ಹಾವೇರಿ (ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ): ಸಾಹಿತ್ಯ ವಲಯದಿಂದ ರಾಷ್ಟ್ರೀಯತೆಯ ಭಾವನೆಯ ಪೋಷಣೆ ಹೆಚ್ಚಬೇಕು. ಯಾರಿಂದಲಾದರೂ ಅದನ್ನು ತುಚ್ಛೀಕರಿಸುವ ನಡೆ ಕಂಡುಬಂದರೆ ಅವರನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.
ಹಾವೆರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇದಿಕೆಯಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಆಡಿದ ‘ಪ್ರತಿರೋಧ ಸಮ್ಮೇಳನ’ದ ಕುರಿತ ಮಾತುಗಳಿಗೆ ಅವರು ಪರೋಕ್ಷವಾಗಿ ಈ ಮೂಲಕ ತಿರುಗೇಟು ನೀಡಿದರು.
ಒಡೆದ ದೇಶವನ್ನು ಒಂದುಗೂಡಿಸುವ ಚಳವಳಿಗೆ ತೀವ್ರತೆ ಕೊಡಲು ವಂದೇ ಮಾತರಂ ಕಾರಣವಾಯಿತು. ಅದನ್ನು ನೀಡಿದ ಸಾಹಿತಿಗೆ ನಾವು ವಂದನೆ ಸಲ್ಲಿಸಬೇಕು. ಭಾವನಾತ್ಮಕವಾಗಿ ಒಂದಾಗಲು ಸಾಹಿತ್ಯ ಕೊಡುಗೆ ಕೊಡಬಹುದು.
ವೈಚಾರಿಕ ಭಿನ್ನಾಭಿಪ್ರಾಯಗಳು ನೂರಾರಿವೆ. ಅದನ್ನು ವ್ಯಕ್ತಪಡಿಸುವ ರೀತಿ ನೀತಿ ಇವೆ. ಬಳಸುವ ಭಾಷೆ ಹಾವ ಭಾವ ಇತ್ಯಾದಿಗಳಿಂದ ಸಮಾಜದಲ್ಲಿ ಮಾನಸಿಕವಾದ ಕ್ಷೋಭೆ ನೋಡುತ್ತಿದ್ದೇವೆ. ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸಲು ನಾವು ಕಾರಣರಾಗಬೇಕು. ಯಾರದೋ ಓಲೈಕೆಗೆ ಭಾರತೀಯ ಸಂಸ್ಕೃತಿಯನ್ನು ತುಚ್ಛೀಕರಿಸುವ ನಡೆ ಕಂಡುಬಂದರೆ ಅದನ್ನು ಖಂಡಿಸುವ ನಡೆ ಕಂಡುಬರಬೇಕಿದೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಹಿತಿಗಳು ರಾಜಕೀಯ ಮಾಡಬೇಡಿ: ಮುಸ್ಲಿಂ ಪ್ರಾತಿನಿಧ್ಯದ ಕುರಿತು ಕಸಾಪಕ್ಕೆ ಬಿ.ಕೆ. ಹರಿಪ್ರಸಾದ್ ಬುದ್ಧಿಮಾತು
ಭಾರತ ಜಗತ್ತಿಗೆ ಗುರುವಾಗಿದ್ದರೆ ಜ್ಞಾನದ ಕೊಡುಗೆಯಿಂದ. ನಮ್ಮ ಋಷಿಗಳು ಜ್ಞಾನದ ಕೊಡುಗೆಯನ್ನು ಜಗತ್ತಿಗೆ ನೀಡಿದ್ದಾರೆ. ಸಾಹಿತಿಗಳಿಂದ ಇನ್ನಷ್ಟು ನಿರೀಕ್ಷೆ ಮಾಡುತ್ತೇನೆ. ಪ್ರತಿ ವ್ಯಕ್ತಿಯಲ್ಲಿ ಇಂಥ ಕೊಡುಗೆ ಪರಿಣಾಮ ಬೀರಿದಾಗ ಆದರ್ಶ ಸಮಾಜ ನಿರ್ಮಿತವಾಗುತ್ತದೆ. ಸನಾತನ ಸಂಸ್ಕೃತಿಯನ್ನು ಪರಿಚಯಿಸುವ ಸಾಹಿತ್ಯ ಬೇಕಿದೆ. ಸಾಹಿತ್ಯ ಮಾತ್ರ ಸದಾಕಾಲ ಶಾಶ್ವತ. ನಮ್ಮತನವನ್ನು ಜಾಗೃತಗೊಳಿಸುತ್ತದೆ. ನಾವು ಹೇಗೆ ಮುನ್ನಡೆಯಬೇಕು ಎಂದು ತಿಳಿಸುತ್ತದೆ. ಸಾಹಿತ್ಯ ಇರುವುದು ಮನುಕುಲವನ್ನು ಒಂದಾಗಿಸುವುದಕ್ಕೆ ಹೊರತು ಮನುಷ್ಯರ ನಡುವೆ ಕಂದಕ ಮೂಡಿಸುವುದಕ್ಕಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ, ವಿಶ್ರಾಂತ ಕುಲತಿ ಬಿ.ವಿವೇಕ ರೈ, ಸಂಸದ ಪ್ರಹ್ಲಾದ ಜೋಶಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ ಮುಂತಾದವರಿದ್ದರು.
ಇದನ್ನೂ ಓದಿ |ಕನ್ನಡ ಸಾಹಿತ್ಯ ಸಮ್ಮೇಳನ | ಬೆಳಗಾವಿ ರಾಜ್ಯದ ಉಪ ರಾಜಧಾನಿಯಾಗಲಿ: ಸ.ರಘುನಾಥ್