Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಚಲನಚಿತ್ರಗಳು ಹಾಗೂ ಧಾರಾವಾಹಿಗಳು ಅವಲೋಕನ ಮಾಡಿಕೊಳ್ಳಬೇಕು: ಹಿರಿಯ ನಟ ದತ್ತಣ್ಣ ಅಭಿಪ್ರಾಯ

hg-dattatreya-urged-cinema-and-to-serials-to-retrospection

ಹಾವೇರಿ: ಚಲನಚಿತ್ರಗಳು ಹಾಗೂ ಧಾರಾವಾಹಿಗಳು ನಮ್ಮ‌ ಮನಸ್ಸನ್ನು ಅರಳಿಸುತ್ತಿವೆಯೇ ಅಥವಾ ಕೆಳಿಸುತ್ತಿವೆಯೇ ಎನ್ನುವುದನ್ನು ಆಲೋಚಿಸಬೇಕು ಎಂದು ಹಿರಿಯ ಚಲನಚಿತ್ರ ನಟ ಎಚ್‌.ಜಿ.‌ದತ್ತಾತ್ರೇಯ ತಿಳಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ’ಯಲ್ಲಿ ಆಯೋಜಿಸಿದ್ದ ‘ಬೆಳ್ಳಿತೆರೆ- ಕಿರುತೆರೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಚಲನಚಿತ್ರಗಳೂ ಒಳ್ಳೆಯ ಅಭಿರುಚಿಯನ್ನೇ ಹೊಂದಿರುವುದಿಲ್ಲ. ಹಾಗಾಗಿ ಎಲ್ಲ ಚಲನಚಿತ್ರಗಳನ್ನೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಲಾಗದು. ಹಿಂದೆಲ್ಲಾ ಮಗುವಿಗೆ ಚಂದಮಾಮ ತೋರಿಸಿ ಊಟ ಮಾಡಿಸುವ ಸ್ಥಿತಿಯಿತ್ತು. ಆದರೆ ಇಂದು ಟಿವಿ ತೋರಿಸಿ ಊಟ ಮಾಡಿಸುವ ಸ್ಥಿತಿಯಿದೆ. ವಿಭಕ್ತ ಕುಟುಂಬಗಳಾಗಿರುವುದೂ ಇದಕ್ಕೆ ಇಂಬು ನೀಡಿವೆ. ಒಬ್ಬೊಬ್ಬರೇ ಇರುವ ಸಮಯದಲ್ಲಿ ಮನರಂಜನೆಯನ್ನು ನೀಡುತ್ತಿರುವುದರಿಂದ ಇದೂ ಒಂದು ರೀತಿಯ ಸಮಾಜ ಸೇವೆ ಎಂದೇ ಪರಿಗಣಿಸಬೇಕು.

ಸಿನಿಮಾವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರವೂ ಅನೇಕ ಸಹಾಯ ಮಾಡುತ್ತಿದೆ. ಉದ್ಯಮ ಸ್ಥಾನ ನೀಡಿದ್ದರೂ ಸಾಲ ಪಡೆಯುವುದೂ ಸೇರಿ ಅನೇಕ ಕಡೆಗಳಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಒಪ್ಪಿಕೊಳ್ಳುವ ಸಬ್ಸಿಡಿಯನ್ನೂ ಸಕಾಲಕ್ಕೆ ನೀಡಬೇಕು. ಪ್ರೇಕ್ಷಕರನ್ನು‌ ಬೆಳೆಸುವ ಹಿನ್ನೆಲೆಯಲ್ಲಿ ರಸಗ್ರಹಣ ಶಿಬಿರಗಳು ನಡೆಯಬೇಕು. ಜನರಿಗೆ ಬೋರ್ ಆಗದಂತೆಯೂ, ಪ್ರೇಕ್ಷಕರ ಸ್ವರವನ್ನು ಎತ್ತರಿಸುವ ಕೆಲಸ ಆಗಬೇಕು.‌ ಒಳ್ಳೆಯ ವಸ್ತುವನ್ನು ಹುಡುಕುವ ಕೆಲಸವಾಗಬೇಕು ಎಂದರು.

