ಹಾವೇರಿ: ಹೊಲದಲ್ಲಿ ನಾಲ್ವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಶಾಸಕ ನೆಹರೂ ಓಲೆಕಾರ್ ಕುಟುಂಬದವರು ದಬ್ಬಾಳಿಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಾವೇರಿ ಶಾಸಕರ ಕುಟುಂಬದ ದಬ್ಬಾಳಿಕೆ ತಡೆಯಲಾರದೆ ನಾಲ್ವರು ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ | ಬಂಜಾರ ಗುರುಪೀಠದ ಜಗದ್ಗುರು ಮೇಲೆ ಹಲ್ಲೆ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕಬ್ಬೂರು (65) ಮತ್ತು ಹನುಮಂತಪ್ಪ ಬಡಿಗೇರ (41) ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥರಾಗಿದ್ದಾರೆ. ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಈ ನಾಲ್ವರಿಗೆ ಬ್ಯಾಡಗಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯಲಾಗಿದೆ.
ಕಳೆದ ಹಲವಾರು ವರ್ಷಗಳಿಂದ 29 ಕುಟುಂಬಗಳು ಅಕ್ರಮ ಸಕ್ರಮ ಜಮೀನು ಸಾಗುವಳಿ ಮಾಡಿಕೊಂಡು ಬಂದಿವೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಎಕರೆ 15 ಗುಂಟೆ ಜಮೀನಿನ ಪಟ್ಟಾ ಸಹ ನೀಡಲಾಗಿದೆ. ಆದರೆ ಪ್ರತಿಯೊಂದು ಕುಟುಂಬದವರು 15 ಗುಂಟೆ ಜಮೀನನ್ನು ಬಿಟ್ಟು ಕೊಡುವಂತೆ ಶಾಸಕ ನೆಹರೂ ಓಲೆಕಾರ್ ಕುಟುಂಬದವರು ಬೆದರಿಕೆ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆನ್ನುವುದು ಈಗಿನ ಆರೋಪವಾಗಿದೆ.
ಆರೋಪ ತಳ್ಳಿ ಹಾಕಿದ ಓಲೇಕಾರ್
ಈ ಆರೋಪವನ್ನು ತಳ್ಳಿ ಹಾಕಿರುವ ಶಾಸಕ ನೆಹರೂ ಓಲೆಕಾರ್ ʼʼಪ್ರಕರಣದ ಹಿಂದೆ ಬ್ಯಾಡಗಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲರ ಕೈವಾಡವಿದೆʼʼ ಎಂದು ಆರೋಪಿಸಿದ್ದಾರೆ. ʼʼಆ ಕುಟುಂಬದವರನ್ನು ಕರೆಸಿಕೊಂಡು ಎಸ್.ಆರ್.ಪಾಟೀಲ ಪ್ರಚೋದನೆ ನೀಡಿದ್ದಾರೆ. ನಮ್ಮ ಕುಟುಂಬದವರು ಆಸ್ತಿ ಕೊಡಿ ಎಂದು ಕೇಳಿಲ್ಲ, ನನ್ನ ಜೊತೆಗೆ ಯಾರೂ ಈ ಬಗ್ಗೆ ಚರ್ಚೆ ಮಾಡಿಲ್ಲʼʼ ಎಂದಿದ್ದಾರೆ.
ʼʼನಾನೇ ಅವರಿಗೆ ಈ ಹಿಂದೆ ಭೂಮಿ ಕೊಡಿಸಿದ್ದೆ. ಭೂಮಿಯ ಪಟ್ಟಾ ಕೊಟ್ಟಾಗ 18ರಿಂದ 19 ಕುಟುಂಬಗಳಿಗಿತ್ತು. ಈಗ ಅವರ ಸಂಖ್ಯೆ ಜಾಸ್ತಿಯಾಗಿದೆ. ಹಿಂದೆ ಕೊಟ್ಟಿದ್ದ ಭೂಮಿ ಬಿಟ್ಟು ಹೆಚ್ಚುವರಿಯಾಗಿ ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿದ ಭೂಮಿ ತೆರವುಗೊಳಿಸುವಂತೆ ಗ್ರಾಮಸ್ಥರು ಅವರಿಗೆ ಹೇಳಿದ್ದರುʼʼ ಎಂದು ಶಾಸಕರು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಹಾವೇರಿಯಲ್ಲಿ ಕಂಟ್ರೀಮೇಡ್ ಗನ್ ಸಪ್ಲೈ ಮಾಡುತ್ತಿದ್ದವರ ಬಂಧನ!