ಹಾವೇರಿ: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಆಗಿರುವ, ಅರೆ ಮಲೆನಾಡು ಎಂದು ಕೂಡ ಖ್ಯಾತಿ ಗಳಿಸಿರುವ ಹಾವೇರಿಯಲ್ಲಿ (Haveri Election Result 2024) ಬಸವರಾಜ್ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಬೊಮ್ಮಾಯಿ ಅವರೀಗ ಲೋಕಸಭೆ ಚುನಾವಣೆಯಲ್ಲೂ ಗೆದ್ದಿದ್ದಾರೆ.
ಬಿಜೆಪಿಯ ಶಿವಕುಮಾರ್ ಉದಾಸಿ ಅವರು ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದು, ಈ ಬಾರಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದರು. 2008ರಲ್ಲಿ ಹಾವೇರಿ ಲೋಕಸಭೆ ಕ್ಷೇತ್ರ ರಚನೆಯಾಗಿದ್ದು, ಇದುವರೆಗೆ ಬಿಜೆಪಿ ಭದ್ರಕೋಟೆಯೇ ಆಗಿದೆ. ಲಿಂಗಾಯತ ಸಮುದಾಯದವರೇ ನಿರ್ಣಾಯಕರಾಗಿರುವ, ಕುರುಬ ಸಮುದಾಯದ ಮತದಾರರೂ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಶಾಸಕ ಬಸವರಾಜ್ ಬೊಮ್ಮಾಯಿ ಅವರು ಸ್ಪರ್ಧಿಸಿದ್ದು, ಜಾತಿ ಬಲ, ಮೋದಿ ನಾಮಬಲದಿಂದ ಗೆಲುವಿನ ವಿಶ್ವಾಸದಲ್ಲಿದ್ದರು.
ಕಾಂಗ್ರೆಸ್ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರ ಪುತ್ರ, ವೀರಶೈವ ಲಿಂಗಾಯತ ಸಮುದಾಯದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್ ನೀಡುವ ಮೂಲಕ ಈ ಬಾರಿ ಕಾಂಗ್ರೆಸ್ ಚಾಣಾಕ್ಷತನ ಮೆರೆದಿತ್ತು. ಆನಂದಸ್ವಾಮಿ ಗಡ್ಡದೇವರ ಮಠ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದರೂ, ಬಿಜೆಪಿ ಅಲೆಯ ಮುಂದೆ ಅವರು ಮಂಕಾಗಿದ್ದಾರೆ.
2019, 2014ರಲ್ಲಿ ಏನಾಗಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರು 1.40 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಡಿ.ಆರ್.ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿಯೂ ಶಿವಕುಮಾರ್ ಉದಾಸಿ ಅವರು ಕಾಂಗ್ರೆಸ್‌ನ ಸಲೀಂ ಅಹ್ಮದ್ ವಿರುದ್ಧ ಗೆಲುವು ಸಾಧಿಸಿದ್ದರು.