Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಊರ ಹೊರಗೊಂದು ಸೂರು, ಅಲ್ಲಿ ಸಾಹಿತ್ಯದ ಕಂಪು ಜೋರು: ಸಾಹಿತ್ಯ ಜಾತ್ರೆಯ 13 ವಿಶೇಷತೆಗಳಿವು

interesting things about kannada sahitya sammelana

ರಮೇಶ ದೊಡ್ಡಪುರ, ಹಾವೇರಿ
ಏಲಕ್ಕಿ‌ ನಾಡು ಎಂದೇ ಖ್ಯಾತಿಯಾದ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯವಾಗುವ ಜತೆಗೆ ಅನೇಕ ವಿಶೇಷಗಳಿಗೆ ಸಾಕ್ಷಿಯಾಯಿತು.

ಎರಡು ವರ್ಷದ ಅಂತರ ಸಂತಸ
2021ರಲ್ಲಿ ಸಮ್ಮೇಳನ ನಡೆಯಬೇಕಿತ್ತಾದರೂ, ಜಾಗತಿಕ ಸೋಕು ಕೋವಿಡ್ ಕಾರಣಕ್ಕೆ ಸಂಕಷ್ಟ ಎದುರಿಸಿತು. ಒಬ್ಬ ಅಧ್ಯಕ್ಷರ(ಡಾ. ಮನು‌ ಬಳಿಗಾರ್) ಅವಧಿಯಲ್ಲಿ ನಿರ್ಧಾರ ಆದ ಸಮ್ಮೇಳನ, ಮತ್ತೊಬ್ಬ ಅಧ್ಯಕ್ಷರ (ಡಾ. ಮಹೇಶ್ ಜೋಶಿ) ಅವಧಿಯಲ್ಲಿ ನೆರವೇರಿತು. ಇದರಲ್ಲಿ ಮತ್ತೊಂದು ವಿಶೇಷವೆಂದರೆ, ಸಮ್ಮೇಳನ ಅಧ್ಯಕ್ಷರಾಗಿ ನಿಯೋಜನೆಯಾದ ಡಾ. ದೊಡ್ಡರಂಗೇಗೌಡರು ಸುದೀರ್ಘ ಅವಧಿಗೆ ‘ನಿಯೋಜಿತ ಅಧ್ಯಕ್ಷರಾಗಿ’ ಇರಬೇಕಾಯಿತು. ಹಾವೇರಿ ಜಿಲ್ಲೆಯು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್‌ ಜೋಶಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತವರು ಜಿಲ್ಲೆ.

ಅತಿ‌ ಹೆಚ್ಚು ಗೋಷ್ಠಿಗಳು
ಈ ಬಾರಿಯ ಸಮ್ಮೇಳನದಲ್ಲಿ ಇಲ್ಲಿವರೆಗಿನ ಅತಿ ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು ಹಾಗೂ ಹೆಚ್ಚು ಜನರು ಭಾಗವಹಿಸಿದರು.

ಸ್ಥಳಒಟ್ಟು ಗೋಷ್ಠಿಗಳುಭಾಗವಹಿಸಿದವರು
ಕಲಬುರಗಿ2194
ಧಾರವಾಡ2289
ಮೈಸೂರು20110
ರಾಯಚೂರು1795
ಶ್ರವಣಬೆಳಗೊಳ1455
ಗಂಗಾವತಿ1259
ಹಾವೇರಿ32154

