Site icon Vistara News

Hanagal Case: ಹಾನಗಲ್‌ ಅತ್ಯಾಚಾರ ಕೇಸ್‌ ಮುಚ್ಚಿ ಹಾಕಲು ಲೈಸೆನ್ಸ್‌ ಕೊಟ್ಟ ಸಿದ್ದರಾಮಯ್ಯ; ಬೊಮ್ಮಾಯಿ ಕಿಡಿ

Basavaraj Bommai slams CM Siddaramaiah

ಬೆಂಗಳೂರು: ಹಾನಗಲ್‌ನ (Hanagal Case) ಮಹಿಳೆಯ ಮೇಲೆ ನಡೆಸಲಾಗಿರುವ ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣವನ್ನು ಎಸ್‌ಐಟಿಗೆ ವಹಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ನಿರಾಕರಣೆ ಮಾಡುವ ಮೂಲಕ ಈ ಕೇಸ್‌ ಅನ್ನು ಮುಚ್ಚಿಹಾಕುವ ಸ್ಥಳೀಯ ಪೊಲೀಸರ ಪ್ರಯತ್ನಕ್ಕೆ ಲೈಸೆನ್ಸ್ ಕೊಟ್ಟಂತಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಆಕ್ರೋಶವನ್ನು ಹೊರಹಾಕಿರುವ ಬಸವರಾಜ ಬೊಮ್ಮಾಯಿ, ಸಂತ್ರಸ್ತ ಮಹಿಳೆಗೆ ನ್ಯಾಯಕೊಡಿಸುವ ಉದ್ದೇಶ ಇದ್ದರೆ ಕೂಡಲೆ ಎಸ್‌ಐಟಿ ರಚನೆ ಮಾಡಬೇಕೆಂದು ಆಗ್ರಹಿಸುವುದಾಗಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಪೋಸ್ಟ್‌ನಲ್ಲೇನಿದೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಲು ನಿರಾಕರಣೆ ಮಾಡಿರುವುದು ಖಂಡನೀಯ. ಇದು ಒಂದು ರೀತಿಯಲ್ಲಿ ಈಗಾಗಲೇ ಕೇಸ್ ತಿರುಚುವ ಮುಖಾಂತರ ಸ್ಥಳೀಯ ಪೊಲೀಸರು ಮುಚ್ಚಿಹಾಕುವ ಪ್ರಯತ್ನ ಮಾಡುವುದಕ್ಕೆ ಲೈಸೆನ್ಸ್ ಕೊಟ್ಟಂತಾಗಿದೆ. ಮುಖ್ಯಮಂತ್ರಿಗಳ ಈ ನಿಲುವನ್ನು ಖಂಡಿಸುತ್ತೇನೆ. ಅವರಿಗೆ ಸಂತ್ರಸ್ತ ಮಹಿಳೆಗೆ ನ್ಯಾಯಕೊಡಿಸುವ ಉದ್ದೇಶ ಇದ್ದರೆ ಕೂಡಲೆ ಎಸ್‌ಐಟಿ ರಚನೆ ಮಾಡಬೇಕೆಂದು ಆಗ್ರಹಿಸುತ್ತೇನೆ.

ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಮನೆಗೆ ಕಳಿಸಿರುವುದಕ್ಕೆ ಸಿಎಂ ಬಳಿ ಉತ್ತರ ಇಲ್ಲ. ಹಾಗೂ ಅವಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೇಳಿರುವುದು. ಸರ್ಕಾರ ಇಷ್ಟು ದೊಡ್ಡ ಆರೋಗ್ಯ ಇಲಾಖೆ ಇದ್ದು, ಅವಳಿಗೆ ಸೂಕ್ತ ಚಿಕಿತ್ಸೆ ಕೊಡಲು ತಯಾರಿಲ್ಲ ಎಂದರೆ? ಅಲ್ಲದೆ, ಆ ಜವಾಬ್ದಾರಿಯನ್ನು ತಮ್ಮ ಶಾಸಕರಿಗೆ ವಹಿಸಿರುವಂಥದ್ದು ಈ ಪ್ರಕರಣವನ್ನು ಮುಚ್ಚಿ ಹಾಕುವ ಹಾಗೂ ಆ ಹೆಣ್ಣು ಮಗಳನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳುವ ತಂತ್ರ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಅವಳಿಗೆ ಚಿಕಿತ್ಸೆಯನ್ನು ಸಂಪೂರ್ಣ ಸರ್ಕಾರಿ ವ್ಯವಸ್ಥೆಯಲ್ಲಿಯೇ ನೀಡಬೇಕು” ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಏನಿದು ಕೇಸ್?‌

ಜನವರಿ 8ರಂದು ಹಾನಗಲ್‌ನ ಲಾಡ್ಜ್‌ (Attack in Lodge) ಒಂದರಲ್ಲಿ ಜತೆಗಿದ್ದ ಮುಸ್ಲಿಂ ಮಹಿಳೆ (Muslim Woman) ಮತ್ತು ಹಿಂದು ಪುರುಷನ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ್ದ ಮುಸ್ಲಿಂ ಪುಂಡ ಯುವಕರು ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿರುವುದಾಗಿ ಆರೋಪ ಮಾಡಲಾಗಿದೆ.

