| ಹರೀಶ್ ಕೇರ
ಹಾವೇರಿ ಸಮ್ಮೇಳನ ಅತ್ಯಂತ ಯಶಸ್ವಿಯಾಯಿತು.
ಹಾಗಂತ ಕಸಾಪ ಅಧ್ಯಕ್ಷರು ವೇದಿಕೆಯ ಮೇಲಿನಿಂದ ಘೋಷಿಸಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷರು ಗಡಿನಾಡು, ಶಾಸ್ತ್ರೀಯ ಭಾಷೆ, ಕನ್ನಡ ಶಾಲೆ ವಿಷಯದಲ್ಲಿ ಸರ್ಕಾರದ ಮೇಲೆ ಗರ್ಜಿಸಿದಂತೆ ಮಾಡಿದರು. ಸಮಾರೋಪದಲ್ಲಿ ಮುಖ್ಯಮಂತ್ರಿಗಳು ಅಧ್ಯಕ್ಷರ ಮಾತಿಗೆ ಮನ್ನಣೆ ಕೊಟ್ಟಂತೆ ತೋರಿಸಿಕೊಂಡರು. ನಿರ್ಣಯಗಳು ಮಂಡನೆಯಾದವು. ಸೇರಿದ್ದ ಕನ್ನಡ ಕುಲಕೋಟಿ ಜೋರಾಗಿ ಚಪ್ಪಾಳೆ ತಟ್ಟಿತು. ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಏರಿ ಹೊರಟುಹೋದರು. ಸಮ್ಮೇಳನಕ್ಕೆ ಬಂದ ಶ್ರೀಸಾಮಾನ್ಯ ಕನ್ನಡಿಗ ಮರಳಿ ಹೋಗಲು ಬಸ್ಸು ಸಿಗುವುದೋ ಇಲ್ಲವೋ ಎಂದು ಬ್ಯಾಗು ಹಿಡಿದು ರಸ್ತೆ ಬದಿ ನಿಂತ.
ಹಾಗೆ ನಿಲ್ಲಲೂ ಕಾರಣವಿದೆ. ಹಾವೇರಿ ಸಾಹಿತ್ಯ ಸಮ್ಮೇಳನ ನಡೆದುದು ನಗರದಿಂದ ನಾಲ್ಕಾರು ಕಿಲೋಮೀಟರ್ ಹೊರಗೆ. ಕಪ್ಪು ಎರೆಮಣ್ಣಿನ ನೆಲ. ಸುತ್ತಮುತ್ತ ಹತ್ತಿ ಜೋಳ ಬೆಳೆಯುವ ಹೊಲ. ಸಮ್ಮೇಳನ ನಡೆಯುವ ಸಮಯ ಹೊರತುಪಡಿಸಿದರೆ ಸಾರಿಗೆ ಬಹುತೇಕ ಇಲ್ಲ. ಎಲ್ಲವನ್ನು ತ್ರಿಶಂಕು ಸ್ವರ್ಗದಂತೆ ಶೂನ್ಯದಿಂದ ಸೃಷ್ಟಿಸಲಾಗಿತ್ತು. ಇಂಥ ಜಾಗದಲ್ಲಿ ಮೂರೂ ದಿನ ನಡೆದ ಸಮ್ಮೇಳನಕ್ಕೆ ನುಗ್ಗಿಬಂದ ಜನರ ಸಂಖ್ಯೆ ಪ್ರತಿದಿನ ಸರಾಸರಿ ಎರಡು ಲಕ್ಷ. ಆರು ಲಕ್ಷ ಜನ ಬಂದು ನಡೆದು ಕೇಳಿ ಮಾತಾಡಿ ಉಂಡು ನಲಿದು ಹೋದ ಜಾಗದಲ್ಲಿ ಕಡೆಗೆ ಉಳಿದುದೇನು?