ಅತಿ ಹೆಚ್ಚು ಮುಸ್ಲಿಂ ಪಾಲ್ಗೊಳ್ಳುವಿಕೆ
ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೆಲ ದಿನಗಳ ಹಿಂದೆ ಕೇಳಿಬಂತು. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನವನ್ನು ಆಯೋಜಿಸಲಾಯಿತು. ಈ ಕುರಿತು ಮಾಹಿತಿ ನೀಡಿದ್ದ ಡಾ ಮಹೇಶ್‌ ಜೋಶಿ, ಇಬ್ಬರು ಸನ್ಮಾನಿತರೂ ಸೇರಿ ಸಮ್ಮೇಳನದ ಗೋಷ್ಠಿಗಳಲ್ಲಿ 11 ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಇಲ್ಲಿವರೆಗೆ ನಡೆದ ಸಮ್ಮೇಳನಗಳ ಪೈಕಿ ಇದೇ ಅತಿ ಹೆಚ್ಚು ಎಂದು ಲೆಕ್ಕ ನೀಡಿದರು.

ರಥದ‌ ಮೇಲೆ ಅಧ್ಯಕ್ಷರಿಲ್ಲ
ಈ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯ ರಥದ ಮೇಲೆ ಕಸಾಪ ಅಧ್ಯಕ್ಷರೂ ಆಸೀನರಾಗುತ್ತಿದ್ದರು. ಆದರೆ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಈ ಬಾರಿ ರಥದಲ್ಲಿ ಪ್ರಯಾಣ ಮಾಡಲಿಲ್ಲ. ಒಮ್ಮೆ ರಥವನ್ನು‌ ಏರಿ ನಂತರ ಕೆಳಗಿಳಿದರು. ದೊಡ್ಡರಂಗೇಗೌಡರ ಜತೆಗೆ ಮುಂದಿನ ಪೀಳಿಗೆಯ ಕೆಲವು ಮಕ್ಕಳು ಪ್ರಯಾಣಿಸಿದವು. ಹಳೆ ಬೇರು- ಹೊಸಚಿಗುರಿನ ಪರಿಕಲ್ಪನೆ ಹೊಂದಿತ್ತು.

ನಗರದ ಹೊರಗೊಂದು ನಗರ
ಹಾವೇರಿ ನಗರದಿಂದ ಹೊರಗೆ, ಕಪ್ಪು ಮಣ್ಣಿನ ಜಮೀನಿನ ಮೇಲೆ ಸಮ್ಮೇಲನಕ್ಕಾಗಿಯೇ ಪ್ರತ್ಯೇಕ ನಗರದ ರೀತಿ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಬೃಹತ್‌ ವೇದಿಕೆ ಜತೆಗೆ ಒಂದೇ ಆವರಣದಲ್ಲಿ ಮತ್ತೆರಡು ಸಮಾನಾಂತರ ವೇದಿಕೆಗಳು, ವಾಣಿಜ್ಯ ಮಳಿಗೆಗಳು, ಫಲ ಪುಷ್ಪ ಪ್ರದರ್ಶನ, ಊಟದ ಪೆಂಡಾಲ್‌ ಸೇರಿ ಎಲ್ಲವೂ ಇತ್ತು. ಒಂದೇ ಆವರಣದಲ್ಲಿ ಅಷ್ಟೂ ವ್ಯವಸ್ಥೆ ಇದ್ದದ್ದು ಈ ಬಾರಿಯ ಸಮ್ಮೇಳನದ ವಿಶೇಷತೆಗಳಲ್ಲೊಂದು.

