ಹಾವೇರಿ: ಬ್ಯಾಡಗಿ ಮೆಣಸಿನ ಕಾಯಿ (Byadagi Chilli) ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ದರ (Chilli Rate) ಕುಸಿತದಿಂದ ಆಕ್ರೋಶಿತರಾದ ರೈತರ ದಾಂಧಲೆಗೆ (Farmers ruckus) ಬ್ಯಾಡಗಿ ಬೆಂಕಿಯಾಗಿದೆ. ರೈತರು ಎಪಿಎಂಪಿ ಕಚೇರಿಯನ್ನೇ (APMC Office Building) ಪುಡಿಗಟ್ಟಿದ್ದಾರೆ, ಎಪಿಎಂಸಿ ಅಧ್ಯಕ್ಷರ ಕಾರಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಕಾರಿನ ಬೆಂಕಿಯನ್ನು ನಂದಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಯನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಸೋಮವಾರ ಸಂಜೆಯ ಹೊತ್ತು ಬ್ಯಾಡಗಿ ಎಪಿಎಂಸಿ (Byadagi APMC) ಮುಂದೆ ವಸ್ತುಶಃ ಹೇಶಾರವ, ಅಬ್ಬರ, ಆಕ್ರೋಶ ಮತ್ತು ನೋವಿನ ಚೀರಾಟಗಳ ಧ್ವನಿ ಕೇಳಿಬಂತು. ಈ ಪರಿಸ್ಥಿತಿಯನ್ನು ನಿವಾರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರೈತರು ಯಾವ ಮಟ್ಟಿಗೆ ಆಕ್ರೋಶಿತರಾಗಿದ್ದಾರೆ ಎಂದರೆ ಪೊಲೀಸರನ್ನೇ ಬೆನ್ನಟ್ಟಿ ಹೊಡೆಯುತ್ತಿದ್ದಾರೆ.
ಬ್ಯಾಡಗಿಯ ಮೆಣಸಿನ ಮಾರುಕಟ್ಟೆಗೆ ಸೋಮವಾರ ರೈತರು ಮೆಣಸಿನ ಕಾಯಿ ಹಿಡಿದುಕೊಂಡು ಬಂದಿದ್ದಾರೆ. ಆದರೆ, ಖರೀದಿ ದರ ಕಡಿಮೆಯಾಗಿದೆ ಎಂದು ಸಿಟ್ಟುಗೊಂಡು ದಾಂಧಲೆಗೆ ಇಳಿದಿದ್ದಾರೆ. ದರ ಕುಸಿತದಿಂದ ಆಕ್ರೋಶಿತರಾದ ರೈತರು ಎಪಿಎಂಸಿ ವಿರುದ್ಧ ಸಿಡಿದು ಕಟ್ಟಡಕ್ಕೆ ನೇರವಾಗಿ ದಾಳಿ ಮಾಡಿದರು.
ಇದನ್ನೂ ಓದಿ : Cotton Candy Ban : ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೂ ಡೇಂಜರ್
ಕಟ್ಟಡದೊಳಗೆ ನುಗ್ಗಿದ ರೈತರು ಅಲ್ಲಿದ್ದ ಎಲ್ಲಾ ಪೀಠೋಪಕರಣ ಮತ್ತು ಇತರ ವಸ್ತುಗಳನ್ನು ಪುಡಿಗಡ್ಡಿದ್ದಾರೆ. ಪಿಎಂಸಿ ಆಡಳಿತ ಕಚೇರಿಗೆ ಕಲ್ಲು ತೂರಾಟ ನಡೆಸಿದರು. ಎಪಿಎಂಸಿ ಆಡಳಿತ ಕಚೇರಿಗೆ ಕಲ್ಲು ತೂರಾಟದಿಂದಾಗಿ ಕಚೇರಿಯ ಗ್ಲಾಸ್ ಪೀಸ್ ಪೀಸ್ ಆಗಿದೆ.
ಇತ್ತ ಆಕ್ರೋಶಿತರಾದ ರೈತರ ಮತ್ತೊಂದು ಗುಂಪು ಎಪಿಎಂಸಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಅಧ್ಯಕ್ಷರ ಕಾರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ರೈತರ ಆಕ್ರೋಶಕ್ಕೆ ಕಾರು ಸುಟ್ಟು ಕರಕಲಾಗಿದೆ.
ಒಮ್ಮಿಂದೊಮ್ಮೆಗೆ ಕಾರು ಧಗಧಗಿಸುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಆದರೆ, ಅಲ್ಲಿದ್ದ ರೈತರು ಆ ಸಿಬ್ಬಂದಿಯನ್ನೇ ತಡೆದು ಅವರ ಮೇಲೆ ಹಲ್ಲೆ ಮಾಡಿದರು. ಅವರನ್ನೇ ಬೆನ್ನಟ್ಟಿದರು. ದೊಣ್ಣೆ ಮತ್ತಿತರ ವಸ್ತುಗಳನ್ನು ಹಿಡಿದುಕೊಂಡು ರೈತರು ಅವರನ್ನು ಬೆನ್ನಟ್ಟುವ ದೃಶ್ಯವೇ ಭಯಾನಕವಾಗಿತ್ತು.
ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ರೈತಾಕ್ರೋಶವನ್ನು ತಣ್ಣಗೆ ಮಾಡಲು ಪ್ರಯತ್ನಿಸಿದರು. ಆದರೆ, ರೈತರೇ ಕೋಲು ಹಿಡಿದು ಪೊಲೀಸರನ್ನು ಹಿಮ್ಮೆಟ್ಟಿಸಿದರು. ಆಗ ಪೊಲೀಸರು ಕೂಡಾ ದಿಕ್ಕಾಪಾಲಾಗಿ ಓಡಬೇಕಾಯಿತು.
