ರಮೇಶ ದೊಡ್ಡಪುರ, ಹಾವೇರಿ
ಎರಡು ವರ್ಷದ ಕೊರೊನಾ ಕರಿಛಾಯೆಯ ನಂತರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಹಾವೇರಿ ನಗರ ಸಂಪೂರ್ಣ ಸಜ್ಜಾಗಿದೆ. ಸಂಪೂರ್ಣ ನಗರ ವಿದ್ಯುತ್ ದೀಪಾಲಂಕಾರ, ಕೆಂಪು-ಹಳದಿ ಕನ್ನಡ ಧ್ವಜಗಳಿಂದ ತುಂಬಿಹೋಗಿದೆ.
2020ರಲ್ಲಿ ಸಮ್ಮೇಳನ ನಡೆಯಬೇಕಿದ್ದರೂ ಕೊರೊನಾ ಕಾರಣಕ್ಕೆ ಮುಂದೂಡುತ್ತಲೇ ಬಂದಿತು. ಹಾಗೆ ನೋಡಿದರೆ ಈ ನಗರವು ಸಮ್ಮೇಳನ ಆಯೋಜನೆ ಮಾಡಲು 8 ವರ್ಷದಿಂದ ಕಾದಿದೆ. 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಸಮ್ಮೇಳನದಲ್ಲಿ, ಮುಂದಿನ(81) ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವುದು ಎಂಬ ನಿರ್ಧಾರ ಆಗಿತ್ತು.
ಆದರೆ ಸಮ್ಮೇಳನವನ್ನು ಹಾವೇರಿ ನಗರದಲ್ಲಿ ಮಾಡಬೇಕೆ ಅಥವಾ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾಡಬೇಕೆ ಎಂಬ ಕುರಿತು ಗೊಂದಲ ಉಂಟಾಯಿತು. ಆಗಿನ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಾಂಬಿ ಅವರು ಸಭೆಗಳ ಮೇಲೆ ಸಭೆ ನಡೆಸಿದರೂ ಪ್ರಯೋಜನವಾಗಲಿಲ್ಲ, ಗದ್ದಲ ಜಗಳಕ್ಕೆ ಮಾರ್ಪಟ್ಟಿತು. ಕೊನೆಗೆ, ಅಂತಿಮ ಕ್ಷಣದಲ್ಲಿ ಸಮ್ಮೇಳನವನ್ನು ತಾವೇ ಆಯೋಜನೆ ಮಾಡುವುದಾಗಿ ಹಾಸನದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದ್ದರಿಂದ ಸಮ್ಮೇಳನ ಅಲ್ಲಿಗೆ ಸ್ಥಳಾಂತರವಾಯಿತು. ನಂತರ 2021ರಲ್ಲಿ ಹಾವೇರಿಯಲ್ಲಿ ನಡೆಯಬೇಕಿದ್ದ ಸಮ್ಮೇಳನ ಕೊರೊನಾ ಕರಿಛಾಯೆಗೂ ಒಳಗಾಗಿ ಮುಂದೂಡಿಕೆಯಾಗಿತ್ತು. ಹಾವೇರಿಯು ಮೊದಲಿಗೆ ಧಾರವಾಡ ಜಿಲ್ಲೆಯ ಭಾಗವಾಗಿದ್ದಾಗ, ಧಾರವಾಡದಲ್ಲಿ ಮೂರು ಬಾರಿ ಸಮ್ಮೇಳನ ನಡೆದಿತ್ತು. 1997ರಲ್ಲಿ ನೂತನ ಜಿಲ್ಲೆಯಾಗಿ ಸೃಜನೆಯಾದ ನಂತರ ಇದೀಗ ರಜತ ಸಂಭ್ರಮದಲ್ಲಿರುವ ಹಾವೇರಿ, ಶಬರಿಯಂತೆ ಕಾದು ಸಮ್ಮೇಳನ ಆಯೋಜಿಸುತ್ತಿದೆ.
