Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ವಿರೋಧಿ ಸಾಹಿತಿಗಳೇ ಸಾಹಿತ್ಯ ಪರಿಷತ್ತಿಗೆ ಬನ್ನಿ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಕರೆ

doddarangegowda speech in kannada sahitya sammelana

ಹಾವೇರಿ: ಇಡೀ ಕನ್ನಡ ಜಗತ್ತು ಒಂದು ಕುಟುಂಬವಿದ್ದಂತೆ, ನಿಮ್ಮ ಎಲ್ಲ ಭಿನ್ನಾಭಿಪ್ರಾಯಗಳೊಂದಿಗೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಗಮಿಸಿ ಎಂದು, ಮುಸ್ಲಿಂ ಪ್ರಾತಿನಿಧ್ಯದ ಕುರಿತು ಮುನಿಸಿಕೊಂಡು ಪರ್ಯಾಯ ಸಮ್ಮೇಳನ ನಡೆಸಿದ ಸಾಹಿತಿಗಳಿಗೆ ಡಾ. ದೊಡ್ಡರಂಗೇಗೌಡ ಕರೆ ನೀಡಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಸಾಹಿತ್ಯವು ರೋಗಗ್ರಸ್ಥ ಮನಸ್ಸಿಗೆ ತೇಜಸ್ಸನ್ನು ನೀಡುತ್ತದೆ. ಸಾಹಿತ್ಯ ಅಧ್ಯಯನವನ್ನಷ್ಟೇ ಕಲಿಸುವುದಿಲ್ಲ. ನಮ್ಮ ವ್ಯಕ್ತಿತ್ವದ ನಿರ್ಮಾಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನಲ್ಲಿರುವ ಮೃಗೀಯ ಭಾವನೆಯನ್ನು ಹೋಗಲಾಡಿಸಲು ಶಿಕ್ಷಣ ಬೇಕು. ಶಿಕ್ಷಣದಲ್ಲಿ ಸಾಹಿತ್ಯವಿರಬೇಕು.

ಹೃದಯ ಹೃದಯಗಳ ಸಮ್ಮಿಲನದಲ್ಲಿ ಎಲ್ಲ ಮಾಲಿನ್ಯಗಳೂ ಕಳೆದುಹೋಗುತ್ತದೆ. ಸಾಹಿತ್ಯ ಸಮ್ಮೇಳನಗಳನ್ನು ವಿರೋಧೀಸುವವರಿಗೆ ಪ್ರಾರ್ಥನೆ ಮಾಡುತ್ತೇನೆ. ಬನ್ನಿ, ಕನ್ನಡ ಸಾಹಿತ್ಯ ಪರಿಷತ್ತಿಗೆ. ಅಭಿಪ್ರಾಯ ಭೇದಗಳಿರುತ್ತವೆ. ಅವುಗಳನ್ನು, ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳೋಣ. ಕನ್ನಡ ಒಂದು. ಕನ್ನಡದ ಐಕ್ಯತೆಯನ್ನು ಸಾರಬೇಕಿದೆ, ಆ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಎಲ್ಲ ವಿರೋಧಿ ಸಾಹಿತಿಗಳೂ ಸಾಹಿತ್ಯ ಪರಿಷತ್ತಿಗೆ ಬಂದು ಅಭಿಪ್ರಾಯ ಭೇದಗಳನ್ನು ಹೇಳುತ್ತಲೇ ಕೆಲವು ನಿರ್ಣಯಗಳಿಗೆ ಬರಬಹುದು.

ಕೇವಲ ಟೀಕೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಟೀಕೆಗೆ ಒಳಗಾದ ಮೇಲೆ ಪುನರುಜ್ಜೀವನ ಪಡೆಯುತ್ತೇವೆ. ಹಾವು ತನ್ನ ಪೊರೆಯನ್ನು ಕಳಚಿ ಹೊಸತನ್ನು ಪಡೆದಂತೆ. ನಾವೂ ನಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ ಎನ್ನಿಸುತ್ತದೆ ಎಂದರು.