ಸಮಯ ಪರಿಪಾಲ‌ನೆ
‘ಭಾಷಣ ಆರಂಭಿಸುವವರು ಮುಗಿಸುವುದೇ ಇಲ್ಲ’ ಎನ್ನುವುದು ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಕೇಳಿಬರುವ ಮಾತು. ಈ ಬಾರಿ ಸಮ್ಮೇಳನದಲ್ಲಿ ಅತಿ ಹೆಚ್ವು ಗೋಷ್ಠಿಗಳನ್ನು ಆಯೋಜ‌ನೆ ಮಾಡಲಾಗಿದ್ದರಿಂದ ಸಮಯ ಪಾಲ‌ನೆ ಅತ್ಯಂತ ಸವಾಲಾಗಿತ್ತು. ಇದಕ್ಕಾಗಿ ಸಮಯ ನಿಗದಿಪಡಿಸಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಂದ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿವರೆಗೂ ಇದು ಸಮಾನವಾಗಿತ್ತು. ಪ್ರತಿ ಭಾಷಣಕಾರರಿಗೂ ಸಮಯ ನಿಗದಿಪಡಿಸಿದ್ದಷ್ಟೆ ಅಲ್ಲದೆ, ನಿರೂಪಕರು ಅದನ್ನು ನಿರ್ವಹಿಸುವ ಹೊಣೆ ನೀಡಲಾಗಿತ್ತು. ಭಾಷಣಕಾರರಿಗೆ ಚೀಟಿ ಕೊಡುವ ಮೂಲಕ ಸಮಯ ಮಿತಿಯನ್ನು ಗೋಷ್ಠಿಗಳನ್ನು ನಡೆಸಲಾಯಿತು.‌ ಗೋಷ್ಟಿಗಳ ಆರಂಭವೇ ತಡವಾದ್ಧರಿಂದ ಮುಕ್ತಾಯವೂ ತಡವಾದ ಕೆಲವು ನಿದರ್ಶನಗಳೂ ಇದ್ದವು.

ಕಳೆದುಹೋದವರ ಬಗ್ಗೆ ಪ್ರಕಟಣೆ
ಇಡೀ ಸಮ್ಮೇಳನದ ಅತಿ ದೊಡ್ಡ ಸಮಸ್ಯೆ ಎಂದರೆ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು. ನಗರದ ಹೊರವಲುದಲ್ಲಿ‌ ಸಮ್ಮೇಳನ ನಡೆದಿದ್ದರಿಂದ ನೆಟ್‌ವರ್ಕ್ ಸಾಮರ್ಥ್ಯ ‌ಕಡಿಮೆ‌ ಇತ್ತು. ಹೆಚ್ಚು ಜನ ಬಂದ ಕೂಡಲೇ ಜಾಮ್‌ ಆಗುತ್ತಿತ್ತು. ಕುಟುಂಬದಲ್ಲಿ ಒಟ್ಟಿಗೆ ಬಂದವರು ಎಲ್ಲೆಲ್ಲೊ ಹೋಗಿ ಬೇರಾಗುತ್ತಿದ್ದರು. ಅಂಥವರು, ಸಮ್ಮೇಳನ ಆವರಣದಲ್ಲೇ ಇದ್ದ ಪೊಲೀಸ್ ಉಪ‌ಠಾಣೆಯ ಮೈಕ್‌ ಮೂಲಕ, ತಮ್ಮ ಕುಟುಂನದವರು ಎಲ್ಲಿದ್ದರೂ ಆಗಮಿಸಬೇಕಯ ಘೋಷಣೆ ಮಾಡಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.

ನಷ್ಟದ ನಡುವೆಯೂ ವ್ಯಾಪಾರ
ನೆಟ್‌ವರ್ಕ್ ಸಮಸ್ಯೆ ಆಗಿದ್ದರಿಂದ ಸಹಜವಾಗಿಯೇ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಸ್ಥಗಿತವಾಯಿತು. ಈಗಂತೂ ಹೆಚ್ಚು ನಗದನ್ನು ಜತೆಗೆ ಒಯ್ಯುವ ಅಭ್ಯಾಸ ಕಡಿಮೆಯಾಗಿದೆ. ಬಹುತೇಕ ಎಲ್ಲ ಪುಸ್ತಕ ಮಳಿಗೆಯವರೂ ಕ್ಯುಆರ್ ಕೋಡ್ ಸ್ಕ್ಯಾನರ್ ತಂದಿದ್ದರಾದರೂ‌ ಕೆಲಸಕ್ಕೆ ಬರಲಿಲ್ಲ. ಜನಸಂದಣಿ ಹೆಚ್ವಾಗುವವರೆಗೆ ಬೆಳಗಿನ ಕೆಲ ಹೊತ್ತು ಕೆಲಸ ಮಾಡುತ್ತಿದ್ದ ಆನ್‌ಲೈನ್ ಪಾವತಿ, ನಂತರ ಶೂನ್ಯವಾಗುತ್ತಿತ್ತು. ಅನೇಕರು ಪುಸ್ತಕ ಖರೀದಿಸಿದ ನಂತರ ಪಾವತಿ ಮಾಡಲಾಗದೆ ವಾಪಸ್ ಇಟ್ಟುಹೋದರು. ಇದರಿಂದ ಪುಸ್ತಕ ಮಾರಾಟಗಾರರಿಗೆ ಲಕ್ಷಾಂತರ ರೂ. ನಷ್ಟವಾಯಿತು. ಇದೆಲ್ಲದರ ನಡುವೆಯೂ, ಸಾಕಷ್ಟು ವ್ಯಾಪಾರ ಆಗಿದೆ.