ಯಾಕೆ ಹೀಗಾಯಿತು ಬ್ಯಾಡಗಿಯಲ್ಲಿ? ರೇಟು ಎಷ್ಟು ಇಳಿದಿದೆ?
ಬ್ಯಾಡಗಿ ಮೆಣಸಿನ ಕಾಯಿ ಕರ್ನಾಟಮದ ಅನನ್ಯತೆ. ಈ ಮೆಣಸಿನ ಕಾಯಿಯ ದರ ಕೆಲವೊಮ್ಮೆ ಆಕಾಶ ತಲುಪಿದರೆ ಇನ್ನೊಮ್ಮೆ ಪಾತಾಳಕ್ಕೆ ಇಳಿಯುತ್ತದೆ. ಬ್ಯಾಡಗಿ ಮೆಣಸಿನ ಕಾಯಿ ಬೆಲೆ 2022ರಲ್ಲಿ ಕ್ವಿಂಟಲ್‌ಗೆ 76 ಸಾವಿರ ರೂ.ಗೆ ತಲುಪಿ ಚಿನ್ನದ ಬೆಲೆ ತಲುಪಿತ್ತು. ಈಗ ಅದು 39 ಸಾವಿರ ರೂ.ಗೆ ಇಳಿಕೆಯಾಗಿದೆ.
ಫಸಲು ಹೆಚ್ಚಳ, ತುಂಬಿ ತುಳುಕಿದ ಕೋಲ್ಡ್ ಸ್ಟೋರೇಜ್‌ಗಳು
ಈ ಬಾರಿ ಬ್ಯಾಡಗಿ ಮೆಣಸಿನ ಕಾಯಿ ಬೆಳೆ ವಿಫುಲವಾಗಿದೆ. ಹಾಗಾಗಿ ಎಪಿಎಂಸಿಯಲ್ಲಿ ಆವಕದ ಪ್ರಮಾಣದ ಜಾಸ್ತಿಯಾಗಿದೆ. ರೈತರು ಭಾರಿ ಪ್ರಮಾಣದಲ್ಲಿ ಮೆಣಸಿನ ಕಾಯಿಯನ್ನು ತರುತ್ತಿದ್ದಾರೆ.
ನಿಜವೆಂದರೆ, ಮೆಣಸಿನ ಕಾಯಿಯ ವಿಪರೀತ ಆವಕದಿಂದ ಕೋಲ್ಡ್ ಸ್ಟೋರೇಜ್‌ಗಳು ತುಂಬಿ ತುಳುಕುತ್ತಿವೆ. ಮೊದಲು ಬ್ಯಾಡಗಿ ಮಾರುಕಟ್ಟೆಯಲ್ಲಿ ವಾರಕ್ಕೆ ಮೂರು ದಿನ ಮೆಣಸಿನ ಕಾಯಿ ಖರೀದಿ ನಡೆಯುತ್ತಿತ್ತು. ಆದರೆ, ಆವಕ ವಿಪರೀತವಾಗಿದ್ದರಿಂದ ವಾರಕ್ಕೆ ಒಂದೇ ಬಾರಿ ಖರೀದಿ ಮಾಡಲು ಶುರು ಮಾಡಲಾಗಿದೆ.
ಕಳೆದ ಮಾರ್ಚ್ 4ರಂದು ಖರೀದಿ ನಡೆದಿತ್ತು. ಆಗ ಡಬ್ಬಿ ಮೆಣಸಿನ ಕಾಯಿ ದರ ಕ್ವಿಂಟಾಲ್‌ಗೆ ಸರಾಸರಿ 36,509 ರೂ. ಇತ್ತು. ಕಡ್ಡಿ ಮೆಣಸಿನ ಕಾಯಿಯ ದರ 32,529 ರೂ. ಇತ್ತು. ಗುಂಟೂರು ಮೆಣಸಿನ ಕಾಯಿಗೆ 12,529 ರೂ. ಇತ್ತು. ಆದರೆ, ಮಾರ್ಚ್ 11ರ ಮಾರುಕಟ್ಟೆಯಲ್ಲಿ ಇದು ಡಬ್ಬಿ ಮೆಣಸಿನ ಕಾಯಿ ದರ ಕ್ವಿಂಟಾಲ್‌ಗೆ ಸರಾಸರಿ 34,509 ರೂ. ಇತ್ತು. ಕಡ್ಡಿ ಮೆಣಸಿನ ಕಾಯಿಯ ದರ 29,009 ರೂ. ಇತ್ತು. ಗುಂಟೂರು ಮೆಣಸಿನ ಕಾಯಿಗೆ 12,189 ರೂ.ಗೆ ಇಳಿಕೆಯಾಗಿದೆ.
ಈ ರೀತಿ ಏಕಾಏಕಿ ಮೆಣಸಿನ ಕಾಯಿ ದರ ಇಳಿಕೆಯಾಗಿರುವುದರಿಂದ ರೈತರು ಸಿಟ್ಟುಗೊಂಡಿದ್ದಾರೆ. ಮತ್ತು ದಾಂಧಲೆಗೆ ಇಳಿದಿದ್ದಾರೆ.
ಗೃಹ ಸಚಿವ ಡಾ. ಪರಮೇಶ್ವರ್ ಹೇಳುವುದೇನು?
ಈ ನಡುವೆ, ಬ್ಯಾಡಗಿ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಪರಿಸ್ಥಿತಿಯ ಅವಲೋಕನ ಮಾಡಿದ್ದೇವೆ. ಅಲ್ಲಿ ಹೆಚ್ಚಿನ ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.