Site icon Vistara News

Hanagal Case : ಗ್ಯಾಂಗ್‌ ರೇಪ್‌ ಪ್ರಕರಣ; ಇನ್ನಿಬ್ಬರು ಕಿರಾತಕರ ಬಂಧನ, ಕಠಿಣ ಶಿಕ್ಷೆಗೆ ಆಗ್ರಹ

Hanagal gang Rape Case Shoib, sadik

ಹಾವೇರಿ: ಜನವರಿ 8ರಂದು ಹಾವೇರಿ ಜಿಲ್ಲೆಯ (Haveri News) ಹಾನಗಲ್‌ನಲ್ಲಿ (Hanagal Case) ನೈತಿಕ ಪೊಲೀಸ್‌ಗಿರಿಯ (Moral policing) ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಲಾಡ್ಜ್‌ನಿಂದ ಎಳೆದೊಯ್ದು‌ ಸಾಮೂಹಿಕ ಅತ್ಯಾಚಾರ (Gang Rape) ಮಾಡಿದ ಭಯಾನಕ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಹೊಸದಾಗಿ ಬಂಧನಕ್ಕೆ ಒಳಗಾದ ಕಿರಾತಕರನ್ನು ಸಾದಿಕ್ ಬಾಬುಸಾಬ್ ಅಗಸಿಮನಿ (29 ವರ್ಷ), ನಿಯಾಜ್‌ ಅಹ್ಮದ್‌ ಎಂಬವರ ಪುತ್ರ ಶೋಯೆಬ್‌ (19) ಎಂದು ಗುರುತಿಸಲಾಗಿದೆ. ಇದರಲ್ಲಿ ಸಾದಿಕ್‌ ಸಂತೆ ವ್ಯಾಪಾರ ಮಾಡುತ್ತಿದ್ದರೆ, 19 ವರ್ಷ ಶೋಯೆಬ್‌ ಹೊಟೇಲ್ ಕೆಲಸ ಮಾಡುತ್ತಿದ್ದಾನೆ. ಈ ಪ್ರಕರಣದಲ್ಲಿ ಈ ಹಿಂದೆ ಮೂವರನ್ನು ಬಂಧಿಸಲಾಗಿತ್ತು. ಅಪ್ತಾಬ್ ಚಂದನಕಟ್ಟಿ , ಮದರಸಾಬ್ ಮಂಡಕ್ಕಿ, ಅಬ್ದುಲ್ ಖಾದರ್ ಎಂಬ ದುಷ್ಟರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈ ನಡುವೆ ಆರೋಪಿ ಮೊಹಮ್ಮದ್ ಸೈಫ್‌ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜನವರಿ 8ರಂದು ಮುಸ್ಲಿಂ ಮಹಿಳೆ ಮತ್ತು ಕೆಎಸ್‌ಆರ್ಟಿಸಿ ಬಸ್‌ ಚಾಲಕನಾಗಿರುವ ಹಿಂದು ವ್ಯಕ್ತಿಯೊಬ್ಬರ ಹಾನಗಲ್‌ನ ಲಾಡ್ಜ್‌ ಒಂದಕ್ಕೆ ಹೋಗಿದ್ದರು. ಅವರಿಬ್ಬರು ಕೆಲವು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಒಬ್ಬ ಮುಸ್ಲಿಂ ಮಹಿಳೆ, ಹಿಂದು ಯುವಕ ಲಾಡ್ಜ್‌ಗೆ ಹೋಗಿದ್ದನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಅಲ್ಲಿನ ಮುಸ್ಲಿಂ ಪುಂಡ ಯುವಕರಿಗೆ ವಿಷಯವನ್ನು ತಲುಪಿಸಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಮುಸ್ಲಿಂ ಯುವಕರ ಗುಂಪೊಂದು ಲಾಡ್ಜ್‌ಗೆ ಹೋಗಿ, ಟ್ಯಾಪ್‌ ರಿಪೇರಿ ಹೆಸರಿನಲ್ಲಿ ಅವರಿಬ್ಬರು ಇದ್ದ ಕೋಣೆಯನ್ನು ಪ್ರವೇಶಿಸಿತ್ತು. ಅಲ್ಲಿ ಹಿಂದು ಪುರುಷ ಮತ್ತು ಮುಸ್ಲಿಂ ಮಹಿಳೆಯನ್ನು ಚೆನ್ನಾಗಿ ಥಳಿಸಿದ ತಂಡ ಇಬ್ಬರನ್ನೂ ಲಾಡ್ಜ್‌ನಿಂದ ಹೊರಗೆ ಎಳೆದುಕೊಂಡು ಬಂದಿದೆ. ಯುವಕನಿಗೆ ಚೆನ್ನಾಗಿ ಥಳಿಸಿ ಒಂದಷ್ಟು ದೂರಕ್ಕೆ ಬೈಕ್‌ನಲ್ಲಿ ಬಿಟ್ಟು ಬಂದ ದುಷ್ಟರು ಮಹಿಳೆಯರನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದೆ.