ಪುನೀತ್ ಹವಾ
ಸಮ್ಮೇಳನದ ಆವರಣದಲ್ಲಿ ಅನೇಕ ಪ್ರತಿಮೆಗಳನ್ನು ಇರಿಸಲಾಗಿತ್ತು. ಸಮ್ಮೇಳನಕ್ಕೆ ಆಗಮಿಸಿದ್ದ ಬಹುತೇಕರು ಈ ಪ್ರತಿಮೆಗಳ ಬಳಿ ಸಾಗಿ ಫೋಟೊ, ಸೆಲ್ಫಿ ತೆಗೆದುಕೊಂಡರು. ಇದರಲ್ಲಿ ಪುನೀತ್‌ ರಾಜಕುಮಾರ್‌ ಪ್ರತಿಮೆಗೆ ಅತಿ ಹೆಚ್ಚು ಬೇಡಿಕೆಯಿತ್ತು. ವಿವಿಧ ರಥಗಳು, ಉಳುಮೆ ಮಾಡುತ್ತಿರುವ ಡಾ. ರಾಜಕುಮಾರ್‌, ಕುಕ್ಕುಟೋದ್ಯಮ, ಕೃಷಿ ಚಟುವಟಿಕೆಯ ಪ್ರತಿಮೆಗಳೂ ಸಾಕಷ್ಟು ಗಮನ ಸೆಳೆದವು.

ಭವ್ಯ ವೇದಿಕೆ, ರಥ
ಸಾಮಾನ್ಯವಾಗಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಸಾರೋಟನ್ನು ತರಿಸಲಾಗಿರುತ್ತದೆ. ಆದರೆ ಈ ಬಾರಿ ಬೃಹತ್‌ ರಥವನ್ನು ಮೆರವಣಿಗೆಗಾಗಿಯೇ ಸಿದ್ಧಪಡಿಸಲಾಗಿತ್ತು. ಸಮ್ಮೇಳನದ ಸಲುವಾಗಿ ರಾಜ್ಯಾದ್ಯಂತ ಸಂಚರಿಸಿ ಆಗಮಿಸಿದ್ದ ಮತ್ತೊಂದು ರಥವೂ ಮೆರವಣಿಗೆಯಲ್ಲಿತ್ತು. ಜಿಲ್ಲಾ ಕಸಾಪ ಅಧ್ಯಕ್ಷರನ್ನು ಹೊತ್ತು 12 ರಥಗಳೂ ಸಾಗಿದವು. ಸಾವಿರಕ್ಕೂ ಹೆಚ್ಚು ಕಲಾವಿದರು ಸೇರಿ ಸುಮಾರು ಮೂರು ಕಿಲೋಮೀಟರ್‌ ಉದ್ದದ ಮೆರವಣಿಗೆ ಹಾವೇರಿಯ ಮುಖ್ಯ ರಸ್ತೆಗಳಲ್ಲಿ ಸಾಗಿತು.

