Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಒಂದಾಗಿಸುವ ಕವಿತೆಯಲ್ಲಿ ಮಿಂದೆದ್ದ ಕವಿಗೋಷ್ಠಿ

kavigoshti

ಹಾವೇರಿ (ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ): ಕವಿತೆ ಜೋಡಿಸುತ್ತದೆ ಎಂದರು. ಕವಿತೆ ಬಂಡಾಯವಾಗಬೇಕು ಎಂದರು. ಕವಿತೆಯನ್ನು ಧ್ಯಾನಕ್ಕೂ ಕಲೆಗೂ ನದಿಗೂ ಹೋಲಿಸಿದರು; ಅದು ಬೀದಿಗೂ ಬರಬೇಕು ಎಂದರು. ಇವೆಲ್ಲವೂ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರನೇ ದಿನದ ಕವಿಗೋಷ್ಠಿಯಲ್ಲಿ ಕಂಡುಬಂತು. ನಾಡಿನ ವೈವಿಧ್ಯಮಯ ಕವಿಪ್ರತಿಭೆ ಈ ಗೋಷ್ಠಿಯಲ್ಲಿತ್ತು.

ಛಿದ್ರಗೊಳಿಸುವುದರಲ್ಲಿ ಕಾವ್ಯವಿಲ್ಲ. ಒಂದಾಗುವುದರಲ್ಲಿ ಇದೆ. ಕವಿತೆಗೆ ಎಲ್ಲರನ್ನು ಒಳಗೊಳ್ಳುವುದು ಸಾಧ್ಯವಿದೆ ಎಂದು ಗೋಷ್ಠಿಯ ಆಶಯ ನುಡಿ ನುಡಿದ ಖ್ಯಾತ ಕವಯಿತ್ರಿ ಡಾ.ಗೀತಾ ವಸಂತ ಹೇಳಿದರು. ಕನ್ನಡದ ಸಮಕಾಲೀನ ಕಾವ್ಯವನ್ನು ನಾವು ಬೇಂದ್ರೆ- ಶರೀಫ- ಅಲ್ಲಮರ ತ್ರಿಕೋನದಿಂದ ಹದಗೊಳಿಸಿಕೊಳ್ಳಬೇಕಿದೆ. ಕಾವ್ಯ ಮತ್ತು ಯೋಗವನ್ನು ಬೆಸೆದವರು ಬೇಂದ್ರೆ. ‘ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಶಬ್ದದಂತೆ’ ಅಲೌಕಿಕವನ್ನು ಬೆಸೆದವನು ಅಲ್ಲಮ. ‘ಕುಣಿಸಿ ಬಾಳಿಗೆ ತಣಿಸ್ಯಾಡುವ ಪದವು’ ನಮಗೆ ಬೇಕು ಎಂದವನು ಶರೀಫ. ಇಂದಿನ ಈ ಅಸಹನೆಯ, ಅಸಹಿಷ್ಣುತೆಯ ಯುಗದಲ್ಲಿ ಈ ಮೂವರ ಕಾಣ್ಕೆ ನಮಗೆ ಬೇಕಾಗಿದೆ ಎಂದರು.

ಛಿದ್ರಗೊಳಿಸುವುದಲ್ಲಿ ಕಾವ್ಯವಿಲ್ಲ. ಜೋಡಿಸುವುದರಲ್ಲಿದೆ. ಕಾವ್ಯ ಪಂಡಿತರ ಸೊತ್ತಲ್ಲ. ಅದು ಕಟ್ಟಕಡೆಯ ಶ್ರಮಿಕನ ಸೊತ್ತು ಕೂಡ.  ಕವಿತೆಗೆ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಿದೆ. ಇದನ್ನೇ ದೇವನೂರು ಮಹಾದೇವರು ‘ಸಂಬಂಜ’ ಎನ್ನುತ್ತಾರೆ. ಕಾವ್ಯ ನಮ್ಮನ್ನೆಲ್ಲ ಬೆಸೆಯುವ ಸೇತುವೆಯಾಗಲಿ ಎಂದು ಗೀತಾ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಸತೀಶ ಕುಲಕರ್ಣಿ ಮಾತನಾಡಿ, ‘ನಾವು ಹುಟ್ಟಿ ಬೆಳೆದು ಓಡಾಡಿ ಕಲಿತ  ಊರು ಹಾವೇರಿ. ಮನೆಮಗನ ಲಗ್ನ ಬಿಟ್ಟು ಆಳುಮಗನ ಲಗ್ನಕ್ಕೆ ಹೋಗಬಾರದು ಎಂಬಂತೆ ನಾನು ಇಲ್ಲಿ ಭಾಗವಹಿಸಿದ್ದೇನೆ’ ಎಂದು ಸೂಚ್ಯವಾಗಿ ಜನಸಾಹಿತ್ಯ ಸಮ್ಮೇಳನಕ್ಕೆ ತಾವು ಹೋಗದಿದ್ದುದರ ಕಾರಣ ತಿಳಿಸಿದರು. ಕಾವ್ಯ ಬೀದಿಗೂ ಬಂಡಾಯಕ್ಕೂ ಬರಬೇಕು. ಹಾಗೆಯೇ ಅದು ಚಂಪಾರ ‘ಶಾಲ್ಮಲಾ’ ಕವಿತೆಯ ನದಿಯಂತೆ ಗುಪ್ತಗಾಮಿನಿಯಾಗಿಯೂ ಇರಬೇಕು. ಕವಿಯನ್ನು ಬಂಧಿಸಬಹುದು, ಆದರೆ ಕಾವ್ಯವನ್ನಲ್ಲ ಎಂದರು.

ಕನ್ನಡದ ಒಟ್ಟಾರೆ ಕಾವ್ಯವೇ ಒಂದು ಪ್ರತಿರೋಧದ ಧ್ವನಿ. ಎಲ್ಲ ಬಗೆಯ ಪ್ರತಿಭಟನೆಗಳನ್ನೂ ಕನ್ನಡ ಜೀರ್ಣಿಸಿಕೊಂಡಿದೆ ಎಂದರು. ಇಂದಿನ ಸಂದಿಗ್ಧ ವಾತಾವರಣದಲ್ಲಿ, ರಾಜಕೀಯದ ವಾಸನೆ ಎಲ್ಲ ಕಡೆಯೂ ಇರುವುದರಿಂದ ಕವಿಗಳು ಎಚ್ಚರ ವಹಿಸಬೇಕಿದೆ ಎಂದರು. ‘ಮಹಾತ್ಮ ಮತ್ತು ಆ ಹೆಣ್ಣುಮಗಳು’ ಎಂಬ ತಮ್ಮ ಕವಿತೆಯನ್ನು ವಾಚಿಸಿದರು.

’ಪ್ರತಿಯೊಂದು ನದಿಗೂ ಕತೆಯೊಂದು ಜತೆಯಾಗಿದೆ, ಕತೆಯೊಂದು ಬದುಕಾಗಿದೆ’ ಎಂದು ಡಿ.ವಿ ಪ್ರಹ್ಲಾದ್ ಅವರು ತಮ್ಮ ‘ನದಿಯೊಂದು ಹರಿಯುವುದು’ ಕವಿತೆಯಲ್ಲಿ ಸೂಚಿಸಿದರು. ಸುಡುಬಿಸಿಲಲ್ಲಿ ಹಗ್ಗದ ಮೇಲೆ ಕಸರತ್ತು ನಡೆಸುವ ದೊಂಬರ ಹುಡುಗಿಯ ಮೂಲಕ ಹೆಣ್ಣಿನ ಜೀವನದ ಪಾಠಗಳ ಕಲಿಕೆಯನ್ನು ಕಟ್ಟಿಕೊಟ್ಟ ಭಾಗ್ಯಜ್ಯೋತಿ ಹಿರೇಮಠ, ‘ಇಳಿದು ಬಾ ಮಗಳೇ ಸಪಾಟು ನೆಲದ ಮೇಲೆ ನೀನೂ ನಗುತ್ತ ನಿಲ್ಲು ಒಂದೆಡೆ’ ಎಂದು ಸೂಚಿಸಿದರು. ‘ಕನಕರನ್ನು ಅರ್ಥ ಮಾಡಿಕೊಳ್ಳದವರಿಗೆ ಕೃಷ್ಣನೂ ಕಾಣುವುದಿಲ್ಲ’ ಎಂದು ಸಾರಿದ ಕೊಟ್ರೇಶ್ ಅರಸಿಕೆರೆ, ಶರೀಫ- ಗುರು ಗೋವಿಂದ ಭಟ್ಟ ಅಲೌಕಿಕ ಬಾಂಧವ್ಯದ ಗುಣ ‘ವಂಶವಾಹಿಯಲ್ಲಿ ಹರಿಯುವುದೂ ಇಲ್ಲ’ ಎಂದರು. ಇದು ಕಸಾಪ ರಾಜ್ಯಾಧ್ಯಕ್ಷರಿಗೆ ಕೊಟ್ಟ ಟಾಂಗ್ ನಂತಿತ್ತು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ದಲಿತರ ಯೋಜನೆಗಳ ಅನುಷ್ಠಾನಕ್ಕೆ ʼಮೀಸಲಾತಿ ಕಾವಲು ದಳʼ ರಚನೆಯಾಗಲಿ: ಡಿ.ಎಸ್‌. ವೀರಯ್ಯ ಆಗ್ರಹ

