇದುವೆ ಶುಭ ಸಿರಿ ಹಾವೇರಿ
ಯಾವ ಭುವಿಯಲ್ಲಿ ಹಾನಗಲ್ಲ ಕುಮಾರಸ್ವಾಮಿ
ಧರ್ಮವ ಹರಡಿದರೋ ಅದೇ ಭುವಿಯಿದು ಶುಭ ಸಿರಿ ಹಾವೇರಿ
ಈ ಭಾಗದ ಜ್ಞಾನಸಂತರಾದ ಕನಕ, ಸಮಾಜಮುಖಿ ಆಶುಕವಿ ಸರ್ವಜ್ಞ, ಸಂತ ಶರೀ¥s಼, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ “ಗಾನಯೋಗಿ” ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳು, ಕಾದಂಬರಿ ಪಿತಾಮಹರು ಎನ್ನಿಸಿಕೊಂಡ ಹಿರಿಯ ಲೇಖಕರಾದ ಗಳಗನಾಥರು, ಜ್ಞಾನಪೀಠ ಪುರಸ್ಕಾರ ಪಡೆದ “ಭಾರತ ಸಿಂಧುರಶ್ಮಿ” ಬರೆದ ಡಾ. ವಿ.ಕೃ. ಗೋಕಾಕ್ ಅವರು, ಸ್ವಾತಂತ್ರ ಹೋರಾಟಗಾರರಾದ ಮೈಲಾರ ಮಹಾದೇವ ಅವರು, ಕನ್ನಡದ ಸುಪ್ರಸಿದ್ಧ ಕವಿ ಸು.ರಂ. ಎಕ್ಕುಂಡಿ ಅವರು, ಡಾ. ಹಿರೇಮಲ್ಲೂರು ಈಶ್ವರನ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದುದು, ಆ ಬಗೆಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಜಾನಪದದಿಂದ ಪ್ರಾರಂಭವಾದ ಕನ್ನಡ ನುಡಿ ಇಂದಿನವರೆಗೆ ಕಾವ್ಯ ಕಾವೇರಿಯಾಗಿ ಹರಿದು ಬಂದದ್ದು ವಿಶೇಷವಾಗಿದೆ ಕನ್ನಡ – ಕನ್ನಡಿಗ- ಕರ್ನಾಟಕ ಈ ಮೂರೂ ಒಂದರಲ್ಲಿ ಒಂದು ತಳುಕು ಹಾಕಿಕೊಂಡಿದೆ. ಕನ್ನಡ ಅಕ್ಷರಗಳು ಮುದ್ದಾಗಿವೆ. ಕನ್ನಡ “ಲಿಪಿಗಳ ರಾಣಿ” ಎಂಬ ಹೊಗಳಿಕೆಗೆ ಪಾತ್ರವಾಗಿದೆ.
ನಮ್ಮ ಕನ್ನಡಕ್ಕೆ ಒಂದು ಭವ್ಯ ಪರಂಪರೆ ಇದೆ. ಇತಿಹಾಸ ಕೆದಕಿ ನೋಡಿದರೆ ಕನ್ನಡ ನುಡಿಯ ಬೇರುಗಳು ಭದ್ರವಾಗಿವೆ. ಪ್ರಾಚೀನ ಪರಂಪರೆ ಅರ್ಥಮಾಡಿಕೊಂಡರೆ ಕನ್ನಡದ ಹಿರಿಮೆ – ಗರಿಮೆಗಳು ಸ್ಪಷ್ಟವಾಗಿ ಅರಿವಾಗುತ್ತವೆ.
ಬನ್ನಿ ಬನ್ನಿ ಗೆಳೆಯರೇ ಗೆಳತಿಯರೇ
ಜಾತಿ, ಮತ, ಪಂಥ, ಪಕ್ಷ ಎಲ್ಲ ಮರೆತು
ಬನ್ನಿ ಬನ್ನಿ ಕನ್ನಡಿಗರೇ ತೋರಿ ಅಕ್ಕರೆ!
ಇಲ್ಲಿ ನಡೆದಿದೆ ಸಂಭ್ರಮದ ಜಾತ್ರೆ ಸಿರಿ!
ಜಾತ್ರೆಯಿದು ಕಡಿಮೆ ಇಲ್ಲ
ಇಲ್ಲಿ ಕಾಣುತ್ತಿದೆ ನಾಡು ನುಡಿ ಕಿಮ್ಮತ್ತೆಲ್ಲ!
ಇದುವೆ ನಮಗೆ ಪುಣ್ಯದ ಸಿರಿ ಬ್ರಹ್ಮಗಿರಿ
ಇಲ್ಲಿ ವಿಶ್ವ ಮುಖಿ ಕನ್ನಡದ ಮಹದೈಸಿರಿ
ನಮ್ಮ ತಾಯಿ ನಲ್ಮೆ ಅಮ್ಮ ಭುವನೇಶ್ವರಿ
ಮೂರು ದಿನದ ಜಾತ್ರೆಯಲಿ ಕನ್ನಡ ತೇರೆಳೆಯಿರಿ
ಎಲ್ಲರೂ ಒಂದಾಗಿ ಕನ್ನಡಕೆ ಜಯವೆನ್ನಿ ಶುಭ ಸಂದೇಶ ಸಾರಿರೀ
ಕನ್ನಡಿಗರಿಗೆ ಒಂದು ಸ್ಪಷ್ಟವಾದ ಸಂಸ್ಕೃತಿ ಇದೆ. ನಮ್ಮ ಪೂರ್ವ ಸೂರಿಗಳಿಗೆ ಕನ್ನಡದ ಕಿಮ್ಮತ್ತು ಗೊತ್ತಿದೆ. ಕನ್ನಡಿಗರ ಸ್ಫಟಿಕ ಮಣಿ ಸ್ವಭಾವವನ್ನು ಕಲ್ಲಿನ ಮೇಲೆ ಕೊರೆದಿದ್ದಾರೆ, ಕನ್ನಡಿಗರ ವೈವಿಧ್ಯಮಯವಾದ ವ್ಯಕ್ತಿತ್ವವನ್ನು ಚೆನ್ನಾಗಿಯೇ ಉಲ್ಲೇಖಿಸಲಾಗಿದೆ. ಕಪ್ಪೆ ಅರೆಭಟ್ಟನನ್ನು ಕುರಿತ ವೈಲಕ್ಷಣಗಳನ್ನು ಬಾದಾಮಿ ಶಾಸನದಲ್ಲಿ ಕಾಣಬಹುದಾಗಿದೆ. ಖಚಿತ ಮಾತುಗಳಲ್ಲಿ ಹೇಳಿದ್ದಾರೆ.
ಸಾಧುಂಗೆ ಸಾಧು! ಮಾಧುರ್ಯಂಗೆ ಮಾಧುರ್ಯನ್!
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನ್ ಈತನ್ ಪೆರನಲ್ಲ
ಇದೊಂದು ಶಾಸನ ಪದ್ಯವಾದರೂ ಕನ್ನಡದ ಚಿರಂತನ ಅಸ್ಮಿತೆ ಗೊತ್ತಾಗುತ್ತದೆ.
ನಮ್ಮ ಅಭಿಮಾನದ ಹಾಡು
ಎದೆ ಎದೆಯ ದುಡಿ ಕನ್ನಡ ನುಡಿ;
ನಮ್ಮ ಕನ್ನಡ ನುಡಿ ನಾಡಿನ ಗುಡಿ!
ಬಿಟ್ಟು ಕೊಡೆವು ನಮ್ಮ ಗಡಿ
ನೆರೆ ಹೊರೆಯ ಗೆಳೆಯರೇ
ಆಕ್ರಮಿಸಿದರೆ ಹೊತ್ತಿಕೊಳ್ಳುವುದು
ನಮ್ಮ ಅಭಿಮಾನದ ಬೆಂಕಿ ಕಿಡಿ!
ಅಮ್ಮನ ಸೆರಗಿಗೆ ಸಿಡಿದರೆ ಕಿಡಿ
ಸಹಿಸೆವು ನಾವು ಸಿಡಿ-ಮಿಡಿ
ಇದು ಅಮ್ಮನ ಆಣತಿ ನಲ್ನುಡಿ
ತಂಟೆಗೆ ಬಂದರೆ ಹೋರಾಟ ದಂಡಿ
ಅತಿಕ್ರಮಿಸಬೇಡಿ, ಇಡದಿರಿ ಮುಂದಕ್ಕೆ ಒಂದೂ ಅಡಿ!
ಕನ್ನಡಿಗರು ಎಲ್ಲಿ ಹೋದರೂ ಹೇಗೇ ಇದ್ದರೂ ಮೂಲತಃ ಮೃದು ಸ್ವಭಾವದವರು, ಒಳ್ಳೆಯವರಿಗೆ ಒಳ್ಳೆಯವರು! ಮಧುರವಾಗಿ ಮಾತಾಡುವವರಿಗೆ ಮಧುರವಾಗಿಯೇ ಉತ್ತರ ಕೊಡುವ ಸಹೃದಯರು. ಕನ್ನಡಿಗರ ತಂಟೆಗೆ ಬಂದರೆ ಮಾತ್ರ ಕನ್ನಡಿಗರು ಸುಮ್ಮನಿರುವುದಿಲ್ಲ. ಬಾಧಿಪ್ಪ ಕಲಿಗಳಿಗೆ ಕಲಿಯುಗ ವಿಪರೀತವಾಗಬಲ್ಲವರು. ಕನ್ನಡ ಜನತೆಗೆ ಕೆಲವು ವಿಶೇಷ ಗುಣಗಳಿವೆ; ಇತರ ಭಾಷೆಯ ಜನರಲ್ಲಿ ಪ್ರೀತಿ ತೋರುವುದು ಮತ್ತು ಪರಧರ್ಮವನ್ನು, ಪರವಿಚಾರವನ್ನು ಸಹಿಸಿಕೊಳ್ಳುವುದು. ಪರಧರ್ಮ ಸಹಿಷ್ಣುತೆ ಕನ್ನಡಿಗರ ರಕ್ತದಲ್ಲೇ ಬೆರೆತಿದೆ. ಸಂತ ಶಿಶುನಾಳ ಶರೀ¥s಼ಜ್ಜರ ಸಾಹಿತ್ಯವನ್ನು ನಾವು ಬೇರೆಯೆಂದು ನೋಡಿಯೇ ಇಲ್ಲ. ಇದು ಕನ್ನಡಿಗರ ವೈಶಾಲ್ಯ ಗುಣ.
ನಾವು ಈಗ ಕನ್ನಡ – ಮಹಾರಾಷ್ಟçಗಳ ಗಡಿ ಸಮಸ್ಯೆಯ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇ ಇಲ್ಲವಾಗಿಸಬಲ್ಲರು ಕನ್ನಡಿಗರು. ನಾಡಿಗೆ ಅವಮಾನವಾದರೆ ನಮಗೆ ಅವಮಾನ. ನುಡಿಗೆ ಅವಮಾನವಾದರೆ ಕೆರಳುತ್ತದೆ. ನಮ್ಮಭಿಮಾನ ನಾಡು ನುಡಿಗೆ ಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಅದಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂ ನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದ ನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಇದು ಪ್ರತಿ ನಿತ್ಯದ ಮಾತು!
ಇನ್ನು ಗಡಿನಾಡಿಗೆ ಸಂಬಂಧಿಸಿದಂತೆ ಮತ್ತೊಂದು ವಿಷಯ ನಾನು ಹೇಳಲೇಬೇಕಾಗಿದೆ. ಮಹಾಜನ್ ವರದಿಯೇ ಅಂತಿಮ ಎಂದು ನಮ್ಮ ನಲ್ಮೆಯ ಕರ್ನಾಟಕ ಸರ್ಕಾರ ಹೇಳಿದೆ.
ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ತೀವ್ರವಾದ ಗಮನವನ್ನು ಕೊಡಬೇಕಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸವಾಗಬೇಕು. ಅಲ್ಲೀಗ ಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದ ವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಇತ್ತ ಕಡೆ ನಮ್ಮ ಪ್ರೀತಿಯ ಸರ್ಕಾರ ಆದ್ಯ ಗಮನ ನೀಡಬೇಕಿದೆ.
ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸು ಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನು ಮೈಸೂರಿನೊಂದಿಗೆ ಸೇರಿಸುವ ವೇಳೆ, ಕಾಸರಗೋಡು ಪ್ರದೇಶವನ್ನು ಕೈಬಿಡಲಾಯಿತು. ಆ ಕಾರಣ ಉದ್ಭವವಾದ ಸಮಸ್ಯೆ ಇದು.
ಭಾಷಾ ಅಲ್ಪಸಂಖ್ಯಾತ ಗುಂಪಿನ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಹೊಣೆ ಪ್ರತಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳದ್ದು. ರಾಷ್ಟçಪತಿಗಳು ಇಂತಹ ಸವಲತ್ತುಗಳನ್ನು ಒದಗಿಸಲು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಎಲ್ಲಾ ರಾಜ್ಯಗಳಲ್ಲೂ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ರಾಷ್ಟçಪತಿಗಳು ನೇಮಿಸಿದ ವಿಶೇಷ ಅಧಿಕಾರಿಯೊಬ್ಬರು ಇರುತ್ತಾರೆ. ಅವರು ರಾಷ್ಟçಪತಿಗಳಿಗೆ ವರದಿ ಸಲ್ಲಿಸುತ್ತಿರುತ್ತಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಿ ಹೇಳುವುದಾದರೆ- ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನ್ಯಾಯವಾಗುತ್ತಿದೆ. ಕಾಸರಗೋಡಿನ ಕನ್ನಡಿಗರು “ಎಂದಿದ್ದರೂ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತೆ” ಎಂಬ ಆಶಾವಾದದಲ್ಲಿದ್ದಾರೆ.
ಈ ಬಗ್ಗೆ ನಮ್ಮ ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಅಲ್ಲಿ ಮಲೆಯಾಳೀಕರಣದ ದಾಳಿ ನಡೆದಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಅವರು ಆ ಕಡೆ ಆದ್ಯ ಗಮನ ಕೊಡುವುದು ಒಳಿತು.
ರಾಜ್ಯದ ಹೊರಭಾಗದ ಗಡಿಯಲ್ಲಿ ಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದು, ನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥಾ ಗ್ರಾಮಗಳಲ್ಲಿ ಕನ್ನಡಿಗರಿಗೆ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡಲು ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆಯುವುದು ಅತ್ಯಗತ್ಯ.
ಇಲ್ಲಿ ನಮ್ಮ ಒಳನಾಡಿನಲ್ಲಿ ಹಿಂದಿನ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ. ಅಂಥ ಮುಚ್ಚಿದ ಶಾಲೆಗಳನ್ನು ನಮ್ಮ ಘನ ಸರ್ಕಾರ ಮತ್ತೆ ತೆರೆದು ಅವುಗಳಿಗೆ ಶೈಕ್ಷಣಿಕವಾಗಿ ಪುನರುಜ್ಜೀವನ ನೀಡುವುದು ಆಡಳಿತದ ಜವಾಬ್ದಾರಿಯುತ ನಡೆಯಾಗುತ್ತದೆ.
ಸಾವಿರದ ಸಮಸ್ಯೆಗಳು ಕನ್ನಡಿಗರನ್ನು ಕಿತ್ತು ತಿನ್ನುತ್ತಿವೆ. ಅದರಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರು ಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು, ಇಲ್ಲವಾದರೆ ಕನ್ನಡ ಕಾರ್ಯಕರ್ತರು ಕನ್ನಡವನ್ನು ಕಲಿಸುತ್ತಾರೆ. ಅವರಿಗೆ ಇಲ್ಲಿಯ ನೆಲ ಬೇಕು; ಇಲ್ಲಿಯ ಜಲ ಬೇಕು. ಇಲ್ಲಿಯ ಸಕಲ ಸಂಪನ್ಮೂಲ ಬೇಕು, ಅದರೆ ಅಂಥವರಿಗೆ ಕನ್ನಡ ಬೇಕಾಗಿಲ್ಲ! ಹೀಗೆ ಹೇಳಿದರೆ ಹೇಗೆ? ಕನ್ನಡಿಗರ ಜೊತೆ ಸ್ನೇಹ ಪ್ರೀತಿ ವಿಶ್ವಾಸಗಳಿಂದ ಕನ್ನಡೇತರರು ಒಂದಾಗಿ ಸೌಹಾರ್ದದಿಂದ ಬಾಳಿ ಬದುಕಬೇಕು. ಐ.ಎ.ಎಸ್. ಮುಂತಾದ ಹಿರಿಯ ಅಧಿಕಾರಿಗಳು ಕನ್ನಡ ಕಲಿಯಬೇಕು. ಸರ್ಕಾರ ಅಂಥವರಿಗೆ ಮೂರು ತಿಂಗಳ ಅಥವಾ ಆರು ತಿಂಗಳ “ಕನ್ನಡ ಕಲಿ-ನಲಿ” ಎಂಬ ಪ್ರಶಿಕ್ಷಣ ಕೊಡಬೇಕು.
ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರ ಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆಯನ್ನು ಕೊಡಬೇಕು. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಅದು ಮೊದಲು! ಆ ಮೇಲೆ – ಉಳಿದುದೆಲ್ಲಾ! ಮಗು ಚೆನ್ನಾಗಿ ವಿಷಯ ಗ್ರಹಿಸಬೇಕಾದರೆ ಕನ್ನಡ ಅತಿ ಮುಖ್ಯ. ಗ್ರಹಿಸಿದ ವಿಷಯವನ್ನು ಬರೆಯಬೇಕಾದರೂ ಅಷ್ಟೇ.
ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ನಮ್ಮ ನಲ್ಮೆಯ ಸರ್ಕಾರ.
ಸಿರಿಗಂಧದ ಕನ್ನಡ
ಯುಗ ಯುಗದಿಂದಲೂ ಹರಿದು ಬಂದಿದೆ
ಜನಪದರ ಕಾಲದಿಂದ ಕಂಗೊಳಿಸುತ ಬಂದಿದೆ
ಕನ್ನಡದ ಪಾವನ ತೀರ್ಥವಿದು;
ವಾಗರ್ಥದ ಹಿರಿಮೆಯಿದು
ನಮ್ಮ ಕನ್ನಡ
ಅಮ್ಮನ ಅಕ್ಕರೆ ಮಾತು
ನಲ್ಮೆ ಕನ್ನಡ!
ಕವಿಗಳು ಬರೆದ ಕಾವ್ಯದ ಕನ್ನಡ
ಹೆಜ್ಜೆ ಹೆಜ್ಜೆ ಗೆಜ್ಜೆ ಪಲುಕು ನೃತ್ಯದ ಕನ್ನಡ
ಸೊಬಗಿನ ಸೌಂದರ್ಯದ ಶಿಲ್ಪಿ ಸಿರಿ ಕನ್ನಡ
ಜನಮನದ ತನು ನುಡಿದ ಸಿರಿಗಂಧದ ಕನ್ನಡ
ಕನ್ನಡ ಕನ್ನಡ ಹಾಲ್ಜೇನು ಕನ್ನಡ!
ಕನ್ನಡ ಭಾಷೆಯ ಸಮಕಾಲೀನ ಸವಾಲುಗಳು ಮತ್ತು ಭವಿತವ್ಯದ ಹಾದಿ ಕನ್ನಡ ಭಾಷೆಯ ಅನನ್ಯತೆ, ಅಸ್ಮಿತೆಯ ಬಗ್ಗೆ ನಾನು ಒಬ್ಬ ಪ್ರಾಚಾರ್ಯನಾಗಿ, ಭಾಷಾ ವಿದ್ವಾಂಸನಾಗಿ ಸಾಕಷ್ಟು ವಿಷಯಗಳನ್ನು ನಿಮ್ಮ ಮುಂದೆ ಇದಾಗಲೇ ಹಂಚಿಕೊಂಡಿದ್ದೇನೆ. ಕನ್ನಡ ಭಾಷೆಯು ಈ ನಾಡಿನ ಜನಮನದ ಭಾಷೆಯಾಗಿ, ಆಡಳಿತ ಭಾಷೆಯಾಗಿ ಸೂರ್ಯ, ಚಂದ್ರರಿರುವ ತನಕವೂ ಇರುತ್ತದೆ ಎನ್ನುವ ದಿಟದ ಭಾವನೆ ನನ್ನದು ಆದರೆ, ಅಷ್ಟು ಮಾತ್ರವೇ ಸಾಕೆ ಎನ್ನುವ ಪ್ರಶ್ನೆ ಇಂದು ನಮ್ಮ ಮುಂದಿದೆ.
ನಮ್ಮ ಜೀವನದ ಜೀವ ಜೀವಾಳ ಕನ್ನಡ
ಯಾವ ಭಾಷೆಗೂ ಕಡಿಮೆಯಿಲ್ಲ
ನಮ್ಮ ನಲ್ಮೆ ಕನ್ನಡ!
ಪರಿಸರದ ಕಂಪಿಗೆ, ನುಡಿನುಡಿಯ ಇಂಪಿಗೆ,
ಮನದಾಳದ ತಂಪಿಗೆ ಆಡಿ ಶುಭ ಕನ್ನಡ!
ಅರಿವಿನ ಪರಿಧಿಯ ವಿಸ್ತರಣೆಗೆ
ಬದುಕಿನ ನೆಮ್ಮದಿ ಸಂಸಾರ ಸಾರಕ್ಕೆ
ಜೀವನ ಸೌಂದರ್ಯದ ಕಲೆಯ ಸಂಸ್ಕಾರಕ್ಕೆ
ಹರಿಯಲಿ ಕನ್ನಡ ವಾಹಿನಿ
ಜಗದ ಮೂಲೆ ಮೂಲೆಗೂ ಹಾಯಲಿ
ಕನ್ನಡದ ಅನರ್ಘ್ಯ ವಾಣಿ
ಪಂಪನ ರನ್ನನ ಜನ್ನನ ಹರಿಹರ ರಾಘವಾಂಕರ
ಶರಣರ ಕೀರ್ತನಕಾರರ ಕುಮಾರವ್ಯಾಸ ಸರ್ವಜ್ಞರ
ಅಮೃತ ವಾಹಿನಿ ಕನ್ನಡದ ಅಮೃತ ವಾಹಿನಿ
ಭಾಷೆ ಎನ್ನುವುದು ಇಂದು ಭಾವಕೋಶದ, ನೆಲ ಜಲದ, ಸಾಮುದಾಯಿಕ ಸಂಸ್ಕೃತಿಯ ದನಿಯಾಗಿ ಮಾತ್ರವೇ ಉಳಿದಿಲ್ಲ. ಜಾಗತೀಕರಣದ ಫಲವಾಗಿ ರೂಪುಗೊಂಡಿರುವ ಇಂದಿನ ಅರ್ಥವ್ಯವಸ್ಥೆ ಮತ್ತು ತಂತ್ರಜ್ಞಾನಗಳು ದೇಶಭಾಷೆಗಳ ಗಡಿಗಳನ್ನು ಮೀರಿ ಎಲ್ಲರನ್ನೂ, ಎಲ್ಲವನ್ನೂ ಆವರಿಸಿಕೊಂಡಿವೆ. ಹಾಗಾಗಿ, ಸಹಜವಾಗಿಯೇ ಭಾಷೆ ಎನ್ನುವುದು ವ್ಯಾವಹಾರಿಕ ಸಾಧನವಾಗಿ, ದುಡಿಮೆಯ ಮಾರ್ಗವಾಗಿ ತನ್ನ ಸ್ವರೂಪವನ್ನು ಹಿಗ್ಗಿಸಿಕೊಂಡಿದೆ. ಸಾಮುದಾಯಿಕ ಬದುಕಿನಿಂದ ದೂರವಾಗಿ ವ್ಯಕ್ತಿ ಕೇಂದ್ರಿತ ಬದುಕು ಮುನ್ನೆಲೆಗೆ ಬಂದಿರುವ ಇಂದಿನ ವಾಸ್ತವದ ಜಗತ್ತಿನಲ್ಲಿ ‘ಅನ್ನ ನೀಡುವ’ ಭಾಷೆಯ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು.
ನಗರಗಳು, ಗ್ರಾಮಗಳು ಎನ್ನುವ ಭೇದವಿಲ್ಲದೆ ನಮ್ಮನ್ನು ಆವರಿಸಿರುವ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಹಿಂದಿನ ಹಂಬಲವೂ ಇದೇ ಅಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಅಥವಾ ಭಾರತೀಯ ಭಾಷೆಗಳು ಮಾತ್ರವೇ ಅಲ್ಲ, ಜಾಗತಿಕವಾಗಿ ಎಲ್ಲ ಅಭಿವೃದ್ಧಿಶೀಲ ದೇಶಗಳಲ್ಲಿಯೂ ‘ಅನ್ನದ ಭಾಷೆ’ಯಾಗಿ ಅನ್ಯ ಭಾಷೆಯೊಂದಕ್ಕೆ ಮುಖ ಮಾಡಿರುವ ವಾಸ್ತವ ನಮ್ಮ ಮುಂದೆ ಕಂಡುಬರುತ್ತದೆ. ಇಪ್ಪತ್ತೊಂದನೆಯ ಶತಮಾನದ, ಎರಡನೆಯ ದಶಕದಲ್ಲಿ ನಿಂತು ಕನ್ನಡದ ನನ್ನ ಬಂಧುಬಾಂಧವರನ್ನು ಉದ್ದೇಶಿಸುವಾಗ ನನಗೆ ಇಂದಿನ ಕಟುವಾಸ್ತವಗಳಿಗೆ ಬೆನ್ನು ಹಾಕುವ ಮನಸ್ಸಿಲ್ಲ. ಏಳೂವರೆ ದಶಕವನ್ನು ಮೀರಿದ ನನ್ನ ಬದುಕಿನ ಅನುಭವಕ್ಕೆ ಇಪ್ಪತ್ತು-ಮೂವತ್ತರ ವಯೋಮಾನದ ಇಂದಿನ ಯುವಕ-ಯುವತಿಯರ ತಲ್ಲಣಗಳ ಅರಿವಿಲ್ಲದೇ ಹೋದೀತೇ? ನನ್ನ ಮಕ್ಕಳು, ಮೊಮ್ಮಕ್ಕಳು, ಅವರನ್ನೂ ಮೀರಿದ ಸಾವಿರಾರು ಸಂಖ್ಯೆಯ ಹಿರಿ, ಕಿರಿಯ ವಿದ್ಯಾರ್ಥಿಗಳ ತಲ್ಲಣಗಳಿಗೆ ಮುಖಾಮುಖಿ ಯಾಗುತ್ತಲೇ ಬಂದವನು ನಾನು.