ಪರಿಷತ್ತಿನ ಇತಿಹಾಸದಲ್ಲೇ ಅತ್ಯಧಿಕ ಮತಗಳಿಂದ ಜಯಗಳಿಸಿದ ಡಾ. ಮಹೇಶ್ ಜೋಶಿಯವರಿಗೆ ಮೊದಲ ಸಮ್ಮೇಳನ ಇದಾದರೆ, ಕೊರೊನಾ ನಂತರದ ಮೊದಲ ಸಮ್ಮೇಳನವೂ ಹೌದು. ಕನ್ನಡ ಸಾಹಿತ್ಯ ಲೋಕವಷ್ಟೆ ಅಲ್ಲದೆ ಪುಸ್ತಕ ಪ್ರಕಾಶನ, ಓದುಗ ಜಗತ್ತಿಗೂ ಇಷ್ಟು ದೊಡ್ಡ ಕಾರ್ಯಕ್ರಮ ಇಲ್ಲದೆ ಸಂಭ್ರಮವನ್ನು ಕಳೆದುಕೊಂಡಿತ್ತು. ಇದೀಗ ಹಾವೇರಿ ನಗರವು ಸಂಪೂರ್ಣ ಸಿಂಗಾರಗೊಂಡಿದ್ದು, ಮಹೇಶ್ ಜೋಶಿಯವರು ಹೇಳಿರುವಂತೆ ʼಅತ್ಯಂತ ಶಿಸ್ತು, ಅಚ್ಚುಕಟ್ಟಿನʼ ಸಮ್ಮೇಳನ ಆಗುತ್ತದೆ ಎಂಬ ನಿರೀಕ್ಷೆಯಿದೆ.
ಸಮ್ಮೇಳನಾಧ್ಯಕ್ಷರಾಗಿ ನಾಡಿನ ಪ್ರಸಿದ್ಧ ಸಾಹಿತಿ ಡಾ. ದೊಡ್ಡರಂಗೇಗೌಡರು ಈಗಾಗಲೆ ಹಾವೇರಿ ನಗರಕ್ಕೆ ಬಂದಿಳಿದಿದ್ದಾರೆ. ಪರಿಷತ್ತಿನ ಇತಿಹಾಸದಲ್ಲೆ ಬಹುಶಃ ಅತಿ ದೀರ್ಘ ಅವಧಿಗೆ ನಿಯೋಜಿತ ಅಧ್ಯಕ್ಷರು ದೊಡ್ಡರಂಗೇಗೌಡರು. ಕನ್ನಡ ನಾಡು, ನುಡಿಯ ಕುರಿತು ಅತ್ಯಂತ ವಾಸ್ತವದ ಚರ್ಚೆಗಳನ್ನು, ವಿಷಯಗಳನ್ನು ಜನರ ಮುಂದೆ ಇಡುವುದಾಗಿ ದೊಡ್ಡರಂಗೇಗೌಡರು ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಅತ್ಯಂತ ಕಡಿಮೆ ನಿರ್ಣಯಗಳನ್ನು ಕೈಗೊಳ್ಳುತ್ತೇವೆ ಹಾಗೂ ಅವುಗಳ ಅನುಷ್ಠಾನಕ್ಕೆ ಸರ್ವ ಪ್ರಯತ್ನ ಮಾಡಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಪರಿಷತ್ತಿನ ಇತಿಹಾಸದಲ್ಲಿ ಇಲ್ಲಿವರೆಗೆ ಅತಿ ಹೆಚ್ಚು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಕಸಾಪ ತಿಳಿಸಿದ್ದು, ಮಹಿಳೆ, ಸಿನಿಮಾ, ರಾಷ್ಟ್ರೀಯ ಭಾವೈಕ್ಯತೆ, ಕೃಷಿ, ದಲಿತ ಸೇರಿ ಸಾಮಾನ್ಯವಾಗಿ ಸಮ್ಮೇಳನದಲ್ಲಿರುವ ಎಲ್ಲ ವಿಚಾರಗಳಲ್ಲೂ ಗೋಷ್ಠಿಗಳಿರಲಿವೆ. ಅದರ ಜತೆಗೆ ಇದೇ ಮೊದಲ ಬಾರಿಗೆ ನ್ಯಾಯಾಂಗದಲ್ಲಿ ಕನ್ನಡ ಎಂಬ ಗೋಷ್ಠಿಯನ್ನು ಸೇರ್ಪಡೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಭವ್ಯ ಮೆರವಣಿಗೆ ಹಾಗೂ ಧ್ವಜಾರೋಹಣದ ಮೂಲಕ ಆರಂಭವಾಗುವ ಸಮ್ಮೇಳನದಲ್ಲಿ ಅನೇಕ ವೈವಿಧ್ಯಮಯ ಚರ್ಚೆ, ಸಾಹಿತಿಗಳೊಂದಿಗಿನ ಒಡನಾಟವನ್ನು ನಿರೀಕ್ಷಿಸಬಹುದಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಸಾಪ ಅಧ್ಯಕ್ಷರ ತವರು ಜಿಲ್ಲೆ ಹಾವೇರಿ ಈ ನಿಟ್ಟಿನಲ್ಲೂ ಹಾವೇರಿ ಸಮ್ಮೇಳನ ಮಹತ್ವ ಪಡೆದುಕೊಂಡಿದೆ. ಇದೇ ವರ್ಷ ಚುನಾವಣೆಗೆ ಹೋಗುವ ಮುನ್ನ ಬಸವರಾಜ ಬೊಮ್ಮಾಯಿ ಅವರಿಗೂ ಹೊಸ ಹುಮ್ಮಸ್ಸು ನೀಡಬಹುದಾಗಿದೆ.
ಅನೇಕ ಸಮ್ಮೇಳನಗಳ ಸಂದರ್ಭದಲ್ಲಿ ಕೇಳಿಬರುವ ಅಪಸ್ವರ ಈ ಬಾರಿಯೂ ಕೇಳಿಬಂದಿದೆ. ಈ ಬಾರಿ, ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಪ್ರಮುಖವಾಗಿ ಎಡಪರ ಚಿಂತಕರು, ಸಾಹಿತಿಗಳು ಬೆಂಗಳೂರಿನಲ್ಲಿ ಜನನುಡಿ ಎಂಬ ಪ್ರತ್ಯೇಕ ಸಮ್ಮೇಳನವನ್ನು ಜನವರಿ 8ರಂದು ಆಯೋಜನೆ ಮಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹೇಶ್ ಜೋಶಿ, ಇಲ್ಲಿವರೆಗಿನ ಸಮ್ಮೇಳನಗಳಲ್ಲಿ ಈ ಬಾರಿ ಅತಿ ಹೆಚ್ಚು (11) ಮುಸ್ಲಿಮರಿಗೆ ಗೋಷ್ಠಿಗಳಲ್ಲಿ, ಸನ್ಮಾನದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪರ್ಯಾಯ ಸಮ್ಮೇಳನವನ್ನು ಅತೃಪ್ತ ಆತ್ಮಗಳು ನಡೆಸುತ್ತಿವೆ ಎಂದು ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಹೇಳಿದ್ದಾರೆ. ಈ ಧ್ವನಿಯ ಕಾರಣಕ್ಕೆ ಹಾವೇರಿ ಸಮ್ಮೇಳನಕ್ಕೆ ಎಷ್ಟು ಸಾಹಿತಿಗಳು ಗೈರಾಗುತ್ತಾರೆ, ಆಗಮಿಸಿದವರೂ ತಮ್ಮ ವಿರೋಧವನ್ನು ಎಷ್ಟು ಪ್ರಮಾಣದಲ್ಲಿ ದಾಖಲಿಸುತ್ತಾರೆ ಎನ್ನುವುದು ಮೂರು ದಿನದ ಸಮ್ಮೇಳನದಲ್ಲಿ ಗೊತ್ತಾಗಲಿದೆ.
