ಶಿರಸಿ/ಹಾವೇರಿ: ಹಾವೇರಿ ಜಿಲ್ಲೆಯ (Haveri News) ಹಾನಗಲ್ನಲ್ಲಿ (Hanagal Case) ಜನವರಿ 8ರಂದು ಮುಸ್ಲಿಂ ಮಹಿಳೆಯೊಬ್ಬರ ಮೇಲೆ ನಡೆದ ನೈತಿಕ ಪೊಲೀಸ್ಗಿರಿ (Moral policing) ಮತ್ತು ಏಳು ಮಂದಿ ಸೇರಿದ ಗ್ಯಾಂಗ್ ರೇಪ್ ಪ್ರಕರಣಕ್ಕೆ (Gang Rape) ಸಂಬಂಧಿಸಿ ಪೊಲೀಸರು ನಿರ್ಲಕ್ಷ್ಯ (Negligence by Police) ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಯಾಗಿರುವ ಮಹಿಳೆಗೆ ಜೀವಭಯವಿದೆ. ಆದರೆ, ಯಾವುದೇ ರಕ್ಷಣೆ ನೀಡಲಾಗುತ್ತಿಲ್ಲ. ಆಕೆಯನ್ನು ವಿಚಾರಣೆಗೆ ಕರೆದುಕೊಂಡು ಹೋಗುವಾಗ ಯಾವುದೇ ರಕ್ಷಣಾತ್ಮಕ ಕ್ರಮಗಳಿಲ್ಲ, ಮನೆಗೆ ಕಳುಹಿಸುವಾಗಲೂ ರಕ್ಷಣೆ ನೀಡಲಾಗುತ್ತಿಲ್ಲ ಎಂದು ಆಕೆಯ ಸಹೋದರಿ ಆರೋಪಿಸಿದ್ದಾರೆ.
ಶಿರಸಿ ಮೂಲದ ಈ ಮಹಿಳೆ ಅದೇ ಊರಿನ ಪುರುಷನೊಂದಿಗೆ ಕಳೆದ ಜನವರಿ 8ರಂದು ಹಾನಗಲ್ನ ಲಾಡ್ಜ್ಗೆ ಹೋಗಿದ್ದರು. ಅಲ್ಲಿನ ಪುಂಡರ ತಂಡವೊಂದು ಲಾಡ್ಜ್ಗೆ ನುಗ್ಗಿ ನೈತಿಕ ಪೊಲೀಸ್ಗಿರಿ ನಡೆಸಿದ್ದಲ್ಲದೆ, ಪುರುಷನನ್ನು ಎಳೆದುಕೊಂಡು ಹೋಗಿ ಥಳಿಸಿದೆ. ಮಹಿಳೆಯನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ ನದಿ ತೀರ ಮತ್ತು ಕಾಡಿನಲ್ಲಿ ಗ್ಯಾಂಗ್ ರೇಪ್ ಮಾಡಿದ್ದರು. ನಿನಗೆ ಹಿಂದು ಯುವಕರೇ ಬೇಕಾ ಎಂದು ಕೇಳಿ ಕೇಳಿ ಆಕೆಯ ಮೇಲೆ ಎಂಟು ಮಂದಿ ದುಷ್ಟರು ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ಮಹಿಳೆ ಮತ್ತು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು.
ನೇರವಾಗಿ ಸಂತ್ರಸ್ತೆಯೇ ತನ್ನ ಮೇಲೆ ಗ್ಯಾಂಗ್ರೇಪ್ ನಡೆದಿದೆ ಎಂದು ಆರೋಪಿಸಿದ್ದರೂ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪೊಲೀಸ್ ತನಿಖೆಗೂ ಮುನ್ನವೇ ಬಿಜೆಪಿ ನಾಯಕರು ಕಥೆಯನ್ನು ಕಟ್ಟಿ ಆರೋಪಿಗಳೆಂದು ಹೇಳುವುದನ್ನು ನಾವು ನಂಬುವುದಿಲ್ಲ. ಪೊಲೀಸ್ ತನಿಖೆ ಮತ್ತು ಸಂಸತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ಮಾಹಿತಿ ಆಧರಿಸಿ ವರದಿ ಬಂದ ನಂತರ ಈ ಪ್ರಕರಣದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿರುವುದು ಸರ್ಕಾರ ಆರೋಪಿಗಳ ಬಗ್ಗೆ ಮೃದು ಧೋರಣೆ ಹೊಂದಿರುವುದನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ.
ಹಾನಗಲ್ನ ಯುವಕರು ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದರೂ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದು ಕೇವಲ ನೈತಿಕ ಪೊಲೀಸ್ಗಿರಿಯ ಬಗ್ಗೆ ದೂರು ದಾಖಲಿಸಿಕೊಂಡಿದ್ದರು. ಆದರೆ, ನ್ಯಾಯಾಲಯದ ಮುಂದೆ ಸಂತ್ರಸ್ತೆ ಹೇಳಿಕೆಯನ್ನು ಆಧರಿಸಿ ಬಳಿಕವಷ್ಟೇ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಸಾಂತ್ವನ ಕೇಂದ್ರದಿಂದ ನೇರ ಮನೆಗೆ!