ಹಾಗಾಗಿಯೇ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿರುವ, ಜಗತ್ತಿನ ಶ್ರೇಷ್ಠ ಸಂಸ್ಕೃತಿ, ಚಿಂತನೆಯನ್ನು ಪೊರೆದಿರುವ ಈ ನನ್ನ ಭಾಷೆ ಕನ್ನಡ ಮುಂದಿನ ದಿನಗಳಲ್ಲಿಯೂ ತನ್ನ ಪಾರಮ್ಯವನ್ನು ಮೆರೆಯಬೇಕೆಂದರೆ ಅದು ಮನೆ, ಮನದ ಭಾಷೆಯಾಗಿ ಉಳಿಯಬೇಕು. ಜೊತೆಗೆ ಕನ್ನಡಿಗರ ಭವ್ಯ ಭವಿತವ್ಯದ ಭಾಷೆಯೂ ಆಗಬೇಕು. ಕನ್ನಡಿಗರಿಗೆ ಅನ್ನವಿಕ್ಕುವ ಭಾಷೆಯಾಗಿ, ಕರುನಾಡಿನ ಭವಿತವ್ಯವನ್ನು ಮುನ್ನಡೆಸುವ ಕಹಳೆಯಾಗಿ ಕಂಗೊಳಿಸಬೇಕು. ಹೃದಯಕ್ಕೆ ಒಂದು ಭಾಷೆ, ಬದುಕಲಿಕ್ಕೆ, ದುಡಿಮೆಗೆ ಇನ್ನೊಂದು ಭಾಷೆ ಎನ್ನುವ ಇಂದಿನ ಇಬ್ಬಂದಿತನದ ಪರಿಸ್ಥಿತಿಯನ್ನು ತೊಡೆದು ನಲಿಯಲು, ಕಲಿಯಲು, ದುಡಿಯಲು, ಬದುಕಲು, ಬಾಳಲು, ನಮ್ಮದೆಲ್ಲವನ್ನೂ ಜಗತ್ತಿನೊಂದಿಗೆ ಹಂಚಿಕೊಳ್ಳಲು, ಜಗತ್ತಿನ ಎಲ್ಲದನ್ನೂ ನಮ್ಮೊಳಗೆ ತಂದುಕೊಳ್ಳಲು ಇರುವ ಸಶಕ್ತ, ಸಮರ್ಥ ಭಾಷೆಯಾಗಿ ಕನ್ನಡ ರಾರಾಜಿಸಬೇಕು. ನನ್ನ ಕನ್ನಡ ನಾಲ್ಕು ಗೋಡೆಗಳ ನಡುವೆ ಉಳಿಯುವ ಭಾಷೆ ಎಂದೂ ಆಗಿರಲಿಲ್ಲ. ಹಾಗೆ ಅದು ಇಂದೂ, ಮುಂದೂ, ಎಂದೂ ಆಗಬಾರದು ಕೂಡ. ನನ್ನ ಕನ್ನಡ ಜಗತ್ತಿನ ಅಷ್ಟೂ ತಿಳಿವನ್ನು ನನಗೆ ಉಣಬಡಿಸುವ ಜ್ಞಾನದ, ಕೌಶಲದ ಭಾಷೆಯಾಗಿ ಈ ಹಿಂದೆಯೂ ವಿಜೃಂಭಿಸಿತ್ತು, ಇಂದೂ, ಮುಂದೂ ಅದು ಹಾಗೆಯೇ ವಿಜೃಂಭಿಸಬೇಕು. ಕನ್ನಡವೆನ್ನುವುದು ಸಭ್ಯತೆಯ, ಸಜ್ಜನಿಕೆಯ ಗುರುತು ಮಾತ್ರವೇ ಅಲ್ಲ, ಅದು ಮಹತ್ವಾಕಾಂಕ್ಷೆಯ, ಮಹಾನ್ ಅನ್ವೇಷಣೆಯ ಭಾಷೆಯೂ ಕೂಡ ಎನ್ನುವುದನ್ನು ನನ್ನ ಜನ ಮರೆಯಬಾರದು.
ಜ್ಞಾನಕೋಶದ ಭಾಷೆಯಾಗಿ ಕನ್ನಡ ಕನ್ನಡವೆನ್ನುವುದು ಕಪ್ಪೆಚಿಪ್ಪಿನಲ್ಲಿ ಅಡಗಿ ಕೂರಬೇಕಾದ ಭಾಷೆಯಲ್ಲ. ನನ್ನ ಗೆಳೆಯರೇ, ನನ್ನ ಯುವ ಗೆಳೆಯರೇ… ಅದು ಮಹತ್ವಾಕಾಂಕ್ಷೆಯ ನೂಲಿನಲ್ಲಿ ತನ್ನ ಸುತ್ತ ಗೂಡುಕಟ್ಟಿಕೊಂಡು ಬಣ್ಣ ಬಣ್ಣದ ರೆಕ್ಕೆಗಳನ್ನು ಬಲಿಸಿಕೊಂಡು ಜಗತ್ತನ್ನು ನಿಬ್ಬೆರಗಾಗಿಸುವ ಸಾಮರ್ಥ್ಯವಿರುವ ಮಹಾನ್ ಭಾಷೆ, ಮೇರು ಭಾಷೆ ಕನ್ನಡ. ಹಾಗಾಗಿಯೇ, ಇದು ಸತ್ತಂತಿಹರನ್ನೂ ಬಡಿದೆಚ್ಚರಿಸುವ ಭಾಷೆ ಎನ್ನುವ ಕವಿವಾಣಿಯನ್ನು ಮರೆಯದಿರೋಣ.
ಈ ಕರ್ನಾಟ ದೇಶದೊಳ್ ಆಳುವ ಸರ್ಕಾರಗಳು ಯಾವುದೇ ಇರಲಿ, ಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿ, ಕನ್ನಡವೆಂಬುದು ಕನ್ನಡಿಗರ ಅನ್ನದ ಹಕ್ಕಿನ ಭಾಷೆ ಎನ್ನುವುದನ್ನು ನಾವು ಮರೆಯಬಾರದು. ಆಳುವ ಸರ್ಕಾರಗಳು ಯಾವುದೇ ಇರಲಿ, ಯಾವುದೇ ಬರಲಿ ಅವುಗಳ ಮುಂದೆ ನನ್ನ ಬಿನ್ನಹವೊಂದೇ. “ಕನ್ನಡವನ್ನು ಬರಿದೇ ಭಾವಕೋಶದ ಭಾಷೆಯಾಗಿ ಮಾತ್ರವೇ ಕಾಣಬೇಡಿ, ಅದು ಜ್ಞಾನಕೋಶದ ಭಾಷೆ, ಕೌಶಲದ ಭಾಷೆ, ಕನ್ನಡಿಗರ ಮಹತ್ವಾಕಾಂಕ್ಷೆಯ ಭಾಷೆ, ಕ್ರಿಯಾಶೀಲತೆ, ಉದ್ಯೋಗಶೀಲತೆಯ ಭಾಷೆ ಎನ್ನುವುದನ್ನು ಮರೆಯದಿರಿ. ನನ್ನ ಜನರಿಗೆ ಅವರಾಡುವ ಭಾಷೆಯಲ್ಲಿಯೇ ಜಗತ್ತಿನ ಜ್ಞಾನವನ್ನು ಕೊಡಲು ಪಣ ತೊಡಿ.”
ಇಲ್ಲಿ ಒಂದು ವಿಚಾರವನ್ನು ಸರಳವಾಗಿ, ನೇರವಾಗಿ ಹೇಳುತ್ತೇನೆ ಕೇಳಿ: ನಮ್ಮ ಜನತೆ, ಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂ ಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್, ಜಪಾನೀಸ್, ಸ್ಪಾö್ಯನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನು ಅರೆಬರೆಯಾಗಿ ಕಲಿತು, ಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋ ನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರು ವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ?
ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು? ಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂ ತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?
ಮಾನ್ಯ ಮುಖ್ಯಮಂತ್ರಿಗಳೇ, ಇಂದಿನ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾನು ಓರ್ವ ಸಾಹಿತಿಯಾಗಿ ಆಗಲಿ, ಓರ್ವ ಕನ್ನಡ ಭಾಷಾ ಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ, ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನು ಅರಿತವನಾಗಿ ಹೇಳುತ್ತಿದ್ದೇನೆ. ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎನ್ನುವ ಪಣ ತೊಡಿ.
ನಮ್ಮ ಯುವಪೀಳಿಗೆ ತಮ್ಮ ಕಿವಿಗಳಿಗೆ ಎಂದೂ ಬಿದ್ದೇ ಇರದ, ಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನು ಪಡೆಯಲಾಗುವುದಿಲ್ಲವೇ? ಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕೊಡಲಾಗುತ್ತಿಲ್ಲ? ನಮ್ಮ ವಿಶ್ವವಿದ್ಯಾಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತು, ಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆ, ನಾವು ಕೇವಲ ಎಡ, ಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನು ಸೀಮಿತಗೊಳಿಸಿಕೊಳ್ಳಬೇಕೆ? ಕನ್ನಡವನ್ನು ಸಮರ್ಥ ಜ್ಞಾನದಾಯಿನಿ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ?
ನಾನು ಇಲ್ಲಿ ಯಾವುದೇ ಒಂದು ಪಕ್ಷ, ಸಿದ್ಧಾಂತದ ಪರವಾಗಿ ಮಾತನಾಡಲು ಬಂದು ನಿಂತಿಲ್ಲ. ಸಮಷ್ಟಿ ಪ್ರಜ್ಞೆಯನ್ನು ಉಸಿರಾಗಿ ಕೊಟ್ಟ ಕನ್ನಡವೇ ನನ್ನ ಸಿದ್ಧಾಂತ, ನಮ್ಮ ನಡುವಿನ ಎಲ್ಲ ವಿಚಾರಭೇದಗಳನ್ನು ಬದಿಗಿರಿಸೋಣ, ನಾನು ಕೇಳುವ ಪ್ರಶ್ನೆ ಒಂದೇ, ಕನ್ನಡಿಗರಾದ ನಮಗೆ ನಮ್ಮ ಮುಂದಿನ ಪೀಳಿಗೆಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವಿಲ್ಲವೇ? ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಸ್ಪೇನ್, ಚೀನಾ, ಫ್ರಾನ್ಸ್, ರಷಿಯಾ ಮುಂತಾದ ಅನೇಕ ದೇಶಗಳಲ್ಲಿ ಇದು ಸಾಧ್ಯವಿದ್ದ ಮೇಲೆ ಏಳು ಕೋಟಿ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಾಮರ್ಥ್ಯ, ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗಿಲ್ಲವೇ? ಅಗಾಧ ಪ್ರತಿಭೆ, ಅನ್ವೇಷಣೆ, ಕುತೂಹಲವನ್ನುಳ್ಳ ನನ್ನ ಜನ ಭಾಷೆಯ ಕಾರಣವೊಂದರಿಂದಾಗಿಯೇ ಶುದ್ಧ ವಿಜ್ಞಾನ, ವೃತ್ತಿಪರ ಶಿಕ್ಷಣಗಳಿಂದ ದೂರ ಉಳಿಯಬೇಕೆ? ಕನ್ನಡದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುವುದು ನಮಗೆ ಅಪಹಾಸ್ಯದ ವಿಷಯವೇ? ಆಳುವ ಸರ್ಕಾರಕ್ಕೆ, ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿಗೆ ನಾನು ಹೇಳುವುದೊಂದೇ ಕನ್ನಡವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿ ನೀವು ರೂಪಿಸದೆ ಹೋದರೆ ನೀವು ಈ ನಾಡಿಗೆ, ಇಲ್ಲಿನ ಜನತೆಗೆ ಅಖಂಡ ದ್ರೋಹ ಬಗೆದಂತೆ.
ಕನ್ನಡದಲ್ಲಿ ಎಷ್ಟೆಲ್ಲಾ ಗಹನ, ವಿಚಾರಪೂರ್ಣ ವಿಷಯಗಳನ್ನು ಹತ್ತಾರು ಶತಮಾನಗಳ ಹಿಂದೆಯೇ ಬೆಡಗಿನ, ಒನಪಿನ, ಒಡಪಿನ ಭಾಷೆಯಲ್ಲಿ ಕಟ್ಟಿಕೊಡಲಾಗಿದೆ. ತತ್ವ, ಅನುಭಾವ, ಅಧ್ಯಾತ್ಮವನ್ನು ಒಂದು ಭಾಷೆ ಸರಳವಾಗಿ, ಸುಲಲಿತವಾಗಿ, ಸಿಪ್ಪೆ ಸುಲಿದಂತೆ ಹೇಳಬಲ್ಲುದಾದರೆ ಅದು ವಿಜ್ಞಾನ, ತಂತ್ರಜ್ಞಾನಗಳ ವಿಷಯವನ್ನೂ ಅಷ್ಟೇ ಸರಳವಾಗಿ, ಸುಲಲಿತವಾಗಿ ಹೇಳಬಲ್ಲರು ಎಂದೇ ಅರ್ಥ. ತಿಳಿಗನ್ನಡವೆಂಬುದು ತಿಳಿವಿನಗನ್ನಡವೂ, ಶುದ್ಧ, ಪರಿಶುದ್ಧ ಜ್ಞಾನವನ್ನು ಅಭಿವ್ಯಕ್ತಿಸಬಲ್ಲ ಸ್ಫಟಿಕದ ಶಲಾಕೆಯ ಕನ್ನಡವೂ ಹೌದು, ಕನ್ನಡವೆಂಬುದು ಭಾವಕೋಶದ ಭಾಷೆಯಾಗಿ ಮಾತ್ರವಲ್ಲದೆ ಜ್ಞಾನ, ಕ್ರಿಯಾಶೀಲತೆ, ಅನ್ವೇಷಣೆಯ ಭಾಷೆಯಾಗಿಯೂ ಸಮರ್ಥವಾಗಿ ಎದೆಯುಬ್ಬಿಸಬಲ್ಲದು, ಆದರೆ, ನಾವು ಅದನ್ನು ಹಾಗೆ ನಿರೂಪಿಸುವಲ್ಲಿ ಸೋತಿದ್ದೇವೆ.
ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿ ರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್‌ನಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯುತ್ತೇನೆ ಎನ್ನುವವರು ಅದರಲ್ಲಿಯೇ ಪಡೆಯಲಿ, ಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದ ಮತ್ತಾವುದೋ ಶಿಕ್ಷಣವನ್ನು ಪಡೆಯು ವಂತಾಗಬಾರದು. ವೃತ್ತಿಪರ, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ನೀಡುವುದು ಒಂದು ವ್ಯರ್ಥ ಕಸರತ್ತು ಎಂದು ಹಲವರು ಟೀಕೆ ಮಾಡಬಹುದು. ಆದರೆ, ಎಲ್ಲ ಮಹತ್ವಾಕಾಂಕ್ಷೆಗಳನ್ನೂ ಜಗತ್ತು ವ್ಯರ್ಥ ಕಸರತ್ತು ಎಂದೇ ಕರೆದಿದೆ ಎನ್ನುವುದನ್ನು ವಿದ್ವಜ್ಜನರಿಗೆ ನಾನು ಜ್ಞಾಪಿಸಬೇಕಿಲ್ಲ. ಸಮಕಾಲೀನ ಜಗತ್ತಿನಲ್ಲಿ ಭಾಷೆಯೊಂದು ತನ್ನ ಪಾರಮ್ಯತೆಯನ್ನು ಮೆರೆಯಬೇಕೆಂದರೆ ಅದು ಮನೆಯಂಗಳದ ಭಾಷೆಯಾಗಿ, ದೈನಂದಿನ ವ್ಯಾವಹಾರಿಕ ಭಾಷೆಯಾಗಿ ಮಾತ್ರವೇ ಉಳಿದರೆ ಸಾಲದು. ಅದು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿಯೂ ವಿಕಸಿತಗೊಳ್ಳಬೇಕು. ಹಾಗಾಗಿ, ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ರೂಪಿಸಲು ನಾವು ಇಂದು ಸ್ಪಷ್ಟ ಕಾರ್ಯಸೂಚಿಯೊಂದನ್ನು ರೂಪಿಸಿಕೊಂಡು ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕಿದೆ. ಅಂತಿಮ ಪದವಿ ತರಗತಿಗಳಲ್ಲಿ ಸಾಮಾನ್ಯ ಕನ್ನಡ ಪಠ್ಯ ಕಲಿಕೆಯನ್ನು ಮುಂದುವರೆಸುವಂತಾಗಬೇಕು. ಇದರಿಂದಾಗಿ ಮತ್ತಷ್ಟು ಕನ್ನಡದ ಅಧ್ಯಾಪಕರಿಗೆ ಉದ್ಯೋಗದ ಅವಕಾಶಗಳು ಸಿಕ್ಕಂತೆ ಆಗುತ್ತದೆ.
ಈ ನಿಟ್ಟಿನಲ್ಲಿ ಮೊದಲಿಗೆ ನಾವು ಪರಿಹರಿಸಿಕೊಳ್ಳಬೇಕಾದ ವಿಷಯವೆಂದರೆ, ವೃತ್ತಿಪರ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ಶಿಕ್ಷಣ ಮಾಧ್ಯಮ ನೀತಿಯಲ್ಲಿ ಏನಾದರೂ ನಿಯಂತ್ರಣವಿದೆಯೇ ಎನ್ನುವುದನ್ನು. ನನಗೆ ತಿಳಿದಂತೆ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಓಚಿಣioಟಿಚಿಟ ಒeಜiಛಿಚಿಟ ಅommissioಟಿ) ನಿಯಮಾವಳಿ ಇದೆ. ಒಂದು ವೇಳೆ ಇಂತಹ ನಿಯಂತ್ರಣಗಳಿದ್ದರೆ ಅವು ಕನ್ನಡವನ್ನು ಮಾತ್ರವೇ ಅಲ್ಲ ಯಾವುದೇ ಭಾರತೀಯ ಭಾಷೆಯ ಮಹತ್ವಾಕಾಂಕ್ಷೆಯನ್ನು ಚಿವುಟಿ ಹಾಕುವಂಥದ್ದು. ಇಂತಹ ನಿಯಮಗಳು, ನಿಯಂತ್ರಣಗಳನ್ನು ನಾವು ರಾಜಕೀಯ ಇಚ್ಛಾಶಕ್ತಿಯಿಂದಲೇ ಪರಿಹರಿಸಿಕೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಇಂತಹ ನಿಯಂತ್ರಣ ಗಳನ್ನು ನೆಪವಾಗಿರಿಸಿಕೊಂಡು ನಮ್ಮ ಗುರಿಯಿಂದ ಹಿಂದೆಗೆಯಬಾರದು.
ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು. ಇದಕ್ಕಾಗಿ `ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ಯೊಂದನ್ನು ಮೊದಲು ರಾಜ್ಯ ಸರ್ಕಾರ ರಚಿಸಬೇಕು, ಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳು, ಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತç, ವೈದ್ಯಕೀಯ, ಗಣಿತಶಾಸ್ತç, ಅರ್ಥಶಾಸ್ತç, ಮಾನವಿಕ ಶಾಸ್ತçಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನು ಮುನ್ನೆಲೆಗೆ ತರಬೇಕು. ಅವರನ್ನು ಮುಂದಿರಿಸಿಕೊಂಡು ಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸಲು, ಕಲಿಸಲು ಗಟ್ಟಿಯಾದ ತಳಪಾಯ ಸೃಷ್ಟಿಸಬೇಕು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡ, ಕಂಗ್ಲಿಷ್ ಪದಗಳನ್ನು ರೂಪಿಸುವುದರೊಟ್ಟಿಗೆ ಇವುಗಳಲ್ಲಿ ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಒಂದು ‘ಸಮಗ್ರ ಪಾರಿಭಾಷಿಕ ಪದಕೋಶ’ವನ್ನು (Woಡಿಜ ಅoಡಿಠಿus) ರೂಪಿಸಬೇಕು.
ಈ ಹಿಂದೆ, ಮೈಸೂರು ವಿಶ್ವವಿದ್ಯಾಲಯವು ವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂತಹ ಪ್ರಯತ್ನಕ್ಕೆ ಚಾಲನೆ ನೀಡಿತ್ತು. ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಪದವಿಪೂರ್ವ ಹಂತದಲ್ಲಿ ವಿಜ್ಞಾನದ ವಿಷಯ ಪುಸ್ತಕಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕೈ ಹಾಕಿತ್ತು. ಆದರೆ, ಇಂತಹ ಕೆಲಸಗಳು ಒಂದಿಲ್ಲೊಂದು ಕಾರಣದಿಂದಾಗಿ ಪ್ರಾಯೋಗಿಕ ಹಂತಕ್ಕೆ ಮಾತ್ರವೇ ಸೀಮಿತಗೊಂಡವು. ನಿರಂತರವಾಗಿ ಮುಂದುವರೆಯಲಿಲ್ಲ. ಹಾಗಾಗಿ, ಈ ಬಾರಿ ಮೊದಲಿಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಒಂದು ‘ಕನ್ನಡ ಸಮಗ್ರ ಪಾರಿಭಾಷಿಕ ಶಬ್ದಕೋಶ’ವನ್ನು (Woಡಿಜ ಅoಡಿಠಿus) ನಾವು ನಿರ್ಮಿಸಬೇಕು. ತಮಿಳುನಾಡಿನಲ್ಲಿ ಕೆಲ ವರ್ಷದ ಹಿಂದೆ ಅಲ್ಲಿನ ಸರ್ಕಾರ “ಸೊರ್ಕುವÊ” (Soಡಿಞuvಚಿi – ಕನ್ನಡದಲ್ಲಿ ಶಬ್ದ ಭಂಡಾರ ಎನ್ನುವುದು ಸಮೀಪದ ಅರ್ಥ) ಎನ್ನುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲ ಉದ್ದೇಶ ವಿಭಿನ್ನ ಜ್ಞಾನಶಿಸ್ತುಗಳಲ್ಲಿನ ಪಾರಿಭಾಷಿಕ ಪದಗಳಿಗೆ ತಮಿಳು ಸಂವಾದಿ ಪದಗಳನ್ನು ಹೆಕ್ಕುವುದು, ರೂಪಿಸುವುದು, ಕಟ್ಟುವುದಾಗಿದೆ. ಬಳಕೆಯಿಂದ ಮರೆತು ಹೋಗಿರುವ ಅದರ ಇಂದಿನ ತಾಂತ್ರಿಕ, ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಬಲ್ಲ ಪದಗಳನ್ನು ಹೆಕ್ಕುವುದು ಯೋಜನೆಯ ಒಂದು ಭಾಗವಾದರೆ, ವಿಜ್ಞಾನ, ತಂತ್ರಜ್ಞಾನಗಳು ಬೆಳವಣಿಗೆಯಾದಂತೆ ಅದಕ್ಕೆ ಅನುಗುಣವಾಗಿ ಮೂಡುವ ಪಾರಿಭಾಷಿಕ ಪದಗಳು ಹಾಗೂ ಆಧುನಿಕ ಸಂಸ್ಕೃತಿ, ನಡೆನುಡಿಯಿಂದ ಜಾಗತಿಕ ಸ್ತರದಲ್ಲಿ ಮೂಡುವ ಹೊಸಪದಗಳಿಗೆ, ಅಗತ್ಯಗಳಿಗೆ ಸಂವಾದಿಯಾಗಿ ನವೀನ ಪದಗಳನ್ನು ಕಟ್ಟುವುದು ಇದರ ಮತ್ತೊಂದು ಕೆಲಸ. ಈ ಯೋಜನೆಗೆ ಚಾಲನೆ ದೊರೆತ ಕೆಲ ವರ್ಷಗಳಲ್ಲಿಯೇ ಹತ್ತಾರು ಸಾವಿರ ಪದಗಳನ್ನು ಹೆಕ್ಕಿರುವ, ಕಟ್ಟಿರುವ ಉದಾಹರಣೆ ಅಲ್ಲಿನದು. ಇಂತಹ ಭಂಡಾರವೊಂದು ಕನ್ನಡದಲ್ಲಿ, ಅದೂ ಅಂತರ್ಜಾಲದ ಜಗತ್ತಿನಲ್ಲಿ ಅತ್ಯಗತ್ಯವಾಗಿ ಆಗಬೇಕು. ಅದರ ತಾಂತ್ರಿಕ ಅಂಶಗಳು ಹೇಗಿರಬೇಕು ಎನ್ನುವ ವಿಸ್ಮೃತ ಚರ್ಚೆಯನ್ನು ನಾನು ಇಲ್ಲಿ ಮುಂದುವರೆಸಲು ಹೋಗುವುದಿಲ್ಲ. ಅದು ಹೆಚ್ಚು ಅಕೆಡೆಮಿಕ್ ಆದ ಚರ್ಚೆ. ಆದರೆ, ಅಂತಹ ಕೆಲಸ ಅಗತ್ಯವಾಗಿ ಆಗಬೇಕಿದೆ.
ಮುಂದುವರೆದು, ಕನ್ನಡದಲ್ಲಿ ಉನ್ನತ, ವೃತ್ತಿಪರ ಶಿಕ್ಷಣ ನೀಡುವ ವಿಚಾರವಾಗಿ ಆರಂಭಿಕ ವರ್ಷಗಳಲ್ಲಿ ಪ್ರಸ್ತುತ ಇರುವ ಆಯ್ದ ಕೆಲ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ, ವಿಜ್ಞಾನ, ಇಂಜಿನಿಯರಿಂಗ್ ಕಾಲೇಜುಗಳ ಕಟ್ಟಡ, ಮೂಲಸೌಕರ್ಯವನ್ನೇ ಬಳಸಿಕೊಂಡು ಅಲ್ಲಿನ ಸಿಬ್ಬಂದಿ ಹಾಗೂ ಪಠ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅಣಿಗೊಳಿಸುವ ಮೂಲಕ ಹಾಗೂ ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬ್ಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತçಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಒಂದು ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ, ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್ಗಳನ್ನು, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು. ಈ ಮಕ್ಕಳಿಗೆ ವ್ಯಾವಹಾರಿಕ ಬಳಕೆಗೆ ಅಗತ್ಯವಾದ ರೀತಿಯಲ್ಲಿ, ಯಾವುದೇ ಕೀಳರಿಮೆಗೆ ಅವಕಾಶವಿಲ್ಲದಂತೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ, ಸಂವಹನ ಮಾಧ್ಯಮವಾಗಿ ಕಲಿಸಿದರೆ ಸಾಕು.
ಹೀಗೆ ಕಲಿತು ಪದವೀಧರ, ಸ್ನಾತಕೋತ್ತರ ಪದವೀಧರರಾದ ಮಕ್ಕಳಿಗೆ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ವಿಶೇಷ ಪ್ರಾಶಸ್ತö್ಯವನ್ನು ನೀಡಬೇಕು. ಅವರ ಸೇವೆಯನ್ನು ಈ ನಾಡಿನ ಮೂಲೆಮೂಲೆಗಳಿಗೆ ಲಭ್ಯವಾಗುವಂತೆ ಮಾಡಬೇಕು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿ, ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದವರು ಇವರು ಎಂದು ಈ ನಾಡಿನ ಜನ ಇವರನ್ನು ಹೆಮ್ಮೆಯಿಂದ ಗುರುತಿಸುವಂತಾಗಬೇಕು.
ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ಶೈಕ್ಷಣಿಕ ಸಂಪನ್ಮೂಲವನ್ನು ವಿಫುಲವಾಗಿ ಕನ್ನಡದಲ್ಲಿಯೇ ಪಸರಿಸುವ ಪ್ರಯತ್ನಗಳು ಶ್ಲಾಘನಾರ್ಹವಾಗಿ ನಡೆಯುತ್ತಿವೆ. ಆದರೆ, ಇದೆಲ್ಲವೂ ಖಾಸಗಿಯಾಗಿ ನಡೆಯುತ್ತಿರುವ ಪ್ರಯತ್ನಗಳು, ಕೋವಿಡ್ ಕಾಲಘಟ್ಟದಲ್ಲಿಯಂತೂ ಸಾವಿರಾರು ಸಂಖ್ಯೆಯಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಿಂದ ಯೂಟ್ಯೂಬ್‌ನಂತಹ ಸಾಮಾಜಿಕಜಾಲ ತಾಣಗಳಲ್ಲಿ ಪಠ್ಯವನ್ನು ಬೋಧಿಸಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದರಿಂದ ಇಂದು ಅಂತರ್ಜಾಲದಲ್ಲಿ ಕನ್ನಡದ ಕಂಟೆಂಟ್ (ವಿಷಯ) ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಆದರೆ, ಇದೆಲ್ಲದಕ್ಕೆ ಸ್ಪಷ್ಟ ರೂಪುರೇಷೆಯೊಂದನ್ನು ನಾವು ನೀಡಬೇಕಿದೆ, ಸರ್ಕಾರಿ ಕಾಲೇಜುಗಳಲ್ಲಿ ಇರುವ ಪ್ರತಿಭಾವಂತ ಶಿಕ್ಷಕರು, ಅಧ್ಯಾಪಕರು, ಪ್ರಾಚಾರ್ಯರನ್ನು ಬಳಸಿಕೊಂಡು ಒಂದನೇ ತರಗತಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿವಿಧ ಜ್ಞಾನಶಿಸ್ತುಗಳ ಕಲಿಕೆ ಕನ್ನಡದಲ್ಲಿ ಸಾಧ್ಯವಾಗುವಂತೆ ಬೋಧನಾ ವಿಡಿಯೋಗಳನ್ನು ತಯಾರಿಸಿ ಸರ್ಕಾರದ ನಿರ್ದಿಷ್ಟ ಶೈಕ್ಷಣಿಕ ಅಂತರ್ಜಾಲ ತಾಣಗಳಲ್ಲಿ ಲಭ್ಯವಿರುವಂತೆ ಮಾಡಬೇಕಿದೆ. ನಾಡಿನ ಯಾವುದೇ ಮೂಲೆಯಲ್ಲಿರುವ, ಹಳ್ಳಿಗಾಡಿನ ಮಕ್ಕಳೂ ಸಹ ಅತ್ಯುತ್ತಮ ಪ್ರಾಧ್ಯಾಪಕರಿಂದ ಪಠ್ಯವನ್ನು ಕಲಿಯುವ ಅವಕಾಶ ಇದರಿಂದ ಸಾಧ್ಯವಾಗಬೇಕು. ಕನ್ನಡದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಕಲಿಯಲು ಇಂತಹ ಪೂರಕ ವಾತಾವರಣವನ್ನು ಸೃಷ್ಟಿಸುವುದು ಅತ್ಯವಶ್ಯಕ. ಈ ಕೆಲಸವನ್ನು ಸಮರೋಪಾದಿಯಲ್ಲಿ ಸರ್ಕಾರ, ವಿಶ್ವವಿದ್ಯಾಲಯಗಳು ಮಾಡಬೇಕು.
ಇದೇ ವೇಳೆ ಇಂದು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕಾನೂನು ಮುಂತಾದ ವಲಯಗಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು, ಸುದ್ದಿ-ವಿಚಾರಗಳನ್ನು ಕನ್ನಡದಲ್ಲಿಯೇ ಓದುಗರಿಗೆ, ನೋಡುಗರಿಗೆ ತಲುಪಿಸುವಂತಹ ಕಾರ್ಯಕ್ರಮಗಳು, ಪ್ರಕಟಣೆಗಳು, ಮಾಧ್ಯಮಗಳು ನಾಡಿನ ಉದ್ದಗಲಕ್ಕೂ ಕಂಡು ಬರುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಇಂತಹ ಅನೇಕ ಮಾಧ್ಯಮಗಳು ತಲೆ ಎತ್ತಿ ನಿಂತಿವೆ. ಇಂತಹವುಗಳನ್ನು ಗುರುತಿಸುವ, ಪ್ರೋತ್ಸಾಹಿಸುವ, ಬೆಂಬಲಿಸುವ ಕೆಲಸವನ್ನೂ ಸರ್ಕಾರ ಮಾಡಬೇಕು.
ಉದ್ಯೋಗ, ಉದ್ಯಮಶೀಲತೆಯ ಭಾಷೆಯಾಗಿ ಕನ್ನಡ ಕನ್ನಡ ಅನ್ನದ ಭಾಷೆಯಾಗಿ, ಉದ್ಯೋಗದ ಭಾಷೆಯಾಗಿ, ಉದ್ಯಮಶೀಲತೆಯ ಭಾಷೆಯಾಗಿ ಸಶಕ್ತವಾಗಬೇಕಾದರೆ ಮಾರುಕಟ್ಟೆ ಸಂಸ್ಕೃತಿಯ ಇಂದಿನ ದಿನಗಳಲ್ಲಿ ಕನ್ನಡಿಗರು ತಾವು ಪಡೆಯುವ ಸೇವೆಗಳನ್ನು ಕನ್ನಡದಲ್ಲಿಯೇ ಪಡೆಯುವ ಜಾಗೃತಿ, ಆಗ್ರಹಗಳನ್ನು ಬೆಳಸಿಕೊಳ್ಳಬೇಕು. ವಿಪರ್ಯಾಸವೆಂದರೆ, ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ.
ಇಂದು ನಮ್ಮ ಮುಗ್ಧ ಜನತೆ ತಮ್ಮದೇ ಹಳ್ಳಿಯಲ್ಲಿರುವ ಬ್ಯಾಂಕುಗಳಲ್ಲಿಯೂ ಬ್ಯಾಂಕಿಂಗ್ ಸೇವೆಯನ್ನು ಕನ್ನಡದಲ್ಲಿ ಪಡೆಯಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ, ಬ್ಯಾಂಕುಗಳ ವಿಲೀನದ ನಂತರವಂತೂ ನಮ್ಮ ಹೆಮ್ಮೆಯ ಗುರುತಾಗಿದ್ದ ಅನೇಕ ಬ್ಯಾಂಕುಗಳ ಚಹರೆಯೇ ಬದಲಾಗಿ ಹೋಗಿದೆ. ಕನ್ನಡ ಬಾರದ, ಅರೆಬರೆ ಕನ್ನಡ ಬಂದರೂ ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವ ಸಿಬ್ಬಂದಿಗಳೇ ಇಂದು ಹೆಚ್ಚಿದ್ದಾರೆ. ಇತ್ತೀಚೆಗಷ್ಟೇ ಗ್ರಾಹಕರೊಬ್ಬರು ಕನ್ನಡದಲ್ಲಿ ಬರದಿದ್ದ ಚೆಕ್ ಅನ್ನು ನಗದೀಕರಿಸಲು ಅನುಮತಿಸದ ರಾಷ್ಟಿçÃಕೃತ ಬ್ಯಾಂಕ್ ಒಂದಕ್ಕೆ ಗ್ರಾಹಕ ಆಯೋಗವು ದಂಡ ವಿಧಿಸಿದ್ದ ಸುದ್ದಿಯನ್ನು ನಾನು ಗಮನಿಸಿದೆ, ನೀವೂ ಗಮನಿಸಿರಬಹುದು, ಅಲ್ಲ, ಗ್ರಾಹಕನ ಭಾಷೆಯನ್ನಾಡದ ಬ್ಯಾಂಕುಗಳು ಕರ್ನಾಟಕದಲ್ಲಿ ಏಕಾದರೂ ಇರಬೇಕು ಹೇಳಿ? ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಇಂತಹ ಅಭಾಸಗಳನ್ನು ನಿವಾರಿಸಿಕೊಳ್ಳಲು ವೈಯಕ್ತಿಕ ಹಾಗೂ ಆಡಳಿತಾತ್ಮಕ ನಗರಿಗರಲ್ಲೂ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು.
ನಮ್ಮ ಭಾಷೆಯಲ್ಲಿ ಸೇವೆ ನೀಡದ ಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದ ಧಿಕ್ಕರಿಸಬೇಕು. ಕರ್ನಾಟಕದೆಲ್ಲೆಡೆ ಕನ್ನಡದಲ್ಲಿಯೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ನಾವು ಬಲವಾಗಿ ಆಗ್ರಹಿಸಲು ತೊಡಗಿದರೆ ಸಹಜವಾಗಿಯೇ ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ ಖಾಸಗಿ ವಲಯದಲ್ಲಿ ಮತ್ತಷ್ಟು ವ್ಯಾಪಕವಾಗಿ, ಗಣನೀಯವಾಗಿ ಹೆಚ್ಚುತ್ತದೆ.
ಇತ್ತೀಚೆಗೆ ರಾಜ್ಯದ ಶಾಸನಸಭೆಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ – ೨೦೨೨’ ಅನ್ನು ಮಂಡಿಸಲಾಯಿತು. ಇದರಲ್ಲಿ ಕನ್ನಡವನ್ನು ಅಧಿಕೃತ ರಾಜ್ಯಭಾಷೆಯಾಗಿ ತೀರ್ಮಾನಿಸುವ, ಅಡಳಿತ ಮತ್ತು ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಅಂಶಗಳೂ ಸೇರಿದಂತೆ ಹಲವು ಉತ್ತಮ ಅಂಶಗಳಿವೆ. ಈ ಮಸೂದೆಯನ್ನು ಕಾಯಿದೆಯಾಗಿ ಸಮರ್ಥವಾಗಿ ಅನುಷ್ಠಾನಗೊಳಿಸುವಂತಾಗಲಿ. ಇದರ ಜೊತೆಗೆ ಇಂದಿನ ಅಗತ್ಯಗಳಿಗೆ, ಸವಾಲುಗಳಿಗೆ ಈ ಮಸೂದೆ ಮತ್ತೊಮ್ಮೆ ಮುಖಾಮುಖಿ ಯಾಗಬೇಕಿದೆ.
ಕರ್ನಾಟಕ ಇಂದು ಬಹುರಾಷ್ಟ್ರೀಯ ಸಂಸ್ಥೆಗಳ ನವೋದ್ಯಮಗಳ ತವರಾಗಿದೆ. ಆದರೆ ಇಂದು ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನು ನೀಡುತ್ತಿಲ್ಲ. ಅದರಲ್ಲಿಯೂ ಬೆಂಗಳೂರು ನವೋದ್ಯಮಗಳ ರಾಜಧಾನಿಯಾಗಿದೆ. ನನ್ನ ವಿಶೇಷ ಬಿನ್ನಹವೇನೆಂದರೆ ಕನ್ನಡದಲ್ಲಿ ವಿವಿಧ ಬಗೆಯ ಸೇವೆಯನ್ನು ಒದಗಿಸುವ ನವೋದ್ಯಮಗಳಿಗೆ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ನೀಡಬೇಕು. ಅಲ್ಲದೇ, ಆಂಗ್ಲ ಭಾಷೆಯಲ್ಲಿ ಮಾತ್ರವೇ ಸೇವೆಯನ್ನು ಒದಗಿಸುತ್ತಿರುವ ವಿವಿಧ ಆನ್‌ಲೈನ್ ಸೇವಾ ಉದ್ಯಮಗಳಿಗೆ ಕನ್ನಡದಲ್ಲಿ ಸೇವೆ ಒದಗಿಸಲು ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನು ವ್ಯಾಪಿಸಲು ಸರ್ಕಾರವು ವಿಶೇಷ ನೀತಿಯೊಂದನ್ನು ರೂಪಿಸಬೇಕು. ಕೇವಲ ಆದೇಶಗಳಿಂದ ಮಾತ್ರವೇ ಇದು ಅನುಷ್ಠಾನವಾಗದೆ ಹೋಗಬಹುದು, ಹಾಗಾಗಿ, ಸೇವೆಯಲ್ಲಿ ಸಹಭಾಗಿತ್ವ ಎನ್ನುವ ತತ್ವದಡಿ ಕನ್ನಡದಲ್ಲಿ ಸೇವೆಯನ್ನು ನೀಡುವ ಖಾಸಗಿ ಆನ್‌ಲೈನ್ ಸೇವಾ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗಳನ್ನು, ಧನಸಹಾಯಗಳನ್ನು ನೀಡಬೇಕು. ಇದು ಖಾಸಗಿ ಸೇವಾ ಸಂಸ್ಥೆಗಳು ಹೆಚ್ಚು ಕನ್ನಡಪರ ಧೋರಣೆ ಬೆಳಸಿಕೊಳ್ಳಲು, ಉದ್ಯೋಗಗಳಲ್ಲಿ ಕನ್ನಡಿಗರನ್ನು ಹೆಚ್ಚೆಚ್ಚು ಹೊಂದಲು ಕಾರಣವಾಗುತ್ತದೆ.
ಕನ್ನಡ ಮತ್ತು ಮನರಂಜನಾ ಉದ್ಯಮ ಇಂದು ಮನರಂಜನೆ ಎನ್ನುವುದು ಸಾವಿರಾರು ಕೋಟಿಗಳ ಬೃಹತ್ ಉದ್ಯಮವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಒಟಿಟಿ (ಓವರ್ ದ ಟಾಪ್) ವೇದಿಕೆಗಳು, ವೆಬ್ ಸ್ಟಿçÃಮಿಂಗ್ ಮುಖೇನ ಮನರಂಜನೆಯ ಚಹರೆಯನ್ನೇ ಅಗಾಧವಾಗಿ ಬದಲಿಸಿವೆ ಹಾಗೂ ವಿಸ್ತರಿಸಿವೆ. ಸಿನಿಮಾ ನೋಡಲು ಥಿಯೇಟರ್‌ಗಳಿಗೇ ಹೋಗಬೇಕು ಎಂದಾಗಲಿ, ವೈಜ್ಞಾನಿಕ ಕಾರ್ಯಕ್ರಮಗಳನ್ನು, ಸಾಕ್ಷ್ಯಚಿತ್ರಗಳನ್ನು ನಿರ್ದಿಷ್ಟ ಚಾನಲ್‌ಗಳಲ್ಲಿ, ನಿರ್ದಿಷ್ಟ ಸಮಯದಲ್ಲಿಯೇ ನೋಡಬೇಕು ಎಂದಾಗಲಿ ಇಂದು ಇಲ್ಲ. ನೋಡುಗ ತನ್ನ ಸಮಯ, ಅನುಕೂಲತೆ, ಆಸಕ್ತಿಗೆ ತಕ್ಕಂತೆ ತನ್ನ ಮನೆಯ ಟಿವಿಯಲ್ಲಿಯೋ, ಅಂಗೈನಲ್ಲಿರುವ ಮೊಬೈಲ್‌ನ ಮುಖೇನವೋ ಮನರಂಜನೆ, ಆಸಕ್ತಿಗಳನ್ನು ಇಂದು ತಣಿಸಿಕೊಳ್ಳಬಹುದು. ಇಂದಿನ ಒಟಿಟಿ ವೇದಿಕೆಗಳಲ್ಲಿ ವಿವಿಧ ಜಾಗತಿಕ ಭಾಷೆಗಳ ಮನರಂಜನಾ ಸರಣಿಗಳು, ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಯಲ್ಲಿ ಬಿತ್ತರಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಮುಖ ವೆಬ್ ಸರಣಿಗಳು ಕನ್ನಡದಲ್ಲಿಯೂ ಲಭ್ಯವಿರುವುದನ್ನು ನಾನು ಗಮನಿಸಿದ್ದೇನೆ. ಇದು ಉತ್ತಮ ಬೆಳವಣಿಗೆ, ಒಟಿಟಿ ವೀಕ್ಷಕರು ತಮ್ಮಿಷ್ಟದ ವಿವಿಧ ಜಾಗತಿಕ ಕಾರ್ಯಕ್ರಮಗಳನ್ನು, ಸರಣಿಗಳನ್ನು ಕನ್ನಡದಲ್ಲಿಯೇ ನೋಡಲು ಇಚ್ಛೆ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಕೂಗು ಮಂಡಿಸುವುದನ್ನು ನಾನು ಗಮನಿಸಿದ್ದೇನೆ. ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಇದಕ್ಕಾಗಿ ಟ್ರೆಂಡಿಂಗ್ ನಡೆಸುವುದನ್ನು ಗಮನಿಸಿದ್ದೇನೆ. ಇದೆಲ್ಲಾ ಉತ್ತಮ ಬೆಳವಣಿಗೆ, ಇಂತಹ ಅಗ್ರಹಗಳು ಹೆಚ್ಚಾಗಲಿ, ಆ ಮೂಲಕ ಜಾಗತಿಕ ಮನರಂಜನೆ, ಉತ್ತಮ ಕಾರ್ಯಕ್ರಮಗಳು ಕನ್ನಡದಲ್ಲಿಯೇ ಲಭ್ಯವಾಗಲಿ.
ಆದರೆ, ಕನ್ನಡಿಗರು ಇಷ್ಟಕ್ಕೇ ತೃಪ್ತರಾಗಬಾರದು. ಡಬ್ಬಿಂಗ್‌ಗೆ ಮಾತ್ರವೇ ನಾವು ಸೀಮಿತವಾಗಬೇಕಿಲ್ಲ. ಜಾಗತಿಕ ಮಟ್ಟದ ಒಟಿಟಿ ವೇದಿಕೆಗಳು ಕನ್ನಡದಲ್ಲಿಯೂ ಹೆಚ್ಚೆಚ್ಚು ಕಂಟೆಂಟ್ ತಯಾರಿಸುವಂತೆ ಕನ್ನಡಿಗರು ಒತ್ತಡ ಹೇರಬೇಕು. ಕನ್ನಡದ ಮನರಂಜನ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚಿತ್ರರಂಗ, ಕಿರುತೆರೆಗಳು ಮಾತ್ರವೇ ಅಲ್ಲದೆ ಸರ್ಕಾರವು ಸಹ ಗಂಭೀರವಾಗಿ ಚಿಂತಿಸಬೇಕು. ತನ್ನ ಮನರಂಜನಾ ನೀತಿಯನ್ನು ಇಂದಿನ ಕಾಲಮಾನಕ್ಕೆ ಅಗತ್ಯವಾದ ರೀತಿಯಲ್ಲಿ ಅಣಿಗೊಳಿಸಬೇಕು. ಕನ್ನಡಿಗರು ಕನ್ನಡದಲ್ಲಿ ಮಾಡಿದ ವೆಬ್ ಸರಣಿಗಳು, ಸಿನಿಮಾ, ಸಾಕ್ಷ್ಯಚಿತ್ರಗಳನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ, ಜಗತ್ತಿನ ಬೇರೆ, ಬೇರೆ ಭಾಷೆಗಳಲ್ಲಿ ಡಬ್ ಮಾಡಿಕೊಂಡು ನೋಡುವಂತಾಗಬೇಕು, ಕನ್ನಡದಲ್ಲಿ ಸೃಜನಶೀಲತೆಗೆ, ಕ್ರಿಯಾಶೀಲತೆಗೆ ಕೊರತೆಯಿಲ್ಲ. ಕನ್ನಡದ ಸೃಜನಶೀಲ ಮನಸ್ಸುಗಳು ಅವಕಾಶಗಳಿಗಾಗಿ ಕಾಯುತ್ತಾ ಕೂರುವ ಬದಲಿಗೆ ಅವಕಾಶಗಳ ದಿಡ್ಡಿ ಬಾಗಿಲೇ ಅವರಿಗೆ ತೆರೆಯುವಂತಹ ಸನ್ನಿವೇಶವನ್ನು ನಾವು ಸೃಷ್ಟಿಸಬೇಕಿದೆ. ವಿಶೇಷವಾಗಿ ಸರ್ಕಾರವು ಕನ್ನಡ ಚಲನಚಿತ್ರ, ಮನರಂಜನಾ ಉದ್ಯಮಗಳ ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವ, ಅವುಗಳನ್ನು ಪೂರೈಸುವ, ಪ್ರೋತ್ಸಾಹಿಸುವ ಸಕಾಲಿಕ ನೀತಿನಿರೂಪಣೆಗಳನ್ನು ತನ್ನದಾಗಿಸಿಕೊಳ್ಳಬೇಕು. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಾವಂತರಿಗೆ, ತಂತ್ರಜ್ಞರಿಗೆ ಕೆಲಸ ದೊರೆಯಲಿದೆ. ವ್ಯಾಪಕವಾದ ಅದಾಯ, ವರಮಾನವೂ ಉತ್ಪತ್ತಿಯಾಗಲಿದೆ.
ಇಲ್ಲಿ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಸ್ಕಾಂಡಿನೇವಿಯನ್ ದೇಶಗಳು ಎಂದು ಕರೆಯಲಾಗುವ ಉತ್ತರ ಯೂರೋಪಿನ ಸಣ್ಣ ದೇಶಗಳಾದ ನಾರ್ವೆ, ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ದೇಶಗಳ ಒಟ್ಟು ಜನಸಂಖ್ಯೆ ಏನಿದೆ ಅದು ನಮ್ಮ ಕರ್ನಾಟಕದ ಅರ್ಧ ಜನಸಂಖ್ಯೆಗಿಂತಲೂ ಕಡಿಮೆ, ಇವುಗಳನ್ನು ನಾರ್ಡಿಕ್ ದೇಶಗಳು ಎಂದೂ ಕರೆಯುತ್ತಾರೆ. ನನಗೆ ಚಲನಚಿತ್ರೋದ್ಯಮದ ಹಿನ್ನೆಲೆ ಇರುವುದರಿಂದ ಹಾಗೂ ತಕ್ಕಮಟ್ಟಿಗೆ ಅದರ ಗಂಧಗಾಳಿ ಇರುವುದರಿಂದ ಹೇಳುತ್ತಿದ್ದೇನೆ.
ನಾನು ಹೇಳಿದ ಈ ದೇಶಗಳ ಮನರಂಜನಾ ಉದ್ಯಮವೇನಿದೆ ಅದು ಇಂದು ಬಿಲಿಯನ್ ಡಾಲರ್‌ಗಳ ವ್ಯವಹಾರವಾಗಿದೆ. ಈ ದೇಶಗಳ ಭಾಷೆಗಳಾದ ಡ್ಯಾನಿಶ್, ನಾರ್ವೇಜಿಯನ್, ಸ್ವೀಡಿಷ್‌ಗಳಲ್ಲಿ ತಯಾರಾಗುವ, ವಿಶೇಷವಾಗಿ ಥ್ರಿಲ್ಲರ್ ಮಾದರಿಯ ಕಥಾವಸ್ತುಗಳನ್ನುಳ್ಳ ವೆಬ್ ಸರಣಿಗಳು, ಚಿತ್ರಗಳನ್ನು ನೋಡುವ ಬೃಹತ್ ಜಾಗತಿಕ ವೀಕ್ಷಕ ವರ್ಗವೇ ಇದೆ. ಜಗತ್ತಿನ ಅನೇಕ ಭಾಷೆಗಳಿಗೆ, ವಿಶೇಷವಾಗಿ ಇಂಗ್ಲಿಷ್ ಈ ಸರಣಿಗಳು, ಚಿತ್ರಗಳು ಡಬ್ ಆಗುತ್ತವೆ. ಮಿಲಿಯನ್ ಗಟ್ಟಲೆ ಡಾಲರ್ ವ್ಯವಹಾರವನ್ನು ಇಲ್ಲಿನ ಪ್ರೊಡಕ್ಷನ್ ಹೌಸ್‌ಗಳು ಮಾಡುತ್ತವೆ. ಹಾಲಿವುಡ್ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಮನರಂಜನಾ ಉದ್ಯಮ ಇಂದು ಬೆಳೆಯುತ್ತಿದೆ. ತಮ್ಮದೇ ಭಾಷೆಯಲ್ಲಿಯೇ ಇದೆಲ್ಲವನ್ನೂ ಅವರು ಸಾಧ್ಯವಾಗಿಸಿದ್ದಾರೆ.
ಇದೇ ರೀತಿ, ಚೀನಾ, ಹಾಂಕಾಂಗ್‌ನ ಸಿನಿಮಾ ಉದ್ಯಮವು ಸಮರ ಕಲೆಗಳ ಚಿತ್ರಗಳ ಮೂಲಕವೇ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಇನ್ನು ಇರಾನಿ ಸಿನಿಮಾಗಳು, ಮಧ್ಯಪ್ರಾಚ್ಯ ಸಿನಿಮಾಗಳನ್ನು ನೋಡುಗ ವರ್ಗವೂ ದೊಡ್ಡದಿದೆ. ನಮ್ಮದೇ ಬಾಲಿವುಡ್, ನೆರೆಯ ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳು ಬೆಳೆದಿರುವ ಪರಿಯನ್ನೂ ಇಲ್ಲಿ ಗಮನಿಸಬಹುದು. ಕನ್ನಡದ ಚಿತ್ರರಂಗ ಹಾಗೂ ಮನರಂಜನಾ ಉದ್ಯಮವೂ ಇಂದು ಭರವಸೆಯಿಂದ, ಮಹತ್ವಾಕಾಂಕ್ಷೆಯಿಂದ ಬೆಳೆಯುತ್ತಿದೆ. ಸಾವಿರಾರು ಕೋಟಿ ವ್ಯವಹಾರವನ್ನು ಕನ್ನಡ ಚಿತ್ರಗಳು ಮಾಡಬಲ್ಲವು ಎನ್ನುವುದನ್ನು ನಾವು ಇಂದು ಕಂಡಿದ್ದೇವೆ. ಕಥಾವಸ್ತುಗಳ ಬಗ್ಗೆ ನಮ್ಮ ವೈಯಕ್ತಿಕ ತಕರಾರುಗಳೇನೇ ಇರಲಿ, ಒಂದು ಉದ್ಯಮವಾಗಿ ಚಿತ್ರರಂಗವನ್ನು, ಟಿವಿ, ಒಟಿಟಿ ವೇದಿಕೆಗಳನ್ನು ಮಹತ್ವಾಕಾಂಕ್ಷೆಯಿಂದ, ಉದ್ಯಮಶೀಲತೆಯಿಂದ ನಾವಿಂದು ಬೆಳೆಸಬೇಕಿದೆ. ಈ ಕ್ಷೇತ್ರಗಳು ಹೆಚ್ಚೆಚ್ಚು ಸೃಜನಶೀಲವೂ, ವೃತ್ತಿಪರವೂ ಆಗುವಂತೆ ನೋಡಿಕೊಳ್ಳುವ ಮೂಲಕ ಜಾಗತಿಕ ವೇದಿಕೆಗಳಿಗೆ ಇವುಗಳನ್ನು ಒಯ್ಯಬೇಕಿದೆ. ಅತ್ಯುತ್ತಮ ತಂತ್ರಜ್ಞಾನ ಇವುಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ, ಉದ್ಯಮಶೀಲತೆ, ವಿಫುಲ ಉದ್ಯೋಗ ಸಾಧ್ಯತೆಯ ಹಿನ್ನೆಲೆಯಲ್ಲಿ ಕನ್ನಡದ ಮನರಂಜನಾ ಉದ್ಯಮವನ್ನು ಬೆಳೆಸುವ, ಜಾಗತಿಕವಾಗಿ ವಿಸ್ತರಿಸುವ ನೀಲನಕ್ಷೆ ತಯಾರಿಸಲು ಇದು ಸಕಾಲ, ಸರ್ಕಾರ ಮತ್ತು ಸಚಿವಾಲಯಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕು. ಕನ್ನಡ ಚಿತ್ರೋದ್ಯಮದಲ್ಲಿ ನಿರ್ಮಾಪಕರು ಕನ್ನಡದಲ್ಲಿ ಹೆಸರುಗಳೇ ಇಲ್ಲವೇನೋ ಎಂಬಂತೆ ಬೇರೆ ಬೇರೆ ಭಾಷೆಗಳ ಶೀರ್ಷಿಕೆಗಳನ್ನು ಇಡುತ್ತಿದ್ದಾರೆ. ಇದು ನಿಲ್ಲಬೇಕು.