ಆಕೆಯನ್ನು ಮೊದಲು ಒಂದು ನದಿ ತೀರಕ್ಕೆ, ಬಳಿಕ ಕಾಡಿಗೆ ಕರೆದುಕೊಂಡು ಹೋದ ಈ ದುಷ್ಟರು, ನಿನಗೆ ಹಿಂದು ಯುವಕ ಬೇಕಾ? ನಾವು ಆಗುವುದಿಲ್ವಾ? ಎಂದು ಕೇಳುತ್ತಲೇ ಸರದಿ ಪ್ರಕಾರ ಅತ್ಯಾಚಾರ ನಡೆಸಿದ್ದರು. ಏಳು ಮಂದಿಯ ದಾಳಿಗೆ ಒಳಗಾದ ಯುವತಿ ನಿತ್ರಾಣಳಾದರೂ ಬಿಡದ ಕಿರಾತಕರು ತಾವು ಮಾಡುವ ದುಷ್ಕೃತ್ಯವನ್ನು ವಿಡಿಯೊ ಮಾಡಿಕೊಳ್ಳುವಷ್ಟು ದಾರ್ಷ್ಟ್ಯ ಮೆರೆದಿದ್ದರು.

ಎಲ್ಲರೂ ಸಾಮೂಹಿಕ ಅತ್ಯಾಚಾರ ಮಾಡಿದ ಬಳಿಕ ಕೊನೆಗೆ ಆಕೆಗೆ 500 ರೂ. ಕೊಟ್ಟು ನಿನ್ನ ಊರಿಗೆ ಹೋಗು ಎಂದು ಹೇಳಿದ್ದಾರೆ. ಆಕೆ ಬಳಿಕ ವಾಹನ ಹತ್ತಿ ತನ್ನ ಗಂಡನಿರುವ ಶಿರಸಿಗೆ ಹೋಗಿ ವಿಷಯ ತಿಳಿಸಿದ್ದಾಳೆ.

ಆರಂಭದಲ್ಲಿ ಇದೊಂದು ನೈತಿಕ ಪೊಲೀಸ್‌ ಗಿರಿ ಪ್ರಕರಣವಾಗಿ ಗಮನ ಸೆಳೆದಿತ್ತು. ಆದರೆ, ಬಳಿಕ ಅದು ಗ್ಯಾಂಗ್‌ ರೇಪ್‌ ಆಗಿ ಎಲ್ಲ ಕಡೆ ಗಮನ ಸೆಳೆಯಿತು. ಪೊಲೀಸರು ಆರಂಭದಲ್ಲಿ ನಾಲ್ವರು ಮತ್ತು ಬಳಿಕ ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Hanagal Case : ಗ್ಯಾಂಗ್‌ ರೇಪ್‌ ಸಂತ್ರಸ್ತೆಗೆ ಜೀವಭಯ; ಒಂಟಿಯಾಗಿ ಬಿಟ್ಟು ಹೋದ ಪೊಲೀಸ್

ಇದರ ನಡುವೆಯೇ, ಪೊಲೀಸರು ಆರೋಪಿಗಳನ್ನು ರಕ್ಷಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ. ಆರಂಭದಲ್ಲಿ ಪೊಲೀಸರು ಕೇವಲ ನೈತಿಕ ಪೊಲೀಸ್‌ಗಿರಿ ದೂರನ್ನು ಮಾತ್ರ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಮಹಿಳೆ ಗ್ಯಾಂಗ್‌ ರೇಪ್‌ ಆರೋಪ ಮಾಡಿದ್ದರೂ ಅದನ್ನು ದಾಖಲಿಸಿಕೊಂಡಿರಲಿಲ್ಲ. ಆದರೆ, ಯಾವಾಗ ಮಹಿಳೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದರೋ ಅದಾದ ಬಳಿಕ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

Exit mobile version