ಎರಡು ಬಾರಿ ಕಾರ್ಯಕಾರಿ ಸಮಿತಿ ಸಭೆ
ಹಾವೇರಿ ಸಮ್ಮೇಳನದಲ್ಲಿ ಎರಡು ಬಾರಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಮುಂದಿನ ಸಮ್ಮೇಳನದ ಸ್ಥಳ ಆಯ್ಕೆಗೆ ಶನಿವಾರ ಸಭೆ ನಡೆಯುತಾದರೂ ಅಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಭಾನುವಾರ ಬೆಳಗ್ಗೆಗೆ ಸಭೆಯನ್ನು ಮುಂದೂಡಲಾಯಿತು. ಈ ಸಭೆಯಲ್ಲಿ, ಮಂಡ್ಯ ಜಿಲ್ಲೆಯನ್ನು ಆಯ್ಕೆ ಮಾಡಲಾಯಿತು.

ಊಟದ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ
ಸಮ್ಮೇಳನದ ಮೂರೂ ದಿನ ಸುಮಾರು ಎರಡು ಲಕ್ಷ ಜನರು ಊಟವನ್ನು ಸ್ವೀಕರಿಸಿದ್ದಾರೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಊಟದ ಸ್ಥಳದಲ್ಲಿ ನೂಕುನುಗ್ಗಲು ನಡೆಯುತ್ತದೆ. ಈ ಬಾರಿ 200 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಊಟ ಪಡೆಯಲು ಸಾಕಷ್ಟು ಉದ್ದದ ಕ್ಯೂನಲ್ಲಿ ನಿಲ್ಲಬೇಕಾಗಿತ್ತಾದರೂ ಆಹಾರದ ಕೊರತೆಯಾಗಲಿ, ನೂಕುನುಗ್ಗಲಾಗಲಿ ಇಲ್ಲದಂತೆ ಸಾಕಷ್ಟು ನಿರ್ವಹಣೆ ಮಾಡಲಾಯಿತು.

ಸಾಗರದಂತೆ ಬಂದ ಜನ
ಹಾವೇರಿ ಸಮ್ಮೇಳನದ ವಿಶೇಷವೆಂದರೆ ಜನಸ್ತೋಮ. ಸಮರೋಪಾದಿಯಲ್ಲಿ, ಕಾಲಿಡಲೂ ಸ್ಥಳವಿಲ್ಲದಂತೆ ಪೆಂಡಾಲ್‌ ಒಳಗೆ, ಆವರಣದಲ್ಲಿ ಜನಜಂಗುಳಿ ಮೂರೂ ದಿನ ಇತ್ತು. ಪ್ರತಿ ದಿನದ ಆರಂಭದ ಒಂದು ಗೋಷ್ಠಿಯನ್ನು ಹೊರತುಪಡಿಸಿ ಉಳಿದೆಲ್ಲ ಗೋಷ್ಠಿಗಳಲ್ಲೂ ಸಾಕಷ್ಟು ಜನರ ಉಪಸ್ಥಿತಿ ಇರುತ್ತಿತ್ತು. ಹಾವೇರಿಯ ಸುತ್ತಮುತ್ತ ಅನೇಕ ಬೃಹತ್‌ ಜಾತ್ರೆಗಳ ದಿನಾಂಕವಾದ್ಧರಿಂದ ಇನ್ನೂ ಸಾಕಷ್ಟು ಜನರಿಗೆ ಹಾವೇರಿಯತ್ತ ಆಗಮಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ಇನ್ನೂ ಲಕ್ಷಾಂತರ ಜನರು ಬರುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ವಿರೋಧಿ ಸಾಹಿತಿಗಳೇ ಸಾಹಿತ್ಯ ಪರಿಷತ್ತಿಗೆ ಬನ್ನಿ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಕರೆ

Exit mobile version