ಕನ್ನಡ ಮತ್ತು ರಾಯಭಾರಿತ್ವ
ಕರ್ನಾಟಕವೆನ್ನುವುದು ಉತ್ತರ ಮತ್ತು ದಕ್ಷಿಣದ ಸಂಸ್ಕೃತಿಗಳು ಸಂಧಿಸುವ ಜಾಗ. ಕನ್ನಡಿಗರ ವೈವಿಧ್ಯಮಯ ಆಸಕ್ತಿ, ಅಭಿರುಚಿಗಳಿಗೆ, ಸಹಿಷ್ಣುತೆಗೆ ಇದುವೇ ಕಾರಣ. ಉತ್ತಮವಾದುದನ್ನು ಎಲ್ಲ ಕಡೆಯಿಂದ ಹೆಕ್ಕುವುದು, ಬೆಂಬಲಿಸುವುದು ಕನ್ನಡಿಗರ ಜಾಯಮಾನ. ನಮ್ಮ ಸಂಸ್ಕೃತಿ, ಅನುಭವಗಳನ್ನು ಇದು ಸಾಕಷ್ಟು ಶ್ರೀಮಂತಗೊಳಿಸಿದೆ ಕೂಡ. ಕನ್ನಡಿಗರು ಕೂಪಮಂಡೂಕಗಳಲ್ಲ. ಜಗತ್ತಿನೆಲ್ಲೆಡೆ, ಎಲ್ಲ ರಂಗಗಳಲ್ಲಿ ಕನ್ನಡಿಗರು ವ್ಯಾಪಿಸಿದ್ದಾರೆ. ಅಮೆರಿಕ, ಪಾಶ್ಚಿಮಾತ್ಯ ರಾಷ್ಟçಗಳು, ಮಧ್ಯಪ್ರಾಚ್ಯ ದೇಶಗಳು, ಆಗ್ನೆಯ ರಾಷ್ಟçಗಳು ಹೀಗೆ ಎಲ್ಲೆಡೆ ಕನ್ನಡಿಗರು ವ್ಯಾಪಿಸಿದ್ದಾರೆ. ಅದರಲ್ಲಿಯೂ ಕನ್ನಡಿಗರು ಕೌಶಲಾಧಾರಿತ ಸೇವೆಗಳಲ್ಲಿ ಹೆಚ್ಚೆಚ್ಚು ತೊಡಗಿಕೊಂಡಿರುವುದನ್ನು ನೋಡಬಹುದು. ಇವರಲ್ಲಿ ಅನೇಕರು ವಿವಿಧ ರಾಷ್ಟçಗಳಲ್ಲಿಯೇ ಅಲ್ಲಿನ ನಾಗರಿಕತ್ವ ಪಡೆದು ಉಳಿದಿದ್ದಾರೆ ಕೂಡ.
ಇಂದು ಪ್ರತಿಯೊಬ್ಬ ಹೊರನಾಡ ಕನ್ನಡಿಗನನ್ನೂ ‘ಕನ್ನಡದ ರಾಯಭಾರಿ’ ಎಂದೇ ನಮ್ಮ ಸರ್ಕಾರವು ನೋಡಬೇಕು. ಅಲ್ಲಿನ ಕನ್ನಡಪರ ಸಂಘ ಸಂಸ್ಥೆಗಳಿಗೆ ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಕನ್ನಡದ ಚಟುವಟಿಕೆಗಳನ್ನು ಹೆಚ್ಚೆಚ್ಚು ಪಸರಿಸುವ ಶ್ಲಾಘನಾ ಕಾರ್ಯಗಳಿಗೆ ಒಂದು ಖಚಿತ ರೂಪುರೇಷೆಯನ್ನು ನೀಡಲು ಇದು ಸಕಾಲ. ಈವರೆಗೆ ನಡೆದಿರುವಂತ ಇವುಗಳಿಗೆ ಒಂದಿಷ್ಟು ಅನುದಾನ ನೀಡುವುದು, ಸಾಂಸ್ಕೃತಿಕ ಪ್ರವಾಸಗಳನ್ನು ಏರ್ಪಡಿಸುವುದರಿಂದ ಹೆಚ್ಚಿನ ಉಪಯೋಗವಾಗದು, ಬದಲಿಗೆ ಈ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕ, ಕನ್ನಡದ ಬಗ್ಗೆ ಹೊರದೇಶಗಳಲ್ಲಿ ಹೆಚ್ಚಚ್ಚು ಆಸಕ್ತಿ, ಉತ್ಸಾಹ ಕೆರಳಿಸುವಂತಹ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯಮಿಕ ಕಾರ್ಯಕ್ರಮಗಳನ್ನು ರೂಪಿಸಲು ವಿಶೇಷ ಅಸ್ಥೆ ವಹಿಸಬೇಕು. ಹೊರನಾಡ ಕನ್ನಡಿಗರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸುವುದರೊಟ್ಟಿಗೇ, ಅವರಲ್ಲಿ ರಾಯಭಾರಿತ್ವ, ಉದ್ಯಮಶೀಲತೆಯನ್ನು ಉದ್ದೀಪಿಸುವ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಬೇಕು.
ಕನ್ನಡ ಮತ್ತು ಶಾಸ್ತ್ರೀಯ ಭಾಷಾ ಸ್ಥಾನಮಾನ
ಕನ್ನಡದಲ್ಲಿ ಎಣೆಯಿಲ್ಲದ ಪ್ರಾಚೀನ ಸಾಹಿತ್ಯ, ತತ್ವ, ವ್ಯಾಕರಣ ಶಾಸ್ತçಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಶಿಲ್ಪಶಾಸ್ತç ಇವೆಲ್ಲವುಗಳಿಗೆ ಕಳಶವಿಟ್ಟಂತ ಜಾನಪದ ಮಹಾಕಾವ್ಯಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ದೊರತಿದೆ. ಸುಮಾರು ಎರಡು ಸಾವಿರ ವರ್ಷದಷ್ಟು ಇತಿಹಾಸವನ್ನು ಹೊಂದಿರುವ ಸಾವಿರ ವರ್ಷಗಳನ್ನು ಮೀರಿದ ಸುಧಾರಿತ ಲಿಖಿತ ಭಾಷಾಪ್ರಯೋಗವನ್ನು ಹೊಂದಿರುವ ಕನ್ನಡ ಭಾಷೆ ಬಹುತೇಕ ಪಾಶ್ಚಿಮಾತ್ಯ ಭಾಷೆಗಳು ಶೈಶವಾಸ್ಥೆಯಲ್ಲಿರುವ ಹೊತ್ತಿನಲ್ಲಿಯೇ ಸಮೃದ್ಧವಾದ ಮೌಖಿಕ, ಲಿಖಿತ ಸಾಹಿತ್ಯ, ಶಾಸ್ತç ಗ್ರಂಥಗಳನ್ನು ಹೊಂದಿತ್ತು. ವಿಪರ್ಯಾಸವೆಂದರೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹೊರತಾಗಿಯೂ ಭಾಷೆಯ ಅಧ್ಯಯನ, ಸಂಶೋಧನೆ, ಪ್ರಚುರ ಪಡಿಸುವಿಕೆಗೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧನಸಹಾಯ ಹರಿದು ಬಂದಿಲ್ಲ.
ಈ ಆಕ್ಷೇಪಣೆ ಕನ್ನಡ ಭಾಷೆಯೊಂದರದ್ದು ಮಾತ್ರವಲ್ಲ, ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ತಮಿಳು, ತೆಲುಗು, ಮಲಯಾಳಂ, ಒಡಿಯಾ ಭಾಷೆಗಳ ಆಕ್ಷೇಪಣೆಯೂ ಆಗಿದೆ. ಇತರ ಶಾಸ್ತ್ರೀಯ ಭಾಷೆಗಳ ಹೋಲಿಕೆಯಲ್ಲಿ ೨೦೧೭ ರಿಂದ ೨೦೨೦ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರವು ನೀಡಿದ ಅನುದಾನದ ಮೊತ್ತ ರೂ. ೬೪೩ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ. ೩ ಕೋಟಿ. ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ. ೨೩ ಕೋಟಿ, ತಮಿಳು ಭಾಷೆಗೆ ೨೦೧೭ರಿಂದ ೨೦೨೧ರ ವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ. ೪೨ ಕೋಟಿ ಎನ್ನುವ ಮಾಹಿತಿ ಇದು ಕನ್ನಡಕ್ಕೆ ನೀಡಲಾಗಿರುವ ಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎನ್ನುವುದು ನನಗಿರುವ ಮಾಹಿತಿ, ಹೆಚ್ಚೆಂದರೆ ೨೦೧೭ರಿಂದ ಇಲ್ಲಿಯವರೆಗೆ ಐದಾರು ಕೋಟಿ ರೂಪಾಯಿ ಅನುದಾನ ಸಿಕ್ಕಿರಬಹುದು.
ಹೀಗಾದರೆ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೆ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು? ಅನುದಾನದ ವಿಚಾರದಲ್ಲಿ ನನಗಿರುವ ಮಾಹಿತಿಯಲ್ಲಿ ತಪ್ಪಿದ್ದರೆ ಸರ್ಕಾರ, ಸಂಬಂಧಪಟ್ಟ ಸಚಿವರು ಅದನ್ನು ಸರಿಪಡಿಸಲಿ, ನಿಖರ ಮಾಹಿತಿಯನ್ನು ಹಂಚಿಕೊಳ್ಳಲಿ. ಆದರೆ ಒಂದಂತೂ ಸತ್ಯ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೇವಲ ಕಣ್ಣ್ಣೊರೆಸುವ ತಂತ್ರವಾಗಿದೆಯೇ ಹೊರತು ಭಾಷೆ, ಸಂಶೋಧನೆಯ ದೃಷ್ಟಿಯಿಂದ ಮಹತ್ವದ್ದೇನನ್ನೂ ಸಾಧಿಸಲು ಸಾಧ್ಯವಾಗಿಲ್ಲ.
ಈ ವಾಸ್ತವದ ಹಿನ್ನೆಲೆಯಲ್ಲಿ ನಾಡಿನ ಆಳುವ ಸರ್ಕಾರಕ್ಕೆ ನಾನು ಹೇಳುವ ಮಾತೊಂದೇ, ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕನ್ನಡಕ್ಕೆ ದೊರೆಯಬೇಕಾದ ಹಕ್ಕಿನ ಹಣವನ್ನು ತರುವ ಜವಾಬ್ದಾರಿ ನಿಮ್ಮದು ಅದನ್ನು ಹೇಗೆ ಸಾಧಿಸಿ ತೋರಿಸುತ್ತೀರೋ ನೋಡಿ. ಉಳಿದಂತೆ, ಕೇಂದ್ರದ ಹಣ ಒಂದು ಭಾಗವಾದರೆ ರಾಜ್ಯವು ಈ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳೂ ವ್ಯಾಪಕವಾಗಿವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಪ್ರತಿಷ್ಠಿತ ಕಲೆ, ಸಾಹಿತ್ಯ, ಭಾಷಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವುದು, ಅವುಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಪರಿಸರದ ಅನನ್ಯತೆಯನ್ನು ಅಧ್ಯಯನಾರ್ಹಗೊಳಿಸುವುದು ಇವುಗಳಲ್ಲಿ ಅತ್ಯಂತ ಪ್ರಮುಖವಾದುದು. ಈ ನಿಟ್ಟಿನಲ್ಲಿ ಕನ್ನಡದ ಪ್ರಾಚೀನ ಸಾಹಿತ್ಯ, ಕಲೆ, ಸಂಸ್ಕೃತಿಗಳ ಅಧ್ಯಯನಕ್ಕೆ ಪೂರಕವಾದ ಶೈಕ್ಷಣಿಕ ಸಂಪನ್ಮೂಲವನ್ನು, ಆಕರ ಗ್ರಂಥಗಳನ್ನು, ಅಧುನಿಕ ಪ್ರಾತಿನಿಧಿಕ ಕೃತಿಗಳನ್ನು ಆದ್ಯತೆಯ ಮೇರೆಗೆ ಇಂಗ್ಲಿಷ್, ಹಿಂದಿ ಸೇರಿದಂತೆ ಪ್ರಮುಖ ಭಾಷೆಗಳಿಗೆ ಭಾಷಾಂತರಿಸುವ ಕೆಲಸ ನಡೆಯಬೇಕು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೆಲವು ಗಮನಾರ್ಹ ಕೆಲಸಗಳನ್ನು ಮಾಡಿದೆ. ಅದರೆ, ಎಲ್ಲವೂ ಚದುರಿದಂತಿದೆ. ಇವುಗಳ ಧ್ಯೇಯೋದ್ದೇಶಗಳು ಮಹತ್ವಾಕಾಂಕ್ಷೆಯಿಂದ ಕೂಡಿದ್ದರೂ ಇಂದು ಹೆಚ್ಚಿನ ನಿರ್ದಿಷ್ಟತೆ, ಸ್ಪಷ್ಟತೆಯಿಂದ ಯೋಜನಾಬದ್ಧವಾಗಿ ನಾವು ಮುಂದುವರಿಯ ಬೇಕಿದೆ. ಸರ್ಕಾರಗಳು, ಅಧ್ಯಕ್ಷರು ಬದಲಾದಂತೆ ನೀತಿ, ಅನುದಾನ, ಉತ್ಸಾಹಗಳಲ್ಲಿ ವ್ಯತ್ಯಯವಾಗುತ್ತಾ ಹೋದರೆ ಇಂತಹ ಪ್ರಾಧಿಕಾರಗಳಿಂದ ಸಮರ್ಥ ಕೆಲಸವಾಗುವುದಿಲ್ಲ.
ಕನ್ನಡದ ಎಲ್ಲ ಪ್ರಾಚೀನ ಲಕ್ಷಣ ಗ್ರಂಥಗಳು ಸೇರಿದಂತೆ ಕ್ಲಾಸಿಕ್ ಕೃತಿಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಲಭ್ಯವಾಗುವಂತೆ ಮಾಡಲು ನಾವು ಇಂದು ವಿಶೇಷ ಆನ್‌ಲೈನ್ ಜ್ಞಾನಕೋಶವೊಂದನ್ನು ರೂಪಿಸಬೇಕು. ಇದು ಸಂಪೂರ್ಣ ಉಚಿತವಾಗಿದ್ದು, ಅಕಡೆಮಿಕ್ ಶಿಸ್ತಿನಿಂದ ಕೂಡಿರಬೇಕು. ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಮಾತ್ರವೇ ಇದನ್ನು ಸೀಮಿತಗೊಳಿಸದೆ ಕನ್ನಡದ ಪ್ರಮುಖ ಸಂಶೋಧನಾ ಕೃತಿಗಳು, ಮಹತ್ವದ ಡಾಕ್ಟರೇಟ್ ಪ್ರಬಂಧಗಳೂ ಇದರಲ್ಲಿ ಲಭ್ಯವಾಗುವಂತಿರಬೇಕು. ಈ ಕೆಲಸ ನಿರಂತರವಾಗಿ, ಅಕಡೆಮಿಕ್ ಶಿಸ್ತಿನಿಂದ ನಡೆಯಬೇಕು. ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳು, ಕನ್ನಡ ಪೀಠಗಳು ಒಂದು ಸಮಾನ ಆಶಯವನ್ನು ಗುರುತಿಸಿಕೊಂಡು ತಮ್ಮ ವಿದ್ವತ್ತು, ಪಾಂಡಿತ್ಯ, ಪ್ರಾಜ್ಞತೆಯನ್ನು ಮೆರೆದು ಜಗತ್ತಿನ ಶ್ರೇಷ್ಠ ಅಕಡೆಮಿಕ್ ಆನ್‌ಲೈನ್ ತಾಣವೊಂದನ್ನು ರೂಪಿಸಬೇಕು. ಈ ಜಾಲತಾಣದಲ್ಲಿ, ನಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಈವರೆಗೆ ಮಾಡಿರುವ ಕೆಲಸವೂ ಪ್ರತಿಫಲಿತವಾಗಲಿ.
ಒಟ್ಟಂದದಲ್ಲಿ ಹೇಳಬೇಕೆಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ, ಯಾವುದೇ ಭಾಷೆಯ ಸಾಮಾನ್ಯ ಕುತೂಹಲಿಯೇ ಅಗಲಿ, ಗಂಭೀರ ಅಕಡೆಮಿಕ್ ಆಸಕ್ತಿಯುಳ್ಳ ವ್ಯಕ್ತಿಯೇ ಆಗಲಿ ಕನ್ನಡದ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿ ಕೈಯಾಡಿಸಿದರೆ ಕನ್ನಡವೆಂಬ ಈ ಮೇರು ಭಾಷೆಯ ವಿಹಂಗಮ ನೋಟ, ಅನನ್ಯತೆಯನ್ನು ಈ ತಾಣ ಬಿಂಬಿಸುವಂತಿರಬೇಕು. ಇದೇ ವೇಳೆ ಅಧ್ಯಯನಪ್ರೇರಕವೂ, ಸಂಶೋಧನಾಪೂರಕವೂ ಆದ ಹೆಮ್ಮೆಯ ಜಾಲತಾಣವಾಗಿಯೂ ಇದು ಹೊರಹೊಮ್ಮಬೇಕು.
ವಚನ ಸಾಹಿತ್ಯ
ಇಡೀ ಕನ್ನಡ ಸಾಹಿತ್ಯಕ್ಕೆ ವಿಶ್ವಮುಖಿ ಶಕ್ತಿ ಬಂದದ್ದು- ೧೨ನೇ ಶತಮಾನದ ವಚನಕಾರರಿಂದ. ೯೦೦ ವರ್ಷಗಳ ಹಿಂದೆಯೇ ಕನ್ನಡದ ವಚನವಾರಿಧಿ ತುಂಬಿ ತುಳುಕಿ ನೆರೆಹೊರೆಗೆಲ್ಲಾ ತನ್ನ ಸಾಹಿತ್ಯಕ ನರುಗಂಪನ್ನು ಪಸರಿಸಿದ್ದು ಐತಿಹಾಸಿಕ ದಾಖಲೆ.
ಅಲ್ಲಮಪ್ರಭುವಿನ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪ ಮಾದರಿ ಪಾರ್ಲಿಮೆಂಟಿನಂತೆ ವಿಶ್ವವಿಖ್ಯಾತವಾಗಿದೆ. ಭಕ್ತಿ ಭಂಡಾರಿ ಬಸವಣ್ಣ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಅಂದಿನ ಆಡಳಿತಗಾರರ ಸಮಾಜಮುಖಿ ಧೋರಣೆಯನ್ನು ಸೂಚಿಸುತ್ತವೆ.
ಎಲ್ಲ ವಚನಕಾರರಿಗೂ ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವಿತ್ತು. ವಚನ ಹೇಳಲು ಸಂಪೂರ್ಣ ಸ್ವಾತಂತ್ರö್ಯವಿತ್ತು. ಹೀಗಾಗಿ ಸರ್ವದ ಏಳಿಗೆಗೂ ಅದು ನಾಂದಿಯಾಯಿತು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೂಡಿ ಅದು ಸಾಕಾರವಾಗಿ ಅಸ್ತಿತ್ವಕ್ಕೆ ಬಂದು ಆದರ್ಶವಾಗಿ ಪರಿಪಾಲನೆಯಾದದ್ದು ಇದೇ ಸಂದರ್ಭದಲ್ಲಿ. ಆಗಿನ ಸಮಾಜ ಸ್ವಾಸ್ಥö್ಯವನ್ನು ಮಾದರಿಯಾಗಿ ನಾವೆಲ್ಲಾ ಅನುಸರಿಸುವುದು ಒಳಿತು. ಸಿದ್ಧರಾಮ, ಚೆನ್ನಬಸವಣ್ಣ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಹರಳಯ್ಯ, ಸಂಕವ್ವ ಮುಂತಾಗಿ ನೂರಾರು ವಚನಕಾರರು ಒಂದು ವಿನೂತನವಾದ ಹಾದಿಯನ್ನೇ ತೆರೆದರು. ಇಂದಿಗೂ ಅದು ನಮಗೆ ಬೆನ್ನ ಹಿಂದಿನ ನೆಚ್ಚಿನ ಹೊಂಬೆಕಾಗಿರುವುದು ಸ್ಮರಣೀಯ. ಅನುಸರಣೀಯ ಕೂಡ.
ದಾಸ ಸಾಹಿತ್ಯ
ಸಂಗೀತ-ಸಾಹಿತ್ಯವನ್ನು ಮೇಳೈಸುವ ತವನಿಧಿಯಾಗಿ, ದಾರ್ಶನಿಕತೆಯ ಜೊತೆಗೆ ಆಧ್ಯಾತ್ಮಿಕತೆ, ಸಾಮಾಜಿಕ ಜಾಗೃತಿಯನ್ನು, ಸಾಮಾಜಿಕ ಅರಿವನ್ನು ನಿಚ್ಚಳವಾಗಿ ಪಡಿಮೂಡಿಸುವಲ್ಲಿ, ದಾಸ ಸಾಹಿತ್ಯದ ಸೊಬಗು ೧೬ನೇ ಶತಮಾನದ ಕನ್ನಡ ಸಾಹಿತ್ಯದ ಪರಂಪರೆಯಲ್ಲಿ ಉಜ್ವಲವಾಗಿದೆ. ಕರ್ನಾಟಕದ ಸಂಗೀತ ಪಿತಾಮಹರೆನಿಸಿದ ಶ್ರೀ ಪುರಂದರದಾಸರು, ಸಂತ ಶ್ರೀ ಕನಕದಾಸರು, ವಿಜಯದಾಸರು, ಮೊದಲಾದವರು ತಮ್ಮ ತಮ್ಮ ಕೀರ್ತನೆಗಳಲ್ಲಿ ಅಂಕಿತನಾಮದೊಂದಿಗೆ ಮೌಲಿಕವಾದ ಚಿರಂತನ ವಿಚಾರಗಳನ್ನೂ, ಸಮಾನತೆಯ ಅರಿವನ್ನು, ಮಾನವೀಯತೆಯ ವೈಚಾರಿಕತೆಯನ್ನು ಸಮಾಜ ವಿಮರ್ಶೆಯನ್ನು ಪ್ರತಿಪಾದಿಸಿದ್ದಾರೆ. ಇದರಿಂದಾಗಿಯೇ ಈ ಕಾಲಕ್ಕೂ ಪ್ರಸ್ತುತವಾಗುವ ‘ಕೀರ್ತನೆಗಳು’ ಕನ್ನಡದ ಸಂಸ್ಕೃತಿಯ ವಾರಿಧಿಯಾಗಿದೆ.
ಕನ್ನಡದ ಒಬ್ಬೊಬ್ಬ ಪ್ರಾಚೀನ ಕವಿಯೂ ಒಂದೊಂದು ಮಹತ್ತರವಾದ ಕೃತಿಯನ್ನೇ ಕಾಣಿಕೆಯಾಗೇ ನೀಡಿದ್ದಾನೆ. ಎಲ್ಲರಿಂದಲೂ ಕಲಿಯ ಬೇಕಾದ ಪಾಠಗಳಿಗೆ. ಕನ್ನಡಿಗರಾದ ನಾವೆಲ್ಲಾ ಆ ಆದರ್ಶಗಳನ್ನು ಅಳವಡಿಸಿಕೊಂಡರೆ ನಮ್ಮ ಬಾಳು ಬೆಳಕಾಗುವುದು ಖಂಡಿತಾ.
ಆದಿ ಕವಿ ಪಂಪನ ವಿಶಾಲ ಮನೋಧರ್ಮ “ಮನುಷ್ಯ ಜಾತಿ ತಾನೊಂದೇ ವಲಂ” ಎಂಬ ವಿಶ್ವ ಮಾನವ ಪ್ರಜ್ಞೆಯಿಂದ ಇತ್ಯಾತ್ಮಕ ಗುಣಗಳ ಇತಿಹಾಸವೇ ಪ್ರಾರಂಭವಾಯಿತು.
ಆನಂತರದಲ್ಲಿ ಬಂದ ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ… ಹದಿನೈದನೇ ಶತಮಾನದ ಹರಿದಾಸ ಪರಂಪರೆಯ ಎಲ್ಲ ದಾಸವರೇಣ್ಯರುಗಳೂ ಇಂದಿನ ಪೀಳಿಗೆಗೆ ಆದರ್ಶವೇ! ರತ್ನಾಕರವರ್ಣಿಯಂಥ ಭೋಗ-ಯೋಗದ ಸಮನ್ವಯ ತತ್ವವೂ ನಮಗೆ ಬೇಕಾದದ್ದೇ ಆಗಿದೆ.
ಹೀಗೆ- ಅಸಂಖ್ಯ ಕವಿಗಳಿಂದ ಅಗಣಿತ ಕನ್ನಡ ಕಾವ್ಯ ಕೃತಿಗಳಿಂದ ದೀಪ್ತವಾದ ಕನ್ನಡ ಸಾಹಿತ್ಯ ಪರಂಪರೆ ನಮಗೆ ಬದುಕಿನುದ್ದಕ್ಕೂ ಬೆಳಕಾಗಿ ಹರಿವ ದಾರಿದೀಪಗಳಾಗಿವೆ.
ಕವಿ ಮುದ್ದಣ ಹಳಬರಲ್ಲಿ ಕೊನೆಯವನು; ಹೊಸಬರಲ್ಲಿ ಮೊದಲನೆಯವನು. ೧೯೦೫ರ ನಂತರದ ಕನ್ನಡ ಸಾಹಿತ್ಯ ಕ್ಷೇತ್ರವು ಪೊರೆ ಬಿಟ್ಟ ಹಾವಿನಂತೆ- ವಿನೂತನವಾಯಿತು.
ಪ್ರಮುಖವಾಗಿ ಪಂಜೆ ಮಂಗೇಶ ರಾಯರು ಹೊಸ ಬಗೆಯ ಪದ್ಯಗಳನ್ನು ರಚಿಸಲು ತೊಡಗಿದ್ದರು. ವಾಸ್ತವವಾಗಿ ಕನ್ನಡ ನವೋದಯ ಕಾವ್ಯದ ನೈಜ ಹರಿಕಾರರು ಅವರೇ!
೧೯೨೦ರ ವೇಳೆಗೆ ಕನ್ನಡ ಕಾವ್ಯದ ನೀಲಿ ನಕಾಶೆಯೇ ಬದಲಾಗಿ ಹೋಗಿತ್ತು. ಕವೀಂದ್ರ ರವೀಂದ್ರರಿಗೆ ಅವರ “ಗೀತಾಂಜಲಿ” ಸಂಕಲನಕ್ಕಾಗಿ ನೋಬೆಲ್ ಪಾರಿತೋಷಕ ಬಂದ ಘಳಿಗೆ ಭಾರತೀಯ ಸಾಹಿತ್ಯದಲ್ಲಿ ಅನೇಕ ರೂಪಾಂತರಗಳಾದವು.
“ಕನ್ನಡದ ಕಣ್ವರ್ಷಿ” ಎನ್ನಿಸಿಕೊಂಡ ಬಿ.ಎಂ. ಶ್ರೀಕಂಠಯ್ಯ ಅವರು “ಅವಳ ತೊಡಿಗೆ ಇವಳಿಗಿಟ್ಟು ನೋಡ ಬಯಸಿದೆ, ಇವಳ ಉಡುಗೆ ಅವಳಿಗಿಟ್ಟು ಹಾಡ ಬಯಸಿದೆ” ಎಂಬ ಮಾತೇ ಮಾರ್ಮಿಕವಾದುದಾಗಿದೆ.
“ಶ್ರೀ” ಅವರ ಇಂಗ್ಲಿಷ್ ಗೀತೆಗಳು (ಕನ್ನಡಕ್ಕೆ ರೂಪಾಂತರವಾಗಿ ಬಂದ ಕವಿತೆಗಳು) ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹಾದಿ ತೆರೆದವು. ಕನ್ನಡ ನಾಡಿನುದ್ದಕ್ಕೂ ಕಾವ್ಯ ಕ್ಷೇತ್ರದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಯಿತು.
