ಹಾವೇರಿ: ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಲಿವಿಂಗ್ ಟುಗೆದರ್ ಪರಿಕಲ್ಪನೆಗೆ ಹಿರಿಯ ಸಾಹಿತಿ ಹಾಗೂ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಶುಕ್ರವಾರ ಆರಂಭವಾದ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದರು.
ಕೆಲವರು ತಾವೇ ಬುದ್ಧಿಜೀವಿಗಳು ಎಂಬ ಪಟ್ಟ ಕಟ್ಟಿಕೊಂಡಿದ್ದಾರೆ. ಅಂಥವರು ಸಮ್ಮೇಳನವನ್ನು ಜಾತ್ರೆಗೆ ಹೋಲಿಸುತ್ತಾರೆ. ನಾನು ಜಾತ್ರೆಯ ಪರವಾಗಿಯೇ ಇದ್ದೇನೆ. ಇಲ್ಲಿ ಸಾಹಿತಿಗಳು ಒಟ್ಟಿಗೆ ಸೇರುವ ಜಾತ್ರೆ. ಹಿರಿಯರನ್ನು ಕಿರಿಯರು ನೋಡಿ ಕಲಿಯುವ ಜಾತ್ರೆ. ನಮ್ಮ ಊರುಗಳಲ್ಲಿ ಸಂತೆಯ ರೀತಿಯಲ್ಲಿ. ಜಾತ್ರೆಗಳಿಗೆ ಬರುವುದರಿಂದಲೇ ಸಹಬಾಳ್ವೆ ಗೊತ್ತಾಗುತ್ತದೆ. ಹಿರಿಯ ಸಾಹಿತಿಗಳನ್ನು ಕಿರಿಯರು ಮಾತನಾಡಿಸಿ. ಅವರಿಗೊಂದು ಹಸ್ತಾಕ್ಷರ ನೀಡಿ, ಸೆಲ್ಫಿ ಕೇಳಿದರೆ ಸಂತೋಷದಿಂದ ಕೊಡಿ ಇರುವುದೊಂದೇ ಭೂಮಿ, ಸೂರ್ಯ. ಅದಕ್ಕೆ ಜಗಳ ಆಡಬಾರದು. ಅದೇ ಮಾನವೀಯತೆ ಎಂದರು.
ನಾನಂತೂ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುತ್ತೇನೆ. ಮಾನವತೆ ಗಟ್ಟಿಯಾಗಬೇಕಾದರೆ ಸಂಬಂಧಗಳು ಗಟ್ಟಿಯಾಗಬೇಕು. ಇಂದು ಆಧುನಿಕತೆ ಬಂದು, ಲಿವಿಂಗ್ ಟುಗೆದರ್ ಬಂದಿದೆ. ಅವರಿಗೆ ತಂದೆ, ತಾಯಿ, ಅಜ್ಜ, ಅಜ್ಜಿ ಯಾರೂ ಬೇಡ. ತಾನು ತನ್ನ ಪ್ರೇಯಸಿ ಅಷ್ಟೇ ಸಾಕು ಎನ್ನುತ್ತಾರೆ. ಇಂಥದ್ದರಿಂದ ಸಮಾಜಕ್ಕೆ ಏನು ಹೇಳಲು ಹೊರಟಿದ್ದೇವೆ ಎಂದು ನೋಡಬೇಕು. ಸಮಾಜ ವಿಜ್ಞಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಅಖಂಡ ಭಾರತದ ಕಲ್ಪನೆ ಮರೆತ ನೆರೆನಾಡು: ಎಚ್‌ಎಸ್‌ವಿ