ಹಾವೇರಿ: ದಮನಿತರಿಗೆ ದೊರಕಬೇಕಾದ ಸಮಾನತೆಯನ್ನು ಗಳಿಸಲು ಇಲ್ಲಿವರೆಗೆ ನಡೆಸಿದ ಸಂಘರ್ಷದ ಹಾದಿಯು, ದಮನಕ್ಕೆ ಒಳಪಡಿಸುವವರ ಮನಃಪರಿವರ್ತನೆಯತ್ತ ಸಾಗಬೇಕಾಗಿದೆ ಎಂದು ಕಲಬುರ್ಗಿ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶೀರ್ಲಾಲು ತಿಳಿಸಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನಕ-ಶರೀಫ-ಸರ್ವಜ್ಞ ವೇದಿಕೆ’ಯಲ್ಲಿ ‘ದಮನಿತ ಲೋಕದ ಸಬಲೀಕರಣ’ ಗೋಷ್ಠಿಯ ಆಶಯ ನುಡಿಯನ್ನಾಡಿದರು.
ದಮನಿತ ಲೋಕಏಕೆ? ನಮ್ಮೊಳಗೇ ಏಕೆ ಕೆಲವರನ್ನು ದಮನಿಸಲಾಗಿದೆ? ಏಕೆ ದಮನಿಸುತ್ತಿದ್ದಾರೆ? ಎಂದಾದರೂ ಈ ದಮನಿತರ ಕೂಗಿಗೆ ಸಮಾಜ ಕಿವಿಯಾಗಿದೆಯೇ ಎಂಬುದು ಪ್ರಶ್ನೆ. ಲಕ್ಷಾಂತರ ಜನರು ಸೇರಿರುವಾಗ ಒಬ್ಬರ ಮೈ ಸ್ಪರ್ಷದಿಂದ ಏನೂ ಆಗದಿರುವಾಗ, ಕೆಲವರ ಸ್ಪರ್ಷದಿಂದ ಕೆಲವರಿಗೆ ಏಕೆ ಮೈಲಿಗೆ ಆಗಯತ್ತದೆ? ಕೆಲವರ ದರ್ಶನದಿಂದ ಕೆಲವರ ಬೀದಿಗಳು, ಕೆಲವರ ದೇವರು ಏಕೆ ಮೈಲಿಗೆ ಆಗುತ್ತದೆ ಎನ್ನುವುದನ್ನು ಕೇಳಬೇಕು. ಸಬಲೀಕರಣವೇ ಕಲ್ಯಾಣದ ಕಡೆಗಿನ ಹೆಜ್ಜೆ.
ಒಬ್ಬ ವ್ಯಕ್ತಿ ಹುಟ್ಟಿದ ಜಾತಿಯ ಆಧಾರದಲ್ಲಿ ಅವನ ಶ್ರೇಷ್ಠತೆಯನ್ನು ಅಳೆಯುವಿಕೆ ಎಂದು ಕೊನೆಯಾಗುತ್ತದೆ ಎನ್ನುವುದನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಇಂತಹ ಸಮಾಜ ಆರೋಗ್ಯಕರವಾದ ಸಮಾಜ ಆಗಲು ಸಾಧ್ಯವಿಲ್ಲ. ಈ ಸಮಾಜ ಗಂಭೀರವಾದ ಖಾಯಿಲೆಯಿಂದ ಬಳಲುತ್ತಿದೆ. ಅಸ್ಪೃಶ್ಯತೆ ಎನ್ನುವುದು ದಮನಕ್ಕೆ ಒಳಗಾದವರ ಖಾಯಿಲೆ ಅಲ್ಲ, ದಮನಿಸುವವರ ಖಾಯಿಲೆ. ಬಾಬಾಸಾಹೇಬ್ ಅಂಬೇಡ್ಕರರಿಂದ ಕುದ್ಮುಲ್ ರಂಗರಾಯರವರೆಗಿನ ಹೋರಾಟಗಳು ಸಾರ್ಥಕವಾಗಿವೆಯೇ ಎಂಬುದನ್ನು ಕೇಳಿಕೊಳ್ಳಬೇಕು.