ಹಿರಿಯ ನಟ ಸುಂದರ್ ರಾಜ್ ಮಾತನಾಡಿ, ಅಕ್ಷರ ಕಲಿಯದವರಿಗೂ ಸಾಹಿತ್ಯವನ್ನು ಮುಟ್ಟಿಸುವ ಕಾರ್ಯವನ್ನು ಚಲನಚಿತ್ರಗಳು ಮಾಡಿವೆ.‌ ಚಿ.‌ಉದಯಶಂಕರ್ ಅವರು ಅತ್ಯಂತ ಸರಳವಾಗಿ ಗೀತೆಗಳ ಮೂಲಕ ಜನರ ಮನಮುಟ್ಟಿದರು.‌ ಕಾದಂಬರಿ ಆಧರಿತ ಚಲನಚಿತ್ರಗಳು ಮೂಡಿಬಂದಿವೆ. ಬಂಗಾರದ ಮನುಷ್ಯ ಸಿನಿಮಾ ನೋಡಿದ ಅನೇಕರು ಕೃಷಿಯತ್ತ ಹೆಜ್ಜೆ ಹಾಕಿದರು. ಕಾಂತಾರಾ ಸಿನಿಮಾವರೆಗೆ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಿವೆ ಎಂದರು. ವಾಣಿಜ್ಯ ಮಂಡಳಿ 88 ವರ್ಷವಾಗಿದೆ. ಅದರ ಅನೇಕ ಸದಸ್ಯರು ಕನ್ನಡ ಕಟ್ಟಾಳುಗಳಾಗಿದ್ದಾರೆ. ವಾಣಿಜ್ಯ ಮಂಡಳಿಗೆ ಆಹ್ವಾನ ನೀಡಿರುವುದಕ್ಕೆ ಸಂತಸವಾಗಿದೆ. ನಮ್ಮವರೇ ಆದ ಡಾ. ದೊಡ್ಡರಂಗೇಗೌಡನ್ನು ಅಧ್ಯಕ್ಷರಾಗಿಸಿರುವುದು ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಗೌರವ ಎಂದರು.

ಚಲನಚಿತ್ರ ಇತಿಹಾಸಕಾರ ಎನ್.ಎಸ್.‌ಶ್ರೀಧರ ಮೂರ್ತಿ ಮಾತನಾಡಿ, ಚಲನಚಿತ್ರ ಹಾಗೂ ಸಾಹಿತ್ಯಗಳು ತನ್ನ ಸ್ವರೂಪದಲ್ಲೇ ಭಿನ್ನವಾದವು. ನೂರು ವರ್ಷದ ಹಿಂದೆ ಬೆಂಗಳೂರಿಗೆ ಚಲನಚಿತ್ರ ಮಂದಿರಗಳು ಪ್ರವೇಶ ಮಾಡಿದವು. ಮೂಕಿ‌ಚಿತ್ರಗಳಿಗೆ ಜಗತ್ತಿನ ವಿವಿಧೆಡೆಯಂತೆ ಭಾರತೀಯರು ಒಪ್ಪಿಕೊಳ್ಳಲಿಲ್ಲ. ಮೂಕಿಚಿತ್ರ ಪ್ರದರ್ಶನ ಆಗುವಾಗ ಕಮೆಂಟರಿ ನೀಡಲಾಗುತ್ತಿತ್ತು. ಆಗಿನಿಂದಲೇ ಚಲನಚಿತ್ರ ಸಾಹಿತ್ಯ ರೂಪುಗೊಂಡಿತು. ಚಲನಚಿತ್ರಗೀತೆಗಳು ಸ್ಪಷ್ಟವಾಗಿ ಸಾಹಿತ್ಯಿಕ ಸ್ವರೂಪವನ್ನು ನೀಡಿದವು. ಕೀರ್ತನೆಗಳ ಸ್ವರೂಪವನ್ನು ಪ್ರಾರಂಭದಲ್ಲಿ ಅಳವಡಿಸಿಕೊಳ್ಳಲಾಯಿತು.
ವಿಜಯನಾರಸಿಂಹ ಅವರು ಸಂಸ್ಕೃತ ಕಾವ್ಯಗಳನ್ನು, ಆರ್‌.ಎನ್. ಜಯಗೋಪಾಲ್ ಅವರು ಪಾಶ್ಚಾತ್ಯ ಸಾಹಿತ್ಯವನ್ನು, ಚಿ.‌ಉದಯಶಂಕರ್ ಅವರು ಕನ್ನಡ ಸಾಹಿತ್ಯದ ಸಾರವನ್ನು‌ ಚಿತ್ರಗೀತೆಗಳಿಗೆ ನೀಡಿದರು.‌ ಡಾ.‌ದೊಡ್ಡರಂಗೇಗೌಡರು ಗ್ರಾಮ್ಯ ಸ್ವರೂಪ ನೀಡಿದರು. ಹಂಸಲೇಖರವರು ನಾದಗುಣವನ್ನು ನೀಡಿದರು. ಜಯಂತ್ ಕಾಯ್ಕಿಣಿಯವರು ಅನೇಕ ಗುಣಾತ್ಮಕ ಅಂಶಗಳನ್ನು‌ ನೀಡಿದರು.