‘ಕೆಲವೊಮ್ಮೆ ಕಲೆ ಒಳ್ಳೆಯದು’ ಎಂದು ಸೂಚಿಸಿದ ವಿದ್ಯಾರಶ್ಮಿ ಪೆಲತ್ತಡ್ಕ, ‘ಇರಲಿ ಬಿಡಿ ಕಲೆ ಮನಃಪಟಲದ ಮೇಲೂ, ಗೀರು ಎಳೆದವರನ್ನೆಲ್ಲ ನೆನಪಿಸಿಕೊಳ್ಳಲು’ ಎನ್ನುತ್ತ, ‘ದೃಷ್ಟಿಗಾದರೂ ಇರಲಿ ಒಂದು ಪುಟ್ಟ ಕಲೆ, ಇಲ್ಲದಿದ್ದರೆ ಉಳಿಯುವುದು ಖಾಲಿ ಹಾಳೆ’ ಎಂದು ಮಾರ್ಮಿಕವಾಗಿ ನುಡಿದರು. ‘ನನ್ನ ಚಿತ್ರಕ್ಕೊಂದು ಹೆಸರಿಲ್ಲ’ ಎಂದು ಆರಂಭಿಸಿದ ನಂದಿನಿ ಹೆದ್ದುರ್ಗ, ವಿರುದ್ಧ ಪಂಥಗಳವರು ಕಲೆಯನ್ನು ತಮ್ಮ ಮೂಗಿನ ನೇರಕ್ಕೆ ಕಾಣುವ ಕ್ರಮವನ್ನು ಸೂಚ್ಯವಾಗಿ ವಿವರಿಸಿ, ‘ವೃತ್ತ ರೇಖೆ ಆಯತಗಳನ್ನೆಳೆಯುವಾಗ ನೀನಿದ್ದೆ ಎದೆಯಲ್ಲಿ ಎಂದು ಯಾರಲ್ಲೂ ಹೇಳುವುದಿಲ್ಲ ಗೆಳೆಯಾ’ ಎಂದು ಕಲೆಯ ಅಂತರಂಗವನ್ನು ಬಿಚ್ಚಿಟ್ಟರು.  

‘ಅಸಂಖ್ಯ ಹರುಕುಗಳ ಬಾಗಿಲಿಗೀಗ ಬೀಗ’ ಎನ್ನುತ್ತ ಮನದ ಬಾಗಿಲಿನ ಬೀಗದ ಮರ್ಮವನ್ನು ಸಿಂಧುಚಂದ್ರ ಹೆಗಡೆ ಬಿಚ್ಚಿಟ್ಟರು. ‘ನಾನು ಪ್ರೀತಿಯ ಕುರಿತಷ್ಟೇ ಹೇಳಬೇಕೆಂದಿದ್ದೆ. ಇರಬಾರದು ಕವಿಗೂ ಕವಿತೆಗೂ ಸಂಬಂಧ ಎಂದವರ ಪಟ್ಟಿಯೇ ಇದೆ, ಪರಮಾರ್ಥವನ್ನು ಲೇಖನಿಯೂ ಬರೆಯುವುದಿಲ್ಲ’ ಎಂದವರು ಸ್ಮಿತಾ ರಾಘವೇಂದ್ರ. ಮನೆಯಿಂದ ಹೊರಡುವಾಗ ‘ತದೇಕಚಿತ್ತದಿಂದ ತನ್ನನ್ನು ನೋಡುವ ಅಪ್ಪ ಹಾಗೂ ದಣಪೆ’ಯ ಚಿತ್ರವನ್ನು ಫಾಕ್ಗುಣ ಗೌಡ ಆಚವೆ ಬಿಚ್ಚಿಟ್ಟರು.

ಗಿರೀಶ ಜಕಾಪುರೆ, ಜಿ.ಕೆ. ಕುಲಕರ್ಣಿ, ಎಂ.ಸತ್ಯನಾರಾಯಣ ಸಾಗರ, ಶಾಂತಾ ಜಯಾನಂದ ಮುಂತಾದವರು ಕವಿತೆ ವಾಚಿಸಿದರು. ಆಗುಂಬೆ ಗಣೇಶ ಹೆಗ್ಗಡೆಯವರು ಮಲೆನಾಡಿನ ಅಡಿಕೆ ತೋಟಕ್ಕೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಕವಿಗೋಷ್ಠಿಯನ್ನು ಬಳಸಿಕೊಂಡರು. ಭೋಗ ಷಟ್ಪದಿಯ ಕವಿತೆಯನ್ನು ಇನ್ನೊಬ್ಬರು ವಾಚಿಸಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ದಮನಿತರ ಸಂಘರ್ಷದ ಹಾದಿ ಮನಃಪರಿವರ್ತನೆಯತ್ತ ಹೊರಳಲಿ: ಡಾ. ರೋಹಿಣಾಕ್ಷ ಶೀರ್ಲಾಲು ಅಭಿಮತ

Exit mobile version