ಎರಡು ವರ್ಷದ ಮಗ ದೇವಸ್ಥಾನಕ್ಕೆ ಹೋದಾಗ ಅಪ್ಪನಿಗೆ ದಂಡ ಹಾಕುವ, ದೇವರ ಪಲ್ಲಕ್ಕಿಯ ಕೋಲು ಎತ್ತಿಕೊಟ್ಟಿದ್ದಕ್ಕೆ ಬಹಿಷ್ಕಾರ ಹಾಕುವುದುದಾದರೆ, ದಮನಿತರು ಟ್ಯಾಂಕ್ ನೀರು ಕುಡಿದರು ಎಂಬ ಕಾರಣಕ್ಕೆ ಇಡೀ ಟ್ಯಾಂಕ್ ನೀರು ಖಾಲಿ ಮಾಡುವ ಸ್ಥಿತಿ ಇದೆ. ಇಲ್ಲಿವರೆಗೆ ಸಂಘರ್ಷದ ಹಾದಿಯಲ್ಲಿ ಬಂದಿದ್ದೇವೆ. ಈಗ ಅದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ, ಮನಪರಿವರ್ತನೆಯೆಡೆಗೆ ಸಾಗಬೇಕಿದೆ. ದಮನಿತ ಮಕ್ಕಳಿಗೆ ವಿದ್ಯೆ ನೀಡಿದ ಕುದ್ಮುಲ್ ರಂಗರಾಯರು, ಗೋಪಾಲ ಅಯ್ಯಂಗಾರ್ ಅವರಂಥ ಮನಸ್ಥಿತಿ ನಮ್ಮದಾಗಬೇಕು.
ಸಬಲೀಕರಣಕ್ಕಾಗಿ ಸರ್ಕಾರವೂ ಅನೇಕ ಯೋಜನೆಗಳನ್ನು ರೂಪಿಸಿದೆ. ಭೂಮಿಕೊಟ್ಟಿದೆ, ಮೀಸಲಾತಿ ನೀಡಿದೆ. ಈ ಪ್ರಯತ್ನಗಳು ಸಾಕಷ್ಟು ಫಲ ಕೊಟ್ಟಿವೆ. ಆದರೆ ಸಮಾಜದ ವ್ಯಾಪ್ತಿಯನ್ನು ನೋಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ. ಇದು ಅತ್ಯುನ್ನತ ಸ್ಥಿತಿ. ಇದರಿಂದಾಗಿಯೇ ಭಾರತ ವಿಶ್ವ ಗುರು ಆಗಲಿದೆ ಎಂದರು.
ಡಾ. ಅಂಬೇಡ್ಕರ್ ಮತ್ತು ಕನ್ನಡ ಸಾಹಿತ್ಯ ಕುರಿತು ಮಾತನಾಡಿದ ಡಾ. ಶಿವಾನಂದ ಕೆಳಗಿನಮನಿ, ಯಾವುದೇ ಕಾಲದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ನಾವು ನೋಡಬಹುದು. ದಮನಿತರಲ್ಲಿ ಜಾಗೃತಿ ಮೂಡಿಸಲು ಅಂಬೇಡ್ಕರ್ ಅವರು ಹೋರಾಟಕ್ಕೆ ಕರೆ ನೀಡಿದರು. ಸ್ವಾತಂತ್ರ್ಯ ಮೊದಲು ಎನ್ನುವುದು ಗಾಂಧೀಜಿ ಪರಿಕಲ್ಪನೆಯಾದರೆ, ದಲಿತರ ಬಿಡುಗಡೆ ಮೊದಲು ಎಂದವರು ಅಂಬೇಡ್ಕರ್. ಹಿಂದು ಧರ್ಮದೊಳಗೆ ಅಂಟಿಕೊಂಡಿರುವ ಮೌಢ್ಯತೆ, ಕಂದಾಚಾರಗಳನ್ನು ಮುಂದೆ ತಂದು, ಸದರಿಂದ ಹೊರಬರಬೇಕು ಎಂದರು.
ದಲಿತರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗಬೇಕು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ದಲಿತ ಸಂಘಟನೆ ಕರ್ನಾಟಕದಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಅಂಬೇಡ್ಕರ್ ಅವರ ತತ್ವವೇ ಪ್ರೇರಣೆ. ಶೋಷಕರ ವಿರುದ್ಧ ಹುಟ್ಟಿದ ಧಿಕ್ಕಾರದ ಧ್ವನಿ ಅದು.