ಶಿರಸಿ ಮೂಲದ ಮುಸ್ಲಿಂ ಮಹಿಳೆ ಮತ್ತು ಅವಿವಾಹಿತ ಯುವಕ ಹಾನಗಲ್‌ ಲಾಡ್ಜ್‌ನಲ್ಲಿರುವುದನ್ನು ರಿಕ್ಷಾ ಚಾಲಕನೊಬ್ಬನ ಮೂಲಕ ತಿಳಿದ ಮುಸ್ಲಿಂ ಯುವಕರು ಅಲ್ಲಿಗೆ ಧಾವಿಸಿ ಕೋಣೆಯೊಳಗಿನ ಟ್ಯಾಪ್‌ ರಿಪೇರಿ ಮಾಡುವ ನೆಪದಲ್ಲಿ ಒಳಗೆ ಹೋಗಿ ಇಬ್ಬರನ್ನೂ ಚೆನ್ನಾಗಿ ಥಳಿಸಿದ್ದರು.

ಬಳಿಕ ಯುವಕನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿ ಎಲ್ಲೋ ಹಲ್ಲೆ ಮಾಡಿ ಬಿಟ್ಟಿದ್ದರು. ಈ ನಡುವೆ, ಯುವತಿಯನ್ನು ಒಂದು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದ ಅವರು ಬಳಿಕ ರಸ್ತೆಯಲ್ಲಿ ತಂದು ಬಿಟ್ಟಿದ್ದರು. ಆದರೆ, ಹೀಗೆ ಕಾರಿನಲ್ಲಿ ಕರೆದುಕೊಂಡು ಹೋದ ಪುಂಡ ಯುವಕರು ಆಕೆಯನ್ನು ನದಿ ತೀರದಲ್ಲಿ ಮತ್ತು ಕಾಡಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂಬ ಅಂಶ ಬಯಲಾಗಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ಈ ವಿಚಾರವನ್ನು ಹೇಳಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾಳೆ.

ಅತ್ಯಾಚಾರದ ಬಗ್ಗೆ ಮಹಿಳೆ ಮಾಹಿತಿ

ಆವತ್ತು ಹೋಟೆಲ್‌ಗೆ ನುಗ್ಗಿ ದಾಳಿ ಮಾಡಿದ ಮುಸ್ಲಿಂ ಯುವಕರು ಬಳಿಕ ನನ್ನನ್ನು ಒಂದು ಕಾರಿನಲ್ಲಿ ಕರೆದುಕೊಂಡು ಹೋದರು. ದಾರಿಯುದ್ದಕ್ಕೂ ನನ್ನ ಮೇಲೆ ಹಲ್ಲೆ ಮಾಡಿದ ಅವರು, ಮೊದಲು ಒಂದು ನದಿ ತೀರಕ್ಕೆ ಎಳೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ಬಳಿಕ ಒಂದು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಕೂಡಾ ಬೇಡ ಬೇಡ ಎಂದು ಹೇಳಿದರೂ ಕೇಳದೆ ದೌರ್ಜನ್ಯ ನಡೆಸಿದರು ಎಂದು ಮಹಿಳೆ ತಿಳಿಸಿದ್ದಾರೆ.

ಇದನ್ನೂ ಓದಿ: PM Modi: ಜನವರಿ 19ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ; ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ?

ಹೀಗೆ ಏಳು ಜನ ಸತತವಾಗಿ ಅತ್ಯಾಚಾರ ಮಾಡಿದ ಬಳಿಕ ರಸ್ತೆ ಬಳಿ ಕರೆದುಕೊಂಡು ಬಂದು ಶಿರಸಿ ಬಸ್‌ ಹತ್ತಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ರೀತಿ ದೌರ್ಜನ್ಯ ಮಾಡಿರುವವರು ಅಕ್ಕಿ ಆಲೂರಿನ ಯುವಕರು ಎಂದು ಹೇಳಿರುವ ಆಕೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೋರಿದ್ದಾರೆ. ಈ ನಡುವೆ ತನ್ನ ಪತ್ನಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಆಕೆಯ ಪತಿ ಕೂಡಾ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈಗ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ.

Exit mobile version