ಅಲ್ಲಿಂದ ನವೋದಯದ ಕಾವ್ಯದ ಅಲೆ ಕವಿಗಳ ಅಭಿವ್ಯಕ್ತಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ಬಗೆ ಬಗೆ ಅವಕಾಶಗಳು ಕಂಡು ಬಂದು “ಅರುಣೋದಯ ಕಾಲ” ಹೊನ್ನೇಸರ ಹೊಂಬಣ್ಣದಂತೆ- ಇಡೀ ಕರ್ನಾಟಕದಲ್ಲಿ ಮೆಲ್ಲ ಮೆಲ್ಲಗೆ ಪಸರಿಸುತ್ತಾ ನಾಡಿನುದ್ದಗಲ ಸಾಂಸ್ಕೃತಿಕ ಉತ್ಕರ್ಷ ಕಾಣಿಸಿಕೊಂಡಿತು.
ಮುದ್ದಣ ಕವಿಯ ನಂತರದಲ್ಲಿ ಕನ್ನಡ ನವೋದಯ ಕವಿಗಳ ಕಾವ್ಯ ಕೃಷಿ ಸಮೃದ್ಧವಾಗಿದೆ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ್, ಡಿವಿಜಿ, ಮಾಸ್ತಿ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ, ರಾಜರತ್ನಂ, ವಿ.ಸೀ., ಎಂ.ವಿ.ಸೀ … ಒಬ್ಬರಲ್ಲ ಇಬ್ಬರಲ್ಲ ಹರಿದದ್ದು ಅನಂತವಾದ ಅನನ್ಯವಾದ ಅಸೀಮವಾದ ಕಾವ್ಯ ಕಾವೇರಿ.
ಹಾಗೆಯೇ ಅನಕೃ, ತರಾಸು, ಕಟ್ಟೀಮನಿ, ಚದುರಂಗ, ನಿರಂಜನ ಹೀಗೆ ಒಂದು ದೊಡ್ಡ ಪಟ್ಟಿಯನ್ನೇ ನಾವು ನೀಡಬಹುದು. ಟಿ.ಪಿ. ಕೈಲಾಸಂ, ಶ್ರೀರಂಗ ಮುಂತಾಗಿ ನಾಟಕ ಕ್ಷೇತ್ರದಲ್ಲೂ ಹೊಸ ಹೊಸ ಆಯಾಮಗಳು ತೆರೆದುಕೊಂಡವು.
ನವೋದಯ ಕಾವ್ಯದ ಸಂದರ್ಭದಲ್ಲಂತೂ ಬಿಎಂಶ್ರೀ ತರುವಾಯ ಕುವೆಂಪು, ಬೇಂದ್ರೆ, ಪು.ತಿ.ನ., ಕೆ.ಎಸ್.ನ. …. ಒಬ್ಬರಲ್ಲ ಇಬ್ಬರಲ್ಲ. ಒಬ್ಬೊಬ್ಬ ಕವಿಯೂ ಅನರ್ಘ್ಯರತ್ನವೇ!
ಕನ್ನಡ ಸಾಹಿತ್ಯದ ಬೃಹತ್ ವಾರಿಧಿಯಲ್ಲಿ ಮೀಯದವರಿಲ್ಲ. ಮಹಿಳೆಯರ ಪಾತ್ರವೂ ಅದ್ಭುತವೇ! ಕೊಡಗಿನ ಗೌರಮ್ಮ, ತ್ರಿವೇಣಿ, ವಾಣಿ, ಡಾ. ಗಿರಿಜಮ್ಮ- ಇವರೆಲ್ಲರ ಕಾಣಿಕೆಗಳೂ ಅಮೂಲ್ಯ. ಇಂದಿನ ವೈದೇಹಿ, ನೇಮಿಚಂದ್ರರವರೆಗೆ- ನಡೆದು ಬಂದ ಸಾಹಿತ್ಯದ ಹೆಜ್ಜೆ ಗುರುತುಗಳ ದಾರಿಯೇ ಒಂದು ಉಜ್ವಲ ದಾಖಲೆ!
ಎಂಥ ಹೊಸ ಮಾರ್ಗವೂ ಕಾಲ ಕಳೆದಂತೆ ಪೇಲವವಾಗಿ ಹಳತಾಗುವುದು ನೈಸರ್ಗಿಕ ನಿಯಮ. ಮೂರುವರೆ ದಶಕಗಳ ಕಾಲ ನಿರಂತರ ಮೊಳಗಿದ ರಮ್ಯ ಕಾವ್ಯ ಮಾರ್ಗಕ್ರಮ ಕ್ರಮೇಣ ಒಂದೇ ಬಂಡೀ ಜಾಡಿಗೆ ಬಿದ್ದು ಸವಕಲಾಯಿತು.
ಆಗ ಹೊಸತಿನ ಅನ್ವೇಷಣೆಯಲ್ಲಿದ್ದ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರು ನವ್ಯಕಾವ್ಯ ಮಾರ್ಗಕ್ಕೆ ನಾಂದಿ ಹಾಡಿದರು. “ನಡೆದು ಬಂದ ದಾರಿಯ ಕಡೆ ಹೊರಳಿಸಬೇಡ – ಕಣ್ಣು ತಿರುಗಿಸಬೇಡ” ಎಂಬಂಥ ಘೋಷಣೆಯೊಂದಿಗೆ ವಿನೂತನ ಮಾರ್ಗದಲ್ಲಿ ಕಾವ್ಯದ ಪಯಣವನ್ನು ಮುಂದುವರೆಸಿದರು. “ಅನ್ಯರೊರೆಹುದನೇ ಬರೆಬರೆದು ಭಿನ್ನವಾಗಿದೆ ಮನವು” ಎಂದು ಆತ್ಮವಿಮರ್ಶೆಯನ್ನೂ ಮಾಡಿಕೊಂಡು ಹೊಸ ನಾಡನ್ನು ಕಟ್ಟುವ ಕಡೆಗೆ ಅಭಿಮುಖವಾಗುತ್ತಾರೆ.
ಮೊಗೇರಿ ಗೋಪಾಲ ಕೃಷ್ಣ ಅಡಿಗರ ಆಗಿನ ನಿಲುವು ಕಟ್ಟುವೆವು ನಾವು ಹೊಸ ನಾಡೊಂದನು ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು!
ಕೋಟಿ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು! ಆದಾವು ಕರೆದಾವು ವಾಂಛಿತವನು.
ಹೀಗೆ ಭಾವಾವೇಶದಿಂದ ಬರೆದ ಕವಿ ಮುಂದಿನ ತಮ್ಮ ಕವನ ಸಂಕಲನಗಳಲ್ಲಿ ಸಂಪೂರ್ಣ ಬದಲಾಗುತ್ತಾರೆ… ಆಂಗ್ಲ ನವ್ಯ ಕಾವ್ಯದ ಕೇಂದ್ರ ಬಿಂದು ಎನ್ನಿಸಿಕೊಂಡ ಟಿ.ಎಸ್. ಎಲಿಯಟ್ಟನ ಕಾವ್ಯದ ಜಾಡಿನಲ್ಲಿ ಸಾಗುತ್ತಾರೆ. ಗೇಯತೆಗಿಂಥ ಗದ್ಯದ ಲಯಗಾರಿಕೆಯತ್ತ ಹೆಚ್ಚು ಗಮನ ನೀಡಿ ವೈಚಾರಿಕತೆಯ ಕಾವ್ಯವನ್ನೇ ಸೃಜಿಸುತ್ತಾರೆ. ಆಗ ಬಂದದ್ದೇ ಹಿಮಗಿರಿಯ ಕಂದರ. ವರ್ಧಮಾನ, ದೆಹಲಿಯಲ್ಲಿ, ಶ್ರೀರಾಮನವಮಿಯ ದಿನ ಇತ್ಯಾದಿ ನನ್ನ ಕಾವ್ಯದ ಅಗ್ರಮಾನ್ಯ ಕವಿತೆಗಳು.
ಕನ್ನಡ ನಾಡಿನಲ್ಲಿ ಸುಪ್ರಸಿದ್ದ ಕಾದಂಬರಿಕಾರರಾದ ಡಾ. ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು. ಅಡಿಗರ ಹಾದಿಯಲ್ಲಿ ಸಾಗಿದ ಯು.ಆರ್. ಅನಂತಮೂರ್ತಿ, ಬಿ.ಸಿ. ರಾಮಚಂದ್ರ ಶರ್ಮ, ಪಿ. ಲಂಕೇಶ್, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಗಿರಡ್ಡಿ ಗೋವಿಂದರಾಜ, ಸುಮತೀಂದ್ರ ನಾಡಿಗ್, ಡಾ. ಬುದ್ದಣ್ಣ ಹಿಂಗಮಿರೆ, ಸುಬ್ರಾಯ ಚೊಕ್ಕಾಡಿ, ಕೆ.ವಿ. ತಿರುಮಲೇಶ್, ದೊಡ್ಡರಂಗೇಗೌಡ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಮಣ ರಾವ್, ವೇಣುಗೋಪಾಲ ಸೊರಬ, ಮುಂತಾದವರು ತುಳಿದ ಹಾದಿ ಸಂಪೂರ್ಣ ನವ್ಯ.
ಕಾಲಕ್ರಮೇಣ ನವ್ಯವೂ ತನ್ನ ಪ್ರಭಾವ ಕುಂಠಿತವಾದಾಗ ಹುಟ್ಟಿಕೊಂಡದ್ದು ಬಂಡಾಯ ಕಾವ್ಯ. ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚೆನ್ನಣ್ಣ ವಾಲೀಕಾರ, ಸರಜೂ ಕಾಟ್ಕರ್ ಮುಂತಾದವರು ಶತಶತಮಾನಗಳಿಂದ ತುಳಿತಕ್ಕೆ ಒಳಗಾದವರು ದಮನಿತರ, ಶೋಷಣೆಗೆ ಒಳಗಾದವರ ಮೌನ ಆಕ್ರಂದನಕ್ಕೆ ನಾಲಗೆಯಾದರು. ಹೊಸ ಬಗೆಯ ನುಡಿಗಟ್ಟುಗಳಿಂದ ಹಿಂದುಳಿದ ವರ್ಗದವರ ಪಾಲಿಗೆ ಖಡ್ಗವೇ ಕಾವ್ಯವಾದದ್ದು ಈಗ ಇತಿಹಾಸ.
ನವ್ಯೋತ್ತರ ಕನ್ನಡ ಕಾವ್ಯದ ಸಂದರ್ಭದಲ್ಲಿ ಮೂಡ್ನಾಕೂಡು
ಚಿನ್ನಸ್ವಾಮಿ, ಡಾ. ಎಲ್. ಹನುಮಂತಯ್ಯ, ಡಾ. ಅರವಿಂದ ಮಾಲಗತ್ತಿ, ಲಕ್ಷಿö್ಮÃಪತಿ ಕೋಲಾರ, ಕೆ.ಬಿ. ಸಿದ್ದಯ್ಯ, ಸುಬ್ಬು ಹೊಲೆಯಾರ್, ಡಾ. ಕೃಷ್ಣಪ್ಪ ಕೆ., ಡಾ. ಎಚ್.ಟಿ. ಪೋತೆ, ಡಾ. ವಡ್ಡಗೆರೆ ನಾಗರಾಜಯ್ಯ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಸುಮಾ ಯು.ಬಿ., ಡಾ. ಬಿ.ಕೃಷ್ಣಪ್ಪ, ಡಾ. ಮಳ್ಳೂರು ನಾಗರಾಜು, ಡಾ. ರಾಜಪ್ಪ ದಳವಾಯಿ, ಡಾ. ದೇವಯ್ಯ ಹರವೆ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ದು. ಸರಸ್ವತಿ, ಡಾ. ಅನುಸೂಯಾ ಕಾಂಬಳೆ, ಡಾ. ಅಪ್ಪಗೆರೆ ಸೋಮಶೇಖರ, ಡಾ. ಸುಜಾತಾ ಚಲವಾದಿ, ಡಾ. ಸದಾಶಿವ ದೊಡ್ಡಮನಿ, ಡಾ. ಅರ್ಜುನ ಗೊಳಸಂಗಿ, ಡಾ. ಟಿ.ಎಂ. ಭಾಸ್ಕರ್, ಡಾ. ಸತ್ಯಾನಂದ ಪಾತ್ರೋಟ, ಡಾ. ಅಣ್ಣಮ್ಮ, ಟಿ. ತಿಪ್ಪೇಸ್ವಾಮಿ ಕೆರೆಯಾಗಲಹಳ್ಳಿ ಮುಂತಾದವರು ಕನ್ನಡ ಸಾಹಿತ್ಯದಲ್ಲಿ ದಲಿತ ಬದುಕಿನ ಅನಾವರಣವನ್ನು ಮಾಡಿದ್ದಾರೆ.
ಹಿಂದೆಂದಿಗಿಂತಲೂ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಜಾಗೃತಿ ಮುಂಚೂಣಿಯಲ್ಲಿದೆ. ಇಡೀ ಭಾರತೀಯ ಪರಿಸರವನ್ನು ಮಹಿಳೆಯರು ತಮ್ಮ ಕಲಾಕೃತಿಗಳಲ್ಲಿ ಅತ್ಯುತ್ತಮವಾಗಿ ಅನಾವರಣ ಮಾಡುತ್ತಿರುವುದು ವಾಸ್ತವದ, ಶುಭದ ಸಂಗತಿಯಾಗಿದೆ.
ಶ್ರೀಮತಿ ವೈದೇಹಿ, ಶ್ರೀಮತಿ ಸಂಧ್ಯಾ ಪೈ, ಪ್ರೊ. ಸ. ಉಷಾ, ಶ್ರೀಮತಿ ಸವಿತಾ ನಾಗಭೂಷಣ, ಡಾ. ಕೆ. ರಾಜೇಶ್ವರಿ ಗೌಡ, ಶ್ರೀಮತಿ ಪ್ರತಿಭಾ ನಂದಕುಮಾರ್, ಡಾ. ನೇಮಿಚಂದ್ರ, ಶ್ರೀಮತಿ ಎಚ್.ಎಲ್. ಪುಷ್ಪ, ಶ್ರೀಮತಿ ಪಾರ್ವತಿ ಐತಾಳ್, ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ, ಡಾ. ಪಿ. ಚಂದ್ರಿಕಾ, ಪ್ರೊ. ಎಲ್.ವಿ. ಶಾಂತಕುಮಾರಿ, ಶ್ರೀಮತಿ ಹೇಮಾ ಪಟ್ಟಣಶೆಟ್ಟಿ, ಡಾ. ಎಂ.ಎಸ್. ಆಶಾದೇವಿ, ಡಾ. ಮಲ್ಲಿಕಾ ಘಂಟಿ, ಶ್ರೀಮತಿ ಬಾ.ಹ. ರಮಾಕುಮಾರಿ, ಡಾ. ತಮಿಳ್ ಸೆಲ್ವಿ, ಶ್ರೀಮತಿ ರೂಪಾ ಹಾಸನ, ಶ್ರೀಮತಿ ಎಂ.ಆರ್. ಕಮಲ, ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮಾ, ಡಾ. ಪ್ರೀತಿ ಶುಭಚಂದ್ರ, ಶ್ರೀಮತಿ ಎಚ್.ಎಸ್. ಮುಕ್ತಾಯಕ್ಕ, ಡಾ. ಪದ್ಮಿನಿ ನಾಗರಾಜು, ಶ್ರೀಮತಿ ಬಿ.ಎನ್. ಸುಮಿತ್ರಾಬಾಯಿ, ಶ್ರೀಮತಿ ತೇಜಸ್ವಿನಿ ನಿರಂಜನ, ಡಾ. ಎಚ್.ಎಸ್. ಶ್ರೀಮತಿ, ಡಾ. ಗಾಯತ್ರಿ ನಾವಡ, ಡಾ. ಕಮಲಾ ಹಂಪನಾ, ಶ್ರೀಮತಿ ಮಧು ವೆಂಕಾರೆಡ್ಡಿ, ಶ್ರೀಮತಿ ಮೀನಾ ಮೈಸೂರು, ಶ್ರೀಮತಿ ಶಾಂತಾ ಇಮ್ರಾಪುರ, ಡಾ. ಧರಣೀದೇವಿ ಮಾಲಗತ್ತಿ, ಶ್ರೀಮತಿ ಕೆ. ಷರೀಫಾ, ಡಾ. ಕವಿತಾ ಕುಸುಗಲ್ಲ, ಶ್ರೀಮತಿ ಭಾನು ಮುಷ್ತಾಕ್, ಶ್ರೀಮತಿ ವಿಜಯಾ ಸುಬ್ಬರಾಜ್, ಶ್ರೀಮತಿ ಟಿ.ಸಿ. ಪೂರ್ಣಿಮಾ, ಶ್ರೀಮತಿ ಸಬೀಹ ಭೂಮಿಗೌಡ, ಶ್ರೀಮತಿ ಸರಸ್ವತಿ ಚಿಮ್ಮಲಗಿ, ಡಾ. ವೀಣಾ ಶಾಂತೇಶ್ವರ, ಡಾ. ಶೈಲಜಾ ಉಡಚಣ, ಡಾ. ಸಬಿತಾ ಬನ್ನಾಡಿ, ಡಾ. ವಿನಯಾ ಒಕ್ಕುಂದ, ಡಾ. ಎಚ್.ಎಸ್. ಅನುಪಮಾ, ಶ್ರೀಮತಿ ಶಾರದಾ, ಡಾ. ವಿಜಯಶ್ರೀ ಸಬರದ, ಡಾ. ಸಿ.ಎಸ್. ವಿಜಯಲಕ್ಷಿö್ಮ, ಶ್ರೀಮತಿ ಸಾರಾ ಅಬೂಬಕರ್, ಲತಾ ರಾಜಶೇಖರ್, ಬ್ಯಾಡಗಿ ಸಂಕಮ್ಮ.
ಕನ್ನಡ ಚಲನಚಿತ್ರ ಗೀತ ಸಾಹಿತ್ಯ ವಿಭಾಗದಲ್ಲಿ ಜಿ.ವಿ. ಐಯ್ಯರ, ಕುರಸೀ, ಹುಣಸೂರು ಕೃಷ್ಣಮೂರ್ತಿ, ಚಿ. ಸದಾಶಿವಯ್ಯ ತರುವಾಯ ಬಂದ ಗೀತ ರಚನಕಾರರಲ್ಲಿ ಪ್ರಮುಖರಾದ ಗೀತಪ್ರಿಯ, ಆರ್.ಎನ್. ಜಯಗೋಪಾಲ್, ಚಿ. ಉದಯಶಂಕರ, ವಿಜಯಾನಾರಸಿಂಹ, ಡಾ. ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಶ್ಯಾಮಸುಂದರ ಕುಲಕರ್ಣಿ, ಹಂಸಲೇಖ, ವಿ. ಮನೋಹರ್, ಜಯಂತ ಕಾಯ್ಕಿಣಿ, ಡಾ. ವಿ. ನಾಗೇಂದ್ರಪ್ರಸಾದ್, ಗೋಪಾಲ ವಾಜಪೇಯಿ, ಕಲ್ಯಾಣ್, ಕವಿರಾಜ್, ಡಾ. ಡಿ. ಭರತ್, ಹೃದಯಶಿವ, ಮುಂತಾದವರ ಸಾಹಿತ್ಯ ಸೇವೆ ಶ್ಲಾಘನೀಯವಾದುದು.
ಇನ್ನಾದರೂ ಎಲ್ಲ ಮಡಿವಂತಿಕೆಗಳನ್ನು ಬಿಟ್ಟು ಮುಕ್ತವಾಗಿ ತೆರೆದ ಮನಸ್ಸಿನಿಂದ ಚಲನಚಿತ್ರ ಗೀತ ಸಾಹಿತ್ಯದ ಸಂಪುಟಗಳು “ಗೀತಕೋಶ”ದ ಸ್ವರೂಪದಲ್ಲಿ ಪ್ರಕಟವಾಗಲಿ. ಸಾಹಿತ್ಯಕ ವೇದಿಕೆಗಳಲ್ಲಿ ಆ ಸಾಹಿತ್ಯವೂ ಗಂಭೀರವಾಗಿ ಚರ್ಚಿತವಾಗಲಿ.
ವೈದ್ಯಕೀಯ ಸಾಹಿತ್ಯ
ಇಂದು ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕವಾದ ವಿನೂತನ ಆವಿಷ್ಕಾರಗಳು ಬದಲಾವಣೆಯನ್ನು ತರುತ್ತಿವೆ. ಖಜಿಟಲೀಕರಣ ಎಲ್ಲ ಕಡೆ ವ್ಯಾಪಕವಾಗುತ್ತಿರುವುದು ಶುಭದ ಸಂಕೇತವಾಗಿದೆ. ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಡಾ. ಡಿ.ಎಸ್. ಶಿವಪ್ಪ, ಡಾ. ನಾಗಲೋಟಿಮಠ ಅವರುಗಳು ಈ ದಿಸೆಯಲ್ಲಿ ಹೆಚ್ಚಿನ ಕನ್ನಡಕ್ಕೆ ಕಾಣಿಕೆ ನೀಡಿದ್ದಾರೆ. ಇನ್ನು ಮೂಲ ವಿಜ್ಞಾನಕ್ಕೆ ಸಂಬಂಧಿಸಿದಂತೆ ಜಿ.ಟಿ. ನಾರಾಯಣ ರಾವ್, ಟಿ.ಆರ್. ಅನಂತರಾಮು, ಬಿ.ಎಸ್. ಶೈಲಜಾ, ವಸುಂಧರಾ ಭೂಪತಿ ಮುಂತಾದವರು ಮೌಲ್ವಿಕ ಗ್ರಂಥಗಳನ್ನೇ ಹೊರತಂದಿದ್ದಾರೆ. ವೈಮಾನಿಕ ಚಿಂತನೆಗಳಿಗೆ ಅನುಗುಣವಾಗಿ ಜಿ.ಆರ್. ಗೋಪಿನಾಥ ಸಾಕಷ್ಟು ಕೆಲಸ ಮಾಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಡಾ. ಯು.ಆರ್. ರಾವ್, ಡಾ. ಸಿ.ಎನ್.ಆರ್. ರಾವ್ ಅವರ ಕಾಣಿಕೆ ಸ್ಮರಣೀಯವಾದುದಾಗಿದೆ. ಕೃಷಿ ಕ್ಷೇತ್ರದಲ್ಲಿ ಡಾ. ವಸಂತ ತಿಮಕಾಪುರ, ಡಾ. ರಾಘವ ರೆಡ್ಡಿ, ನರೇಂದ್ರ ರೈ ದೇರ್ಲ- ಹೀಗೆ ಕನ್ನಡ ಸಾಹಿತ್ಯವು ಕನ್ನಡಿಗನ ಬೌದ್ಧಿಕ ತೃಷೆಗೆ ತಣಿವನ್ನು ಉಂಟು ಮಾಡುವ ರೀತಿಯಲ್ಲಿ ಬಹುಮುಖಿ ಆಯಾಮವನ್ನು ತೋರಿರುವುದು ಅಭಿನಂದನೀಯವಾಗಿದೆ.
ಯಾವುದೇ ಭಾಷೆಯಲ್ಲಿ ಆದ್ಯತೆ ದೊರಕಬೇಕಾದದ್ದು ಆ ಭಾಷೆಯ ಮಕ್ಕಳ ಸಾಹಿತ್ಯದ ರಚನೆಕಾರರಿಗೆ. ಕನ್ನಡದಲ್ಲಿ ರಾಜರತ್ನಂ, ಎಚ್.ಎಸ್. ವೆಂಕಟೇಶಮೂರ್ತಿ, ಸಿಸು ಸಂಗಮೇಶ, ಟಿ.ಎಸ್. ನಾಗರಾಜ ಶೆಟ್ಟಿ, ಆನಂದ ಪಾಟೀಲ, ತಮ್ಮಣ್ಣ ಬೀಗಾರ, ಬಸು ಬೇವಿನಗಿಡದ, ಶಂಗು ಬಿರಾದಾರ, ಕಂಚ್ಯಾಣಿ ಶರಣಪ್ಪ, ಡಾ. ಜಯಶ್ರೀ ಅರವಿಂದ ಮುಂತಾದವರು ಚಿರಂತನವಾದ ಕಾಣಿಕೆಯನ್ನು ನೀಡಿದ್ದಾರೆ.
ವನ್ಯಜೀವಿಗಳ ಬಗೆಗೆ ಅತ್ಯುದ್ಭತವಾದ ಕೃತಿಗಳನ್ನು ನೀಡಿದವರು ಡಾ. ಉಲ್ಲಾಸ ಕಾರಂತ ಮತ್ತು ಕೃಪಾಕರ ಹಾಗೂ ಸೇನಾನಿ ಅವರುಗಳು. ಶ್ರೀಮತಿ ಸುಮಂಗಲಾ ಮಮ್ಮಿಗಟ್ಟಿ ಅವರ ಕೊಡುಗೆಯೂ ಉಲ್ಲೇಖನೀಯವಾದುದು.
ಶ್ರೀಮತಿ ಸುಧಾ ಮೂರ್ತಿ, ಲತಾ ಗುತ್ತಿ, ಡಾ. ಎಸ್.ಪಿ. ಪದ್ಮಪ್ರಸಾದ್, ನೇಮಿಚಂದ್ರ, ಸುಚರಿತಾ ಹೆಗಡೆ ಅವರು ಕಣ್ಣಿಗೆ ಕಟ್ಟುವ ಹಾಗೆ ಪ್ರವಾಸ ಕಥನಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಪುಸ್ತಕೋದ್ಯಮ
ಕರ್ನಾಟಕ ರಾಜ್ಯ ಗ್ರಂಥಾಲಯಕ್ಕೆ ಸಂಬಂಧಿಸಿದ ಹಾಗೆ ನಾಲ್ಕು ಮಾತು ನಾನು ಹೇಳಲೇಬೇಕಾಗಿದೆ. ಈ ಹೊತ್ತು ಪುಸ್ತಕೋದ್ಯಮ ಸೊರಗಬಾರದು; ಅದು ಪರಿಪ್ಲುತವಾಗಬೇಕು. ಗ್ರಂಥಗಳು ಸರಕುಗಳಲ್ಲ. ಅವುಗಳಲ್ಲಿ ಸಂಸ್ಕೃತಿಯ ಹೃದಯವಿದೆ. ಬಿಬಿಎಂಪಿ ಗ್ರಂಥಾಲಯಗಳಿಗೆ ಕೊಡಬೇಕಾದ ಹಣ ಸುಮಾರು ೫೦೦ ಕೋಟಿ ಕರವನ್ನು ಬಾಕಿ ಉಳಿಸಿಕೊಂಡು ಆ ಹಣವನ್ನು ಬೇರೆ ಖಾತೆಗಳಿಗೆ ನೀಡಿ ಪುಸ್ತಕೋದ್ಯಮಕ್ಕೆ ಸಲ್ಲಬೇಕಾದ ಧನ ಸಂಗ್ರಹವನ್ನು ತಡೆ ಹಿಡಿದು ಬಹಳ ಅನ್ಯಾಯ ಮಾಡಿದೆ.
