Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ದಲಿತರ ಯೋಜನೆಗಳ ಅನುಷ್ಠಾನಕ್ಕೆ ʼಮೀಸಲಾತಿ ಕಾವಲು ದಳʼ ರಚನೆಯಾಗಲಿ: ಡಿ.ಎಸ್‌. ವೀರಯ್ಯ ಆಗ್ರಹ

former mlc ds veeraiah demands for reservation protection force

ಹಾವೇರಿ: ದಲಿತರಿಗೆ ಇಷ್ಟು ವರ್ಷದಿಂದ ಸಾಕಷ್ಟು ಯೋಜನೆಗಳು ಘೋಷಣೆ ಆಗಿದ್ದರೂ ಅವುಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಇದಕ್ಕಾಗಿ ಸರ್ಕಾರವು ಮೀಸಲಾತಿ ಕಾವಲು ದಳವನ್ನು ಸ್ಥಾಪಿಸಿ ಶಾಸನಬದ್ಧ ಅಧಿಕಾರ ನೀಡಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌. ವೀರಯ್ಯ ಆಗ್ರಹಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನಕ-ಶರೀಫ-ಸರ್ವಜ್ಞ ವೇದಿಕೆ’ಯಲ್ಲಿ ‘ದಮನಿತ ಲೋಕದ ಸಬಲೀಕರಣ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದ ಆಲದ ಮರಕ್ಕೆ ದಲಿತ ಸಾಹಿತ್ಯವೇ ಬೇರು. ದಲಿತರು ಇಲ್ಲಿನ ಸಂಸ್ಕೃತಿಯ ವಾರಸಿದಾರರು. ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸಂಬಂಧವಿರುವುದರಿಂದ ಈ ಮಾತು ಹೇಳಬಹುದು. ಮೀಸಲಾತಿ ಎನ್ನುವುದು ಏನೋ ಕೊಟ್ಟಿದೇವೆ ಎನ್ನುವಂತಲ್ಲ. ವಂಚಿತರನ್ನು ಮುಂದೆ ತರಲು ಮೀಸಲಾತಿ ನೀಡಲಾಗುತ್ತದೆ. ಅದಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಒಂದು ನಿರ್ದಿಷ್ಟ ಅವಧಿಯವರೆಗೆ, ನಮ್ಮಂತೆ ಬಾಳುವವರೆಗೆ, ತಲೆಯೆತ್ತಿ ನಡೆಯುವವರೆಗೆ ಮೀಸಲಾತಿ ಅಗತ್ಯವಿದೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಆದರೂ ಹೀನಾಯ ಘಟನೆಗಳನ್ನು ಕೇಳುತ್ತಿದ್ದೇವೆ. ಈ ಘಟನೆಗಳ ಮೂಲಕ ಅಂಬೇಡ್ಕರ್‌, ಬುದ್ಧ, ಬಸವಣ್ಣನವರ ಆಶಯಗಳಿಗೆ ಅನುಗುಣವಾಗಿಲ್ಲ. ಈ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಈ ಸಮಾಜ ಒಂದು ರೋಗಗ್ರಸ್ಥ ಸಮಾಜವಾಗಿ ಉಳಿಯುತ್ತದೆ.

ಹಿಂದೆ ಒಂದು ರೀತಿಯ ಅಸ್ಪೃಶ್ಯತೆಯ ಆಚರಣೆ ಇತ್ತು. ಕಾನೂನು ಜಾರಿಯಾಗಿದ್ದರೂ ಇನ್ನೂ ದಲಿತರ ಮೇಲಿನ ದೌರ್ಜನ್ಯಗಳು, ಕೊಲೆ, ಅತ್ಯಾಚಾರ, ಬಹಿಷ್ಕಾರಗಳು ನಡೆದೇ ಇವೆ. ದಲಿತರಿಗೆ ಮೀಸಲಿಟ್ಟಿದ್ದ ಇಷ್ಟೊಂದು ಹಣ ಎಲ್ಲಿ ಹೋಯಿತು? ಪ್ರತಿಯೊಬ್ಬರಿಗೂ ಎಷ್ಟು ತಲುಪಿದೆ? ಎಂದು ಎಸ್‌ಸಿ ಆಯೋಗವು ಪ್ರಶ್ನಿಸಿದೆ.

ಈ ಸಮಾಜಕ್ಕೆ ಕಾನೂನುಗಳಿಗೆ, ಆದೇಶಗಳಿಗೆ, ಆಜ್ಞೆಗಳಿಗೆ ಕೊರತೆ ಇಲ್ಲ. ಅವನ್ನು ಜಾರಿ ಮಾಡುವಲ್ಲಿ ಅಡೆತಡೆಗಳಿವೆ. ಮೀಸಲಾತಿ ರಕ್ಷಣಾ ಪಡೆ ಅಥವಾ ದಳವನ್ನು ಆರಂಭಿಸಿ. ಅವರಿಗೆ ಕೊಟ್ಟ ಕಾರ್ಯಕ್ರಮಗಳು, ಮೀಸಲಾತಿ, ಆದೇಶಗಳು ಸರಿಯಾಗಿ ಅನುಷ್ಠಾನ ಆಗುತ್ತಿವೆಯೇ ಎನ್ನುವುದನ್ನು ಅದು ನೋಡಲಿ. ಮೀಸಲಾತಿ ಕಾವಲು ದಳ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಶಾಸನಬದ್ಧ ಸ್ಥಾನವನ್ನು ನೀಡಿ ಈ ವರ್ಗಕ್ಕೆ ಸಲ್ಲಬೇಕಾದ ಎಲ್ಲ ಸವಲತ್ತೂ ತಲುಪುವಂತೆ ಮಾಡಬೇಕು. ಇಲ್ಲದಿದ್ದರೆ ಇವು ಕೇವಲ ಘೋಷಣೆಯಾಗಿ ಉಳಿದುಕೊಳ್ಳುತ್ತದೆ ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ದಮನಿತರ ಸಂಘರ್ಷದ ಹಾದಿ ಮನಃಪರಿವರ್ತನೆಯತ್ತ ಹೊರಳಲಿ: ಡಾ. ರೋಹಿಣಾಕ್ಷ ಶೀರ್ಲಾಲು ಅಭಿಮತ

Exit mobile version