ಹಾವೇರಿ: ಎಂಭತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡನ್ನು ಹೊತ್ತ ಭವ್ಯ ರಥವು ಹಾವೇರಿ ನಗರದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿತು.
ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್, ನಾಡಧ್ವಜವನ್ನು ಹಾವೇರಿ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಹಾಗೂ ಪರಿಷತ್ತಿನ ಧ್ವಜವನ್ನು ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಆರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತು.
ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಕಲಾತಂಡಗಳು, ವಿವಿಧ ಕನ್ನಡ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಜತೆಗೂಡಿ ಸಂಭ್ರಮಿಸಿದರು.
ಡಾ. ಮನು ಬಳಿಗಾರ್ ಅವರು ಅಧ್ಯಕ್ಷರಾಗಿದ್ದಾಗ ಸಮ್ಮೇಳನಾಧ್ಯಕ್ಷರ ಜತೆಗೆ ತಾವೂ ರಥದಲ್ಲಿ ಸಾಗುತ್ತಿದ್ದರು. ಆದರೆ ಈ ಬಾರಿ ಒಮ್ಮೆ ರಥವನ್ನೇರಿ ಕೈಬೀಸಿದ ಮಹೇಶ್ ಜೋಶಿ, ನಂತರ ಕೆಳಗಿಳಿದರು. ಕೆಲವು ಮಕ್ಕಳ ಜತೆಯಲ್ಲಿ ಸಮ್ಮೇಳನಾಧ್ಯಕ್ಷರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಾಗಿಬಂದ ಸುಮಾರು ಎರಡು ಕಿಲೋಮೀಟರ್ ಉದ್ದದ ಮೆರವಣಿಗೆ, ಮೂರು ಗಂಟೆಗಳು ಸಂಚರಿಸಿ ಸಮ್ಮೇಳನ ಸ್ಥಳವನ್ನು ತಲುಪಿತು. ಸಮ್ಮೇಳನದ ವೇದಿಕೆ ಏರಿದ ಡಾ. ದೊಡ್ಡರಂಗೇಗೌಡರು, ನೆರೆದವರಿಗೆ ಕೈಬೀಸಿ ಶುಭ ಕೋರಿದರು.