ಹೀಗಾದರೆ, ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ? ಪುಸ್ತಕ ಬರೆಯುವ ಬರಹಗಾರರು ಬದುಕುವುದು ಹೇಗೆ? ಇಂಥ ವಿಷಮ ಸ್ಥಿತಿಯಲ್ಲಿ ಪುಸ್ತಕೋದ್ಯಮ ಬೆಳೆಯುವುದಾದರೂ ಹೇಗೆ? ನಮ್ಮ ಪ್ರೀತಿಯ ಸರ್ಕಾರ ಇದನ್ನು ಸರಿಪಡಿಸಬೇಕು. ಪುಸ್ತಕೋದ್ಯಮಕ್ಕೆ ಕಾಯಕಲ್ಪ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇದುವರೆಗೆ ಸಗಟು ಖರೀದಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಮೂಲಕ ಒಬ್ಬೊಬ್ಬ ಪ್ರಕಾಶಕರಿಂದ ೩೦೦ ಪ್ರತಿಗಳನ್ನು ಮಾತ್ರ ಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಪುಸ್ತಕೋದ್ಯಮ ಬದುಕುಳಿಯಬೇಕಾದರೆ ನೆರೆಯ ರಾಜ್ಯಗಳಾದ ತಮಿಳು ನಾಡು, ಕೇರಳದಲ್ಲಿರುವಂತೆ ಕನಿಷ್ಠ ೫೦೦ ಪ್ರತಿಗಳನ್ನಾದರೂ ಕೊಳ್ಳುವ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ವರ್ಷ ಖರೀದಿಸಿದ ಪುಸ್ತಕದ ಹಣವನ್ನು ಪ್ರಕಾಶಕರಿಗೆ ತಲುಪಿಸುವ ತುರ್ತು ಕಾರ್ಯವೂ ಆಗಬೇಕಿದೆ.
ಕನ್ನಡ ಶಾಸ್ತ್ರೀಯ ಭಾಷೆ
ಸರ್ಕಾರ ತುರ್ತಾಗಿ ಗಮನಹರಿಸಬೇಕಾದ ಕೆಲವು ವಿಷಯಗಳು
ಅಕ್ಟೋಬರ್ ೩೦, ೨೦೦೮ ರಂದು ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಿತು. ಆದರೆ ಅದು ನಾಮಕಾವಸ್ಥೆ ಘೋಷಣೆಯಾಗಿ ಉಳಿದಿದೆ. ತಮಿಳು ಭಾಷೆ ಮೊದಲಬಾರಿಗೆ ೨೦೦೪ರಲ್ಲಿ ಈ ಸ್ಥಾನಮಾನ ಪಡೆಯಿತು.
ತಮಿಳುನಾಡು ಸರ್ಕಾರ ಈ ನಿಟ್ಟಿನಲ್ಲಿ ಅನೇಕ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆರಂಭದಿಂದಲೇ ವಾರ್ಷಿಕ ೭-೮ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ನೆರವನ್ನು ಪಡೆಯುತ್ತಿದೆ. ಹದಿನೆಂಟು ವರ್ಷದಲ್ಲಿ ನೂರಾರು ಕೋಟಿ ರೂಪಾಯಿಗಳು ತಮಿಳು ಶಾಸ್ತ್ರೀಯ ಭಾಷೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಹರಿದು ಬಂದಿದೆ.
ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸೂಕ್ತವಾದ ಕಾರ್ಯಕ್ರಮ ರೂಪಿಸದೇ ಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಕೇಂದ್ರದಿಂದ ಕೇವಲ ೨-೩ ಕೋಟಿ ರೂ. ನೆರವು ಪಡೆದಿರಬಹುದು. ಇದು ನಮ್ಮ ಜಡತೆಯ ಕುರುಹಲ್ಲವೇನು?
ಬಹಳ ವಿಳಂಬವಾಗಿ ಹೋದ ವರ್ಷದಿಂದ ಮೈಸೂರಿನಲ್ಲಿ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥಾನದ ಅಂಗ ಸಂಸ್ಥೆಯಾಗಿ, ಅದರ ಅಧೀನದ ಕಚೇರಿಯಾಗಿ ರೂಪಿಸಿದೆ. ಸರ್ಕಾರ ಇದಕ್ಕೆ ಒಂದು ಜಾಗ ಕೊಡುವಲ್ಲಿಯೂ ಗಮನಹರಿಸಲಿಲ್ಲ. ಕೊನೆಗೆ ಮೈಸೂರು ವಿಶ್ವವಿದ್ಯಾನಿಲಯದವರು ಜಾಗ ಕೊಟ್ಟರು. ಹೀಗಾಗದರೆ ಹೇಗೆ? ಕನ್ನಡಿಗರು ಬೆಳೆಯುವದೆಂತು?
ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಆಗಬೇಕು.
ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಕೇಂದ್ರದಿಂದ ನೆರವು ಪಡೆಯುವುದು ಇವುಗಳ ಬಗ್ಗೆ ಕಾಲಕಾಲಕ್ಕೆ ಚರ್ಚಿಸಿ ಯೋಜನೆಗಳನ್ನು ರೂಪಿಸುವ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು, ಎಲ್ಲಾ ಅಕಾಡೆಮಿಗಳ ಅಧ್ಯಕ್ಷರು, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಇತಿಹಾಸ ಅಕಾಡೆಮಿ ಮೊದಲಾದ ಎಲ್ಲ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರುಗಳಾಗಿರಬೇಕು.
ಕೇಂದ್ರದ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು.
ಮೊಟ್ಟಮೊದಲಿಗೆ ಈ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ಈ ಕೇಂದ್ರದ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು, ಕಚೇರಿ ಸಿಬ್ಬಂದಿ ವರ್ಗದವರನ್ನು ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ನೇಮಿಸಬೇಕು. ಈ ಬಗ್ಗೆ ರಾಜ್ಯ ತಮಿಳುನಾಡಿನ ಮಾದರಿಯಲ್ಲಿಯೇ ಸ್ವಾಯತ್ತ ಕೇಂದ್ರ ರಚಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು. ತಮಿಳು ಭಾಷೆಗೆ ನೀಡುತ್ತಿರುವಷ್ಟೇ ನೆರವನ್ನು ಕನ್ನಡಕ್ಕೂ ನೀಡಬೇಕು.
ಶಾಸ್ತ್ರೀಯ ಭಾಷಾ ಅಧ್ಯಯನದ ಉಪ ಕೇಂದ್ರಗಳ ಸ್ಥಾಪನೆ ಆಗಬೇಕು.
ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಉಪಕೇಂದ್ರಗಳನ್ನು ಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಬೆಂಗಳೂರು, ಕರ್ನಾಟಕ ಸಂಘ ಧಾರವಾಡ, ಮೊದಲಾದ ಕನ್ನಡಪರ ಸಂಘಗಳನ್ನು ಶಾಸ್ತ್ರೀಯ ಭಾಷೆಯ ಅಧ್ಯಯನದ ಉಪ ಕೇಂದ್ರಗಳನ್ನಾಗಿ ಸ್ಥಾಪಿಸಬೇಕು. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಶಾಸ್ತ್ರೀಯ ಭಾಷೆ
ಅಧ್ಯಯನ ಅಭಿವೃದ್ಧಿ ಅಡಿಯಲ್ಲಿ ಕೇಂದ್ರದಿಂದ ನೆರವನ್ನು ಪಡೆಯಬೇಕು.
ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆಗಬೇಕು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ, ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗವನ್ನು ಮಾಡಿ ಅದಕ್ಕೆ ಒಬ್ಬರು ಹೆಚ್ಚುವರಿ ಆಯುಕ್ತರನ್ನು ನೇಮಿಸಿ, ಅವರಿಗೆ ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೀಡಬೇಕು.
ಈ ವಿಭಾಗವು ಕನ್ನಡ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರದ ಸಂಸ್ಥೆಗಳೊಡನೆ, ವಿಶ್ವವಿದ್ಯಾನಿಲಯಗಳೊಡನೆ ಸಮನ್ವಯ ಸಾಧಿಸಿ, ಶಾಸ್ತ್ರೀಯ ಭಾಷೆ ಅಭಿವೃದ್ಧಿ ಕಾರ್ಯಗಳು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಎಲ್ಲ ಸಂಸ್ಥೆಗಳಿಗೂ ಪ್ರತ್ಯೇಕ ಯೋಜನೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ನೀಡಬೇಕು.
ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ಆಗಬೇಕು.
ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷಾ ಅಧ್ಯಯನ ವಿಭಾಗವನ್ನು ತೆರೆದು ಅದಕ್ಕೆ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು ನೇಮಿಸಲು ಸರ್ಕಾರ ಪೂರ್ಣ ನೆರವು ನೀಡಬೇಕು. ಅದೇ ರೀತಿ ಹೊರನಾಡಿನ ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲೆಲ್ಲಿ ಕನ್ನಡ ವಿಭಾಗಗಳಿವೆ, ಅದನ್ನು ಬಲಪಡಿಸಿ, ಅಲ್ಲಿಯೂ ಕೂಡಾ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ವಿಭಾಗವನ್ನು ಮಾಡಬೇಕು. ಈ ಎರಡೂ ವಿಭಾಗಗಳಿಗೆ ಕರ್ನಾಟಕ ಸರ್ಕಾರ ಪೂರ್ಣ ನೆರವನ್ನು ನೀಡಬೇಕು. ಈ ಬಗ್ಗೆ ಅಂದಾಜು ಮಾಡಿ ಕೇಂದ್ರಕ್ಕೆ ಕಳುಹಿಸಿ ಶಾಸ್ತ್ರೀಯ ಭಾಷೆ ಅಡಿಯಲ್ಲಿ ಹಣಕಾಸಿನ ನೆರವನ್ನು ಪಡೆಯಬೇಕು.
ವಿಶ್ವವಿದ್ಯಾನಿಲಯಗಳಿಂದ ಶಾಸನ ಸಂಪುಟಗಳ ಪ್ರಕಟಣೆ, ಹಳಗನ್ನಡ ಕಾವ್ಯಗಳ ಪ್ರಕಟಣೆ, ಹಸ್ತಪ್ರತಿಗಳಲ್ಲಿ ಉಳಿದಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಕಾವ್ಯಗಳನ್ನು ಪ್ರಕಟಿಸುವ ಯೋಜನೆಗಳನ್ನು ರೂಪಿಸಬೇಕು.
ಕನ್ನಡದ ಪ್ರಮುಖ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕೃತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು.
ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಶಾಸನಾತ್ಮಕ ಮಾನ್ಯತೆ
ಈಗ ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಈ ಎಲ್ಲ ಕಾರ್ಯಕ್ರಮಗಳಿಗೆ ಶಾಸನಾತ್ಮಕ ಮಾನ್ಯತೆ ಇರುತ್ತದೆ. ಈ ವಿಧೇಯಕವನ್ನು ವಿಧಾನಸಭಾ ಅಧ್ಯಕ್ಷರ ಮೂಲಕ ಜಂಟಿ ಸದನದ ಸಮಿತಿಗೆ ಒಪ್ಪಿಸಿ, ಮೂರು ತಿಂಗಳಲ್ಲಿ ವಿಧೇಯಕ ಸಿದ್ಧಪಡಿಸಿ, ಬರುವ ಜನವರಿ ತಿಂಗಳ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಿ, ರಾಷ್ಟçಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು.
ತಮಿಳುನಾಡಿನ ಯೋಜನೆಗಳ ಮಾದರಿಯನ್ನು ಅಧ್ಯಯನ ಮಾಡಬೇಕು
ತಮಿಳು ಭಾಷೆಯನ್ನು ಶಾಸ್ತ್ರೀಯ ಭಾಷಾ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಮಿಳುನಾಡು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ, ಯಾವ ಯಾವ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಿ, ವರದಿಯನ್ನು ಪಡೆದು, ಅದರಂತೆ ನಮ್ಮ ರಾಜ್ಯದಲ್ಲೂ ಕ್ರಮ ಜರುಗಿಸಬೇಕು.
ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೇಳಿದರೆ, ತಕರಾರು ಎತ್ತಿದರೆ, ತಮಿಳುನಾಡು ಹೊರಡಿಸಿರುವ ಆದೇಶ ಅಧಿಸೂಚನೆಗಳನ್ನು ಲಗತ್ತಿಸಿ ಉತ್ತರ ನೀಡಬೇಕು.
ಅಂತರಂಗದ ಹಸಿವು ನುಡಿ ಪ್ರೇಮಕ್ಕೆ ಮೂಲವಾಗಲಿ
ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವುದು ಪ್ರತಿಯೊಬ್ಬರಲ್ಲೂ ಈ ಹೊತ್ತಿನ ಸಂದರ್ಭ ಸನ್ನಿವೇಶಗಳಲ್ಲಿ ನೆಲೆಗೊಂಡಿದೆಯೇ ಎಂಬ ಪ್ರಶ್ನೆ ಬಹಳ ಮುಖ್ಯ ಹಾಗೂ ಸಂಕೀರ್ಣವೆಂದು ನಾನು ಭಾವಿಸಿದ್ದೇನೆ. ಭಾಷೆ – ಪ್ರದೇಶಗಳ ದೃಷ್ಟಿಯಿಂದ ಅಸಮತೋಲನದ ಭೀತಿಯಲ್ಲೇ ನಾವು ಇಂದು ಬಾಳುತ್ತಿದ್ದೇವೆ. ಸಾಹಿತ್ಯ – ಸಂಸ್ಕೃತಿಯ ಬಾಧ್ಯತೆಯನ್ನು ಪ್ರಧಾನವಾಗಿ ಇಂದಿನ ಯುವಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.
ರಭಸದ ಅಥವಾ ತರಾತುರಿಯ ಜೀವನ ಶೈಲಿಯೇ ಸಾಕು ಎಂದು ಅದರಲ್ಲೇ ಓಲಾಡುತ್ತಿರುವವರಿಗೆ ನಿಯಂತ್ರಿತವಾದ ರೀತಿಯಲ್ಲಿ ಕಡಿವಾಣ ಹಾಕಿ ನುಡಿಕನ್ನಡದ ಒಳಗೆ ಅವರನ್ನು ತರಲೇಬೇಕಾದ ಅವಶ್ಯಕತೆ ಇದೆ. ಸಮಾಜ ಚಲನಶೀಲವೂ, ಪರಿವರ್ತನ ಶೀಲವೂ ಹೌದು, ಆದರೆ ಹಾಗೆ ಸ್ಥಿತ್ಯಂತರಗೊಳ್ಳುವ ಸಾಮಾಜಿಕ ಪರಿಚಲನೆಗಳ ಅಪಸವ್ಯಗಳನ್ನು ನಾವು ಮನಗಾಣಬೇಕಾಗಿದೆ. ಈ ನಿಟ್ಟಿನಲ್ಲಿ ಹಿರಿಯರು ಕಿರಿಯ ಜನಾಂಗವನ್ನು ತಿದ್ದಲೇಬೇಕಾಗಿದೆ. ಹಿರಿಯರ, ಪ್ರಾಜ್ಞರ ಅನುಭವಗಳ ರಾಶಿ ಹಾಗೂ ಕಿರಿಯರ ಉತ್ಸಾಹ ಸಮಪಾಕಗೊಂಡು ಸಂಸರ್ಗವನ್ನು ಪಡೆದಾಗ ಸಾಹಿತ್ಯ ಭಾಷೆ ಸಂಸ್ಕೃತಿಗಳ ಅಂದಕ್ಕೆ ಒಂದು ಆಕೃತಿ ದೊರೆಯುತ್ತದೆ.
ಹಿರಿಯರೂ ಸಹ ತಾವು ನಂಬಿಕೊಂಡು ಬಂದ ಪರಿಪಾಲಿಸಿಕೊಂಡು ಬಂದ ಹಳೆಯ ರೂಢಿಗತ ಪರಂಪರಾಗತ ಮೌಲ್ಯಗಳನ್ನು ಸರಿ ಎನ್ನುವುದಾಗಲಿ ಕಿರಿಯರು ಹಿರಿಯರ ಮಾತುಗಳಲ್ಲಿ ವ್ಯರ್ಥವೆಂದು ಅದರಲ್ಲಿ ದೋಷ ಹುಡುಕುವುದಾಗಲಿ ಆದರೆ ಅಲ್ಲಿ ಯಾವ ಸಕಾರಾತ್ಮಕ ಕ್ರಿಯೆ – ಪ್ರಕ್ರಿಯೆಗಳೂ ಆಗದೆ ಕೇವಲ ಶೂನ್ಯತೆಯನ್ನು ಸೃಷ್ಟಿಸಿಕೊಳ್ಳುವ ದುರಂತವಾಗುತ್ತದೆ.
“ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು” ಎಂಬ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಸಾಲು ಹೇಳುವಂತೆ ಸಾಂಘಿಕ ಹಾಗೂ ಒಗ್ಗೂಡುವಿಕೆಯ ಸಾಮರಸ್ಯ ಏರ್ಪಡಬೇಕಾಗಿದೆ. ಇದು ಪರಸ್ಪರ ಕೊಡುಕೊಳ್ಳುವಿಕೆಯ ಅಂತರ್ಗತ ಧ್ಯೇಯೋದ್ದೇಶಗಳಿಂದ ಆಗುತ್ತದೆ. ಸಕಾರಾತ್ಮಕವಾದ ಯೋಚನೆ, ಯೋಜನೆ, ಆಲೋಚನೆ, ಅಭಿರುಚಿಗಳ ವಿನಿಮಯಗಳಿಂದ ಈ ಬಗೆಯ ಅನುಸಂಧಾನ, ಅನುಸರಣ ಸಾಧ್ಯ.
“ಸುಲಿದ ಬಾಳೆಯ ಹಣ್ಣಿನಂದದಿ” ಎಂಬ ಮಹಾಲಿಂಗರಂಗನ ಮಾತನ್ನು ಎಷ್ಟರ ಮಟ್ಟಿಗೆ ಭಾಷಾ ಸ್ವರೂಪಗಳಲ್ಲಿ ಕನ್ನಡವನ್ನು ಬಳಸುವುದರಲ್ಲಿ ನಾವು ಪ್ರಯತ್ನಪಟ್ಟಿದ್ದೇವೆ. ಕ್ರಿಯಾಶೀಲತೆಯು ಕರ್ತವ್ಯವಾಗಬೇಕೆಂಬ ಛಲ, ವ್ರತನಿಷ್ಠ ಸಂಕಲ್ಪ ಇಲ್ಲದಿದ್ದರೆ, ಪ್ರಬಲವಾದ ಇಚ್ಛಾಶಕ್ತಿ ಇಲ್ಲದಿದ್ದರೆ, ಕನ್ನಡದ ಘನತೆ ಔನ್ನತ್ಯ ಮತ್ತು ಅದರ ಕುರಿತಾದ ಕಾಳಜಿ, ಆಸಕ್ತಿಗಳು ಮನಸ್ಸಿಗೆ ಮುಟ್ಟುವ ಸಾಧ್ಯತೆ ಬಹಳ ನಗಣ್ಯ ಹಾಗೂ ಕ್ಷೀಣವಾಗಿ ಬಿಡುತ್ತವೆ.
ಕುವೆಂಪು, ಬೇಂದ್ರೆ, ಕಯ್ಯಾರ ಕಿಂಞ್ಞಣ್ಣ ರೈ, ಗೋವಿಂದ ಪೈ, ಆಲೂರು ವೆಂಕಟರಾಯರು, ಅನಕೃ, ಮ. ರಾಮಮೂರ್ತಿ ಮುಂತಾದವರೆಲ್ಲ ಕೇವಲ ಕನ್ನಡವನ್ನು ಬರೆದು ಸುಮ್ಮನಾಗಿಬಿಡಲಿಲ್ಲ, ಬದಲಾಗಿ ಕನ್ನಡಕ್ಕಾಗಿ ಅದಮ್ಯ ನಿಷ್ಠೆಯನ್ನು ಬೆಳೆಸಿಕೊಂಡು ಕನ್ನಡವೆಂಬ ನುಡಿವೆಣ್‌ಗೆ ಸಹಕರಿಸಿದರು. “ಅಖಂಡ ಕರ್ಣಾಟಕ ಅಲ್ತೋ ರಾಜಕೀಯ ನಾಟಕ” ಎನ್ನುತ್ತಾರೆ. “ಖಡ್ಗಕ್ಕಿಂತ ಲೇಖನಿ ಹರಿತ” ಎಂದು ಕುವೆಂಪು ಕನ್ನಡವನ್ನು “ಭಾರತ ಜನನಿಯ ತನುಜಾತೆಯಾಗಿರಿಸಿ” ಅಭಿಮಾನ ಉಕ್ಕಿಸಿದ್ದಾರೆ.
“ಕನ್ನಡವು ಕನ್ನಡವ ಕನ್ನಡಿಸುತಿರಬೇಕು” ಎಂಬ ಅಮೃತವಾಣಿ ವರಕವಿ ಬೇಂದ್ರೆಯವರದ್ದು. ಕೊಂಕಣಿ ಮನೆ ಮಾತಿನ ಕನ್ನಡದ ಮೊತ್ತ ಮೊದಲ ರಾಷ್ಟçಕವಿ ಗೋವಿಂದ ಪೈ ಅವರಂತೂ ಬಹುಭಾಷಾ ವಿಶಾರದರಾಗಿಯೂ ಸಹ “ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಹರಸು ತಾಯೆ ಸುತರ ಕಾಯ ನಮ್ಮ ಜನ್ಮದಾತೆಯೇ’’ ಎಂದು ಕನ್ನಡ ಮಾತೆಯನ್ನು ಹೃನ್ಮನಕ್ಕೆ ಇಳಿಸಿದರು.
“ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕವಶ್ಯ ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ” – ಎಂಬ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಸಾಲುಗಳು ಇಂದಿಗೂ ಕನ್ನಡದ ದೈನ್ಯ ಸ್ಥಿತಿ ಹಾಗೂ ಪ್ರಕ್ಷÄಬ್ಧ ಗತಿ ಸ್ಥಿತಿಗಳಿಗೆ ಪ್ರಸ್ತುತವಾಗಿ ಪರಿಣಾಮಕಾರಿಯಾಗಿದೆ.
ಕನ್ನಡದ ಭವ್ಯ ಇತಿಹಾಸ, ಪರಂಪರೆ ಶತಶತಮಾನಗಳ ಹಿನ್ನೆಲೆಗಳಿಂದ ಅದರ ಸಂರಚನೆ ವಿಧಾನಗಳನ್ನು ಅನುಲಕ್ಷಿಸುವ ಕ್ರಮ ನಿಜಕ್ಕೂ ಸರಿಯಾದ ಕ್ರಮವೇ ಹೌದು, ಆದರೆ ಅಷ್ಟಕ್ಕೇ ಸೀಮಿತವಾದರೆ ಸಾವಿರಾರು ವರ್ಷಗಳಿಂದ ಬಾಳುತ್ತಿರುವ ಕನ್ನಡ ಮತ್ತು ಕನ್ನಡಿಗರ ವಿಕಾಸಶೀಲತೆ ಸರಿಯಾದ ಹಂತದಲ್ಲಿ ವಿನ್ಯಾಸಗೊಳ್ಳುವುದಿಲ್ಲ. ಕ್ರಮಬದ್ಧವಾದ ರೂಪುರೇಷೆ ಹಾಗೂ ಅದಕ್ಕೆ ತಕ್ಕಂತೆ ಆಗಬೇಕೆಂಬ ಅವಿರತವಾದ ಹೋರಾಟದ ಅನಿವಾರ್ಯತೆ ಇದೆ. “ಕನ್ನಡವನ್ನು ಶಾಸ್ತ್ರೀಯ ಭಾಷೆ” ಎಂದು ಘೋಷಿಸಿ ಹಲವು ವರ್ಷಗಳೇ ಆಗಿದ್ದರೂ ಕನ್ನಡಕ್ಕೆ ಆಗಬೇಕಾದ ಕಾರ್ಯಗಳು ಆ ಗತಿಯಲ್ಲೇ ಸಾಗಿದೆ. ಭ್ರಮಾಧೀನ ಸ್ಥಿತಿಯಲ್ಲಿ ನಲುಗಿ ಕೊರಗಿ ಕರಗುತ್ತಿರುವವರಿಗೆಲ್ಲ ಭ್ರಮನಿರಸನದ ಹಂತವೂ ಬಂದೊದಗುವುದರಲ್ಲಿ ಸಂಶಯವಿಲ್ಲ. ಜಾಗತೀಕರಣದ ಪ್ರಭಾವ ಅದರ ಭರಾಟೆ ಎಂದೆಲ್ಲ ಇಂದು ಬೊಬ್ಬೆ ಇಡುತ್ತಿದ್ದೇವೆ. ಹಾಗೆ ನೋಡಿದರೆ, ಜಾಗತೀಕರಣದ ಪ್ರಭಾವ ಇಂದು ನಿನ್ನೆಯದ್ದಲ್ಲ. ಬಹಳ ಹಿಂದಿನಿಂದಲೂ ಇದೆ. ಅನೇಕ ದಶಕಗಳ ಹಿಂದೆಯೇ ಕುವೆಂಪು ಅವರು ಇದನ್ನು ತಮ್ಮ “ಹಾಳೂರು” ಎಂಬ ಪದ್ಯದಲ್ಲಿ ಮನೋಜ್ಞವಾಗಿ ಹೇಳಿದ್ದಾರೆ. ಜನವಲಸೆ, ನಿರಾಶ್ರಿತ ಬದುಕಿನ ತಲ್ಲಣಗಳನ್ನು ಕುವೆಂಪು ಅವರು ಹೇಳಿರುವುದು ಬಹಳ ಗಮನೀಯ ಸಂಗತಿ ನಿನಗೆ ವಸನವಿತ್ತವರೀಗೆ? ಎಂದು ಪ್ರಶ್ನಿಸುತ್ತಾರೆ.
ಆದ್ದರಿಂದಲೇ “ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು” ಎಂಬ ನುಡಿಮಂತ್ರವನ್ನು ಕುವೆಂಪು ಹೇಳಿದ್ದರಲ್ಲಿ ಸತ್ಯ ತಥ್ಯ ಎರಡೂ ಇದೆ. ಈ ದೃಷ್ಟಿಯಲ್ಲಿ ಆಧುನಿಕತೆಯನ್ನು ಸೈರತೆ, ಸ್ವೇಚ್ಛೆಗೆ ಬಳಸಿಕೊಳ್ಳದೆ ಶುದ್ಧವಾಗಿ ವಿನಿಯೋಗಿಸಿಕೊಳ್ಳುವುದೇ ನುಡಿಕಂಕಣಕ್ಕೆ ಪೂರಕವಾಗಿ ಇಂಬಾಗಿ ಒದಗಿಬರುತ್ತದೆ. ಆದರೆ ಇದು ಸುಲಭವಲ್ಲ ಇದಕ್ಕೆ ಬೇಕಾದ ಶೃದ್ಧೆ, ಕ್ಷಮತೆ, ಕಾರ್ಯತತ್ಪರತೆ ಅತ್ಯಗತ್ಯ ಹಾಗೆಂದು ನುಡಿಸೌಧವನ್ನು ಪ್ರಜ್ಞಾಪೂರ್ವಕವಾಗಿ ಕಟ್ಟುವ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಅಭಿಲಾಷೆಯನ್ನು ನಾವೇ ಹೊಂದದಿದ್ದರೆ ಹೇಗೇ? ಸಹಕಾರ ಸಮನ್ವಯದ ಅಡಿಯಲ್ಲಿ ಕನ್ನಡವನ್ನು ಕಲಿಸುವ ಇಂಗಿತ ನಮ್ಮಲ್ಲಿ ಜವಾಬ್ದಾರಿಯಾಗಬೇಕಾಗಿದೆ. ಇಂದಿಗೂ ಗಡಿನಾಡಿನ ಪ್ರದೇಶಗಳಲ್ಲಿ ಭೌಗೋಳಿಕವಾಗಿ ಬೌದ್ಧಿಕತೆಗೆ ಕನ್ನಡಿಗರ ಅಸ್ತಿತ್ವವೇ ತೀರಾ ಕಳವಳಕಾರಿಯಾಗಿದ್ದು ಆತಂಕ ಹಾಗೂ ಅತಂತ್ರಸ್ಥಿತಿಯಲ್ಲಿ ಕನ್ನಡಿಗರು ಬಾಳುತ್ತಿದ್ದಾರೆ.