ಮುಖ್ಯಮಂತ್ರಿಗಳು ನಲ್ಮೆಯ ಮಾತನ್ನಾಡಿದ್ದಾರೆ. ಇಲ್ಲಿ ಚರ್ಚಿಸಿದ ಅನೇಕ ವಿಚಾರಗಳ ಕುರಿತು ತೀರ್ಮಾನವನ್ನು ಕೈಗೊಂಡಿರುವುದು ಸಂತಸದ ವಿಚಾರ. ಕನ್ನಡದ ಕೆಚ್ಚೆದೆಯ ಹೋರಾಟಗಾರರಿಗೆ ಹುಮ್ಮಸ್ಸು ನೀಡಿದ್ದಾರೆ. ಶಾಸ್ತ್ರೀಯ ಭಾಷೆಯ ಕುರಿತು ವಿಮರ್ಶೆ ಮಾಡಿ, ಉನ್ನತ ಮಟ್ಟದ ಸಮಿತಿ ಮಾಡುತ್ತೇನೆ ಎಂದಿದ್ದಾರೆ. ನಾವೆಲ್ಲರೂ ಕನ್ನಡದ ಪ್ರಗತಿಗೆ ದುಡಿಯೋಣ ಎಂದಿದ್ದಾರೆ, ಅದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ.

ಮುಂದಿನ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಎಲ್ಲ ಕಲುಷಿತ ಅಂಶಗಳನ್ನೂ ಬಿಟ್ಟು ಮಂಡ್ಯದಲ್ಲಿ ಸೇರೋಣ. ಭಾರತದಲ್ಲಷ್ಟೆ ಅಲ್ಲದೆ, ವಿದೇಶಗಳಲ್ಲೂ ಕನ್ನಡದ ಕಂಪು ಪಸರಿಸಲಿ. ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂಬ ಕುವೆಂಪು ಅವರ ಮಾತನ್ನು ಒಪ್ಪೋಣ. ತಾಯಿ ಭುವನೇಶ್ವರಿಯ ನಿತ್ಯೋತ್ಸವಕ್ಕೆ ನಾವೆಲ್ಲರೂ ಸಿದ್ಧರಾಗೋಣ ಎಂದರು.

ಇದಕ್ಕೂ ಮೊದಲು ಮಾತನಾಡಿದ ಹಾವೇರಿ ಶಾಸಕ ನೆಹರೂ ಓಲೆಕಾರ್‌, ಕನ್ನಡದ ಕುಲಕೋಟಿ ಜನತೆ, ಕನ್ನಡದ ನೀವೆಲ್ಲರೂ ಪ್ರತಿದಿನ ಆಗಮಿಸಿದ್ದೀರಿ. ಹಗಲು ರಾತ್ರಿಯೆನ್ನದೆ ಅವಿರತವಾಗಿ ಎಲ್ಲರೂ ಬಂದಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಸಮಾರೋಪ ಸಮಾರಂಭದಲ್ಲಿ ಕನ್ನಡದ ಅಭಿವೃದ್ಧಿಗೆ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿರುವುದು ಸಂತಸದ ವಿಚಾರ. ಸಣ್ಣಪುಟ್ಟ ಲೋಪದೋಷಗಳಿರುತ್ತವೆ. ಎಲ್ಲವೂ ಸರಿಯಾಗಿದೆ ಎಂದು ಹೇಳಲು ಆಗದು. ಅದೆಲ್ಲವನ್ನೂ ಬದಿಗಿಟ್ಟು ಅಚ್ಚುಕಟ್ಟಿನಿಂದ ಸಹಕಾರ ಲಭಿಸಿದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಕುಲಭೇದ ನಿರಾಕರಣೆ ಕನ್ನಡ ಸಾಹಿತ್ಯದ ಶ್ರೇಷ್ಠತೆ: ವಿವೇಕ ರೈ

Exit mobile version