ದಮನಿತರ ಸಾಂಸ್ಕೃತಿಕ ಜೀವನ ದೃಷ್ಟಿ ಕುರಿತು ಮಾತನಾಡಿದ ಡಾ. ಬಿ.ಗಂಗಾಧರ, ಚರಿತ್ರೆಯನ್ನು ತಿಳಿದವರು ತಮ್ಮ ಸಹಜೀವಿಗಳನ್ನು ಕೀಳಾಗಿ ಕಾಣುವುದಿಲ್ಲ. ಆದರೆ ಇತ್ತೀಚಿನ ಘಟನೆಗಳನ್ನು ನೋಡಿದರೆ, ಚರಿತ್ರೆಯ ಅರಿವು ನಮ್ಮಲ್ಲಿ ಅನೇಕರಿಗೆ ಇಲ್ಲ ಎಂದು ಕಾಣುತ್ತದೆ. ದಮನಿತ ವರ್ಗದ ಮೇಲೆ ಹಲ್ಲೆಗಳು ಆಗುತ್ತಿದ್ದರೂ ಅವರು ಪ್ರತಿರೋಧವನ್ನು ಏಕೆ ತೋರುತ್ತಿಲ್ಲ ಎಂದು ನೋಡಿದರೆ, ಅವರು ತಾಯ್ತನದ ಮನಸ್ಸಿನಿಂದ ಸಹಿಸಿಕೊಳ್ಳುತ್ತಿವೆ. ಮುಗ್ಧತೆಯ ಭಾವವೇ ದೇವರೆಡೆಗೆ ಸಾಗುವ ಮಾರ್ಗವಾಗುತ್ತದೆಯೇ ವಿನಃ ಪ್ರತಿಕಾರದಿಂದ ಅಲ್ಲ ಎಂಬ ಸತ್ಯವನ್ನು ತಿಳಿದಿದ್ದಾರೆ. ಇಲ್ಲಿರುವವರು ತಮ್ಮ ಸ್ವಾರ್ಥಕ್ಕಾಗಿ ಹೀಗೆ ಮಾಡುತ್ತಿದ್ದಾರೆ, ಇದು ನನ್ನದೇ ಮನೆ, ಇದು ಒಂದು ದಿನ ಸರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಹಿಸಿಕೊಳ್ಳುತ್ತಿವೆ ಎಂದರು.
ಕನ್ನಡದಲ್ಲಿ ದಮನಿತರ ಸಾಹಿತ್ಯ ಕುರಿತಾಗಿ ಮಾತನಾಡಿದ ಡಾ. ಹನುಮಂತಪ್ಪ ಸಂಜೀವಣ್ಣನವರ, ಇಡೀ ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಸಾಹಿತ್ಯ ಎನ್ನುವುದು ಅತ್ಯಂತ ಪ್ರಮುಖ ಘಟ್ಟ. ಈ ಸಮಯದಲ್ಲಿ ರಚನೆಯಾದ ವಚನ ಸಾಹಿತ್ಯ, ಮಾನವನ ಸಮಸ್ತ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ರಚನೆಯಾಗಿದೆ. ನಡೆ ನುಡಿ ಶುದ್ಧವಾಗಿದ್ದಲ್ಲಿ ಕುಲ ಸೂತಕವಿಲ್ಲ ಎನ್ನುತ್ತಾರೆ ವಚನಕಾರರು. ಇವನಾರವ, ಇವನಾರವ ಎನ್ನಬೇಡಿರೆಂದು ಬಸವಣ್ಣನವರು ಹೇಳಿದ್ದಾರೆ. ಎಲ್ಲರೂ ನಮ್ಮವರು ಎಂಬ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ. ಸಾಹಿತ್ಯದಲ್ಲಿ ದಮನಿತರ ಸಾಹಿತ್ಯವನ್ನು ಹೆಚ್ಚೆಚ್ಚು ಪ್ರಸ್ತುತಪಡಿಸಬೇಕು ಎಂದರು.
