Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ವಿವಿ ಪಠ್ಯಕ್ರಮ ಸಿದ್ಧವಾಗಲಿ: ಕೆ. ಸತ್ಯನಾರಾಯಣ ಅಭಿಪ್ರಾಯ

kannada-sahitya-sammelana-kannada-language-in-competitive-exams

ಹಾವೇರಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಕ್ಷಿಣ ಭಾರತೀಯರಿಗಿಂತಲೂ ಉತ್ತರ ಭಾರತೀಯರು ಹೆಚ್ಚು ಆಯ್ಕೆ ಆಗುತ್ತಿರುವುದರ ಕುರಿತು ನಿವೃತ್ತ ತೆರಿಗೆ ಅಧಿಕಾರಿ ಹಾಗೂ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಅನೇಕ ಮಾಹಿತಿ ನೀಡಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆʼಯಲ್ಲಿ ಆಯೋಜಿಸಿದ್ದ ʼಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡʼ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಕನ್ನಡಿಗರು, ಕನ್ನಡ ಪರೀಕ್ಷೆ ಆಯ್ಕೆ ಮಾಡಿಕೊಂಡರೆ ಸ್ಪರ್ಧಾತ್ಮಕ ಪರೀಕ್ಚೆಯಲ್ಲಿ ಪಾಸ್ ಆಗಬಹುದು ಎಂದು ಯಾರೂ ತಲೆಯಲ್ಲಿ ಇಟ್ಟುಕೊಳ್ಳಬಾರದು. ಇಲ್ಲಿ ಉಳಿದ ವಿಷಯಗಳಲ್ಲಿ ಪರೀಕ್ಷೆ ಬರೆದವರ ಜತೆಗೆ ಸ್ಪರ್ಧೆ ಮಾಡಬೇಕಾಗುತ್ತದೆ. ಮಾತನಾಡಲು ಕನ್ನಡ ಬರುತ್ತದೆ ಎಂಬ ಭಾವನಾತ್ಮಕ ವಿಚಾರದಿಂದ ಪ್ರೇರಿತ ಯಾರೂ ಆಗಬಾರದು. ಸಾಮಾನ್ಯವಾಗಿ ಮಾತನಾಡುವ ಕನ್ನಡವೇ ಬೇರೆ, ಪರೀಕ್ಷೆಗೆ ಬೇಕಾಗುವ ಕನ್ನಡವೇ ಬೇರೆ.‌ ಬೇರೆ ವಿಷಯಗಳಲ್ಲಿ ಪದವಿ ಪಡೆದವರು, ಕನ್ನಡದಲ್ಲಿ ಎಂಎ ಮಾಡಿದವರಷ್ಟು ಜ್ಞಾನ ಸಂಪಾದನೆ ಮಾಡಬೇಕು. ಕನ್ನಡದಲ್ಲಿ ಬರೆದಾಗ, ಸಂದರ್ಶನದಲ್ಲೂ ಕನ್ನಡ ಹಾಗೂ ಕರ್ನಾಟಕದ ಕುರಿತು ಪ್ರಶ್ನೆ ಮಾಡುವ ಸಾಧ್ಯತೆಯಿರುತ್ತದೆ ಎಂದರು.

ಕನ್ನಡಿಗರು ಮೌಲ್ಯಮಾಪನ‌ ಮಾಡುವುದರಿಂದ ಕನ್ನಡ ಭಾಷಿಕರಿಗೆ ಹೆಚ್ಚು ಅಂಕ ನೀಡುತ್ತಾರೆ ಎಂದೂ ಭಾವಿಸಬಾರದು.‌ ಹಾಗೇನಾದರೂ ಯಾವುದಾದರೂ ಒಂದು ಭಾಷೆಗೆ ಹೆಚ್ಚು ಅಂಕಗಳು ಸಿಕ್ಕರೆ ಇತರೆ ಭಾಷೆಗಳ ಜತೆಗೆ ಹೊಂದಾಣಿಕೆ ಮಾಡುತ್ತಾರೆ ಎಂದು ಹೇಳಿದರು.

ಉತ್ತರ ಭಾರತದ ಅನೇಕ‌ ರಾಜ್ಯಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ತೇರ್ಗಡೆ ಹೊಂದುತ್ತಾರೆ. ಅವರು ಹೆಚ್ಚು ಬುದ್ಧಿವಂತರು ಎಂಭುದು ಇದರ ಅರ್ಥ ಅಲ್ಲ. ಅವರ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ಸಿಲಬಸ್ ಸಿದ್ಧಪಡಿಸಿರುತ್ತಾರೆ. ಕೋರ್ಸ್‌ನಲ್ಲಿ ಓದಿದ ವಿಚಾರಗಳೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಇರುವುದರಿಂದ ಸುಲಭವಾಗಿ ತೇರ್ಗಡೆ ಹೊಂದುತ್ತಾರೆ. ಇದೇ ರೀತಿ ನಮ್ಮ ವಿದ್ಯಾಲಯಗಳಲ್ಲೂ ಪಠ್ಯಕ್ರಮ ಬದಲಾವಣೆ ಮಾಡಬೇಕು. ಈ‌ ನಿಟ್ಟಿನಲ್ಲಿ ಸರ್ಕಾರಗಳು ಗಮನವಹಿಸಬೇಕು. ಆಗ ಹೆಚ್ಚೆಚ್ಚು ಕನ್ನಡಿಗರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆ ಆಗುತ್ತಾರೆ ಎಂದರು.

