Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ʼಕನ್ನಡ ಈಗ ವಿಶ್ವಮುಖಿʼ: ಕನ್ನಡಕ್ಕೆ ಹೊಸ ಘೋಷಣೆ ನೀಡಿದ ಡಾ. ದೊಡ್ಡರಂಗೇಗೌಡ

Kannada sahitya sammelena president doddarangegowda gives new slogan

ಹಾವೇರಿ: ಕನ್ನಡಕ್ಕೆ ಅನೇಕ ಆಪತ್ತುಗಳ ಜತೆಗೆ ಅವಕಾಶಗಳೂ ಇದ್ದು, ಸರ್ಕಾರ, ಜನರು ಒಟ್ಟಾಗಿ ಅದರ ದಾರಿಗಳನ್ನು ಕಂಡುಕೊಳ್ಳೋಣ ಎಂಬ ಸಂದೇಶವನ್ನು ನೀಡಿದ ಡಾ. ದೊಡ್ಡರಂಗೇಗೌಡ, ʼಕನ್ನಡ ಈಗ ವಿಶ್ವಮುಖಿʼ ಎಂಬ ಹೊಸ ಘೋಷಣೆಯನ್ನು ನೀಡಿದರು.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಡಾ. ದೊಡ್ಡರಂಗೇಗೌಡರು ಭಾಷಣ ಮಾಡಿದರು.

ಕನ್ನಡಕ್ಕೆ ಒಂದು ಮೂಲ ಬೇರಿದೆ, ಅದು ನಮ್ಮ ಜಾನಪದ. ಈ ಮಣ್ಣಿನಲ್ಲಿ ನಿರಂತರ ಕೃಷಿ ಕಾಯಕ ಮಾಡುತ್ತ ಬಂದ ಈ ನಿರಕ್ಷರ ಜನ, ಲೋಕಾನುಭವವೇ ನಾಲಗೆಯ ಮೇಲೆ ನರ್ತಿಸಿದೆ. ಮಣ್ಣಿನ ಮಕ್ಕಳಿಗೆ ನಮ್ಮ ಮೊದಲ ವಂದನೆ ಇರಲಿ. ಇಂತಹ ಸಹಜ ನಾಡೋಜರ ಬಗ್ಗೆ ಗಂಟೆಗಟ್ಟಲೆ ಮಾತನಾಡಬಹುದು. ಮನಸ್ಸು ಮಾಡಿದರೆ ಪ್ರೌಢ ಪ್ರಬಂಧಗಳನ್ನೇ ಮಂಡಿಸಿ ಜನತೆಯ ಮುಂದೆ ಇಡಬಹುದು, ಸೈ ಎನ್ನಿಸಿಕೊಳ್ಳಬಹುದು. ಈ ಮಣ್ಣಿನ ಮಕ್ಕಳು ಶುದ್ಧ ಕಾಯಕ ಜೀವಿಗಳು. ಇವರು ನಾಡಿನ ಚಿರಂತನ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ.

ಮರಾಠಿಗರು ಬೆಳಗಾವಿಯನ್ನು ತಮ್ಮದೆಂದು ಹೇಳುತ್ತಿದ್ದಾರೆ. ನಾವು ಬೆಳಗಾವಿಯ ಒಂದಂಗುಲವನ್ನೂ ಬಿಡುವುದಿಲ್ಲ ಎನ್ನುವುದು ನಮ್ಮ ಶಪಥ, ನಮ್ಮ ಆಶಯ, ಅಭೀಪ್ಸೆ. ಬೇಕಿದ್ದರೆ ನೀವು ಮಹಾಜನ್‌ ವರದಿಯನ್ನು ಓದಿ. ಕೇರಳದಲ್ಲಿ ಕನ್ನಡದ ಮಕ್ಕಳಿಗೆ ಮಲೆಯಾಳಂ ಶೀಕ್ಷಕರನ್ನು ನೇಮಿಸಲಾಗುತ್ತಿದೆ. ನಿಜವಾಗಿ ಅವರು ಕನ್ನಡದ ಶಿಕ್ಷಕರನ್ನು ನೇಮಿಸಿ ಕನ್ನಡವನ್ನು ಕಲಿಸಬೇಕು ಎಂದರು.

ಒಬ್ಬ ಮಹನೀಯರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆಯೇ 1000 ಕನ್ನಡ ಶಾಲೆಗಳನ್ನು ಏಕಾಏಕಿಯಾಗಿ ಮುಚ್ಚಿದರು. ಇದು ಎಷ್ಟರ ಮಟ್ಟಿಗೆ ಸಾಧು? ಇದು ಕನ್ನಡದ ಶೈಕ್ಷಣಿಕ ಕ್ಷೇತ್ರಕ್ಕೆ ಉಂಟಾದ ಪೆಟ್ಟು. ಸುನಾಮಿಯೇ ಶೈಕ್ಷಣಿಕ ಜಗತ್ತನ್ನು ಅಪ್ಪಳಿಸಿದಂತೆ. ನಾನು ಓದಿದ ಶಾಲೆಯನ್ನು ಕೇವಲ ಏಳು ಜನರಿದ್ದಾರೆ ಎಂದು ಮುಚ್ಚುವ ಪ್ರಯತ್ನ ಮಾಡಿದಾಗ ಕಣ್ಣೀರು ಬಂದು. ದಯವಿಟ್ಟು ಮುಚ್ಚಬೇಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದೆ. ಇಂಥದ್ದನ್ನು ಮುಚ್ಚಿಬಿಟ್ಟರೆ ಏನು ಪುರುಷಾರ್ಥ ಸಾಧನೆ ಎಂದು ಕೇಳಿದೆ. ಒಬ್ಬೊಬ್ಬ ಸಂಸದರೂ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡರೆ ಸಮಸ್ಯೆ ಬಗೆಹರಿದುಬಿಡುತ್ತದೆ ಎಂದರು.