ಬದಲಾದ ಹೋರಾಟಗಳ ಸ್ವರೂಪ ಮತ್ತು ಯೋಜನೆಗಳ ಬಳಕೆ ಕುರಿತು ಮಾತನಾಡಿದ ಡಾ. ನಟರಾಜ್, ಹೋರಾಟಗಳು ಪ್ರತಿಫಲವನ್ನು ಬಯಸಿ ನಡೆಯುತ್ತವೆ. ತತ್ಕಾಲೀನ ಸಂದರ್ಭದಲ್ಲಿ ಇದ್ದ ಅವಶ್ಯಕತೆಗಳಿಗೆ ಅನುಗುಣವಾಗಿ ಹೋರಾಟಗಳು ನಡೆದವು. ದಲಿತ ಚಳವಳಿ, ಮಹಿಳಾ ಚಳವಳಿ, ರೈತಚಳವಳಿಗಳು ದೌರ್ಜನ್ಯದ ವಿರುದ್ಧ ನಡೆದವು. ಬಿ.ಕೃಷ್ಣಪ್ಪನವರು ಶಿವಮೊಗ್ಗದಿಂದ ದಲಿತ ಹೋರಾಟ ಆರಂಭಿಸಿದರು. ಗುಂಡೂರಾಯರ ಕಾಲದಲ್ಲಿ ದಲಿತ ಚಳವಳಿಗಾರರ ವಿರುದ್ಧ ಲಾಠಿ ಚಾರ್ಜ್ ಮಾಡಿದರು. ಹೋರಾಟದಲ್ಲಿ ಇದ್ದವರನ್ನು ರಾಮಕೃಷ್ಣ ಹೆಗಡೆಯವರು ರಾಜಕೀಯ ಸಖ್ಯಕ್ಕೆ ಹತ್ತಿರ ಮಾಡಿಕೊಂಡಾಗ ಚಳವಳಿಗಳು ವಿಭಜನೆಯಾದವು.
ಇಕ್ಕರಲಾ ಒದೀರಲಾ ಎಂದ ಸಿದ್ದಲಿಂಗಯ್ಯನವರ ಮೇಲೆಯೇ, ದೇವಸ್ಥಾನ ಪ್ರವೇಶದ ಸಂದರ್ಭದಲ್ಲಿ ದಾಳಿ ಆಗುತ್ತದೆ. ಇಲ್ಲಿ ನಡೆಯುತ್ತಿರುವ ಹೋರಾಟ, ಬಡವರ ಒಳಗೇ ನಡೆಯುತ್ತಿದೆ. ಸಾಮರಸ್ಯದ ಮೂಲಕ ಮನಃಪರಿವರ್ತನೆ ಮಾಡಬೇಕು ಎಂದು ನಡೆದರು ಎಂದು ತಿಳಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್. ವೀರಯ್ಯ ಮಾತನಾಡಿ, ಕನ್ನಡ ಸಾಹಿತ್ಯದ ಆಲದ ಮರಕ್ಕೆ ದಲಿತ ಸಾಹಿತ್ಯವೇ ಬೇರು. ದಲಿತರು ಇಲ್ಲಿನ ಸಂಸ್ಕೃತಿಯ ವಾರಸಿದಾರರು. ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸಂಬಂಧವಿರುವುದರಿಂದ ಈ ಮಾತು ಹೇಳಬಹುದು.
ಮೀಸಲಾತಿ ಎನ್ನುವುದು ಏನೋ ಕೊಟ್ಟಿದೇವೆ ಎನ್ನುವಂತಲ್ಲ. ವಂಚಿತರನ್ನು ಮುಂದೆ ತರಲು ಮೀಸಲಾತಿ ನೀಡಲಾಗುತ್ತದೆ. ಅದಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಒಂದು ನಿರ್ದಿಷ್ಟ ಅವಧಿಯವರೆಗೆ, ನಮ್ಮಂತೆ ಬಾಳುವವರೆಗೆ, ತಲೆಯೆತ್ತಿ ನಡೆಯುವವರೆಗೆ ಮೀಸಲಾತಿ ಅಗತ್ಯವಿದೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಆದರೂ ಹೀನಾಯ ಘಟನೆಗಳನ್ನು ಕೇಳುತ್ತಿದ್ದೇವೆ. ಈ ಘಟನೆಗಳ ಮೂಲಕ ಅಂಬೇಡ್ಕರ್, ಬುದ್ಧ, ಬಸವಣ್ಣನವರ ಆಶಯಗಳಿಗೆ ಅನುಗುಣವಾಗಿಲ್ಲ. ಈ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಈ ಸಮಾಜ ಒಂದು ರೋಗಗ್ರಸ್ಥ ಸಮಾಜವಾಗಿ ಉಳಿಯುತ್ತದೆ.