ಕನ್ನಡವನ್ನು ಎದೆಯ ಸಂಪ್ರೀತಿಯಿಂದ ಕಲಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಬೇಕಾಗಿದೆ. ಅಂತರಂಗದಲ್ಲಿ ಆ ಹಸಿವು ಮೂಡಿಕೊಳ್ಳದೆ ರೂಢಿಸಿಕೊಳ್ಳದೆ ಹೋದರೆ ಕನ್ನಡಿಗರಾಗಿ ಕರ್ನಾಟಕದಲ್ಲಿ ನೆಲೆಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇರದು. ಪರಭಾಷಿಕರು, ಅನ್ಯಸಂಸ್ಕೃತಿಯ ನಿರಂತರವಾಗಿ ಆಕ್ರಮಿಸಿಕೊಳ್ಳುವಿಕೆಯ ನಡುವೆ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಗಣನೀಯ ಪ್ರಮಾಣದ ಎಚ್ಚರದ ನಡೆಯ ಆದ್ಯತೆ ಇದೆ. ಸಹನೆ – ಸಂಯಮದ ರಹದಾರಿಗಳಿಂದಲೇ ಇದನ್ನು ಸಾಧಿಸಬೇಕಾಗಿದೆ. ವಿಜ್ಞಾನ – ತಂತ್ರಜ್ಞಾನ ಇವುಗಳನ್ನು ನಮ್ಮ ಜನ ಸ್ವೀಕರಿಸುತ್ತಿರುವುದು ಬಹಳ ವಿಶೇಷ ಹಾಗೂ ಸಂತಸದ ಸಂಗತಿ. ಆದರೆ ಹಾಗೆ ಒದಗಿ ಬರುವ ವಿಜ್ಞಾನ ತಂತ್ರಜ್ಞಾನದ ಕುರಿತಾದ ಕೃತಿಗಳು ಕನ್ನಡಕ್ಕೆ ಬರುವಂತೆ ಸುಲಭ. ಕನ್ನಡದಲ್ಲಿ ತಾಂತ್ರಿಕ ಪದಗಳೂ ಅರ್ಥವಾಗುವಂತೆ ಆದಾಗ ಕನ್ನಡಕ್ಕೆ ಕನ್ನಡ ಜಗತ್ತಿಗೆ ನಿಜವಾದ ಕೊಡುಗೆಯಾಗುತ್ತದೆ. ವಿಜ್ಞಾನ – ತಂತ್ರಜ್ಞಾನ ಹಾಗೂ ಅದರ ಪರಿಭಾಷೆಗಳನ್ನು ಕನ್ನಡದಲ್ಲಿ ಬಳಸಲೂ ಸಾದ್ಯವಿದೆ, ಬರೆಯಲೂ ಸಾಧ್ಯವಿದೆ ಎನ್ನುವುದಕ್ಕೆ ರಾಮಕೃಷ್ಣರಾವ್, ಟಿ.ಆರ್. ಅನಂತರಾಮು, ಜೆ.ಆರ್. ಲಕ್ಷö್ಮಣರಾವ್ ಎಚ್.ಎ. ಪುರುಷೋತ್ತಮರಾವ್ ಇವರು ಕನ್ನಡದಲ್ಲಿ ವಿಜ್ಞಾನದ ಸಾಹಿತ್ಯವನ್ನು ತಲುಪಿಸಲು ಮಾಡಿದ ಕೃಷಿ ಖುಷಿಯ ವಿಚಾರ. ಜೊತೆಗೆ ವಿಜ್ಞಾನದ ಭಾಷೆ ಒಣ ಭಾಷೆ ಅಲ್ಲ, ಶುಷ್ಕವೂ ಅಲ್ಲ, ಕನ್ನಡ ಮಾಧ್ಯಮದಲ್ಲೇ ಓದಿ ಅತ್ಯುತ್ತಮ ವಿಜ್ಞಾನಿಗಳೆನಿಸಿದ ಪ್ರೊ. ಯು.ಆರ್. ರಾವ್ ಹಾಗೂ ಸಿ.ಎನ್.ಆರ್. ರಾವ್ ಅವರುಗಳ ಸಾಧನೆ ನಮಗೆ ಮಾದರಿಯಾಗಬೇಕು.
ಇಂದಿನ ಸಾಹಿತ್ಯದ ಬಗ್ಗೆ ಕೆಲವು ಅಪಸ್ವರಗಳಿವೆ. ಆದರೆ ಕವಿಯಾದವನಿಗೆ ಸ್ವಾತಂತ್ರö್ಯ, ಸ್ವತಂತ್ರ ಎರಡೂ ಇದ್ದೇ ಇರುತ್ತದೆ. ಅದು ಅವನ ಪ್ರಥಮ ಹಕ್ಕು ಸಹಾ ಹೌದು. ಭಾರತೀಯ ಕಾವ್ಯ ಮೀಮಾಂಸೆಯಲ್ಲೇ ಇದಕ್ಕೆ ನೇರ ಉದಾಹರಣೆಯಿದೆ. ಕವಿ ಕಾವ್ಯ ಭೂಮಿಕೆಯನ್ನು ಕುರಿತು ಅಂದಿನ ಪ್ರಸಿದ್ಧ ಲಾಕ್ಷಣಿಕನಾದ ಆನಂದವರ್ಧನನು ತನ್ನ ಧ್ವನ್ಯಾಲೋಕ ಕೃತಿಯಲ್ಲಿ “ತನ್ನ ಅಪಾರವು ಅಗಾಧವೂ ಆದ ಕಾವ್ಯ ಜಗತ್ತಿನಲ್ಲಿ ಕವಿಯೇ ಸಾರ್ವಭೌಮ. ಅವನ ಕಾವ್ಯಕ್ಕೆ ಅವನೇ ಸೃಷ್ಟಿಕರ್ತ, ಬ್ರಹ್ಮ ! ತನಗೆ ಹೇಗೇ ಬೇಕೋ ಹಾಗೆ ಅವನು ತನ್ನ ಕಾವ್ಯದ ಜಗತ್ತನ್ನು ಬದಲಾಯಿಸಿಕೊಳ್ಳಲು ಅವನಿಗೆ ಸ್ವಾತಂತ್ರö್ಯ ಇದ್ದೆ ಇದೆ’’ ಎಂದು ಹೇಳಿದ್ದಾನೆ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ಕುವೆಂಪು ಅವರ ಮಾತಿನೊಳಗಿನ ಸತ್ವ ದರ್ಶನವೂ ಹೀಗೆ ಪ್ರಮುಖವಾಗುತ್ತದೆ. ಸಹೃದಯ ಕವಿ ಇವುಗಳ ಭಾವ ಪ್ರಪಂಚ ಇವತ್ತು ವ್ಯಾಪಕವಾಗಿ ಆಗುತ್ತಿಲ್ಲ ಮತ್ತು ಆ ಭಾವ ವಲಯಗಳನ್ನು ಮುಟ್ಟಲು ಇಂದಿನ ಜನತೆ ಸ್ಪಂದಿಸುತಿಲ್ಲವೆಂಬ ಕೂಗು ಇರುವುದೂ ನಿಜ; ಆದರೆ ಸಮಾಜವು ವಾಹಿನಿಯಂತೆ ಹರಿಯವ ಗುಣಧರ್ಮದ್ದು, ಹೊಸ ನೀರು ಬಂದು ಹಳೆಯ ನೀರು ಕೊಚ್ಚಿ ಹೋಗುವ ಜಾಗ ಬಿಡುವ ಪರಿಪಾಠ ಸಹಜ ಆದರೆ ಹಳೆಯದು ಎಂಬ ಕಾರಣಕ್ಕೆ ಎಲ್ಲ ಸಾಹಿತ್ಯವನ್ನು ಮೂಲೆಗೆ ಬಿಸಾಡುವ ಪ್ರವೃತ್ತಿ, ಹೊಸದೆಂಬ ಕಾರಣಕ್ಕೆ ಎಲ್ಲ ಮಾದರಿಯ ಸಾಹಿತ್ಯವೂ ಶ್ರೇಷ್ಠ ಎಂಬ ಭಾವನೆಗೆ ಒಗ್ಗಿಕೊಳ್ಳಬಾರದು.
ಹೊಸತರಲ್ಲೂ ಹಳತುಂಟು, ಹಳತರಲ್ಲೂ ಹೊಸದುಂಟು ಎಂಬುದೇ ಸಾಹಿತ್ಯದ ಆಮೂಲಾಗ್ರವಾದ ಸತ್ಯದೀಪಿಕೆ. ಕನ್ನಡ ಭಾಷೆಗೆ ನೂರಾರು ಸಾಹಿತಿಗಳ ನುಡಿಮುಡಿಪು, ನುಡಿ ಕಾಣಿಕೆ ಅನಿರ್ಬಂಧಿತವಾಗಿ ಸಾಗುತ್ತಾ ಮಾಗುತ್ತಾ ಬಂದಿದೆ. ಆದರೆ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೇ? ಎಂಬ ಡಾ. ಜಿ.ಎಸ್. ಶಿವರುದ್ರಪ್ಪನವರ ಮಾತು ಬಹಳ ಔಚಿತ್ಯ ಪೂರ್ಣ. ಈ ದಿಸೆಯಲ್ಲಿ ಕನ್ನಡ ನಾಡು ಹಾಗೂ ನುಡಿಯ ಜಗತ್ತು ಇನ್ನಷ್ಟು ತನ್ನ ಹಾಸು ಬೀಸುಗಳನ್ನು ವಿಸ್ತರಿಸಿಕೊಳ್ಳಬೇಕಾಗಿದೆ.
ಬಹುಭಾಷಿಕ ಹಾಗೂ ಬಹುಸಾಂಸ್ಕೃತಿಕ ಪರಿಸರಗಳಲ್ಲಿ ಬದುಕುವ ನಮಗೆ ಮುಖ್ಯವಾಗಿ ಯಾವುದೇ ಅತಿರೇಕಗಳಿಲ್ಲದೆ ಹೋದಾಗ ಈ ಬಗೆಯ ಸಾಮರಸ್ಯ ಹಾಗೂ ಸೌಹಾರ್ದ ಬಂಧ ಬಾಂಧವ್ಯಗಳು ಏಕತ್ರಗೊಳ್ಳುತ್ತವೆ. ನಿರಭಿಮಾನ, ದುರಭಿಮಾನ ಹಾಗೂ ಅಂಧಾಭಿಮಾನ ಎಲ್ಲ ರೀತಿಯಿಂದಲೂ ಅಪಾಯ ಹಾಗೂ ದುರಂತಕ್ಕೆ ಕಾರಣವಾಗುತ್ತವೆ. ಭಾಷೆ, ನೆಲ, ಜಲ ಈ ಎಲ್ಲ ಮಜಲುಗಳಲ್ಲೂ ಈ ರೀತಿಯ ವಿಪರೀತವಾದ ಗ್ರಹಿಕೆಗಳು ಮಿತಿಮೀರಿದ ಉತ್ಪೆçÃಕ್ಷಾಪೂರಿತ ನಿಲುವುಗಳಿಂದ ನಾವು ಹೊರಬಂದು ಇದರಿಂದ ಹೊರತಾದ ಹೊಸ ಜಗತ್ತನ್ನು ಕಾಣಬೇಕಿದೆ ಮತ್ತು ಅದನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಕಾಯ್ದಿರಿಸಿ ಜತನವಾಗಿ ಕಾಪಿಟ್ಟುಕೊಂಡು ಕಾಣಿಸಬೇಕಿದೆ.
“ಬಯಕೆ ಬರುವುದರ ಕಣ್ಸನ್ನೇ ಕಾಣಾ” ಎಂಬ ಮಧುರಚನ್ನರ ಮಾತಿನಂತೆ ಆಸೆ-ಆಮಿಷಗಳಿಗೆ ದಾಸರಾಗಿ ವ್ಯಾವಹಾರಿಕ ದೃಷ್ಟಿಗಾಗಿ ಕನ್ನಡ ಎಂದಾದಲ್ಲಿ ಅದರಿಂದ ಯಾವುದೇ ಫಲಿತಗಳಾಗಲಿ ಪ್ರಯೋಜನಗಳಾಗಲಿ ಇರುವುದಿಲ್ಲ. ನಂಬಿಕೆ, ಅಚಲ ವಿಶ್ವಾಸ ನಮ್ಮ ನುಡಿ ನಾಲಿಗೆಯಾಗಬೇಕು. ಹಾಗಾದಾಗ ಮಾತ್ರ ಕನ್ನಡದ ವೈಶಿಷ್ಟö್ಯ ವೈವಿಧ್ಯತೆಗೊಂದು ಆಯಾಮ ಆದ್ಯತೆ ದೊರಕುತ್ತದೆ. ನುಡಿಯ ಲಾಲಿತ್ಯ ಹಾಗೂ ಅದರ ಅವಸ್ತಾಂತರಗಳನ್ನು ಅರಿಯದೆ ಹೋದಲ್ಲಿ ಅದು ಕೇವಲ ಭಾಷಾ ಶೂನ್ಯತೆಯನ್ನಷ್ಟೆ ಅಲ್ಲದೆ ಭಾವ ಶೂನ್ಯತೆಯನ್ನೂ ಸೃಷ್ಟಿಸಿ ಬಿಡುತ್ತದೆ.
ಕನ್ನಡದ ನೆಲ ಜಾನಪದ ಗೇಯತೆಯನ್ನು ಮೈಗೂಡಿಸಿಕೊಂಡು ಹುಲುಸಾಗಿ ವಿಪುಲವಾಗಿ ಬೆಳೆದಿರುವ ನಾಡು “ಜನವಾಣಿ ಬೇರು; ಕವಿವಾಣಿ ಹೂವು” ಎಂಬಂತೆ ಈ ಕನ್ನಡದ ಮಣ್ಣಿನ ಅಂತಃಸತ್ವ ದೇಸಿತನ, ಅಂತರಂಗದ ಸೊಗಡನ್ನೆಲ್ಲ ಗರ್ಭೀಕರಿಸಿಕೊಂಡು ಹುಟ್ಟಿದ ಹಾಡುಗಳಿಗೆ ಹಾಗೆ ಜನ್ಯವಾದ ಬೇರಿನ ಅಥವಾ ನೆಲ ಸಂಸ್ಕೃತಿಯ ಜಾನಪದ ಗೀತೆಗಳಲ್ಲಿ ಪುಣ್ಯಕೋಟಿಯ ಪ್ರಾಮಾಣಿಕತೆ, ಅರ್ಬುತನೆಂಬ ವ್ಯಾಘ್ರದ ಅನುಕಂಪೆ ಬಹಳ ವಿಶಿಷ್ಟ ಮೌಲ್ಯಗಳಾಗಿವೆ. ಜನ ಮುಖ ಬದುಕಿಗೆ ವಿಮುಖವಾಗಿ ಜನಪದ ಸಾಹಿತ್ಯ ಎಂದೂ ವರ್ತಿಸಿಲ್ಲ. ಇಲ್ಲಿಯೂ ನೋವು ನಲಿವುಗಳಿವೆ, ದುಗುಡ ದುಮ್ಮಾನಗಳಿವೆ, ಬೇಸರ – ನಿರಾಶೆಗಳಿದ್ದೇ ಇವೆ ಬಡತನ ಸೌಲಭ್ಯ ಸವಲತ್ತುಗಳಿಂದ ವಂಚಿತರಾದ ನಿಮ್ಮ ಸಮೂಹವೇ ಇದೆ. ಆದರೆ ಆ ದಾರಿಯಲ್ಲೇ ಅವರಿಗೆ ಎಲ್ಲಾ ಸಮುದಾಯದ ಜೀವ – ಜೀವನವನ್ನು ಸಾಗಿಸುವ ಹಾದಿಗಳೂ ಇವೆ. ಶಿಷ್ಟ ಸಾಹಿತ್ಯದಿಂದ ಕೊಡಲಾಗದಷ್ಟು ಸಮೃದ್ಧ ಹಾಗೂ ಸಂಪದ್ಭರಿತ ನೆಲದ ಸಾಹಿತ್ಯವೇ ಜಾನಪದೀಯರ ಮೂಲ ತಿರುಳು ಅದರ ಮಟ್ಟುಗಳು ಗೀತಿಕೆಗಳು ಪ್ರಯೋಗಗಳು ಶಿಷ್ಟ ಸಾಹಿತ್ಯ ಪ್ರಪಂಚವನ್ನು ಕ್ಷಣ ಕಾಲ ಮೂಕವಿಸ್ಮಿತರನ್ನಾಗಿಸಿ ಬೆರಗುಗೊಳಿಸುತ್ತವೆ. ನಿರಂತರತೆ ಜಾನಪದಿಯರ ಮೂಲ, ಮುಖ್ಯ ಲಕ್ಷಣ ಅದನ್ನು ಅವರು ಎಂದೆಂದಿಗೂ ಬಿಟ್ಟುಕೊಟ್ಟಿಲ್ಲ.
“ನೂಲಲ್ಯಾಕ ಚೆನ್ನಿ ನೂಲಲ್ಯಾಕ ಚೆನ್ನಿ’’ ಎಂಬ ಗಂಡನ ಮೃದುವಾದ ಹುಸಿ ಗದರುವಿಕೆ ಮುನಿಸಿಗೆ ಹೆಂಡತಿಯ ಮುಗ್ಧವಾದ ಉತ್ತರ “ನಂಗೆ ಬರೋದಿಲ್ಲೋ ಜಾಣ, ನಂಗೆ ಬರೋದಿಲ್ಲೋ ಜಾಣ” ಎಂದು. ಅದೇ ರೀತಿ ಬಡತನ, ಹಸಿವು, ಸಂಕಟ, ದೈನಿಕ ಬದುಕು ನಡೆಸುವಾಗಿನ ತಲ್ಲಣ- ತವಕಗಳು ಕಾಡಿರುವುದು ಉಂಟು. ಆದರೆ ಹಿತಮಿತವಾದ ಬದುಕಿನಲ್ಲಿ ಅವರಿಗೆ ಅದೆಲ್ಲ ಗೌಣ.
ನೆಲ್ಲಕ್ಕಿ ಬೋನವನು ಉಣಲೊಲ್ಲ ನನ್ನ ನಲ್ಲ
ಏಕೊಲ್ಲ? ಇಲ್ಲದುದಕೆ ಒಲ್ಲ !
ಅಂದರೆ ಒಳ್ಳೆಯ, ಉತ್ತಮ ಗುಣಮಟ್ಟದ ಅಕ್ಕಿಯಿಂದ ಅನ್ನ ತಯಾರಿಸಿಕೊಂಡು ಉಣ್ಣುವ ಆಸೆ ಇರುವುದು ಸಹಜ ಆದರೆ ಆ ಹಂಬಲ ಈಡೇರುವ ಸಾಧ್ಯತೆ ಇಲ್ಲ, ಏಕೆಂದರೆ ಕಾರಣ ಸುದೀರ್ಘವಾದ ಬಡತನ. ಆ ಸಾಧ್ಯತೆ ಇಲ್ಲದ್ದರಿಂದ ಉತ್ತಮ ಆಹಾರ ಸಿಗದಿದ್ದರಿಂದ ಉಣ್ಣಲು ಬಯಸದಂಥ ನುಡಿ ಇದು.
“ನಿಂಬಿಯ ಬನಾದ ಮ್ಯಾಗ ಚಂದ್ರಾಮ ಚಂಡಾಡಿದ’’ ಎಂದು ಅಷ್ಟೆಲ್ಲ ಕಷ್ಟ – ದುಮ್ಮಾನಗಳ ಮಧ್ಯೆಯೂ ಸಡಗರಿಸುವ ಸಂತೋಷಿಸುವ ನಿರ್ಮಲ ಹೃದಯ ಹಾಗೂ ಪ್ರಫುಲ್ಲಿತ ಮನೋಧರ್ಮ ಜನಪದರ ಮೂಲ; ಜಾಯಮಾನ ಮೂಡಲ್ ಕುಣಿಗಲ್ ಕೆರೆಯ ವೈಭೋಗವನ್ನು ಈ ಜಗತ್ತು ಬಣ್ಣಿಸಿಕೊಳ್ಳುತ್ತದೆ.
ಹಾಗೆಯೇ “ಭಾಗ್ಯದ ಬಳೆಗಾರ ತವರಿಗೆ ಹೋಗಿ ಬಾ” ಎಂದು ನಿರುಪಾದಿಕವಾಗಿ ಆಶಿಸಿ ಒಳಿತಿನ ಹಾರೈಕೆಯನ್ನೇ ಬಯಸುತ್ತದೆ. ವ್ಯಷ್ಟಿ ಸಮಾಜವಲ್ಲದ ಸಮಷ್ಟಿ ಸಮಾಜದ ಹಿತಚಿಂತನೆಯ ಹೂರಣವಾದ ಜಾನಪದೀಯ ಜಗತ್ತು ಕನ್ನಡ ನೆಲದ ತವನಿಧಿ ಹಾಗೂ ಶಾಶ್ವತವಾದ ಆಸ್ತಿ. ವೀರಗಾಸೆ, ಜಗ್ಗಲಿಗೆ ಮೇಳ, ಕರಗ, ಚೌಡಿಕಿಪದ ನಾನಾ ಬಗೆಯ ಉತ್ಸವಗಳು ಜಾತ್ರೆಗಳು ಎಲ್ಲವೂ ಜಾನಪದೀಯ ಸತ್ವಗಳಿಂದ ಆಕಾರ ಪಡೆದುಕೊಂಡು ವ್ಯವಸ್ಥಿತವಾಗಿ ರೂಪು ತಾಳಿದ ಮಹೋನ್ನತ ಅಂಶಗಳು.
“ಚೆಲುವಯ್ಯ ಚೆಲುವೋ ತಾನಿತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೆ” ಎಂಬ ಹಾಡಾಗಲಿ, “ಚನ್ನಪ್ಪ ಚನ್ನೆಗೌಡ ಕುಂಬಾರ ಮಾಡಿದ ಕೊಡನವ್ವ” ಎಂಬ ಜಾನಪದ ಗೀತೆಗಳಾಗಲಿ ನೂರಕ್ಕೆ ನೂರರಷ್ಟು ಗುಂಪಿನಲ್ಲಿ ಭಾಗಿಯಾಗಿ ಅವರ ಭಾವವಾಗಿ ಸಂತೃಪ್ತ ಆನಂದವನ್ನು ಸವಿದು ಇತರರಿಗೂ ಸಮಸಮವಾಗಿ ಹಂಚುವ ಅದ್ಭುತ ರಸಘಟ್ಟ.
ಗ್ರಾಮ್ಯ ಪರಿಸರ ಹಾಗೂ ಹಳ್ಳಿಗಳ ಬಗೆಗೆ ಏನೇ ಅನಾದರಗಳಿದ್ದರೂ ದಿವ್ಯ ನಿರ್ಲಕ್ಷö್ಯಗಳೇ ಇದ್ದರೂ ಜಾನಪದ ಸಂಕುಲ ನೀಡಿದ ಅನರ್ಘ್ಯ ಸಾಹಿತ್ಯ ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚೌಕಟ್ಟು ಅಸಾಧಾರಣವಾದುದು. ಇಂತಹ ಅತ್ಯಮೋಘವಾದ ಜಾನಪದ ಸಮೃದ್ಧತೆಯ ತಿಳಿವನ್ನು ಮೂಡಿಸುವ ಹಾಗೂ ಆಳವಾಗಿ ನಾಗರಿಕ ಸಮುದಾಯ ಮತ್ತು ಸುರಕ್ಷಿತ ಸಮಾಜಗಳಿಗೆ ತಲುಪಿಸುವ ಕಾರ್ಯ ಹೆಚ್ಚು ಹೆಚ್ಚಾಗಿ ಆಗಬೇಕಿದೆ. “ತಿಟ್ಹತ್ತಿ ತಿರುಗಿ ತವರು ಮನೆಯನ್ನು ನೋಡುತ್ತಾ ನೋಡುತ್ತಾ ಕಣ್ತುಂಬಿಕೊಳ್ಳುವ ಹೆಣ್ಣು ಮಗಳು ಕೇವಲ ಭಾವುಕತೆಯ ತೀವ್ರತೆಯಲ್ಲೇ ಮುಳುಗಿ ದುಃಖಿಸುವುದಿಲ್ಲ. ಗರಿಕೆಯ ಕುಡಿಹಾಂಗ ತವರು ಮನೆ ರಸಬಳ್ಳಿಯಾಗಿ ಹಬ್ಬಲಿ ಎಂದು ನಿರ್ಮಲ ಹೃದಯದಿಂದ ಹರಸಿ ಹಾರೈಸುತ್ತಾಳೆ. ಎದೆಯ ಗೂಡಿನ ತುಂಬಾ
ಅವಳಿಗೆ ತಾಯಿ ಮನೆಯ ಔನ್ನತ್ಯವೇ ಪ್ರಧಾನ.
ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಗೆ ಗಾಳಿ ಸುಳಿದು ಬಡತನವೆಲ್ಲ ಬಯಲಾದಂತೆ, ಹೊರಟು ಹೋದಂತೆ ಅಳುನುಂಗಿ ಮಗುವನ್ನು ಮಡಿಲ ಸಂತೋಷ ವ್ಯಾತ್ಸಲ್ಯದ ಜೀವವಾಗಿ ಕಂಡಂಥ ತಾಯ್ತನ ಜಾನಪದ ಹೆಣ್ಣು ಮಗಳದ್ದು. ಇಂಥ ಸಾಂಸಾರಿಕ ಬಾಂಧವ್ಯಗಳ ಬಗ್ಗೆ ಕಾರ್ಪೋರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸೆರಗಿನಲ್ಲಿ ಬಾಳುತ್ತಿರುವ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ತಿಳಿಸುವ ಕೆಲಸ ಆಗಬೇಕಿದೆ. ಸಾಮಾಜಿಕ ಒಳ ರಚನೆಯ ಪದರುಗಳಲ್ಲಿ ಅವಿಭಕ್ತ ಕುಟುಂಬದ ಚಹರೆಗಳು ಬಹುತೇಕ ಕಣ್ಮರೆಯಾಗಿ ಸಾಮೂಹಿಕ ಸಂಸಾರ, ಬಾಳುವೆಯ ಬದಲು ವಿಭಕ್ತ ಪರಿತ್ಯಕ್ತ ಕುಟುಂಬಗಳೇ ಕಂಡು ಬರುತ್ತಿರುವಾಗ ಮುಂಪೀಳಿಗೆಗೆ ಇಂತಹ ಮಣ್ಣಿನ ಸಂವೇದನೆಯ ವಾಂಛಲ್ಯ, ಅಕ್ಕರೆ, ನೋವುಗಳನ್ನೆದುರಿಸಿ ಬಾಳುವ ಜಾನಪದೀಯರ ಸತ್ಪರಂಪರೆಯನ್ನು ಒಳಗು ಮಾಡಲೇಬೇಕಾಗಿದೆ.