ಇಂಗ್ಲಿಷ್‌ ಭಾಷೆಯನ್ನು ಕಲಿಯಬೇಡಿ ಎಂದು ನಾನು ಎಂದಿಗೂ ಹೇಳಿಲ್ಲ. ಆದರೆ ಕನ್ನಡವನ್ನು ಕಡೆಗಣಿಸಬಾರದು. ಫ್ರೆಂಚ್‌, ಜರ್ಮನ್‌ ಸೇರಿ ಅನೇಕ ಕಡೆಗಳಲ್ಲಿ ತಮ್ಮದೇ ಭಾಷೆಯಲ್ಲಿ ಬರೆಯುತ್ತ ನೊಬೆಲ್‌ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನಮ್ಮ ತಾಯಿ ಹರಕಲು ಸೀರೆಯನ್ನು ಉಟ್ಟಿರಬಹುದು, ಆದರೆ ಎದುರು ಮನೆಯ ತುಂಡು ಲಂಗದ ಹುಡುಗಿಯ ಹಿಂದೆ ಹೋಗಬಾರದು ಎಂದು ಮಾರ್ಮಿಕವಾಗಿ ನುಡಿದರು.

ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಸದುಪಯೋಗಪಡಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಎಷ್ಟೊಂದು ಕಾರ್ಯ ಮಾಡುತ್ತಿದ್ದಾರೆ. ನಾವಿನ್ನೂ ಕಾರ್ಯಾಲಯವನ್ನೇ ಹುಡುಕುತ್ತಿದ್ದೇವೆ. ನಮ್ಮ ರಾಜ್ಯದ ಜನಪ್ರತಿನಿಧಿಗಳು, ಸಂಸದರು ಹೋರಾಟ ಮಾಡಬೇಕು. ನಾವು ನಿಮ್ಮ ಬೆನ್ನಿಗಿದ್ದೇವೆ. ನಿಯೋಗದಲ್ಲಿ ತೆರಳಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲೂ ಸಿದ್ಧ ಎಂದರು.

ನಮ್ಮ ಪುಸ್ತಕ ಪ್ರಕಾಶಕರ ಹಾಗೂ ಲೇಖಕರ ಸಂಬಂಧ ಉತ್ತಮವಾಗಿದೆ. ಆದರೆ ಸರ್ಕಾರ ಯಾವತ್ತೋ ಮಾಡಿದ ಶಾಸನದ ಪ್ರಕಾರ 300 ಪ್ರತಿಗಳನ್ನು ಮಾತ್ರ ಖರೀದಿಸುತ್ತಿದೆ. ಕೇವಲ 300 ಪ್ರತಿಗಳನ್ನು ಖರೀದಿಸುವುದರಿಂದ ಪ್ರಕಾಶಕನ, ಲೇಖಕನ ಬವಣೆ ನೀಗಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ 500 ಹಾಗೂ ಕೇರಳದಲ್ಲಿ 1000 ಪ್ರತಿ ಖರೀದಿ ಮಾಡುತ್ತಾರೆ. ಅವರಿಗೆ ಪತ್ರ ಬರೆದು ಅಂಕಿ ಅಂಶ ಪಡೆದು ಕಾರ್ಯನಿರ್ವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡಕ್ಕೆ ಹೋರಾಟ ಮಾಡಿದವರನ್ನು ಜೈಲಿಗೆ ಹಾಕುವುದು ಸರಿಯಲ್ಲ. ಅಂಥವರನ್ನು ಕೂಡಲೆ ಬಿಡುಗಡೆ ಮಾಡಬೇಕು. ಅವರೇನೂ ಪಾಪ ಮಾಡಿಲ್ಲ. ಅವರು ಯಾವುದೋ ದೇಶದಿಂದ ಬಂದು ಉಗ್ರಗಾಮಿಗಳಾಗಿ ಕೆಲಸ ಮಾಡುತ್ತಿಲ್ಲ. ತಾಯಿ ಭುವನೇಶ್ವರಿಗೆ ಅವರು ಶ್ರಮಿಸುತ್ತಿದ್ದಾರೆ.

ಕನ್ನಡಕ್ಕೆ ಈಗಾಗಲೆ ಅನೇಕ ಘೋಷಣೆಗಳಿವೆ. ಅವೆಲ್ಲವುಗಳಿಗೆ ಕಿರೀಟಪ್ರಾಯವಾದ ಒಂದು ಘೋಷಣೆಯನ್ನು ನಾನು ನೀಡುತ್ತೇನೆ ಎಂದ ದೊಡ್ಡರಂಗೇಗೌಡ ʼಕನ್ನಡ ಈಗ ವಿಶ್ವಮುಖಿ, ಕನ್ನಡ ಈಗ ವಿಶ್ವಮುಖಿ, ಕನ್ನಡ ಈಗ ವಿಶ್ವಮುಖಿʼ ಎಂದು ಮೂರು ಬಾರಿ ಘೋಷಣೆ ಮಾಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ತಾಯಿ ತೇಪೆ ಉಟ್ಟುಕೊಂಡಿದ್ದಾಳೆ ಎಂದು ಎದುರು ಮನೆಯ ತುಂಡು ಲಂಗದ ಹೆಣ್ಣುಮಗಳನ್ನು ಪ್ರೀತಿಸಬೇಡಿ: ದೊರಂಗೌ

Exit mobile version