‘ಕನ್ನಡದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ’ ಕುರಿತು ಮಾತನಾಡಿದ ನಿವೃತ್ತ ಐಆರ್‌ಎಸ್ ಅಧಿಕಾರಿ ಡಾ. ಜೆ.ಪಿ.‌ಪ್ರಕಾಶ್,
ಕನ್ನಡ ಮಾಧ್ಯಮ ಎಂದರೆ ಅನೇಕರಿಗೆ ಕೀಳರಿಮೆ, ಹಿಂಜರಿಕೆ ಇದೆ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರ ಜತೆಗೆ ಸ್ಪರ್ಧೆ ಮಾಡಲು ಆಗುತ್ತದೆಯೇ ಎಂಬ ಅಂಜಿಕೆ ಇರುತ್ತದೆ. ಹಿಂದೆಲ್ಲ ಸೌಲಭ್ಯಗಳೇ ಇಲ್ಲದ ಸಮಯದಲ್ಲೂ ಸಾಧನೆ ಮಾಡಿದ ಅನೇಕ ಉದಾಹರಣೆಗಳು ಇರುವಾಗ, ಈಗ‌ ಇಷ್ಟೊಂದು ಸೌಲಭ್ಯಗಳಿರುವಾಗ ಸಾಧನೆ ಮಾಡಲು ಏಕೆ ಸಾಧ್ಯವಿಲ್ಲ?

ವಿದ್ಯಾರ್ಥಿಗಳು ಗಂಟೆಗಂಟೆಗಟ್ಟಲೆ ಓದಬೇಕು. ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ, ಇದನ್ನು ಬದಲಾಯಿಸಿಕೊಳ್ಳಬೇಕು. ಸರ್ವರಲ್ಲೂ ಒಂದೊಂದು ವಿಷಯ ಕಲಿತು ಜ್ಞಾನವನ್ನು ರೂಢಿಸಿಕೊಳ್ಳಬೇಕು.
ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಮಾತ್ರವೇ ಏಳಿಗೆ ಎಂಬ ಮಾನಸಿಕತೆಯಿಂದ ಹೊರಬರಬೇಕು ಎಂದರು.

ವಿದ್ಯಾರ್ಥಿಗಳು ನೀತಿಶಾಸ್ತ್ರ, ಪ್ರಾಮಾಣಿಕತೆಯ ವಿಷಯವನ್ನು ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಓದುತ್ತಾರೆ. ಅದನ್ನು ಕಲಿತು ಅದರಿಂದ ಹುದ್ದೆ ಗಳಿಸುತ್ತಾರೆ. ಆದರೆ ಅನೇಕರು ಹುದ್ದೆ ಗಳಿಸಿದ ನಂತರ ಕಾಳಜಿ ಕಳೆದುಕೊಳ್ಳುತ್ತಾರೆ. ಕಲಿಯುವಾಗ ʼನರಂʼ(ವಿನಯತೆ) ಆಗಿರುತ್ತಾರೆ, ಹುದ್ದೆಗೆ ಆಯ್ಕೆ ಆದಾಗ ʼಗರಂʼ(ಅಹಂಕಾರ) ಆಗುತ್ತಾರೆ, ಹುದ್ದೆ ಸಿಕ್ಕಿದ ನಂತರ ʼಬೇಷರಂʼ (ನಾಚಿಕೆ ಬಿಟ್ಟು ಸ್ವಾರ್ಥಿಗಳಾಗುತ್ತಾರೆ) ಆಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆ ಆದಂಥವರು ತನ್ನ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದರು.

‘ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ’ ಕುರಿತು ಮಾತನಾಡಿದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮಹಮ್ಮದ್ ರಫಿ ಪಾಶಾ, ಐಚ್ಛಿಕ ಕನ್ನಡ ಪರೀಕ್ಷೆಯನ್ನು ತೆಗೆದುಕೊಂಡರೂ ಉನ್ನತ ಅಧಿಕಾರ ಗಳಿಸುವ ಅವಕಾಶ ಸಾಕಷ್ಟಿದೆ. ಶೈಕ್ಷಣಿಕವಾಗಿ ಸಬಲರಾಗಿರಬೇಕು, ಯಾರನ್ನೂ ಅನುಕರಿಸಬಾರದು. ಬುದ್ಧಿವಂತರು ಅವಕಾಶವನ್ನು‌ ಗಳಿಸಿಕೊಳ್ಳುತ್ತಾರೆ. ಆದರೆ ಅದಕ್ಕೆ ತೀವ್ರ ಪ್ರಯತ್ನ ಇರಬೇಕು. 2021ರ ಆದೇಶದ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಪಿಎಸ್‌ಐ ಪರೀಕ್ಷೆಯಲ್ಲೂ 50 ಅಂಕಗಳಿಗೆ ಕನ್ನಡ ಪರೀಕ್ಷೆ ಇರುತ್ತದೆ. ಕೆಎಎಸ್‌ ಪರೀಕ್ಷೆಯಲ್ಲೂ ಕನ್ನಡ ಕಡ್ಡಾಯವಾಗಿದೆ.
IBPS ಪರೀಕ್ಷೆಗಳು ಮಾತ್ರ ಇಂಗ್ಲಿಷ್ ಹಾಗೂ ಹಿಂದಿಯಲ್ಲಿದೆ. ಇಲ್ಲಿ 8ನೇ ಪರಿಚ್ಛೇದದ ಎಲ್ಲ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆ ಒದಗಿಸಬೇಕು. ಇದರಿಂದ ಮತ್ತಷ್ಟು ಕನ್ನಡಿಗರಿಗೆ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ದ್ರಾವಿಡ ಭಾಷೆಗಳು ಸಂಸ್ಕೃತದ ಸಾಕು ಮಕ್ಕಳು: ಪ್ರಧಾನ್‌ ಗುರುದತ್‌

Exit mobile version