ಹಿಂದೆ ಒಂದು ರೀತಿಯ ಅಸ್ಪೃಶ್ಯತೆಯ ಆಚರಣೆ ಇತ್ತು. ಕಾನೂನು ಜಾರಿಯಾಗಿದ್ದರೂ ಇನ್ನೂ ದಲಿತರ ಮೇಲಿನ ದೌರ್ಜನ್ಯಗಳು, ಕೊಲೆ, ಅತ್ಯಾಚಾರ, ಬಹಿಷ್ಕಾರಗಳು ನಡೆದೇ ಇವೆ. ದಲಿತರಿಗೆ ಮೀಸಲಿಟ್ಟಿದ್ದ ಇಷ್ಟೊಂದು ಹಣ ಎಲ್ಲಿ ಹೋಯಿತು? ಪ್ರತಿಯೊಬ್ಬರಿಗೂ ಎಷ್ಟು ತಲುಪಿದೆ? ಎಂದು ಎಸ್‌ಸಿ ಆಯೋಗವು ಪ್ರಶ್ನಿಸಿದೆ. ಈ ಸಮಾಜಕ್ಕೆ ಕಾನೂನುಗಳಿಗೆ, ಆದೇಶಗಳಿಗೆ, ಆಜ್ಞೆಗಳಿಗೆ ಕೊರತೆ ಇಲ್ಲ. ಅವನ್ನು ಜಾರಿ ಮಾಡುವಲ್ಲಿ ಅಡೆತಡೆಗಳಿವೆ. ಮೀಸಲಾತಿ ರಕ್ಷಣಾ ಪಡೆ ಅಥವಾ ದಳವನ್ನು ಆರಂಭಿಸಿ. ಅವರಿಗೆ ಕೊಟ್ಟ ಕಾರ್ಯಕ್ರಮಗಳು, ಮೀಸಲಾತಿ, ಆದೇಶಗಳು ಸರಿಯಾಗಿ ಅನುಷ್ಠಾನ ಆಗುತ್ತಿವೆಯೇ ಎನ್ನುವುದನ್ನು ಅದು ನೋಡಲಿ. ಮೀಸಲಾತಿ ಕಾವಲು ದಳ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಶಾಸನಬದ್ಧ ಸ್ಥಾನವನ್ನು ನೀಡಿ ಈ ವರ್ಗಕ್ಕೆ ಸಲ್ಲಬೇಕಾದ ಎಲ್ಲ ಸವಲತ್ತೂ ತಲುಪುವಂತೆ ಮಾಡಬೇಕು. ಇಲ್ಲದಿದ್ದರೆ ಇವು ಕೇವಲ ಘೋಷಣೆಯಾಗಿ ಉಳಿದುಕೊಳ್ಳುತ್ತದೆ ಎಂದರು.
ತಿಮ್ಮನಿಗೆ ಕೋಳಿ ಸಾಲದ ಕಥೆ
ದಮನಿತರು ಜಾಗೃತರಾಗಬೇಕು ಎಂಬುದಕ್ಕೆ ನಿದರ್ಶನವಾಗಿ ಡಾ. ನಟರಾಜ್ ಅವರು ಕಥೆಯೊಂದನ್ನು ಹೇಳಿದರು.
ತಿಮ್ಮನಿಗೆ ಕೋಳಿ ಸಾಲ ಸಿಗುತ್ತದೆ. ಇದೇ ಖುಷಿಯಲ್ಲಿ ನಾಲ್ಕು ಕೋಳಿಯನ್ನು ಅಧಿಕಾರಿಗಳಿಗೆ ನೀಡುತ್ತಾನೆ. ಕೋಳಿ ಸಿಕ್ಕ ಸುದ್ದಿ ಕೇಳಿದನೆಂಟರಿಷ್ಟರು ಮನೆಗೆ ಬರುತ್ತಾರೆ. ಮೂರು ಕೋಳಿ ಕೊಯ್ದು ನೆಂಟರಿಷ್ಟರಿಗೆ ಊಟ ಮಾಡಿಸುತ್ತಾನೆ. ಉಳಿದ ಮೂರು ಕೋಳಿಯನ್ನು ಮಾರಿ ಹೆಂಡ ಖರೀದಿಸಿ ತರುತ್ತಾನೆ. ತಿಮ್ಮನಿಗೆ ಸಂತಸ ಸಮಾರಾಧನೆ ಬಿಟ್ಟರೆ ಉಳಿದದ್ದು ಸಾಲ ಮಾತ್ರ. ಈ ರೀತಿ ಮಾಡಿಕೊಳ್ಳಬಾರದು. ನಮಗೆ ಇರುವ ಯೋಜನೆಗಳ ಬಗ್ಗೆ ಜಾಗೃತಿ ಇರಬೇಕು, ಸಂವಿಧಾನದ ಆಶಯವನ್ನು ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸ್ತ್ರೀವಾದವು ಸಮಾಜವನ್ನು ವಿಂಗಡಿಸುತ್ತಿದೆ: ಇದು ಸುಸ್ಥಿರ ಮಾದರಿ ಅಲ್ಲ ಎಂದ ಕ್ಷಮಾ ನರಗುಂದ್