ಹಾಗೆ ಕೇಳಬಾರದು. ಕೆಲವನ್ನೆಲ್ಲಾ ನಾವು ಯಾಕೆ ಮಾತಾಡುತ್ತಿದ್ದೇವೆ ಎಂದು ಕೇಳಿಕೊಳ್ಳಬಾರದು. ಅದು ದಿನಾ ಸ್ನಾನ ಮಾಡಿದ ಹಾಗೆ. ಜಟ್ಟಿ ಸಾಮು ಮಾಡುವ ಹಾಗೆ. ದೇಹ ಫಿಟ್ ಆಗಿರಲು ಪ್ರತಿದಿನ ಸಾಮು ಮಾಡುವ ಹಾಗೆ ಭಾಷೆ ಫಿಟ್ ಆಗಿರೋಕೆ ಪ್ರತಿವರ್ಷ ಸಮ್ಮೇಳನ.
ಆದರೆ ಸಮ್ಮೇಳನದ ಯಶಸ್ಸು ಅಲ್ಲಿಗೆ ಬಂದ ಜನರ ಕಣ್ಣು ಕಿವಿಗಳಲ್ಲಿತ್ತು. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಗಂಭೀರ ಓದುಗರು ಮತ್ತು ಸಾಹಿತಿಗಳ ಸಂಖ್ಯೆ ಅಲ್ಲಿಗೆ ಬಂದವರ ಶೇಕಡಾ ಒಂದರಷ್ಟಿರಬಹುದು ಅಥವಾ ಇನ್ನೂ ಕಡಿಮೆ. ತಲೆ ಲೆಕ್ಕ ಮುಖ್ಯವಲ್ಲ. ಬಂದವರು ಪುಸ್ತಕ ಮಳಿಗೆಗೆ ಹೋದಂತೆ ಮೊಬೈಲ್ ಕವರ್, ಬಿಂದಿ, ತುರಿಮಣೆ ಅಂಗಡಿಗೂ ಹೋದರು. ಅದೂ ಶ್ರೀಸಾಮಾನ್ಯನ ಸಾಹಿತ್ಯವೇ. ವೈದೇಹಿಯವರು ಹೇಳಿಲ್ಲವೇ, “ತಿಳಿದವರೇ ಹೇಳಿ, ನನಗೆ ಕಾವ್ಯ ಗೊತ್ತಿಲ್ಲ, ತಿಳಿಸಾರು ಗೊತ್ತು’’ ಅಂತ! ಅಧ್ಯಕ್ಷರ ಭಾಷಣ ಕೇಳಿದವರಿಗಿಂತ ನೂರು ಪಟ್ಟು ಹೆಚ್ಚು ಜನ ಪುನೀತ್ ಪ್ರತಿಮೆಯ ಮುಂದೆ ಸೆಲ್ಫಿ ತೆಗೆಸಿಕೊಂಡರು. ಇದು ಸಾಹಿತ್ಯವನ್ನು ಗೇಲಿ ಮಾಡುವ ಮಾತುಗಳಲ್ಲ. ಜನ ಇರುವುದೇ ಹಾಗೆ.
ಎಲ್ಲ ಕಡೆ ನಡೆಯುವ ತಮಾಷೆಗಳು ಇಲ್ಲೂ ನಡೆಯದೇ ಇರಲಿಲ್ಲ. ಜನ ಯಾವ್ಯಾವುದೋ ಗೇಟು ಹಾರಿ ವಿಐಪಿ ಜಾಗಗಳಿಗೆ ನುಸುಳಿದರು. ಇದ್ದಕ್ಕಿದ್ದಂತೆ ಯಾರೋ ಎಲ್ಲೋ ಎದ್ದು ನಿಂತು ಘೋಷಣೆ ಮೊಳಗಿಸಿದರು. ಊಟ ಸಿಗಲಿಲ್ಲ ಎಂದು ಕೂಗಾಡಿದರು. ಕವಿಗೋಷ್ಠಿಯಲ್ಲಿ ನಿಯಮ ಹಾಕಿದರೂ ಕವಿಗಳು ತಮ್ಮ ಸಾಲುಗಳನ್ನು ಎರಡೆರಡು ಸಲ ಓದಿದರು. ಜನಕ್ಕೆ ಅರ್ಥವಾಗೋಲ್ಲ ಎಂದುಕೊಂಡಿದ್ದರೇನೋ ಪಾಪ. ಜನ ಮಾತ್ರ ಊಟ ಮಾಡಿ ಪೆಂಡಾಲ್ ಕೆಳಗೆ ಆಕಳಿಸಿದರು. ಮಕ್ಕಳು ಕಳೆದುಹೋದರು. ಕಳೆದುಹೋದ ಮಕ್ಕಳು ಸಿಕ್ಕಿದರು. ಅಲ್ಲಿಯಾದರೂ ನಿಜವಾದ ಕಾವ್ಯ ಇದ್ದಿರಬಹುದು.