ಸಮ್ಮೇಳನದ ಸ್ಥಳದಲ್ಲಿ ಹಾಗೂ ಸಾಹಿತಿಗಳ ನಡುವೆ ಈ ಭಿನ್ನ ಧ್ವನಿಯ ಚರ್ಚೆಯ ಕಾರಣಕ್ಕೆ ಒಂದಷ್ಟು ಸಂಚಲನ ಮೂಡಿದೆ. ಇದೆಲ್ಲವನ್ನೂ ಮೀರಿ, ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಯ ಮೂಲ ಆಶಯಕ್ಕೆ ಅನುಗುಣವಾಗಿ ಸಮ್ಮೇಳನ ನಡೆಯುತ್ತದೆಯೇ? ಕನ್ನಡಿಗರ ನುಡಿ ಜಾತ್ರೆಯು ಅದೇ ಸಂಭ್ರಮದ ವಾತಾವರಣವನ್ನು ಮುಂದುವರಿಸುತ್ತದೆಯೇ ಎಂಬುದನ್ನೂ ಕಾದುನೋಡಬೇಕಿದೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಷಹಜಾನ್ ತಯಾರಿಸಿದ ದರ್ಬಾರ್ ರಥದಲ್ಲಿ ಸಾಗಲಿದ್ದಾರೆ ಸಮ್ಮೇಳನಾಧ್ಯಕ್ಷರು
ಸುರೇಶ್ ನಾಯ್ಕ, ಹಾವೇರಿ
ಕಣ್ಮನ ಸೆಳೆಯುವ ವರ್ಲಿ ಕಲೆ: ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳ ತಿರುವಿನಲ್ಲಿ ಬರೆದ ಸ್ವಾಗತಾಕ್ಷರಗಳು, ಸಾಲು ಮರಗಳು ಮತ್ತು ಗೋಡೆಯ ಮೇಲಿನ ವರ್ಲಿ ಕಲೆಯ ಚಿತ್ತಾರವು ಅಕ್ಷರಶಃ ಕಣ್ಮನ ತಣಿಸುತ್ತಿವೆ.
ಎಲ್ಲೆಡೆ ಪೊಲೀಸ್ ಕಾವಲು: ಮೂರು ದಿನಗಳ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ಪೊಲೀಸ್ ವಾಹನಗಳು ನಿಂತಿವೆ.
ಪಾರ್ಕಿಂಗ್ ಗೆ ಅಗತ್ಯ ವ್ಯವಸ್ಥೆ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಕಿ.ಮೀ ದೂರದಲ್ಲಿನ ಜಮೀನಿನಲ್ಲಿ ಬೃಹದಾಕಾರದ ವೇದಿಕೆಗಳು ಸಿದ್ಧಗೊಂಡಿವೆ. ಬೈಪಾಸ್ ನಿಂದ ಎರಡು ಕಿಮೀ ಉದ್ದಕ್ಕೂ ಹುಬ್ಬಳ್ಳಿ ಮಾರ್ಗವಾಗಿ ಬರುವ ಕಾರು, ಬಸ್ ಮತ್ತು ಇನ್ನಿತರ ವಾಹನಗಳಿಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಹಾವೇರಿ ನಗರದಿಂದ ವೇದಿಕೆಯತ್ತ ಬರುವ ವಾಹನಗಳಿಗೆ ಅಜ್ಜಯ್ಯ ಸ್ವಾಮಿ ದೇವಸ್ಥಾನದವರೆಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡಮ್ಮನ ಸೇವೆಯಲ್ಲಿ: ಹಲವಾರು ದಶಕಗಳ ಐತಿಹ್ಯದ ನುಡಿ ಜಾತ್ರೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕನ್ನಡ ಧ್ವಜಗಳ ಮಾರಾಟ ಕಂಡು ಬರುತ್ತಿದೆ. ದೂರದೂರದಿಂದ ಬಂದ ಕನ್ನಡಾಭಿಮಾನಿಗಳು ವೇದಿಕೆ ಅಂದಗೊಳಿಸುವ, ನಾಡಧ್ವಜ ಕಟ್ಟುವ, ವಿದ್ಯುದೀಪ ಅಳವಡಿಸುವ, ಊಟ ಉಪಹಾರ ಸಿದ್ಧಪಡಿಸುವ ನಾನಾ ಕಾರ್ಯಗಳ ಮೂಲಕ
ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.