ಪಠ್ಯದ ಓದಿನ ಮೂಲಕವೇ ಜ್ಞಾನ, ಅಂಕೆಗಳಿಕೆಯೊಂದೇ ಮಾನದಂಡ ಎಂಬ ಭ್ರಮೆ ಹಾಗೂ ಕನ್ನಡ ಶಾಲೆಗಳ ಕಡೆಗಣನೆ, ನಿರುತ್ತೇಜಕ ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತ ಬೇಕಾಗಿರುವುದು ಸಹಾ ಇಂದಿನ ಜನರ, ಸರ್ಕಾರ ಹಾಗೂ ಎಲ್ಲರ ಪ್ರಮುಖ ಕೂಗು ಆಗಬೇಕಿದೆ. ಸರ್ಕಾರಿ ಶಾಲಾ ಕಾಲೇಜುಗಳ ದುಸ್ಥಿತಿ, ಪಾಳು ಬಿದ್ದ ಶಾಲೆ. ಸಮರ್ಪಕವಾಗಿ ಆಗದ ಪಾಠ ಪ್ರವಚನಗಳು, ದೊಡ್ಡಿಯಂತೆ ಆದ ಸರ್ಕಾರಿ ಶಾಲಾ ಕೊಠಡಿಗಳ ಈ ಅಧ್ವಾನದ ಸ್ಥಿತಿಯಿಂದ ಹೊರಬರಬೇಕಾಗಿದೆ. ಆರ್ಥಿಕ ಪುನಶ್ಚೇತನ ಮತ್ತು ಅನುದಾನದ ಯಶಸ್ವಿ ಬಳಕೆಯೂ ಸಹಾ ಇಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾಗಿದೆ.
ಭೂತ, ಭವಿಷ್ಯತ್, ವರ್ತಮಾನ, ನಿನ್ನೆ, ಇಂದು, ನಾಳೆ ಎಲ್ಲದರ ಒಟ್ಟು ಸಂಗಮವಾದಾಗ ಕನ್ನಡ ನಾಡು ನುಡಿಯ ಜಗತ್ತಿಗೆ ಹೊಸತನ ಹಾಗೂ ವಿಶಾಲ ಭೂಮಿಕೆ ಪ್ರಾಪ್ತವಾಗುತ್ತದೆ. ಆಗು ಹೋಗುಗಳ ಮನ್ವಂತರದ ಘಟ್ಟಗಳನ್ನು ಗಮನಿಸುತ್ತಲೇ ಕನ್ನಡ ಭಾಷೆಗೆ ಸ್ವಲ್ಪ ಬೇಕಾದ ಪ್ರಾಶಸ್ತö್ಯವನ್ನು ಗುರುತಿಸಿಕೊಳ್ಳಬೇಕಾಗಿದೆ ಎನ್ನುವುದು ಪ್ರಗತಿ ದಿಢೀರ್ ಆಗುವಂಥದ್ದಲ್ಲ, ಆತುರದ ಅಡುಗೆಯು ಅಲ್ಲ ಕಾಯುವಿಕೆ ತಾಳ್ಮೆಯ ಅವಲೋಕನವೇ ಭಾಷೆ ಹಾಗೂ ನಾಡು ನುಡಿಗಳ ಏಳ್ಗೆಗೂ ಪೂರಕವಾಗಬಲ್ಲದು.
“ಕನ್ನಡ ಎಂದರೆ ಬರೀ ನುಡಿಯಲ್ಲ ಹಿರಿದಿದೆ ಅದರರ್ಥ” ಎಂಬ ಕವಿವಾಣಿಯಂತೆ ನಾವು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವ ಕನ್ನಡಿಗರಾಗಬಾರದು. ಕನ್ನಡ ನೆಲದಲ್ಲಿ ಹರಡಿಕೊಂಡಿರುವ ಪರಭಾಷಿಕರೂ ಸಹ ಕನ್ನಡವನ್ನು ಕಲಿತು ಆಡುವಾಗ ನಾಡಗೀತೆ, ರೈತಗೀತೆಯನ್ನು ಗುನುಗುವಾಗ ಆಗುವ ಆನಂದವೇ ಬೇರೆ. ಈ ಹಿನ್ನೆಲೆಯಲ್ಲಿ ಜನಸ್ತೋಮದ ನಡುವೆ ಕನ್ನಡವನ್ನು ಕಲಿಸುವ ಪ್ರಕ್ರಿಯೆಗಳು ಸದಾ ವಿಸ್ತಾರಗೊಳ್ಳಬೇಕಾಗಿದೆ.
ಕನ್ನಡಕ್ಕೆ ದೊರಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳ ಪೈಕಿ ಬೇಂದ್ರೆಯವರ ಮಾತೃಭಾಷೆ ಮರಾಠಿ, ಮಾಸ್ತಿ ವೆಂಕಟೇಶ ಅಯ್ಯಂಗಾರರ ಮನೆಮಾತು ತಮಿಳು, ಕಾರ್ನಾಡರದ್ದು ಕೊಂಕಣಿ ಆದರೆ ಅವರ ಸೇವೆ ಸಾಹಿತ್ಯ ಕೃಷಿ ಕನ್ನಡಕ್ಕೆ ಅವರು ನೀಡಿದ ಕೊಡುಗೆ ಬಹಳ ವಿಭಿನ್ನ ಹಾಗೂ ವೈಶಿಷ್ಟö್ಯ ಪೂರ್ಣವಾದವುಗಳಾಗಿವೆ.
ಅದರಂತೆ ಮಲೆಯಾಳಿ ಮಾತೃಭಾಷಿಕರಾಗಿ ಕೇರಳದಲ್ಲಿ ಜನಿಸಿ ಅಲ್ಲೇ ಬಹುಕಾಲವಿದ್ದು ನಂತರ ಮೈಸೂರಿಗೆ ಬಂದು ಕನ್ನಡವನು ಕಲಿತಿದ್ದಷ್ಟೇ ಅಲ್ಲದೆ ಪಾತಾಳದಲ್ಲಿ ಪಾಪಚ್ಚಿ, ಅನರ್ಥಕೋಶ ಹೀಗೆ ಅಪೂರ್ವ ಕೃತಿಗಳನ್ನು ನೀಡಿದ ನಾ. ಕಸ್ತೂರಿಯವರ ಕನ್ನಡ ಭಾಷೆಯ ಕನ್ನಡ ಸಾಹಿತ್ಯದ ಸೃಜನಶೀಲತೆಗೆ ಮಾರು ಹೋಗದಿರಲು ಸಾಧ್ಯವೇ? ವಿದೇಶಿಯೊಬ್ಬರು ಹಿಂದೆಂದು ಕಾಣದ ನಿಘಂಟು ನೀಡಿ ಕನ್ನಡ – ಇಂಗ್ಲಿಷ ನಿಘಂಟು ಲೋಕಕ್ಕೆ ಮೇರುವಾಗಿ ಕಂಡ ಫರ್ಡಿನೆಂಡ್ ಕಿಟೆಲ್, ಭಾಷೆ ಶಾಸನಗಳಿಗೆ ಜೀವ ತೇಯ್ದ ಬಿ.ಎಲ್. ರೈಸ್, ಇ.ಪಿ. ರೈಸ್, ಮೊಗ್ಲಿಂಗ್ ಇವರೆಲ್ಲರನ್ನೂ ಕನ್ನಡಿಗರಲ್ಲ ಎನ್ನುವುದು ಸಾಧ್ಯವಿಲ್ಲ ಅವರ ಕನ್ನಡದ ಮೇಲಿನ ಅಭಿಮಾನವನ್ನು ಪ್ರಶ್ನಿಸುವ ಹಾಗೂ ಇಲ್ಲ ಫಲೀಟ್ ಅವರು ಸಂಗ್ರಹಿಸಿದ ಲಾವಣಿಗಳು ಇಂದಿಗೂ ಆ ವಿಷಯದ ಕುರಿತು ಅಧ್ಯಯನ ಮಾಡುವವರಿಗೆ ಇರುವ ಶ್ರೇಷ್ಠ ಆಕರ.
ಅಫ್ಘನ್ ಮೂಲದವರಾಗಿ ಉರ್ದು ಭಾಷಿಕರಾಗಿ ನಾಡು ನುಡಿಗೆ ಜಾನಪದ ಬುಡಕಟ್ಟು ಚಿತ್ರರಂಗ, ಸ್ವಾತಂತ್ರö್ಯ ಹೋರಾಟ ಹೀಗೆ ಬಹುಮುಖಿಯಾಗಿ ದುಡಿದು ದುಡಿದು ಜೀವ ತೇಯ್ದ ಎಸ್.ಕೆ. ಕರೀಂಖಾನರ ಸೇವೆ ಸೂರ್ಯ ಚಂದ್ರರಿರುವ ತನಕ ಶಾಶ್ವತವಾದುದು. ಇಂಥವರ ನುಡಿಕಾಣಿಕೆಯ ಕೈಂರ‍್ಯ ಕನ್ನಡದ ಬೇರುಗಳನ್ನು ಆಳವಾಗಿ ಸುಸ್ಥಿರಗೊಳಿಸಿವೆ.
ಕನ್ನಡ ಭಾಷಾ ಶಿಕ್ಷಕರು ಉಪನ್ಯಾಸಕರು ಎದುರಿಸುತ್ತಿರುವ ಮತ್ತೊಂದು ಗಂಭೀರವಾದ ಸವಾಲು ಎಂದರೆ ಹಳೆಗನ್ನಡ ಪಠ್ಯದ ಬೋಧನೆ. ಈ ವಿಚಾರದಲ್ಲಿ ಹಳೆಗನ್ನಡ ಪದ್ಯ ಗದ್ಯಗಳನ್ನು ಕಲಿಸುವುದರಲ್ಲಿ ಕನ್ನಡದ
ಬೋಧಕ ವರ್ಗದ ವಿಶೇಷ ಪಾತ್ರವಿದೆ.
ಪಂಪ, ರನ್ನ, ಪೊನ್ನ, ಅಸಗ, ದುರ್ವಿನೀತ ಇಂಥ ಕವಿಗಳ ಕಾವ್ಯಗಳ ಬಗ್ಗೆ ಇರುವ ವಿದ್ಯಾರ್ಥಿಗಳು ಹಾಗೂ ಅವರ ಬಗ್ಗೆ ವಿಶದವಾಗಿ ವಿವರಿಸದ ಸ್ಥಿತಿಯಿಂದ ವಿದ್ಯಾರ್ಥಿಗಳಿಗೆ ಈ ಕವಿಗಳ ಬಗ್ಗೆ ವಿಶೇಷ ಆಸಕ್ತಿ
ಮೂಡುತ್ತಿಲ್ಲ. ಶಾಸನಗಳು ಗ್ರಂಥ ಸಂಪಾದನಾ ಶಾಸ್ತç ಇವುಗಳು ತೆರೆಮರೆಗೆ ಸರಿದುಬಿಡುತ್ತಿವೆ.
ಪಠ್ಯದ ಓದಿಗಾಗಿ ಮಾತ್ರ ಸೀಮಿತಗೊಳಿಸುವ ಹಳೆಗನ್ನಡದ ಪದ್ಯ ಗದ್ಯಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಬೇಕಷ್ಟು ಮಾತ್ರ ತಿಳಿದು ಕೊಂಡರೆ ಸಾಲದು. ಈ ದೆಸೆಯಲ್ಲಿ ಆಮೂಲಾಗ್ರವಾದ ಬೋಧನಾಕ್ರಮ ಸಿದ್ಧವಾಗದಿದ್ದರೆ ಚಂಪೂ ಕಾವ್ಯ ಗೀತಿಕೆ ಕಂದಪದ್ಯ, ಸುನೀತ, ಷಟ್ಪದಿಗಳು ವಿದ್ಯಾರ್ಥಿಗಳಿಗೆ ಖಂಡಿತ ತಲುಪಲಾರವು.
ಈ ಅಪಾಯವನ್ನು ತಪ್ಪಿಸಲು ಇರುವ ಅನೇಕ ಪರ್ಯಾಲೋಚನೆ, ಮಾರ್ಗೋಪಾಯಗಳನ್ನು ಕುರಿತು ನಾವು ಬಹಳ ಯೋಜನಾಬದ್ದವಾಗಿ ವರ್ತಿಸಬೇಕಾಗಿದೆ. ಪಠ್ಯ ಲಯ, ಬಂಧಗಳಿಗೆ ಅನುಗುಣವಾಗಿ ಛಂದಸ್ಸು ಪ್ರಸ್ತಾರ ಕ್ರಮ ಪದ ವಿಂಗಡಣೆಯ ಬಗ್ಗೆ ಆಸಕ್ತಿ ಮೂಡಿಸದೆ ಹೋದರೆ ವಿದ್ಯಾರ್ಥಿಗಳಿಗೆ ಅರ್ಥವಾಗದೆ “ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತಾಯ್ತು” ಎಂಬಂತೆ ಆಗುತ್ತದೆ.
ಕಲಿಸುವ ಈ ವಿಧಾನಗಳಲ್ಲಿ ಉತ್ಸಾಹವಿರುವ ಬೋಧಕರು ಮತ್ತು ಅಷ್ಟೇ ಆಸಕ್ತಿ, ಆಸೆ ಮುತುವರ್ಜಿಗಳಿಂದ ಕಲಿಯವ ವಿದ್ಯಾರ್ಥಿ ಸಮೂಹ ಇಂದು ಸಿಗದಿರಬಹುದು. ಆದರೆ ಮುಂದೊಂದು ದಿನ ಛಂದಸ್ಸು, ವ್ಯಾಕರಣ, ಪದ್ಯ ಪ್ರಕಾರಗಳ ಬಗ್ಗೆ ವಿಶ್ವಾಸ ನಂಬಿಕೆಯಿಡುವ ವಿದ್ಯಾರ್ಥಿ ಜಗತ್ತು ಸೃಷ್ಟಿಯಾಗ ಬಹುದುದೆಂಬ ಖಚಿತವಾದ ಭರವಸೆ ಹಾಗೂ ಆಶಾವಾದಿತನ ಇಲ್ಲಿ ಮುಖ್ಯ.
ಇಡೀ ವಿಶ್ವವನ್ನೇ ನಡುಗಿಸಿದ ಲಕ್ಷಾಂತರ ಜೀವ – ಜೀವನಗಳನ್ನು ಬಲಿ ತೆಗೆದುಕೊಂಡ ಕೋವಿಡ್ ವೈರಸ್ ಶೈಕ್ಷಣಿಕ ಬದುಕಿಗೂ ಮಾರಣಾಂತಿಕ ಪೆಟ್ಟು ನೀಡಿರುವುದು ಸತ್ಯ. ಏಕೆಂದರೆ ಸಾರ್ವಜನಿಕರ ಬದುಕನ್ನು ಖಾಲಿ ಮಾಡಿದ ಪ್ರಕ್ಷÄಬ್ಧುತೆಯಲ್ಲಿ ನರಳುವಂತೆ ಮಾಡಿದ ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಆನ್‌ಲೈನ್ ತರಗತಿಗಳ ಮೂಲಕ ಪಾಠ ಪ್ರವಚನಗಳನ್ನು ಕಲಿಯುವ, ಕೇಳಿಸಿಕೊಳ್ಳುವ ಅನಿವಾರ್ಯ ಸನ್ನಿವೇಶ ಹುಟ್ಟಿಕೊಂಡಿತು.
ಇದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂಬುದು ಪ್ರಶ್ನೆಯಾಗದೆ ಅನಿವಾರ್ಯತೆಯಲ್ಲಿ ಆದ ಈ ಸಂಗತಿಗಳ ನಡುವೆ ಕನ್ನಡ ನುಡಿ ಕಲಿಕೆ ವಿದ್ಯಾರ್ಥಿಗಳ ಗೈರು ಹಾಜರು, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಆದ ತೊಂದರೆಗಳು ಶೈಕ್ಷಣಿಕವಾಗಿಯೂ ಹೊಡೆತ
ನೀಡಿತ್ತು.
ಹೀಗೆ ಆದ ಧಕ್ಕೆಯನ್ನು ಸರಿಹೊಂದಿಸಿಕೊಳ್ಳುವ ನಿಧಾನಗತಿಯ ಕ್ರಮಕ್ಕೆ ಈಗೀಗ ಒಗ್ಗಿಕೊಳ್ಳುತ್ತಿದ್ದೇವೆ. ಆದುದರಿಂದ ಒಟ್ಟಾರೆಯಾಗಿ ಭೌಗೋಳಿಕವಾಗಿ ಕನ್ನಡ ಭಾಷಾ ಬೋಧನೆಯು ಹಿಂದೆಂದಿಗಿಂತಲೂ ಈಗ ಅತ್ಯಂತ ಬದ್ಧತೆ ಹಾಗೂ ಹೊಣೆಗಾರಿಕೆಯಿಂದ ಆಗಬೇಕಾಗಿದೆ. ಈ ದೃಷ್ಟಿಯಲ್ಲಿ ವಿದ್ಯಾರ್ಥಿಗಳು – ಶಿಕ್ಷಕರ ನಡುವಿನ ಸೇತುಬಂಧ ಹೆಚ್ಚು ಸುಭದ್ರವಾಗಿ ಬಾಳಬೇಕಿದೆ.
ಕನ್ನಡವನ್ನು ಕಲಿಸುವ ವಿಧಾನ ಬೇರೆ ಬೇರೆ ರೂಪ ಸ್ವರೂಪಗಳನ್ನು ಹೊತ್ತು ಸಾಗಲೇಬೇಕಾಗಿದೆ. ವಿದ್ಯಾರ್ಥಿಗಳ ಮನೋಧರ್ಮ ವಯೋಮಾನದ ಲೆಕ್ಕಾಚಾರಗಳ ಹಿನ್ನೆಲೆಯಿಂದಲೂ ಕನ್ನಡದ ಕಲಿಕೆ ಹೆಚ್ಚು ಮಹತ್ವದ್ದಾಗಿದೆ. ಕೋವಿಡ್‌ನಿಂದ ಹೊರ ಬಂದು ಶಾಲಾ ಬದುಕು ಆರಂಭವಾಗಿದೆ. ಈಗ ಬೇರೆ ಬೇರೆ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯತ್ತ ಯೋಚಿಸಬೇಕಾಗಿದೆ. ದುರದೃಷ್ಟವೆಂದರೆ ಮತ್ತೆ ಕರೋನಾ ಇನ್ನೊಂದು ರೂಪದಲ್ಲಿ ರೂಪಾಂತರಿಯಾಗಿ ಒಕ್ಕರಿಸುತ್ತಿದೆ!
ಅಂತರಂಗದ ಹಸಿವು ನುಡಿಯನ್ನು ಕಟ್ಟಿ ಬೆಳಗಿಸಲು ಅನುವು ಮಾಡಿಕೊಡುತ್ತದೆ. ಕನ್ನಡಕ್ಕಾಗಿ ಹೋರಾಡಲು ನನ್ನಂಥ ಅನೇಕರು ಇದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂಬ ಅಪ್ಪಟ ಭಾಷಾ ಪ್ರೇಮಿ ನುಡಿಸೇವಕ ಅನಕೃ, ಮರಾಠಿ ಮಾತೃಭಾಷೆಯ ಜಯದೇವಿತಾಯಿ ಲಿಗಾಡೆ ಕನ್ನಡವನ್ನು ಕಲಿತು ಸಿದ್ಧರಾಮೇಶ್ವರ ಪುರಾಣ ಗ್ರಂಥ ರಚಿಸಿದ ಕ್ರಮ ನಮ್ಮಲ್ಲಿ ಇಂಥ ನುಡಿ ಪ್ರೇಮವನ್ನು ಅಂತರಂಗಪೂರ್ವಕವಾಗಿ ಹಸಿವೆಯಾಗಿಸಿಕೊಂಡು ಅಧ್ಯಯನ ಹೆಚ್ಚಿಸಬೇಕು. ಬೌದ್ಧಿಕವಾಗಿ ಪಂಡಿತ ನೆಲೆಗಟ್ಟಿನ ಪಾಂಡಿತ್ಯಪೂರ್ಣತೆಯಲ್ಲಿ ಮಾತ್ರ ಕನ್ನಡದ ನುಡಿ ಹೆಣ್ಣು ಬಂಧಿಯಾಗಬಾರದು. ಲವಲವಿಕೆಯನ್ನು ಹೆಚ್ಚಿಸುವ ತುಡಿತ ಮಿಡಿತಗಳ ಭಾಷೆಯಾಗಿ ಅಂತರಂಗದ ಹಸಿವಿನಿಂದ ಕೂಡಿ ನುಡಿಯ ತೋರಣವನ್ನು ಕಟ್ಟಲು ಎಲ್ಲರೂ ಮುನ್ನುಗುವ ಅಗತ್ಯವಿದೆ.
ಸಾಹಿತ್ಯ ಸಮ್ಮೇಳನಗಳಿಗೆ ಭವ್ಯ ಪರಂಪರೆ ಇದೆ. ಆದರೆ ಇಂಥ ಸಮ್ಮೇಳನಗಳ ಆಶಯಗಳು ಜಾರಿಯಾಗಬೇಕು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಕ್ಕೊತ್ತಾಯಗಳಿಗೆ ಮಾನ್ಯತೆ ಸಿಕ್ಕಿ ಅದಕ್ಕೆ ಕಾಯಕಲ್ಪ ಒದಗಿದಾಗ ಮಾತ್ರ ನಮ್ಮ ಅಂತರಂಗದ ಹಸಿವಿನ ಶಕ್ತಿಗೆ ಸಾರ್ಥಕತೆ ದೊರೆಯುವ ಸಾಧ್ಯತೆ. ಹಾಗಾಗಿ ಯಾವುದೇ ಹಂತದಲ್ಲೂ ಧೈರ್ಯಗೆಡದೆ ಹೋರಾಡುವ ಛಲ ಬಲ ಎರಡೂ ಆಗಿ ಕನ್ನಡದ ನುಡಿತೇರನ್ನು ಎಳೆಯಬೇಕಾಗಿದೆ. ಆದರೆ ಕೆರಳಿಸುವ ಉದ್ದೇಶಿಸುವ ಭಾಷಾ ವೈರತ್ವ ಬೇಕಾಗಿಲ್ಲ. ನಮಗೆ ಶಾಂತಿ ಸಹಬಾಳ್ವೆ, ಸೌಹಾರ್ದತೆಯ ಸಂಪದವಾಗಿ ಕನ್ನಡವು ಶಾಶ್ವತವಾಗಿ ಬಾಳ ಬೇಕಿದೆ. ಚಿನ್ನದ ಕಸ್ತೂರಿಯಾದ ಕನ್ನಡವು ಅನ್ನದ ಭಾಷೆಯೂ ಆಗಿರುವುದರಿಂದ ಆ ನುಡಿ ತಾಯಿಗೆ ಗೌರವ ತರುವ ಕೆಲಸ ನಿಷ್ಠೆಯಿಂದ ಆಗಲಿ, ಆಗೇ ಆಗುತ್ತದೆಂಬ ಗಟ್ಟಿ ನಂಬಿಕೆ ನನ್ನಲ್ಲಿ ಸದಾ ಇದ್ದೇ ಇದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ/ಅನುದಾನ ಪಡೆದುಕೊಳ್ಳುತ್ತಿರುವ ಸಂಘ, ಸಂಸ್ಥೆಗಳನ್ನು ನಿರ್ಲಕ್ಷಿಸಲಾಗುತ್ತದೆ. ನಲವತ್ತು ಐವತ್ತು ವರ್ಷಗಳಿಂದ ಕನ್ನಡ ಸಂಸ್ಕೃತಿ ಸಂವರ್ಧನೆಯ ಚಟುವಟಿಕೆಗಳನ್ನು ಬದ್ಧತೆಯಿಂದ ಮಾಡುತ್ತಿರುವ ಹಿರಿಯ ಸಂಸ್ಥೆಗಳ ಧನಸಹಾಯವನ್ನು ಕಡಿತಗೊಳಿಸಿರುವ ಅಥವಾ ಧನಸಹಾಯ ಮಂಜೂರು ಮಾಡದಿರುವ ಉದಾಹರಣೆಗಳೂ ಇವೆ. ಕನ್ನಡದ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಹೆಚ್ಚಿನ ಅನುದಾನ/ಧನ ಸಹಾಯದಿಂದ ಪೋಷಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಅವುಗಳು ಸರ್ಕಾರದ ಆಶಯ ಮತ್ತು ಯೋಜನೆಗಳನ್ನು ವಿಸ್ತಾರವಾದ ನೆಲೆಯಲ್ಲಿ ಮಾಡುತ್ತಿವೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈಗ ಸಂಘ, ಸಂಸ್ಥೆಗಳು ಧನಸಹಾಯ ಪಡೆಯಲು ಅನುಸರಿಸಬೇಕಾದ ಕಗ್ಗಂಟಿನ ಮಾರ್ಗಗಳನ್ನು ಬದಲಿಸಿ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಡುವ ಬಗ್ಗೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಈ ಮುಖಾಂತರ ಆಶಿಸುತ್ತೇನೆ.
“ಸರ್ವ ಜನಾಂಗದ ಶಾಂತಿಯ ತೋಟವಾಗಿ” ನಾಡು ನಳನಳಿಸಲಿ; ಕನ್ನಡ ತಾಯಿಯ ಗೇಹ ಹಾಗೂ ಅವಳ ಮಕ್ಕಳ ದೇಹ ಮನಸ್ಸುಗಳು ಒಗ್ಗೂಡಿ ಬಾಳಿ ನಾಡಿನ ಏಳಿಗೆಗಾಗಿ ಶ್ರಮಿಸಲಿ ಎಂಬ ನಿರ್ಮಲವಾದ ಕಾಳಜಿ ನನ್ನದಾಗಿದೆ.
ನೇಸರು ನೀಲಾಂಬರದಲಿ ನಗು ನಗುವ ತನಕ
ಕನ್ನಡದ ಅಸ್ತಿತ್ವ ಉಳಿಯಲಿ
ಕನ್ನಡದ ಅಸ್ಮಿತೆ ಅಳಿಯದಿರಲಿ.
ಕಾವೇರಿ ಕೃಷ್ಣೆಯರು ಹರಿ ಹರಿವ ತನಕ
ಕನ್ನಡದ ಚಿರಂತನತೆ ಹಸಿರಾಗಿರಲಿ;
ಬೇಲೂರು ಹಳೆಬೀಡು ಹೊಳೆ ಹೊಳೆವ ತನಕ
ಕನ್ನಡದ ಕೀರ್ತಿ ಪತಾಕೆ ಹಾರುತಿರಲಿ!
ಬೆಳ್ಗೊಳದ ಗೊಮ್ಮಟನ ನಿಲುವಿರುವ ತನಕ
ಕನ್ನಡದ ಹೆಸರು ಪಸರಿಸುತಿರಲಿ!
ನಿವೇದನೆ
ಕನ್ನಡಿಗರ ಎದೆಯಾಳದಲ್ಲಿ
ಮೊಳಗುತಿರಲಿ ಕನ್ನಡ;
ಕನ್ನಡದ ನೆಲ ನೀರು ಗಾಳಿಯಲ್ಲಿ
ಉಸಿರಾಡಲಿ ಕನ್ನಡ,
ಕನ್ನಡದ ಬಾಂದಳದಲ್ಲಿ
ಅನುರಣಿಸಲಿ ಕನ್ನಡ;
ಮನೆ ಮನೆಯ ಕಂದನ
ನಾಲಗೆಯಲ್ಲಿ ನಲಿಯಲಿ,
ನಲ್ಗನ್ನಡ ಒಳ್ಗನ್ನಡ!
ತನಿಗನ್ನಡ ಇನಿಗನ್ನಡ!
ಸಿರಿಗನ್ನಡಂ… ಗೆಲ್ಗೆ
ಸಿರಿಗನ್ನಡಂ… ಬಾಳ್ಗೆ
ಸಿರಿಗನ್ನಡಂ… ಏಳ್ಗೆ
ಡಾ. ದೊಡ್ಡರಂಗೇಗೌಡ