ಆದರೆ ಎರಡು ಲಕ್ಷ ಜನ ಒಂದೇ ಕಡೆ ಏಕಕಾಲದಲ್ಲಿ ಸೇರಿದ್ದರಿಂದ ಮೂರು ದಿನವೂ ಇಡೀ ಸಮ್ಮೇಳನ ಆವರಣದಲ್ಲಿ ಮೊಬೈಲ್ ನೆಟ್್ವರ್ಕ್ ಢಮಾರ್ ಆಯಿತು. ಯಾರಿಗೂ ಕರೆ ಮಾಡಲು, ಮೆಸೇಜ್ ಕಳಿಸಲು ಆಗದೆ ಒದ್ದಾಡುವಂತಾಯಿತು. ದೂರದೂರದ ಊರುಗಳಿಂದ ಪುಸ್ತಕದ ಮೂಟೆಗಳನ್ನು ಹೊರಿಸಿಕೊಂಡು ಬಂದು ಹರಡಿಟ್ಟ ಪುಸ್ತಕ ವ್ಯಾಪಾರಿಗಳಂತೂ ತಡೆಯಲಾಗದ ನಷ್ಟ ಅನುಭವಿಸಿದರು. ಡಿಜಿಟಲ್ ಪಾವತಿ ನಮ್ಮನ್ನು ಎಷ್ಟು ಆಕ್ರಮಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು. ಹಾವೇರಿ, ಧಾರವಾಡ ಸುತ್ತಮುತ್ತಲಿನ ಹತ್ತಾರು ದೊಡ್ಡ ಯೂನಿವರ್ಸಿಟಿಗಳ ಅಧ್ಯಾಪಕರೂ, ವಿದ್ಯಾರ್ಥಿಗಳು ಪುಸ್ತಕ ಮಾರಾಟಕ್ಕೆ ಜೀವ ನೀಡಬಹುದು ಎಂಬ ನಿರೀಕ್ಷೆಯೂ ನಿಜವಾಗಲಿಲ್ಲ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಊರ ಹೊರಗೊಂದು ಸೂರು, ಅಲ್ಲಿ ಸಾಹಿತ್ಯದ ಕಂಪು ಜೋರು: ಸಾಹಿತ್ಯ ಜಾತ್ರೆಯ 13 ವಿಶೇಷತೆಗಳಿವು
ಪ್ರತಿರೋಧದ ಧ್ವನಿಗಳು ಬರದೇ ಇರಲಿಲ್ಲ. ಪ್ರತಿವರ್ಷವೂ ಸಮ್ಮೇಳನಕ್ಕೆ ಒಂದಲ್ಲಾ ಒಂದು ಬಂಡಾಯ, ಪ್ರತಿರೋಧ ಕಾಣಿಸಿಕೊಳ್ಳುತ್ತದೆ ಎಂದು ಹೇಳಿ ಕೈ ತೊಳೆದುಕೊಳ್ಳುವುದು ಸುಲಭ. ಆದರೆ ಈ ಬಾರಿ ಬಂದ ಪ್ರತಿರೋಧ ಸಣ್ಣದೇನಲ್ಲ. ಅದರ ಪ್ರಶ್ನೆಗಳೂ ಸುಲಭವಾಗಿ ನಿವಾಳಿಸುವಂಥದ್ದಲ್ಲ. ಪ್ರಾತಿನಿಧ್ಯದ ಪ್ರಶ್ನೆ ಅಷ್ಟು ಸುಲಭವಾಗಿ ಲೆಕ್ಕ ಕೊಟ್ಟು ಮುಗಿಸುವಂಥದ್ದೂ ಅಲ್ಲ. ‘’ಪ್ರತಿರೋಧವೇ ಕನ್ನಡದ ಪರಂಪರೆ’’ ಎಂದು ಕವಿ ಸತೀಶ ಕುಲರ್ಣಿಯವರು ಗೋಷ್ಠಿಯಿಂದ ಹೇಳಿದ ಮಾತು ಹೀಗೆ ನಿಜಾರ್ಥದಲ್ಲಿ ಅನ್ವಯವಾಯಿತು. ಈ ಮಾತನ್ನು ಇದುವರೆಗೆ ಅರ್ಥ ಮಾಡಿಕೊಂಡಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಕಾಲ ಬಾಳಿದೆ.