ಗ್ಯಾಂಗ್ ರೇಪ್ ಮಾಡಿದ ದುಷ್ಟರು ಸಾಕ್ಷ್ಯ ನಾಶಕ್ಕಾಗಿ ಸಂತ್ರಸ್ತ ಮಹಿಳೆಗೆ ಅಪಾಯ ಉಂಟು ಮಾಡುವ ಸಾಧ್ಯತೆಯನ್ನು ಮನಗಂಡು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಾಂತ್ವನ ಕೇಂದ್ರದಲ್ಲಿ ಇಟ್ಟಿದ್ದರು. ಆದರೆ, ಬಳಿಕ ಸ್ಥಳ ಮಹಜರು ಹೆಸರಿನಲ್ಲಿ ಆಕೆಯನ್ನು ಅಲ್ಲಿಂದ ಕರೆದೊಯ್ದು, ಸ್ಥಳ ಪರಿಶೀಲನೆಯ ಬಳಿಕ ನೇರವಾಗಿ ಆಕೆಯ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಮನೆಯಲ್ಲೂ ಯಾವುದೇ ರೀತಿಯ ರಕ್ಷಣೆ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಮಹಿಳೆ ಮಾಡಿದ ಆರೋಪಗಳೇನು?
- 1. ದುಷ್ಟರು ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಲೈಂಗಿಕ ದೌರ್ಜನ್ಯ ಕೂಡಾ ಎಸಗಿದ್ದಾರೆ. ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಗ್ಯಾಂಗ್ ರೇಪ್ ಮಾಡಿದವರಲ್ಲಿ ಇಬ್ಬರನ್ನು ಬಂಧಿಸಲಾಗಿಲ್ಲ. ಬದಲಾಗಿ ಸಂಬಂಧವೇ ಇಲ್ಲದ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
- 2. ಪೊಲೀಸರು ತೋರಿಸಿದ ಫೋಟೊಗಳಲ್ಲಿ ಇಬ್ಬರು ಈ ಪ್ರಕರಣಕ್ಕೆ ಸಂಬಂಧಪಡದವರು ಎಂದು ನಾನು ಹೇಳಿದ್ದೇನೆ. ಆದರೆ, ಅವರನ್ನು ಬಂಧಿಸಿ ನಿಜವಾಗಿ ಕೃತ್ಯ ನಡೆಸಿದವರನ್ನು ಬಿಟ್ಟುಬಿಟ್ಟಿದ್ದಾರೆ.
- 3. ಪೊಲೀಸರು ಸ್ಥಳ ಪರಿಶೀಲನೆ ಎಂದು ಹೇಳಿ ಸಾಂತ್ವನ ಕೇಂದ್ರದಿಂದ ತಂದು ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಮನೆಗೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ನಿಯೋಜಿಸಿಲ್ಲ.
ಇದನ್ನೂ ಓದಿ: Moral Policing : ಹಿಂದು-ಮುಸ್ಲಿಂ ಯಾರೇ ಆಗಲಿ ನೈತಿಕ ಪೊಲೀಸ್ಗಿರಿಗೆ ಅವಕಾಶವಿಲ್ಲ; ಸಿಎಂ, ಡಿಕೆಶಿ ವಾರ್ನಿಂಗ್
ಸಂತ್ರಸ್ತ ಮಹಿಳೆ ಸಹೋದರಿ ಹೇಳಿದ್ದೇನು?
ಸಂತ್ರಸ್ತ ಮಹಿಳೆಯನ್ನು ಸ್ಥಳ ಮಹಜರಿನ ನೆಪದಲ್ಲಿ ಕರೆದೊಯ್ದಿದ್ದಾರೆ. ಆದರೆ, ಮರಳಿ ಕರೆತರುವಾಗ ಒಬ್ಬಂಟಿಯಾಗಿಯೇ ಮನೆಗೆ ತಂದುಬಿಟ್ಟಿದ್ದಾರೆ. ಯಾವ ರೀತಿಯ ರಕ್ಷಣೆಯನ್ನೂ ಕೊಟ್ಟಿಲ್ಲ ಎಂದು ಸಹೋದರಿ ಹೇಳಿದ್ದಾರೆ.
ʻʻಸಂತ್ರಸ್ತೆ ನನಗೆ ಸಹೋದರಿ ಆಗಬೇಕು. ಅವರಿಗೆ ಬಹಳ ತೊಂದರೆ ಆಗಿದೆ. ನನ್ನ ಸಹೋದರಿಯನ್ನು ಯಾರೂ ಭೇಟಿ ಆಗಲಿಲ್ಲ, ಏನೂ ಹೇಳಲೂ ಇಲ್ಲ. ಅವರಿಗೆ ಮತ್ತೆ ಆರೋಗ್ಯ ಹದಗೆಟ್ಟಿದೆ. ಅವರಿಗೆ ಚಿಕಿತ್ಸೆ ನೀಡಬೇಕಿದೆʼʼ ಎಂದು ಆಕೆ ಹೇಳಿದ್ದಾರೆ