‘ಕನ್ನಡ ಚಲನಚಿತ್ರಗಳಲ್ಲಿ ದೇಶಭಕ್ತಿ ಹಾಗೂ ಕನ್ನಡಪರ ಗೀತೆಗಳು’ ಕುರಿತು ಮಾತನಾಡಿದ ಪ್ರಕಾಶ್ ಮಲ್ಪೆ, ರಾಷ್ಟ್ರಭಕ್ತಿ ಎನ್ನುವುದು ಕನ್ನಡವನ್ನು ಬಿಟ್ಟು ಅಲ್ಲ, ಕನ್ನಡ ಎನ್ನುವುದು ರಾಷ್ಟ್ರಭಕ್ತಿಗೆ ವಿರುದ್ಧವಲ್ಲ ಎನ್ನುವುದು ಗೀತೆಗಳಲ್ಲಿ ಮೂಡಿಬಂದಿದೆ. ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು, ಇದೇನ ಸಭ್ಯತೆ- ಇದೇನ ಸಂಸ್ಕೃತಿ ಸೇರಿ ಅನೇಕ ಹಾಡುಗಳಲ್ಲಿ ಕನ್ನಡ, ಭಾರತ, ವಿಶ್ವದವರೆಗೆ ವಿಚಾರಗಳನ್ನು ಸ್ಪರ್ಶ ಮಾಡಿದ್ದಾರೆ ಎಂದು ತಿಳಿಸಿದರು.

‘ಸಮಾಜದ ಮೇಲೆ ಧಾರಾವಾಹಿಗಳ ಪರಿಣಾಮ’ ಕುರಿತೂ ಮಾತನಾಡಿದ ಎನ್.ಎಸ್. ಶ್ರೀಧರ ಮೂರ್ತಿ, ಕಿರುತೆರೆ ಮೂಲತಃ ನಂಬಿಸುವ ಕಲೆ. ಪ್ರತಿ ಎಂಟು ನಿಮಿಷದ ನಾಲ್ಕು ಭಾಗಗಳನ್ನು ಧಾರಾವಾಹಿ ಹೊಂದಿರುತ್ತದೆ. ಇದು ಮನೋವೈಜ್ಞಾನಿಕ ರೀತಿಯಲ್ಲಿ ರೂಪುಗೊಂಡ ಸ್ವರೂಪ. ಜನರ ಕುಟುಂಬವನ್ನು ಕೇಂದ್ರೀಕರಿಸಿಕೊಂಡು, ಮನೆಯಲ್ಲಿರುವ ಎಲ್ಲರನ್ನೂ ತಲುಪಬೇಕೆಂದು ಪ್ರಯತ್ನಿಸಲಾಗುತ್ತದೆ. ಇದು ಚಲನಚಿತ್ರಕ್ಕಿಂತ ವಿಭಜನ್ನವಾಗಿ‌ ಕೆಲಸ ಮಾಡುತ್ತದೆ. ಮನಸ್ಸನ್ನು ವ್ಯಾಘ್ರವಾಗಿಸುತ್ತದೆ. ಧಾರವಾಹಿಗಳು ಮನಸ್ಸನ್ನು ಕೆರಳಿಸುತ್ತವೆ. ಏನೂ ಅರಿಯದ ಮಗುವಿನ‌ ಮೇಲೆ ನಾರ್ಕೊಸಿಸ್ ಪರಿಣಾಮ ಬೀರುತ್ತದೆ. ಇತ್ತೀಚಿನ‌ ದಿನಗಳಲ್ಲಿ ಧಾರಾವಾಹಿಗಳಲ್ಲಿ ಬಳಸುವ ಭಾಷೆಯ ಕುರಿತು ಗಮನ ನೀಡಬೇಕಾಗುತ್ತದೆ ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆನ್‌ಲೈನ್‌ ಪೇಮೆಂಟ್‌ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು

Exit mobile version