ಈ ಪ್ರತಿರೋಧದ ಕಂಪನಗಳು ಸಮ್ಮೇಳನದಲ್ಲೂ ಕಾಣಿಸಿಕೊಂಡವು. ಆಮಂತ್ರಣ ಪತ್ರಿಕೆಯಲ್ಲಿದ್ದ ಕೆಲವರು ಬರದೇ ಹೋದರು. ತಾವು ಬರುವುದಿಲ್ಲವೆಂದು ಘೋಷಿಸಿದ ಹಲವರು ಜನಸಾಹಿತ್ಯ ಸಮ್ಮೇಳನದಲ್ಲಿ ಕಾಣಿಸಿಕೊಂಡರು. ಗೋಷ್ಠಿಗಳಲ್ಲಿ ಭಾಗವಹಿಸಿದ ಕೆಲವರ ಮಾತುಗಳಲ್ಲಿ ಅತ್ತಲಾಗೊಮ್ಮೆ, ಇತ್ತಲಾಗೊಮ್ಮೆ ತೂಗುವ, ಟೀಕೆಯ ಧ್ವನಿಗಳು ಕೇಳಿಸಿದವು. ‘’ಪ್ರತಿರೋಧದವರು ಇಲ್ಲೇ ಬನ್ನಿ, ಮಾತಾಡೋಣ’’ ಎಂದು ದೊಡ್ಡರಂಗೇಗೌಡರು ಕರೆ ಕೊಟ್ಟರು. ಅಷ್ಟು ಹೊತ್ತಿಗೆ ಎರಡೂ ಸಮ್ಮೇಳನಗಳಿಗೂ ಮಂಗಲಾಚರಣೆ.
ಕಡೆಗೂ ಈ ಸಮ್ಮೇಳನಕ್ಕೆ ಕನ್ನಡ ಸಂಸ್ಕೃತಿಯಲ್ಲಿ ಪಾತ್ರವೇನು? ಅದನ್ನು ಕಾಲವೇ ಹೇಳಬೇಕು. ಆದರೆ ‘’ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’’ ಎಂಬ ಕವಿಯ ಮಾತು ಸಮ್ಮೇಳನದ ಬಿಸಿಲ ಬಯಲಲ್ಲಿ ಬೆವರು ಸುರಿಸುತ್ತ ನಿಂತಿರುವ ಕಪ್ಪು ಮೈಬಣ್ಣದ ಸುಂದರ ಮೈಕಟ್ಟಿನ ಹಳ್ಳಿಯ ಯುವಕ ಯುವತಿಯರನ್ನು ನೋಡಿದಾಗ ಹೆಚ್ಚು ಅರ್ಥ ಪಡೆದುಕೊಳ್ಳುತ್ತದೆ. ‘’ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’’ ಎಂಬ ಮಾತು ಸಮ್ಮೇಳನಕ್ಕೆ ಬರುವ ಲಕ್ಷೋಪಲಕ್ಷ ಸಂದಣಿಯನ್ನು ನೋಡಿದರೆ ನಿಜವೆನಿಸುತ್ತದೆ. ಶ್ರವಣಬೆಳಗೊಳದಲ್ಲಿ ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನ ಹೀಗೆನಿಸಿತ್ತು. ಅದರ ಮುಂದೆ ಇಂದಿನ ದೊಡ್ಡರಂಗೇಗೌಡರು ಉತ್ಸವಮೂರ್ತಿಯಂತೆ, ಸಮಾಧಾನಿ ಹಿರಿಯನಂತೆ ಕಾಣಿಸಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ವಿರೋಧಿ ಸಾಹಿತಿಗಳೇ ಸಾಹಿತ್ಯ ಪರಿಷತ್ತಿಗೆ ಬನ್ನಿ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಕರೆ