Site icon Vistara News

Election 2023 | ಸಿಎಂ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಪೈಪೋಟಿ; ಡಜನ್‌ ಮೀರಿದ ಅರ್ಜಿ !

basavaraj bommai constituency congress ticket

ಹಾವೇರಿ: ವಿಧಾನಸಭೆ ಚುನಾವಣೆಯಲ್ಲಿ ( Election 2023) ಕಾಂಗ್ರೆಸ್‌ ಟಿಕೆಟ್‌ ಪಡೆಯಬೇಕೆಂಬ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡುತ್ತಿದ್ದು, ಅಚ್ಚರಿಯೆಂದರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ಪರ್ಧಿಸಲು ನಾಮುಂದು ತಾಮುಂದು ಎನ್ನುವಂತೆ ಕಾಂಗ್ರೆಸಿಗರು ಮುಗಿಬೀಳುತ್ತಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಒಂದು ಡಜನ್‌ಗೂ ಹೆಚ್ಚು ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಅರ್ಜಿ ಸಲ್ಲಿಸಿರುವ 13 ಆಕಾಂಕ್ಷಿಗಳಲ್ಲಿ ಆರು ವೀರಶೈವ ಲಿಂಗಾಯತರಿದ್ದರೆ ಉಳಿದವರು, 6 ಮುಸ್ಲಿಂ ಹಾಗೂ ಒಬ್ಬ ಕುರುಬ ಸಮುದಾಯದವರಿದ್ದಾರೆ.

2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ‌ ಅಜ್ಜಂಫೀರ ಖಾದ್ರಿ, ಬೊಮ್ಮಾಯಿ ವಿರುದ್ದ ಕೈ ಅಭ್ಯರ್ಥಿಯಾಗಿ ಸೋಲು ಕಂಡಿದ್ದಾರೆ. ಹಾವೇರಿ, ಗದಗ, ಧಾರವಾಡ ಸೇರಿದಂತೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಂ ಕೋಟಾದಡಿಯಲ್ಲಿ ಟಿಕೆಟ್ ಪಡೆಯುತ್ತಿದ್ದ ಖಾದ್ರಿ ಮೂರು ಭಾರಿ ಸೋತಿದ್ದು ಒಂದೆಡೆಯಾದರೆ ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದ ಪರಿಣಾಮ, ಹಾಗೂ ಸಿಎಂ ಬೊಮ್ಮಾಯಿ ಎರಡು ಕಡೆ ಸ್ಪರ್ದೆ ಮಾಡುತ್ತಾರೆ ಎನ್ನುವ ಸುದ್ದಿ ಹಬ್ಬಿರುವ ಹಿನ್ನೆಲೆ ಈ ಬಾರಿ ಕೈ ಪಾಳೆಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಮತ್ತೆ ಮುಸ್ಲಿಂ ಕೋಟಾದಡಿಯಲ್ಲಿ ಅವಕಾಶ ಸಿಗಬಹುದೆನ್ನುವ ಲೆಕ್ಕಾಚಾರದಿಂದ ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಂಸದ ಐಜಿ ಸನದಿ ಪುತ್ರ ಶಾಕೀರ ಸನದಿ ಅರ್ಜಿ ಹಾಕಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎನ್ನುವ ಒತ್ತಡ ಹೆಚ್ಚಾಗಿದ್ದು, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಮಾಜಿ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಶಶಿಧರ ಎಲಿಗಾರ ಸೇರಿ ಹಲವರು ಟಿಕೆಟ್‌ಗಾಗಿ ಪೈಟ್ ನಡೆಸಿದ್ದಾರೆ.

ಸಿಎಂ ಎದುರು ಅಖಾಡಕ್ಕಿಳಿಯಲು ಕೈ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಕುತೂಹಲ ಇದೆ.

ಇದನ್ನೂ ಓದಿ | Ramanasri award | ಬದುಕಿನಲ್ಲಿ ಗುರಿ ಇರುವವರು ಮಾತ್ರ ಸದಾ ಕ್ರಿಯಾಶೀಲರಾಗಿರುತ್ತಾರೆ ಎಂದ ಬೊಮ್ಮಾಯಿ

Exit mobile version